ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ರಾಹುಲ್‌ ದ್ರಾವಿಡ್‌ ಮುಂದೆ ಸಾಲು ಸಾಲು ಸವಾಲು

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಇಂದಿನಿಂದ ಹೊಸ ಇನಿಂಗ್ಸ್‌
Last Updated 16 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಮಾಜಿ ಕ್ರಿಕೆಟಿಗರಾಹುಲ್ ಶರದ್ ದ್ರಾವಿಡ್ ಈಗ ಹೊಸ ಅವತಾರದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಬೆಂಗಳೂರಿನ ದ್ರಾವಿಡ್ ಬುಧವಾರದಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟಿ20 ಸರಣಿಯೊಂದಿಗೆ ಕಾರ್ಯಾರಂಭ ಮಾಡಲಿದ್ದಾರೆ. ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಸೆಮಿಫೈನಲ್ ಕೂಡ ಪ್ರವೇಶಿಸಲಾಗದೇ ನಿರ್ಗಮಿಸಿತ್ತು. ತಾರಾವರ್ಚಸ್ಸಿನ ಹಿರಿಯ ಆಟಗಾರರು ಮತ್ತು ಪ್ರತಿಭಾನ್ವಿತ ಯುವ ಆಟಗಾರರು ಇದ್ದ ತಂಡವೇ ಹೀನಾಯ ಸೋಲು ಅನುಭವಿಸಿದ್ದು ವಿಪರ್ಯಾಸ.

ಕಳೆದ ನಾಲ್ಕು ವರ್ಷ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿಯ ಅವಧಿಯಲ್ಲಿ ತಂಡವು ಮಾಡಿರುವ ಸಾಧನೆಗಳನ್ನು ಮೀರಿ ನಿಲ್ಲುವ ಪ್ರಮುಖ ಸವಾಲು ದ್ರಾವಿಡ್ ಮುಂದಿದೆ. ಈ ಹೊತ್ತಿನಲ್ಲಿಯೇ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಹೊಸ ನಾಯಕನಾಗಿ ರೋಹಿತ್ ಶರ್ಮಾ ನೇಮಕವಾಗಿದ್ದಾರೆ. ಭಾರತ ತಂಡದ ಕೋಚ್ ಹುದ್ದೆಯಲ್ಲಿ ಅಪಾರ ಖ್ಯಾತಿ ಮತ್ತು ಹಣ ಇದೆ. ಜತೆಗೆ, ಬಹುದೊಡ್ಡ ಹೊಣೆಗಾರಿಕೆ, ಸವಾಲುಗಳೂ ಇವೆ. ಈ ಹಾದಿಯಲ್ಲಿ ದ್ರಾವಿಡ್‌ ಅವರು ಹೇಗೆ ಸಾಗಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಇಬ್ಬರು ನಾಯಕರೊಂದಿಗೆ ಸಮನ್ವಯ

ಸೌರವ್ ಗಂಗೂಲಿ ನಾಯಕರಾಗಿದ್ದಾಗ ಆಗಿನ ಕೋಚ್ ಗ್ರೆಗ್ ಚಾಪೆಲ್ ನಡುವೆ ನಡೆದಿದ್ದ ಜಟಾಪಟಿಯು ಕ್ರಿಕೆಟ್ ಕ್ಷೇತ್ರದಲ್ಲಿ ಇಂದಿಗೂ ಚರ್ಚೆಗೆ ಗ್ರಾಸವಾಗುತ್ತಿದೆ. ಅದನ್ನು ಬಿಟ್ಟರೆ, ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವಣ ವಿವಾದ ಕೂಡ ಕ್ರಿಕೆಟ್ ವಲಯದಲ್ಲಿ ಬೇಸರ ಮೂಡಿಸಿದ್ದು ನಿಜ. ಆದರೆ, ಇಲ್ಲಿಯವರೆಗೆ ಭಾರತ ತಂಡಕ್ಕೆ ಕೋಚ್ ಆಗಿ ಬಂದವರಿಗೆಲ್ಲರಿಗೂ ಒಬ್ಬ ನಾಯಕನೊಂದಿಗೆ ಕಾರ್ಯನಿರ್ವಹಿಸುವ ಸವಾಲಿತ್ತು. ಆದರೆ, ದ್ರಾವಿಡ್‌ ಮುಂದೆ ಇಬ್ಬರು ನಾಯಕರಿದ್ದಾರೆ.

ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ವಿರಾಟ್ ಕೊಹ್ಲಿ ಮತ್ತು ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ನ್ಯೂಜಿಲೆಂಡ್ ಎದುರಿನ ಚುಟುಕು ಸರಣಿಯಲ್ಲಿ ವಿರಾಟ್ ಆಡುತ್ತಿಲ್ಲ. ರೋಹಿತ್ ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಆದ್ದರಿಂದ ಮೊದಲ ಸರಣಿಯಲ್ಲಿ ದ್ರಾವಿಡ್‌ಗೆ ಹೆಚ್ಚು ಕಷ್ಟವಾಗಲಿಕ್ಕಿಲ್ಲ. ಆದರೆ, ಮುಂದಿನ ತಿಂಗಳು ವಿದೇಶಕ್ಕೆ ತಂಡವು ತೆರಳಲಿದ್ದು ಅಲ್ಲಿ ನಿಜವಾದ ಸವಾಲು ಎದುರಾಗಬಹುದು. ಅವರಿಬ್ಬರ ಅನುಭವ ಮತ್ತು ಕೌಶಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವತ್ತ ದ್ರಾವಿಡ್ ಚಿತ್ತ ಹರಿಸುವ ಸಾಧ್ಯತೆಯೇ ಹೆಚ್ಚು. ಇದರಿಂದ ತಂಡಕ್ಕೂ ಹೆಚ್ಚಿನ ಲಾಭ ಸಿಗಲಿದೆ. ತಂಡವು ಗೆಲುವಿನ ಹಾದಿಯಲ್ಲಿ ಸಾಗುತ್ತಿರುವಷ್ಟೂ ದಿನ ಟೀಕೆಗಳು ಸಮೀಪ ಸುಳಿಯುವುದಿಲ್ಲ. ತಂಡವು ಗೆಲ್ಲುತ್ತಲೇ ಇದ್ದರೆ, ಡ್ರೆಸ್ಸಿಂಗ್ ಕೋಣೆಯಲ್ಲಿ ‘ಶಾಂತ ವಾತಾವರಣ’ ನಿರ್ಮಿಸಲು ದ್ರಾವಿಡ್ ಸಫಲರಾಗುವುದು ಖಚಿತ.

ನವನಾಯಕರನ್ನು ರೂಪಿಸುವ ಹೊಣೆ

ಭಾರತ ತಂಡದ ಭವಿಷ್ಯದ ನಾಯಕರನ್ನು ರೂಪಿಸುವ ಪ್ರಮುಖ ಸವಾಲು ಕೂಡ ದ್ರಾವಿಡ್ ಮುಂದೆ ಇದೆ. ಏಕೆಂದರೆ ಕೊಹ್ಲಿಗೆ 33 ವರ್ಷ ಮತ್ತು ಶರ್ಮಾಗೆ 34 ವರ್ಷ ವಯಸ್ಸಾಗಿದೆ. ಇನ್ನು ಕೆಲವು ವರ್ಷಗಳಲ್ಲಿ ಅವರು ನಿವೃತ್ತಿಯತ್ತ ವಾಲಬಹುದು. ಆದ್ದರಿಂದ ಯುವ ಆಟಗಾರರಲ್ಲಿಯೇ ನಾಯಕತ್ವದ ಪ್ರತಿಭೆ ಇರುವವರನ್ನು ಬೆಳೆಸುವ ಹೊಣೆ ಕೋಚ್ ಮೇಲೆ ಬೀಳಲಿದೆ. 30 ವರ್ಷದ ಕೆ.ಎಲ್. ರಾಹುಲ್, 24 ವರ್ಷದ ರಿಷಭ್ ಪಂತ್ ಮತ್ತು 26 ವರ್ಷದ ಶ್ರೇಯಸ್ ಅಯ್ಯರ್ ಅವರು ಎರಡನೇ ಸಾಲಿನಲ್ಲಿರುವ ‘ನಾಯಕ’ರೆಂದು ಹೇಳಲಾಗುತ್ತಿದೆ. 2018ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡಕ್ಕೆ ಪೃಥ್ವಿ ಶಾ ಮತ್ತು 2016ರಲ್ಲಿ ಇಶಾನ್ ಕಿಶನ್ ಅವರನ್ನು ನಾಯಕರನ್ನಾಗಿ ನೇಮಕ ಮಾಡುವಲ್ಲಿ ದ್ರಾವಿಡ್‌ ಪಾತ್ರವಿತ್ತು. ಈಗಲೂ ಅವರ ಮೇಲೆ ಅಂತಹದ್ದೇ ನಿರೀಕ್ಷೆ ಇರುವುದು ಸಹಜ.

