ಬೆಂಗಳೂರು: ‘ನಾನೊಬ್ಬ ನಿವೃತ್ತ ನೌಕರ. ಹೆಚ್ಚಿನ ಬಡ್ಡಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಸಹಕಾರಿ ಸೊಸೈಟಿಯಲ್ಲಿ ₹10 ಲಕ್ಷ ಠೇವಣಿ ಇರಿಸಿದ್ದೆ. ಆದರೆ, ಅಲ್ಲಿ ನಡೆದ ಅಕ್ರಮಗಳಿಂದಾಗಿ ನನಗೆ ಇನ್ನೂ ನಯಾಪೈಸೆ ಹಣ ಬಂದಿಲ್ಲ. ಅಸಲು ಇಲ್ಲ, ಬಡ್ಡಿಯೂ ಇಲ್ಲ. ಬಡ್ಡಿ ಸೇರಿ ಕನಿಷ್ಠ ₹13 ಲಕ್ಷ ದೊರೆಯಬೇಕಿತ್ತು...’

ಇದು ನಗರದ ಶ್ರೀ ಗುರುಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ನ ಗ್ರಾಹಕರೊಬ್ಬರು ಎದುರಿಸಿದ ಸಂಕಷ್ಟದ ಪರಿಸ್ಥಿತಿ. ಇದೇ ರೀತಿಯ ಪರಿಸ್ಥಿತಿ ಎದುರಿಸಿದವರು ಬೆಳಗಾವಿಯ ಜಿಲ್ಲೆಯಲ್ಲಿನ ಸಹಕಾರ ಸಂಸ್ಥೆಯೊಂದರ ಗ್ರಾಹಕರು.

‘ಆರು ಲಕ್ಷ ರೂಪಾಯಿ ಠೇವಣಿ ಇರಿಸಿದ್ದೆ. ಮನೆ ಕಟ್ಟುವ ಸಂದರ್ಭದಲ್ಲಿ ನೆರವಾಗಬಹುದು ಎಂದು ಕೂಡಿಟ್ಟ ಹಣ ಇದು. ಆದರೆ, ಬ್ಯಾಂಕ್ನ ಅಧ್ಯಕ್ಷ ವಂಚಿಸಿದ್ದ. ಆತ ಜೈಲಿಗೂ ಹೋದ. ಸರ್ಕಾರ ತನಿಖೆಗಾಗಿ ಮತ್ತು ಗ್ರಾಹಕರಿಗೆ ಹಣ ವಾಪಸ್ ಕೊಡಿಸಲು ಅಧಿಕಾರಿಗಳನ್ನು ನೇಮಿಸಿ ಕೈತೊಳೆದುಕೊಂಡಿತು. ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ದಾಖಲೆಗಳ ಜತೆ ಅಲೆದಾಡಿ ನನಗೆ ಸಾಕಾಯಿತು. 5 ವರ್ಷಗಳಾದರೂ ಇನ್ನೂ ಹಣ ವಾಪಸ್ ಸಿಕ್ಕಿಲ್ಲ...’

ಇದು ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ–ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಗ್ರಾಹಕರೊಬ್ಬರ ಕಣ್ಣೀರ ಕಥೆ ಇದು. ಇಂತಹ ಹಲವಾರು ಪ್ರಕರಣಗಳು ರಾಜ್ಯದಲ್ಲೇ ನಡೆಯುತ್ತಲೇ ಇದೆ.

ಬೆಂಗಳೂರಿನಲ್ಲಿ ಪ್ರಮುಖ ಸಹಕಾರಿ ಸಂಸ್ಥೆಯಾಗಿದ್ದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಅಕ್ರಮ ಹೆಚ್ಚು ಸದ್ದು ಮಾಡಿತ್ತು. ಇಲ್ಲಿ ಠೇವಣಿ ಇರಿಸಿ ಸಂಕಷ್ಟದ ಪರಿಸ್ಥಿತಿ ಎದುರಿಸಿ ಸಂತ್ರಸ್ತರಾದವರು ಹಲವರು. ಹಣ ವಾಪಸ್ ದೊರೆಯದೆ ಚಿಂತೆಯಲ್ಲೇ ಕೆಲವರು ಜೀವ ಕಳೆದುಕೊಂಡರು.

ಸಹಕಾರಿ ವಲಯದ ಇಂತಹ ಕೆಲವು ಸಂಸ್ಥೆಗಳಲ್ಲಿನ ಅಕ್ರಮಗಳಿಂದ ಗ್ರಾಹಕರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಇಲ್ಲಿ ಠೇವಣಿಗಳನ್ನು ಇಟ್ಟಿರುವವರಲ್ಲಿ, ತಮ್ಮ ಸಂಧ್ಯಾಕಾಲದ ನೆರವಿಗಾಗಿ ಬೆವರು ಸುರಿಸಿ ಗಳಿಸಿದ್ದ ಹಣವನ್ನು ಇರಿಸಿದ್ದ ನಾಗರಿಕರೇ ಹೆಚ್ಚು. ಹಗರಣಗಳಿಂದ ಸಂಸಾರಗಳು ಬೀದಿಪಾಲಾದ ಉದಾಹರಣೆಗಳಿವೆ.

ಕೆಲವರು ಊಟ, ತಿಂಡಿ, ಔಷಧಕ್ಕಾಗಿ ಬೀದಿ ಬೀದಿಗಳಲ್ಲಿ ಬಿಕ್ಷೆ ಬೇಡಿದ ಉದಾಹರಣೆಯಿದೆ. ಹಣಕ್ಕಾಗಿ ಕಾದು, ಕಾದು ಕೆಲವರು ಅಸುನೀಗಿದ್ದಾರೆ. ಆದರೆ ವ್ಯವಸ್ಥೆ ಮೇಲೆ ನಿಗಾ ವಹಿಸಬೇಕಾದ ಸರ್ಕಾರದಿಂದ ನೆರವು ದೊರತಿದ್ದು ಕಡಿಮೆ.

ಸಹಕಾರಿ ಸಂಸ್ಥೆಗಳಲ್ಲಿ ಹೆಚ್ಚು ಬಡ್ಡಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಗ್ರಾಹಕರು ಸಹಜವಾಗಿಯೇ ಆಕರ್ಷಣೆಗೆ ಒಳಗಾಗುತ್ತಾರೆ. ಬಡ್ಡಿ ಹಣ ತಮ್ಮ ಬದುಕಿಗೆ ಒಂದಿಷ್ಟು ನೆರವಾಗುತ್ತದೆ ಎನ್ನುವ ಮನೋಭಾವ ಸಹಜ. ಆದರೆ, ಇದೇ ಜೀವಕ್ಕೂ ಕುತ್ತು ತರುತ್ತಿದೆ.

ಸಹಕಾರ ಇಲಾಖೆಯು ಇಂತಹ ಸಂಸ್ಥೆಗಳ ಮೇಲೆ ನಿಗಾವಹಿಸಿದೆ ನಿರ್ಲಕ್ಷ್ಯವಹಿಸುತ್ತಿರುವುದಿಂದಲೇ ಅಕ್ರಮಗಳು ನಡೆಯುತ್ತಿವೆ ಎನ್ನುವುದು ಸಹಕಾರಿಗಳ ಅಭಿಪ್ರಾಯ. ಯಾವುದೇ ಸಂಸ್ಥೆಯಲ್ಲಿ ಅಕ್ರಮಗಳು ಒಂದೇ ದಿನಕ್ಕೆ ನಡೆಯುವುದಿಲ್ಲ. ಸಹಕಾರ ಇಲಾಖೆಯ ಅಧಿಕಾರಿಗಳು ಅಕ್ರಮಗಳು ನಡೆಯುವವರೆಗೆ ಕಣ್ಮುಚ್ಚಿ ಏಕೆ ಕುಳಿತುಕೊಳ್ಳುತ್ತಾರೆ? ನಿಯಮಿತವಾಗಿ ಆಡಿಟ್ ಮಾಡಿದ್ದರೆ ಅಕ್ರಮಗಳನ್ನು ತಡೆಯಬಹುದು ಎಂದು ಅವರು ಹೇಳುತ್ತಾರೆ.

ಜತೆಗೆ, ಸಹಕಾರ ತತ್ವಕ್ಕಿಂತ ಅಧಿಕಾರ ದುರುಪಯೋಗ ಮತ್ತು ಹಿತಾಸಕ್ತಿ ಸಂಘರ್ಷವೇ ಮೇಲುಗೈ ಸಾಧಿಸುತ್ತಿರುವ ಪರಿಣಾಮ ಸಹಕಾರಿ ಸಂಸ್ಥೆಗಳು ನಷ್ಟ ಮತ್ತು ಅಕ್ರಮಗಳ ಕೂಪವಾಗಿ ಮಾರ್ಪಾಡಾಗುತ್ತಿವೆ. ಮೂಲ ಆಶಯವನ್ನು ಮರೆತು ‘ರಾಜಕೀಯ‘ ಹಿಡಿತದ ಕುಣಿಕೆಯಲ್ಲಿ ಸಿಲುಕಿ ನರಳುತ್ತಿವೆ ಎಂದು ಸಹಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಸಹಕಾರಿ ಸಂಸ್ಥೆಗಳ ಚುಕ್ಕಾಣಿ ಹಿಡಿಯುವುದೇ ರಾಜಕಾರಣಿಗಳಿಗೆ ಮುಖ್ಯವಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಐದಾರು ತಿಂಗಳಲ್ಲಿ ನಡೆದ ಡಿಸಿಸಿ ಬ್ಯಾಂಕ್, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಮತ್ತು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚುನಾವಣೆಗಳು ರಾಜ್ಯದ ಗಮನವನ್ನೇ ಸೆಳೆದಿದ್ದವು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಮೀರಿಸುವಂತೆ ಜಿದ್ದಾಜಿದ್ದಿಯಿಂದ ಕೂಡಿದ ಈ ಚುನಾವಣೆ ಇದಾಗಿತ್ತು. ಸಚಿವರು, ಶಾಸಕರು, ಮಾಜಿ ಸಂಸದರೇ ಮುಂಚೂಣಿಯಲ್ಲಿದ್ದರು. ಎರಡನೇ ಹಂತದ ನಾಯಕರು ನೆಪ ಮಾತ್ರಕ್ಕೆ ಕಣದಲ್ಲಿದ್ದರು.