ಆದರೆ ಈಗಿನ ಬಹಳಷ್ಟು ಆಟಗಾರರು ಸೀನಿಯರ್ ತಂಡಕ್ಕೆ ಕಾಲಿಡುವ ಮೊದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿರುತ್ತಾರೆ. ಹಣ ಮತ್ತು ಖ್ಯಾತಿಯನ್ನು ಹೊತ್ತು ತಂದಿರುತ್ತಾರೆ. ಅವರೆಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸಮಚಿತ್ತದಿಂದ ದುಡಿಸಿ ಕೊಳ್ಳುವ ಮನೋದಾರ್ಢ್ಯ ದ್ರಾವಿಡ್‌ಗೆ ಇದೆ ಎಂಬ ವಿಶ್ವಾಸದಿಂದಲೇ ಬಿಸಿಸಿಐ ಅವರಿಗೆ ಹೊಣೆ ನೀಡಿದೆ.

ಮಾದರಿ ಕೇಂದ್ರಿತ ತಂಡ ರಚನೆ

ವರ್ಷದಿಂದ ವರ್ಷಕ್ಕೆ ಕ್ರಿಕೆಟ್‌ನ ಮೂರು ಮಾದರಿ ಗಳಲ್ಲಿಯೂ ಪಂದ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಐಸಿಸಿ ವಿಶ್ವಕಪ್ ಟೂರ್ನಿಗಳು ಎಲ್ಲ ಮಾದರಿಗಳಲ್ಲಿಯೂ ನಡೆಯುತ್ತಿವೆ. ಆದ್ದರಿಂದ ಪ್ರತಿಯೊಂದು ಮಾದರಿಗೂ ಪರಿಣತರನ್ನು ರೂಪಿಸುವ ಒತ್ತಡ ಇದೆ. ಎಲ್ಲ ಮಾದರಿಗಳಲ್ಲಿಯೂ ಒಂದೇ ರೀತಿಯ ಸಾಮರ್ಥ್ಯ ತೋರುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆಟಗಾರರಲ್ಲಿರುವ ವೈಶಿಷ್ಟ್ಯವನ್ನು ಗುರುತಿಸಿ ಅವರಿಗೆ ಯಾವ ಮಾದರಿಯಲ್ಲಿ ಅವಕಾಶ ನೀಡಿದರೆ ಒಳಿತು ಎಂಬ ನಿರ್ಧಾರ ಕೈಗೊಳ್ಳುವುದು ಕೂಡ ಕೋಚ್ ಮುಂದಿರುವ ಸವಾಲು. ಇದರ ಜೊತೆಗೆ ಮೂರು ಮಾದರಿಗಳಲ್ಲಿಯೂ ತಂಡವನ್ನು ಸದೃಢಗೊಳಿಸುವುದು ಪ್ರಮುಖ ಉದ್ದೇಶವಾಗಲಿದೆ.

ಐಸಿಸಿ ಪ್ರಶಸ್ತಿ ಬರ ನೀಗಿಸುವುದು

ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡವು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ನಂತರ ಬೇರೆ ಯಾವ ಐಸಿಸಿ ಟ್ರೋಫಿಯನ್ನೂ ಜಯಿಸಲು ಸಾಧ್ಯವಾಗಿಲ್ಲ. ಟಿ20, ಏಕದಿನ ಮತ್ತು ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಫೈನಲ್, ಸೆಮಿಫೈನಲ್‌ ಹಂತಕ್ಕೆ ಹೋಗಿದ್ದರೂ ಪ್ರಶಸ್ತಿ ಕನಸು ಕೈಗೂಡಿರಲಿಲ್ಲ. ಅನಿಲ್ ಕುಂಬ್ಳೆ, ರವಿಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತಂಡವು ಪ್ರಶಸ್ತಿ ಸನಿಹ ಹೋಗಿತ್ತು. ಆದರೆ, ಟ್ರೋಫಿಗೆ ಮುತ್ತಿಕ್ಕುವ ಮಟ್ಟಕ್ಕೆ ತಂಡವನ್ನು ಬೆಳೆಸುವ ಹೊಣೆಯನ್ನು ದ್ರಾವಿಡ್‌ ನಿರ್ವಹಿಸಬೇಕಿದೆ. ಅವರು ಮುಂಬರುವ ಒಂದು ವರ್ಷದಲ್ಲಿ ಮಾಡಲಿರುವ ಯೋಜನೆಗಳು ಮತ್ತು ಕೆಲಸಗಳ ಫಲಿತಾಂಶವು ಮುಂದಿನ ಅಕ್ಟೋಬರ್–ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇದಿಕೆಯಲ್ಲಿ ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಬಹುದು.

ವಿದೇಶಿ ಕೋಚ್‌ಗಳಿಗಿಲ್ಲ ಮಣೆ..

ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳನ್ನು ನೇಮಕ ಮಾಡುವ ಪರಿಪಾಟಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ.

2015ರ ವಿಶ್ವಕಪ್ ಟೂರ್ನಿಯ ನಂತರ ತಂಡದ ಕೋಚ್ ಆಗಿದ್ದ ಡಂಕೆನ್ ಫ್ಲೆಚರ್ ನಿರ್ಗಮಿಸುವುದರೊಂದಿಗೆ ಭಾರತೀಯ ಕೋಚ್‌ಗಳ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಫ್ಲೆಚರ್ ನಂತರ ಸ್ವಲ್ಪ ಅವಧಿಗೆ ರವಿಶಾಸ್ತ್ರಿ ನೇಮಕವಾಗಿದ್ದರು. ಅವರ ನಂತರ ಕುಂಬ್ಳೆ ಆದರು. ನಂತರ 2017ರಲ್ಲಿ ಮತ್ತೆ ಶಾಸ್ತ್ರಿ ಮರಳಿದ್ದರು. ಇದೀಗ ರಾಹುಲ್ ನೇಮಕವಾಗಿವೆ.

ವಿವಾದದ ಪಿಚ್‌ಗಳಲ್ಲಿ ಕೋಚ್‌ಗಳು ಔಟಾದಾಗ

‘ಬಂಗಾಳ’ ಹುಲಿ ಸೌರವ್ ಗಂಗೂಲಿ–ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್‌, ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ–ಕೆಚ್ಚೆದೆಯ ವಿರಾಟ್ ಕೊಹ್ಲಿ, ‘ಮಾಸ್ಟರ್‌ ಬ್ಲಾಸ್ಟರ್‌’ ಸಚಿನ್ ತೆಂಡೂಲ್ಕರ್–‘ಡೆವಿಲ್ಸ್‌’ ನಾಯಕ ಕಪಿಲ್ ದೇವ್‌...ಭಾರತ ಕ್ರಿಕೆಟ್ ತಂಡದ ಕೋಚ್ ವಿಷಯ ಚರ್ಚೆಗೆ ಬಂದಾಗಲೆಲ್ಲ ವಿವಾದದ ಕಾರಣಕ್ಕೆ ಇವರು ನೆನಪಾಗುತ್ತಾರೆ. ಆಟಗಾರರ ನಿವೃತ್ತಿ ಮತ್ತು ಕೋಚ್‌ ಆಗಿದ್ದವರು ಹುದ್ದೆಯಿಂದ ನಿರ್ಗಮಿಸಿದ ನಂತರ ಕೆಲವು ವಿವಾದಗಳು ‘ಸುದ್ದಿ’ಯಾದದ್ದೂ ಉಂಟು.