ಸಹಕಾರಿ ಸಂಸ್ಥೆಗಳ ಆಡಳಿತದಲ್ಲಿ ಬಿಗಿ ಹಿಡಿತ ಸಾಧಿಸದಿರುವುದು, ನಿಯಮಗಳ ಉಲ್ಲಂಘನೆ, ಸ್ವಜನ ಪಕ್ಷಪಾತ ಮತ್ತು ಪಾರದರ್ಶಕ ವ್ಯವಸ್ಥೆ ಇಲ್ಲದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸಾಲ ವಸೂಲಾತಿಗೆ ಹಿನ್ನಡೆಯಾದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ.

ಇದರಿಂದಾಗಿ, ಕರ್ನಾಟಕದಲ್ಲಿರುವ 47,736 ಸಹಕಾರ ಸಂಘಗಳಲ್ಲಿ 14,798 ಸಂಘಗಳು ನಷ್ಟದಲ್ಲಿವೆ. ಈ ಕುರಿತ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿದ್ದರು.

ಸಾಲ ವಸೂಲಾತಿ ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದರೂ ಅದನ್ನು ಮರೆಮಾಚುವುದು ಅಥವಾ ಲೆಕ್ಕಪತ್ರಕ್ಕೆ ಪರಿಗಣಸದೆ ಲಾಭವನ್ನು ಮಾತ್ರ ತೋರಿಸುವ ಜಾಣ ನಡೆ ಸಹಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಹಕಾರ ಇಲಾಖೆಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ರಾಜ್ಯದಲ್ಲಿ ಈಗಾಗಲೇ 125 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿಯಾಗಿವೆ. ಈ 125 ಸಹಕಾರ ಸಂಘಗಳ ಪೈಕಿ 28 ಸಂಘಗಳು ಚಿಕ್ಕಬಳ್ಳಾಪುರದಲ್ಲಿ, 13 ಸಂಘಗಳು ಹಾಸನದಲ್ಲಿ, 12 ಸಂಘಗಳು ಬೆಳಗಾವಿಯಲ್ಲಿವೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಲಾಗಿದೆ.

ಧಾರವಾಡ ಜಿಲ್ಲೆಯೊಂದರಲ್ಲೇ ಒಟ್ಟು 170 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಇವುಗಳಲ್ಲಿ 102 ಲಾಭದಲ್ಲಿದ್ದರೆ 68 ನಷ್ಟದಲ್ಲಿದ್ದು, 7 ಸ್ಥಗಿತಗೊಂಡಿವೆ. ಎರಡು ಸಮಾಪನಗೊಂಡಿವೆ.

ಸ್ವಾಯತ್ತ ಸಂಸ್ಥೆಗಳಾಗಿ ರೂಪುಗೊಂಡಿರುವ ಸೌಹಾರ್ದ ಸಹಕಾರ ಸಂಘಗಳಿಗೂ ಕಳಂಕ ತಟ್ಟಿದೆ. ರಾಜ್ಯದಲ್ಲಿರುವ 5373 ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ 1017 ನಷ್ಟದಲ್ಲಿವೆ. 18 ಸೌಹಾರ್ದ ಸಹಕಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿದೆ.

ಸಹಕಾರ ಸಂಸ್ಥೆಗಳ ಸಿಬ್ಬಂದಿಗಳ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ಅನುಸರಿಸುತ್ತಿಲ್ಲ. ಇಲ್ಲಿಂದಲೇ ವ್ಯವಸ್ಥೆ ದಾರಿ ತಪ್ಪುತ್ತಿದೆ ಎನ್ನುವುದು ಸಹಕಾರಿ ವಲಯದಲ್ಲಿ ಯಾವಾಗಲೂ ಕೇಳಿಬರುತ್ತಿರುವ ಮಾತು. ಸಹಕಾರ ಸಂಘಗಳ ನೇಮಕಾತಿಯಲ್ಲಿನ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ಸರ್ಕಾರ ಕಾಯ್ದೆ ರೂಪಿಸಿದ್ದರೂ, ಅದರ ಪಾಲನೆ ಕಟ್ಟುನಿಟ್ಟಾಗಿ ಆಗುತ್ತಿಲ್ಲ. ಇದರಿಂದಾಗಿ ನೇಮಕಾತಿ ವ್ಯವಸ್ಥೆಯು ದಾರಿ ತಪ್ಪಿದ್ದು, ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ– 1959ರ ಕಾಯ್ದೆಯ ಸೆಕ್ಷನ್ 17ರ ಪ್ರಕಾರವೇ ನೇಮಕಾತಿ ನಡೆಸುವ ಮೂಲಕ ಸಹಕಾರ ಸಂಘಗಳಿಗೆ ಸಿಬ್ಬಂದಿಯನ್ನು ನೇಮಿಸಬೇಕು. ನೇಮಕಾತಿ ಅಧಿಕಾರ ಆಡಳಿತ ಮಂಡಳಿಗೆ ಇರುವುದರಿಂದ ಸೆಕ್ಷನ್ 17ರ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಂಡರೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತಡೆಯುವುದು ಸಾಧ್ಯವಾಗಲಿದೆ’ ಎನ್ನುತ್ತಾರೆ ದಾವಣಗೆರೆ ಜಿಲ್ಲಾ ಸಹಕಾರ ಸಂಘ– ಸಂಸ್ಥೆಗಳ ನೋಂದಣಾಧಿಕಾರಿ ಮಧು ಶ್ರೀನಿವಾಸ್.

‘ಹೆಚ್ಚಿನ ಸಹಕಾರ ಸಂಘಗಳ ಪೈಕಿ ವೇತನ ಶ್ರೇಣಿ ಆಧರಿಸಿ ಲಾಭದಾಯಕ ಹುದ್ದೆಗಳಿಗೆ ಸೆಕ್ಷನ್ 17ರ ಪ್ರಕಾರವೇ ನೇಮಕಾತಿ ನಡೆದಿರುತ್ತದೆ. ಆದರೆ, ಕೆಳಹಂತದ ಸಿಬ್ಬಂದಿ ನೇಮಕಾತಿಯಲ್ಲಿ ಕೆಲವೆಡೆ ಕಾಯ್ದೆ ಉಲ್ಲಂಘನೆ ಕಂಡುಬರುತ್ತದೆ. ಎಲ್ಲಾ ಸಹಕಾರ ಸಂಘಗಳೂ ಕಾಯ್ದೆ ಪ್ರಕಾರವೇ ನೇಮಕ ಮಾಡಿಕೊಳ್ಳಬೇಕು. ಇದರಿಂದ ಸಹಕಾರ ಸಂಘಗಳನ್ನು ಸದೃಢವಾಗಿ ಕಟ್ಟಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಅವರು.

‘ಕಾಮನ್ ಕ್ಯಾಡ್ ಕಮಿಟಿ ರಚಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ, ಇದಕ್ಕೆ ಹೈಕೋರ್ಟ್ ತಡೆ ನೀಡಿದೆ. ಇದು ಜಾರಿಯಾದರೆ, ಜಿಲ್ಲಾ ಮಟ್ಟದಲ್ಲಿ ಸಮಿತಿಗಳು ರಚನೆಯಾಗುತ್ತವೆ. ಇದರಿಂದ ಜಿಲ್ಲೆಯ ಒಂದು ಸಂಘದಿಂದ ಬೇರೊಂದು ಸಂಘಕ್ಕೆ ಸಿಬ್ಬಂದಿಯನ್ನು ವರ್ಗಾವಣೆ ನೀಡಲು ಅವಕಾಶ ಸಿಗುತ್ತದೆ. ಇದರಿಂದ ಭ್ರಷ್ಟಾಚಾರ ತಡೆಗಟ್ಟಲು ಅನುಕೂಲವಾಗಲಿದೆ’ ಎಂದು ಅವರು ಹೇಳುತ್ತಾರೆ.

‘ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಉತ್ತಮ ಸಿಬ್ಬಂದಿ ಅವಶ್ಯ ಎಂಬ ಮನಃಸ್ಥಿತಿ ಆಡಳಿತ ಮಂಡಳಿಗೆ ಬರಬೇಕು. ಲಂಚ ನೀಡದೇ ನಿಯಮಾನುಸಾರ ನೇಮಕವಾಗಬೇಕು ಎಂಬ ಆಶಯ ಅಭ್ಯರ್ಥಿಗಳಿಗೆ ಇರಬೇಕು. ಆದರೆ, ಇಬ್ಬರಲ್ಲೂ ಈ ಬಗ್ಗೆ ಗಟ್ಟಿತನ, ಸ್ಪಷ್ಟತೆ ಇಲ್ಲದಿರುವುದರಿಂದ ಹೆಚ್ಚು ಲಂಚ ನೀಡುವವರು, ತಮಗೆ ಬೇಕಾದವರು ಸಿಬ್ಬಂದಿಯಾಗಿ ನೇಮಕಗೊಳ್ಳುತ್ತಿದ್ದಾರೆ’ ಎಂದು ದಾವಣಗೆರೆಯ ಶಿವ ಕೋಆಪರೇಟಿವ್ ಬ್ಯಾಂಕ್ನ ಉಪಾಧ್ಯಕ್ಷ ಐಗೂರು ಚಂದ್ರಶೇಖರ್ ದೂರುತ್ತಾರೆ.

‘ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿ, ಶಾಖೆ ವ್ಯವಸ್ಥಾಪಕ ಹಾಗೂ ನಿರ್ದೇಶಕರು ಶಾಮೀಲಾಗಿ ಬೇರೆಯವರ ಹೆಸರುಗಳಲ್ಲಿ (ಬೋಗಸ್) ಸಾಲ ಪಡೆದು ವಂಚಿಸುತ್ತಿರುವ ಹಲವು ನಿದರ್ಶನಗಳು ಕಂಡುಬಂದಿವೆ. ಆಡಳಿತ ಮಂಡಳಿಯವರಲ್ಲಿ ಜನಪರ ಕಾಳಜಿಯೇ ದೂರವಾಗಿದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು ₹40 ಲಕ್ಷದಿಂದ ₹50 ಲಕ್ಷದ ವರೆಗೆ ಖರ್ಚು ಮಾಡುವ ಸ್ಥಿತಿ ಈಚೆಗೆ ನಿರ್ಮಾಣವಾಗಿದೆ. ಪ್ರಜ್ಞಾವಂತ ಮತದಾರರೇ ಹಣಕ್ಕೆ ಕೈಚಾಚುತ್ತಿದ್ದಾರೆ. ವ್ಯವಸ್ಥೆ ಹದಗೆಡಲು ಇದೇ ಮೂಲ ಕಾರಣ’ ಎಂದು ಅವರು ಲೋಪದತ್ತ ಬೆರಳು ತೋರಿಸುತ್ತಾರೆ.

ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಆರ್ಥಿಕ ಬೆಂಬಲ ನೀಡುವುದು ಮತ್ತು ಎಲ್ಲ ವರ್ಗದವರನ್ನು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಸಾಧಿಸುವ ಉದ್ದೇಶದಿಂದ ಸ್ಥಾಪಿಸಲಾದ ಡಿಸಿಸಿ ಬ್ಯಾಂಕ್ಗಳು ಸಹ ಮೂಲ ಆಶಯದಿಂದ ದೂರಸರಿಯುತ್ತಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಥವಾ ನಿರ್ದೇಶಕರಾಗುವುದು ರಾಜಕೀಯ ವಲಯದಲ್ಲಿ ಪ್ರಮುಖ ಮೆಟ್ಟಿಲೇರುವ ರಹದಾರಿ ಎಂದೇ ಪರಿಗಣಿಸಲಾಗಿದೆ. ಈ ಬ್ಯಾಂಕ್ಗಳ ಮೂಲಕ ವೋಟ್ ಬ್ಯಾಂಕ್ ಸೃಷ್ಟಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಸಹಕಾರ ಕ್ಷೇತ್ರದ ಮುಖಂಡರು ವಿಶ್ಲೇಷಿಸುತ್ತಾರೆ.

ಚಿಕ್ಕಮಗಳೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(ಡಿಸಿಸಿ) ಬ್ಯಾಂಕ್ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗದಲ್ಲೂ ಸಚಿವರಾಗಿರುವ ಡಿ. ಸುಧಾಕರ್ ಅವರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಇದು ಡಿಸಿಸಿ ಬ್ಯಾಂಕ್ಗಳ ಮೇಲೆ ರಾಜಕಾರಣಿಗಳ ಮೋಹಕ್ಕೆ ಇವು ಕೆಲವು ಉದಾಹರಣೆಗಳಷ್ಟೇ ಎಂದು ಮುಖಂಡರು ಹೇಳುತ್ತಾರೆ.

ರಾಜ್ಯದಲ್ಲಿ ಪ್ರಮುಖವಾಗಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಶತಮಾನ ಕಂಡಿದೆ. ಆರಂಭವಾದ 50 ವರ್ಷಗಳವರೆಗೆ ಈ ಬ್ಯಾಂಕ್ ಸಹಕಾರಿ ಧುರೀಣರ ಕೈಯಲ್ಲಿತ್ತು. ಕಳೆದ ಅರ್ಧ ಶತಮಾನದಿಂದ ರಾಜಕಾರಣಿಗಳೇ ಅಧಿಪತ್ಯ ಸಾಧಿಸಿದ್ದಾರೆ. 1970ರಿಂದ ಈವರೆಗೆ ರಾಜಕಾರಣಿಗಳೇ ನೇರವಾಗಿ ಬ್ಯಾಂಕ್ ನಿರ್ದೇಶಕ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತ ಬಂದಿದ್ದಾರೆ. ಅವರಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅತಿ ಹೆಚ್ಚು ಅವಧಿ ಅಂದರೆ; 20 ವರ್ಷಗಳ ಕಾಲ ಇದರ ಅಧ್ಯಕ್ಷರಾಗಿದ್ದರು. ಬಹುಪಾಲು ನಿರ್ದೇಶಕ ಸ್ಥಾನಗಳನ್ನೂ ಶಾಸಕರು, ಸಂಸದರು, ರಾಜಕಾರಣಿಗಳೇ ಪಡೆದುಕೊಂಡಿದ್ದಾರೆ.

ಕಳೆದ ಅಕ್ಟೋಬರ್ನಲ್ಲಿ ನಡೆದ ಈ ಬ್ಯಾಂಕ್ ಚುನಾವಣೆಗೆ ಎಲ್ಲ 16 ಸ್ಥಾನಗಳಿಗೆ ರಾಜಕಾರಣಿಗಳೇ ಆಯ್ಕೆಯಾಗಿದ್ದಾರೆ. ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ (ಅಧ್ಯಕ್ಷ), ಶಾಸಕ ಭರಮಗೌಡ ಕಾಗೆ (ಉಪಾಧ್ಯಕ್ಷ) ಸೇರಿದಂತೆ ಶಾಸಕರು– ಮಾಜಿ ಶಾಸಕರೇ ಚುನಾಯಿತರಾಗಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ ಅವರೂ ಇದೇ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇವರ ಕುಟುಂಬದ ಇಬ್ಬರು ಸದಸ್ಯರೂ ಸೇರಿದಂತೆ 8 ಬೆಂಬಲಿಗರು ಆಯ್ಕೆಯಾಗಿದ್ದಾರೆ. ಗಮನಾರ್ಹವೆಂದರೆ ಬ್ಯಾಂಕ್ ನಿರ್ದೇಶಕರಾದವರಲ್ಲಿ ಬಹುಪಾಲು ಮಂದಿ ಸ್ವಂತ ಸಕ್ಕರೆ ಕಾರ್ಖಾನೆ, ಉದ್ಯಮ ಹೊಂದಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳ ಪೈಕಿ 21 ಕಾರ್ಖಾನೆಗಳಿಗೆ ಕಳೆದ ವರ್ಷ ₹1,400 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಇದರಲ್ಲಿ ಶೇ 20ರಷ್ಟು ಮಾತ್ರ ಮರುಪಾವತಿಯಾಗಿದೆ. ಕನಿಷ್ಠ ₹50 ಕೋಟಿಯಿಂದ ಹಿಡಿದು ಗರಿಷ್ಠ ₹250 ಕೋಟಿಯವರೆಗೂ ಸಕ್ಕರೆ ಕಾರ್ಖಾನೆಗಳು ಸಾಲ ಪಡೆದಿವೆ.

ಹೊಸಪೇಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಕಳೆದ ಹಣಕಾಸು ವರ್ಷದಲ್ಲಿ ₹12.72 ಕೋಟಿ ಲಾಭ ಗಳಿಸಿದ್ದು, ಸತತ ನಾಲ್ಕು ದಶಕಗಳಿಂದಲೂ ಲಾಭದಲ್ಲಿಯೇ ಇದೆ. ಕೃಷಿ ಸಾಲ ವಸೂಲಾತಿ ಪ್ರಮಾಣ ಶೇ 94ರಷ್ಟಿದೆ ಹಾಗೂ ಕೃಷಿಯೇತರ ಸಾಲ ವಸೂಲಾತಿ ಪ್ರಮಾಣ ಶೇ 96ರಷ್ಟಿದೆ. ಹೀಗಿದ್ದರೂ ಬ್ಯಾಂಕ್ನ ಒಟ್ಟು ಸಾಲದ ಹೊರಬಾಕಿ ಮೊತ್ತ ₹1,902 ಕೋಟಿಯಷ್ಟಿದೆ. ಇದರಲ್ಲಿ ಸರ್ಕಾರದಿಂದ ಬರಬೇಕಾದ ಕೃಷಿ ಸಾಲ ಸಬ್ಸಿಡಿಯೂ ಸೇರಿದೆ.

ಸರ್ಕಾರದ ಷೇರು ಇಲ್ಲದೆ ಇರುವುದು ಈ ಬ್ಯಾಂಕ್ ವಿಶೇಷ. ಹೀಗಾಗಿ 104 ವರ್ಷ ಇತಿಹಾಸ ಇರುವ ಈ ಬ್ಯಾಂಕ್ನಲ್ಲಿ ಇತ್ತೀಚಿನವರೆಗೂ ರಾಜಕಾರಣಿಗಳ ಪ್ರಭಾವವೇ ಇರಲಿಲ್ಲ. ಈಗಲೂ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಒಂದಿಬ್ಬರು ಶಾಸಕರು, ಮಾಜಿ ಶಾಸಕರು ಮಾತ್ರ ಬ್ಯಾಂಕ್ ಜತೆಗೆ ಗುರುತಿಸಿಕೊಂಡಿದ್ದಾರೆ. ಬ್ಯಾಂಕ್ನಲ್ಲಿ ಸರ್ಕಾರಿ ಶಿಕ್ಷಕರ 10 ಸಾವಿರಕ್ಕೂ ಅಧಿಕ ಸಂಬಳ ಖಾತೆ ಇದೆ. ಹೀಗಾಗಿ ಕೃಷಿಯೇತರ ಸಾಲ ನೀಡಿಕೆ, ವಸೂಲಾತಿಯಲ್ಲಿ ಬ್ಯಾಂಕ್ ಗಮನಾರ್ಹ ಸಾಧನೆ ಮಾಡಿದೆ.

‘ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ‘ ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಕ್ಷೇತ್ರಕ್ಕೆ ಜನಸಾಮಾನ್ಯರ ಬದುಕು ಹಸನಗೊಳಿಸುವ ಕಾರ್ಯಸೂಚಿ ಮಾತ್ರ ಇರಬೇಕು. ಈ ನಿಟ್ಟಿನಲ್ಲಿ ಪೂರಕವಾಗುವ ನೀತಿಗಳನ್ನು ರೂಪಿಸಬೇಕು ಎನ್ನುವುದು ಸಹಕಾರಿ ಧುರೀಣರ ಆಗ್ರಹ.

‘ವರ್ಷಕ್ಕೆ ನಾಲ್ಕು ಆಂತರಿಕ ಆಡಿಟ್ ನಡೆಯುತ್ತಿಲ್ಲ’

‘ಸಹಕಾರಿ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ ಆಂತರಿಕ ಪರಿಶೀಲನಾ ವ್ಯವಸ್ಥೆಯೇ ಇಲ್ಲ. ಈಗ ವರ್ಷಕ್ಕೊಮ್ಮೆ ಆಡಿಟ್ ಮಾಡುವುದು ಸಾಮಾನ್ಯವಾಗಿದೆ. ಏನೇನೊ ತೊಂದರೆಗಳಾಗಿರುವುದನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಪಡೆದ ನಂತರ ಹಿಂದಿನ ತಪ್ಪುಗಳನ್ನು ಸರಿಪಡಿಸುವ ಬದಲು ಅದನ್ನು ಮತ್ತೆ ಮುಂದೆ ಎಳೆದುಕೊಂಡು ಹೋಗುತ್ತಾರೆ. ಇದು ದೊಡ್ಡ ಸಮಸ್ಯೆ’ ಎಂದು ಶಂಕರ ಸಿದ್ಧಾಂತಿ ಹೇಳುತ್ತಾರೆ.

’ಜತೆಗೆ, ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಆಕರ್ಷಕ ಬಡ್ಡಿ ನೀಡುವುದರಿಂದ ಭವಿಷ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಠೇವಣಿಗಳಿಗೆ ಹೆಚ್ಚು ಬಡ್ಡಿ ನೀಡಿದ ಸಹಕಾರ ಸಂಸ್ಥೆಗಳು ನಷ್ಟಕ್ಕೆ ಸಿಲುಕುವ ಸಾಧ್ಯತೆಗಳೇ ಹೆಚ್ಚು. ಠೇವಣಿಗಳಿಗೆ ಹೆಚ್ಚು ಬಡ್ಡಿ ನೀಡುವುದರಿಂದ ಸಹಜವಾಗಿಯೇ ಸಾಲದ ಮೇಲಿನ ಬಡ್ಡಿ ಹೆಚ್ಚುತ್ತದೆ. ಇದರಿಂದ, ಸಾಲ ವಸೂಲಾತಿ ಕಷ್ಟವಾಗುತ್ತದೆ. ಕ್ರಮೇಣ ಸಂಸ್ಥೆಗಳು ನಷ್ಟದ ಹಾದಿ ಹಿಡಿಯುತ್ತವೆ’ ಎಂದು ಅಭಿಪ್ರಾಯಪಡುತ್ತಾರೆ.

ರೈತರ ಬದುಕಿಗೆ ಜೀವಸೆಲೆಯಾಗಿದ್ದ ಕಾರ್ಖಾನೆ ಅದಾಗಿತ್ತು. ರೈತರೇ ಕೈಜೋಡಿಸಿ ಷೇರು ಬಂಡವಾಳ ಹಾಕಿ ಸ್ಥಾಪಿಸಿದ ಕಾರ್ಖಾನೆ ಲಾಭದ ದಾರಿಯಲ್ಲೇ ಸಾಗಿತ್ತು. ವರ್ಷಗಳು ಕಳೆದಂತೆ ರಾಜಕೀಯ ಮೇಲಾಟ, ಆಡಳಿತ ಮಂಡಳಿಗಳ ನಿಷ್ಕ್ರಿಯತೆ, ಹೊಸ ಹೊಸ ತಂತ್ರಜ್ಞಾನ ಅಳವಡಿಕೆಗೆ ಹಿಂದೇಟು ಹಾಕಿದ್ದರಿಂದ ಕ್ರಮೇಣ ನಷ್ಟದತ್ತ ಸಾಗಿತು. ಇದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಕಾರ್ಖಾನೆಯ ಸ್ಥಿತಿಯ ಕಥೆ ಇದು. ರಾಜ್ಯದಲ್ಲಿ ಸಹಕಾರಿ ವಲಯದಲ್ಲಿರುವ ಹಲವು ಸಕ್ಕರೆ ಕಾರ್ಖಾನೆಗಳು ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿವೆ.

ಒಂದೆಡೆ ಖಾಸಗಿ ವಲಯದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಘಟಕಗಳನ್ನು ವಿಸ್ತರಿಸುತ್ತಿದ್ದಾರೆ. ಕೆಲವರು ಎರಡು– ಮೂರು ಕಾರ್ಖಾನೆಗಳನ್ನು ಹೊಂದುವುದು ಸಹಜವಾಗುತ್ತಿದೆ. ಇನ್ನೊಂದೆಡೆ ಸಹಕಾರ ವಲಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ.

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 12 ಸಹಕಾರಿ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಸಹಕಾರ ಇಲಾಖೆ ಸಚಿವರು ಮಾಹಿತಿ ನೀಡಿದ್ದರು.

ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ದೀರ್ಘಾವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಪುನಶ್ಚೇತನಗೊಳಿಸುವ ನೀತಿಯನ್ನು ಸರ್ಕಾರ ರೂಪಿಸಿದೆ. ಈ ನೀತಿ ಅನ್ವಯ ರಾಜ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಹಕಾರಿ ಕ್ಷೇತ್ರದ 10 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ.

ಲಾಭಕ್ಕೂ ತೆರಿಗೆ

ಆದಾಯ ತೆರಿಗೆ ಸೆಕ್ಷನ್ 80(ಪಿ) ಅಡಿಯಲ್ಲಿ ಸಹಕಾರ ವಲಯದ ಸಂಸ್ಥೆಗಳಿಗೆ ನೀಡಿರುವ ತೆರಿಗೆ ವಿನಾಯಿತಿಯನ್ನು 2007–08ನೇ ಸಾಲಿನಿಂದ ಹಿಂತೆಗೆದುಕೊಳ್ಳಲಾಗಿದೆ.

ಸಹಕಾರ ಬ್ಯಾಂಕ್ಗಳಿಗೆ ನೀಡಿರುವ ವಿನಾಯಿತಿಯನ್ನು ಹಿಂತೆಗೆದುಕೊಂಡಿರುವುದರಿಂದ ಸಹಕಾರ ಬ್ಯಾಂಕ್ಗಳು ಪ್ರತಿ ವರ್ಷ ಗಳಿಸಿದ ನಿವ್ಚಳ ಲಾಭದಲ್ಲಿ ಆದಾಯ ತೆರಿಗೆ ಪಾವತಿಸಬೇಕಾಗಿದೆ. ಇದರಿಂದ, ಸಹಕಾರ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗುತ್ತಿದ್ದು, ವ್ಯವಹಾರದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಹಕಾರಿ ವಲಯದ ಮುಖಂಡರು ಹೇಳುತ್ತಾರೆ.

‘ಸಹಕಾರಿ ಸಂಸ್ಥೆಗಳು ಸರ್ಕಾರದ ಅಂಗ ಸಂಸ್ಥೆಗಳಲ್ಲ’

ಸಹಕಾರಿ ಸಂಸ್ಥೆಗಳು ಸ್ವತಂತ್ರ, ಸ್ವಾಯತ್ತವಾದ, ಸಾಮಾಜಿಕ ವ್ಯಾಪಾರ ಸಂಸ್ಥೆಗಳಾಗಿವೆ. ಕೆಎಂಎಫ್ ಸಹ ಸರ್ಕಾರದ ಅಂಗ ಸಂಸ್ಥೆ ಅಲ್ಲ. ಅದೊಂದು ಸಾಮಾಜಿಕ ವ್ಯಾಪಾರ ಸಂಸ್ಥೆ. ಈ ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಲಾಭ–ನಷ್ಟಗಳು ಸಹಜ. ಆದರೆ, ವ್ಯಾಪಾರ ಮಾಡುವ ಕ್ರಮ ಸರಿ ಇರಬೇಕು. ಬದ್ಧತೆಯಿಂದ ವ್ಯಾಪಾರ ಮಾಡಬೇಕು. ವ್ಯವಸ್ಥೆ, ರೀತಿ– ನೀತಿಗಳು ಸರಿ ಇರಬೇಕು. ಮುಖ್ಯವಾಗಿ ಆಡಳಿತಾತ್ಮಕ ವ್ಯವಸ್ಥೆ ಸರಿ ಇರಬೇಕು.

ಸಹಕಾರಿ ಸಂಸ್ಥೆಗಳು ಸರ್ಕಾರದ ಅಂಗ ಸಂಸ್ಥೆಗಳಲ್ಲ. ಹೀಗಾಗಿ, ಯಾವುದೇ ನಾಮನಿರ್ದೇಶನಗಳನ್ನು ಮಾಡಬಾರದು. ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಅನುದಾನ ಕೊಡುತ್ತದೆ ಎಂದು ಪ್ರತಿಪಾದಿಸಲಾಗುತ್ತದೆ. ಇನ್ಫೊಸಿಸ್, ಟಿಸಿಎಸ್, ವೊಲ್ವೊ ಸೇರಿದಂತೆ ಹಲವಾರು ಕಂಪನಿಗಳಿಗೆ ಸರ್ಕಾರ ಭೂಮಿ, ನೀರು, ವಿದ್ಯುತ್ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತದೆ. ಹಾಗಿದ್ದರೆ ಆ ಕಂಪನಿಗಳಿಗೆ ನಾಮನಿರ್ದೇಶನಗಳನ್ನು ಮಾಡುತ್ತದೆಯೇ? ಈ ಕಿರು ಆರ್ಥಿಕ ಸಂಸ್ಥೆಗಳು ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ನಮ್ಮ ರಾಜ್ಯದ ಜಿಡಿಪಿ ಉತ್ತಮ ಸ್ಥಿತಿಯಲ್ಲಿರುತ್ತದೆ. ಈ ಗುರಿ ಸಾಧಿಸಲು ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ನೀತಿಗಳನ್ನು ರೂಪಿಸಬೇಕು.

-ಮನೋಹರ್ ಮಸ್ಕಿ,ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷ ಮತ್ತು ಮಾಜಿ ಶಾಸಕ

ಗುತ್ತಿಗೆಗೆ ನೀಡಿರುವ ಕಾರ್ಖಾನೆಗಳು

ಹಾವೇರಿ ಜಿಲ್ಲೆಯ ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಸಹಕಾರಿ ಸಕ್ಕರೆ ಕಾರ್ಖಾನೆ.

ಬೆಳಗಾವಿ ಜಿಲ್ಲೆಯ ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರು ಸಹಕಾರಿ ಕಾರ್ಖಾನೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ.

ಗದಗ ಜಿಲ್ಲೆಯ ಮುಂಡರಗಿಯ ಮೃಡಗಿರಿಯ ಸಹಕಾರಿ ಸಕ್ಕರೆ ಕಾರ್ಖಾನೆ.

ಮಂಡ್ಯದ ಪಾಂಡವಪುರದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ.

ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಸಂತೋಷ ಈ. ಚಿನಗುಡಿ, ರಾಮಮೂರ್ತಿ ಪಿ.

ಪರಿಕಲ್ಪನೆ: ಯತೀಶ್ಕುಮಾರ್ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.