ಕೋಚ್‌ಗೆ ಸಂಬಂಧಿಸಿದ ವಿವಾದಗಳ ಪೈಕಿ ಹೆಚ್ಚು ಗಮನ ಸೆಳೆದದ್ದು ಗ್ರೆಗ್ ಚಾಪೆಲ್ ಮತ್ತು ಗಂಗೂಲಿ ನಡುವಿನದು. ಆಟಗಾರರ ಆಯ್ಕೆ ವಿಷಯದಲ್ಲಿ ಉಂಟಾದ ಹಗ್ಗ–ಜಗ್ಗಾಟವು ಗಂಗೂಲಿ ನಾಯಕತ್ವಕ್ಕೆ ಕುತ್ತು ತಂದಿತ್ತು. ಪ್ರತಿಭಟನೆಗಳು ನಡೆದವು. ವಿವಾದವು ಸಂಸತ್ತಿನವರೆಗೂ ತಲುಪಿತು. ಸಂಸದರ ವಿರುದ್ಧವೂ ಚಾಪೆಲ್ ಹರಿಹಾಯ್ದರು. ಕೊನೆಗೆ ಹುದ್ದೆ ಕಳೆದುಕೊಂಡರು.

ನ್ಯೂಜಿಲೆಂಡ್‌, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಮೇಲುಗೈ ಸಾಧಿಸಿದ್ದೂ ಸೇರಿದಂತೆ ಕುಂಬ್ಳೆ ಅವಧಿಯಲ್ಲಿ ತಂಡ ಮೈಲುಗಲ್ಲುಗಳನ್ನು ಸ್ಥಾಪಿಸಿತು. ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಸೋಲು ತಂಡಕ್ಕೆ ಮಾರಕವಾಯಿತು. ನಾಯಕನೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಕುಂಬ್ಳೆ ರಾಜೀನಾಮೆ ನೀಡಿದರು.

ರವಿಶಾಸ್ತ್ರಿ ಅವರ ಆಯ್ಕೆಯೇ ವಿವಾದವಾಯಿತು. ನಿಯಮ ಗಾಳಿಗೆ ತೂರಿ ಅವರನ್ನು ನೇಮಕ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದವು. ಶಾಸ್ತ್ರಿ ಅವರು ವಿರಾಟ್ ಕೊಹ್ಲಿ ಹೇಳಿದಂತೆ ಕೇಳುವವರಾದ್ದರಿಂದ ‘ಅಡ್ಡದಾರಿ’ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಎದ್ದವು. ಕಪಿಲ್‌ ದೇವ್‌ ಮತ್ತು ಸಚಿನ್ ನಡುವೆಯೂ ವಿವಾದ ಉಂಟಾಗಿತ್ತು. ಅದು ಬೆಳಕಿಗೆ ಬಂದದ್ದು ವರ್ಷಗಳ ನಂತರ. ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ತಂಡವು ಉತ್ತಮ ಆರಂಭ ಕಂಡಿದ್ದರೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಸರಣಿಗಳಲ್ಲಿನ ಹೀನಾಯ ಸೋಲು ಕಪಿಲ್‌ಗೆ ಮುಳುವಾಯಿತು. ಅವರು ಮ್ಯಾಚ್‌ ಫಿಕ್ಸಿಂಗ್ ಮಾಡಿದ್ದಾರೆ ಎಂದು ಮಾಜಿ ಆಟಗಾರ ಮನೋಜ್ ಪ್ರಭಾಕರ್ ದೂರಿದರು. ಕಪಿಲ್ ರಾಜೀನಾಮೆ ನೀಡಿದರು. ಕಪಿಲ್ ಎಲ್ಲ ಜವಾಬ್ದಾರಿಯನ್ನು ನಾಯಕನ ಹೆಗಲ ಮೇಲೆ ಹೊರಿಸಿ ಸುಮ್ಮನಾಗುತ್ತಿದ್ದರು ಎಂದು ಸಚಿನ್ ಆತ್ಮಚರಿತ್ರೆಯಲ್ಲಿ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT