ಗುರುವಾರ , ಆಗಸ್ಟ್ 11, 2022
24 °C

ಆಳ-ಅಗಲ: ಪರದೆಯಿಂದ ಗದ್ದುಗೆಯತ್ತ

ಉದಯ ಯು./ ಜಯಸಿಂಹ ಆರ್.‌ Updated:

ಅಕ್ಷರ ಗಾತ್ರ : | |

‘ದ್ರಾವಿಡ ಅಸ್ಮಿತೆ’ಯ ಕಿಚ್ಚು ಹಚ್ಚಿದ ಸಿನಿಮಾ

ಸಿನಿಮಾ ನಟರು ಸರ್ಕಾರ ರಚಿಸಲು ಸಾಧ್ಯವೇ ಎಂದು ಕಾಂಗ್ರೆಸ್‌ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್‌ ಒಮ್ಮೆ ಪ್ರಶ್ನಿಸಿದ್ದರು. ಅವರು ಜೀವಂತವಾಗಿದ್ದಾಗಲೇ ತಮಿಳುನಾಡಿನ ರಾಜಕಾರಣವು ಅವರ ಈ ಪ್ರಶ್ನೆಗೆ ಉತ್ತರ ನೀಡಿತ್ತು. ಚಲನಚಿತ್ರ ಕ್ಷೇತ್ರದಿಂದ ಬಂದವರೇ ಈ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ದಶಕಗಳ ಕಾಲ ಆಡಳಿತ ನಡೆಸಿದರು.

ಚಲನಚಿತ್ರ ಮತ್ತು ರಾಜಕೀಯ ಇವೆರಡೂ ತಮಿಳುನಾಡಿನ ಜನರ ಜತೆಗೆ ಅವಿನಾಭಾವ ನಂಟುಹೊಂದಿರುವ ವಿಚಾರಗಳು. ಸ್ವಾತಂತ್ರ್ಯಾನಂತರ ತಮಿಳು ಅಸ್ಮಿತೆಯನ್ನು (ಭಾಷೆ– ಸಂಸ್ಕೃತಿ) ಗಟ್ಟಿಗೊಳಿಸುವ ಹೋರಾಟ ತಮಿಳುನಾಡಿನಲ್ಲಿ ಜೋರಾಗಿ ನಡೆಯಿತು (ಇದನ್ನು ತಮಿಳು ರಾಷ್ಟ್ರೀಯತೆ ಎಂದು ಗುರುತಿಸಿದವರೂ ಇದ್ದಾರೆ). ಇದು ರಾಜಕೀಯದ ಪ್ರಮುಖ ಅಸ್ತ್ರವೂ ಆಯಿತು. ಜಾತಿ ತಾರತಮ್ಯ, ಬ್ರಾಹ್ಮಣ್ಯದ ಪ್ರಾಬಲ್ಯ, ಪ್ರಾದೇಶಿಕ ಸ್ವಾಯತ್ತೆ... ಇವೆಲ್ಲವೂ ಅಲ್ಲಿನ ರಾಜಕೀಯದ ಪ್ರಮುಖ ವಿಚಾರಗಳಾದವು. ಈ ಹೋರಾಟ ರೂಪಿಸುವಲ್ಲಿ ಸಿನಿಮಾ ಜಗತ್ತು ಪ್ರಮುಖ ಪಾತ್ರ ವಹಿಸಿತು.

ಚಲನಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ಸಿ.ಎನ್‌. ಅಣ್ಣಾದೊರೈ, ಎಂ. ಕರುಣಾನಿಧಿ ಮುಂತಾದವರು ದ್ರಾವಿಡ ಚಳವಳಿಗೆ ಕಿಚ್ಚು ಹಚ್ಚಬಲ್ಲಂಥ ಚಿತ್ರಕತೆಗಳನ್ನು, ಸಂಭಾಷಣೆಗಳನ್ನು ಬರೆದು ಹೀರೋಗಳ ಬಾಯಿಯಿಂದ ಹೇಳಿಸಿದರು. ಜನರ ಮನಸ್ಸಿನಲ್ಲಿ ತಮಿಳು ಅಸ್ಮಿತೆಯ ಬೀಜ ಬಿತ್ತಲು ಸಿನಿಮಾಕ್ಕಿಂತ ಪ್ರಬಲವಾದ ಅಸ್ತ್ರ ಇನ್ನೊಂದಿಲ್ಲ ಎಂಬುದನ್ನು ಈ ಲೇಖಕರು ಬಹಳ ಬೇಗ ಅರಿತುಕೊಂಡರು. ಸಿನಿಮಾಗಳು ರಾಜಕೀಯ ಅಸ್ತ್ರವಾಗುವುದನ್ನು ಗಮನಿಸಿದ ಅಂದಿನ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಸೆನ್ಸಾರ್‌ ವ್ಯವಸ್ಥೆ ಜಾರಿ ಮಾಡಿದಾಗ, ಈ ಲೇಖಕರು ರಂಗಭೂಮಿಯ ದಾರಿ ಹಿಡಿದರು. ಕ್ರಮೇಣ ಸಿನಿಮಾ, ರಂಗಭೂಮಿ ಎರಡೂ ಚಳವಳಿಯ ವೇಗವರ್ಧಕಗಳಾದವು. ಒಂದು ವೇದಿಕೆ ಸಿದ್ಧಗೊಂಡನಂತರ ಕರುಣಾನಿಧಿ ಅವರು ಡಿಎಂಕೆ ಮೂಲಕ ರಾಜಕೀಯಕ್ಕೆ ಧುಮುಕಿದರು.

ಅವರಿಗಿಂತ ಹಿಂದೆ 1960ರ ದಶಕಗಳಲ್ಲಿ ಸಿ.ಎನ್‌. ಅಣ್ಣಾದೊರೈ ಅವರು ಸಿನಿಮಾವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು 1969ರಲ್ಲಿ ಮುಖ್ಯಮಂತ್ರಿ ಹುದ್ದಗೆ ಏರಿದ್ದರು. ಅಲ್ಲಿಂದ 2016ರವರೆಗೂ ತಮಿಳುನಾಡು ರಾಜಕೀಯದಲ್ಲಿ ಪ್ರಾಬಲ್ಯ ಮೆರೆದವರು ಸಿನಿಮಾ ಹಿನ್ನೆಲೆಯವರೇ. ಎಂ.ಜಿ. ರಾಮಚಂದ್ರನ್‌, ಎಂ. ಕರುಣಾನಿಧಿ ಹಾಗೂ ಜೆ. ಜಯಲಲಿತಾ ಇವರಲ್ಲಿ ಪ್ರಮುಖರು.

ಶಿವಾಜಿಗಣೇಶನ್‌, ಎಸ್‌.ಎಸ್‌. ರಾಜೇಂದ್ರನ್‌ ಮುಂತಾದ ನಾಯಕ ನಟರೂ ನಟನಾ ವೃತ್ತಿಯ ಜತೆಗೆ ರಾಜಕೀಯದ ಅಂಗಳದಲ್ಲೂ ಸ್ವಲ್ಪ ಕಾಲ ಆಟವಾಡಿದ್ದಾರೆ.  ಸಿನಿಮಾದವರ ರಾಜಕೀಯ ಪ್ರೀತಿ ಆನಂತರವೂ ಕಡಿಮೆಯಾಗಲಿಲ್ಲ. ಶರತ್‌ಕುಮಾರ್‌, ಕರುಣಾನಿಧಿ ಸೇತು (ಕರುಣಾಸ), ಕಾರ್ತಿಕ್‌, ವಿಜಯಕಾಂತ್‌, ಖುಷ್ಬೂ... ಪಟ್ಟಿ ಬೆಳೆಯುತ್ತಲೇ ಇದೆ.

ಜಯಲಲಿತಾ ಸಾವಿನ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ಸಿನಿಮಾ ಪ್ರಭಾವ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಜತೆಗೆ, ಇತರೆಡೆಗಳಂತೆ ಪುತ್ರ ವ್ಯಾಮೋಹ, ಕುಟುಂಬ ವ್ಯಾಮೋಹಗಳೂ ತಮಿಳುನಾಡಿನ ರಾಜಕೀಯವನ್ನು ಪ್ರವೇಶಿಸಿವೆ. ಇದರ ಮಧ್ಯದಲ್ಲೂ ನಟ ಕಮಲ್‌ಹಾಸನ್‌ ಅವರು ದ್ರಾವಿಡ ಅಸ್ಮಿತೆಯನ್ನು ಮುಂದಿಟ್ಟುಕೊಂಡು ತಮ್ಮದೇ ಪಕ್ಷ ಕಟ್ಟಿ ಹೋರಾಟ ಆರಂಭಿಸಿದ್ದಾರೆ. ಇನ್ನೊಬ್ಬ ಸೂಪರ್‌ಸ್ಟಾರ್‌ ರಜನಿಕಾಂತ್‌ ಸಹ ರಾಜಕೀಯಕ್ಕೆ ಧುಮುಕುವುದು ಖಚಿತವಾಗಿದೆ. ಸಮಕಾಲೀನ ಚಿತ್ರಜಗತ್ತಿನ ಈ ಇಬ್ಬರು ದಿಗ್ಗಜ ನಟರು ಯಾವ ಪರಿಣಾಮ ಬೀರುವರು ಎಂಬುದನ್ನು ಕಾಲವೇ ಹೇಳಬೇಕಾಗಿದೆ.

ರಾಜಕಾರಣದಲ್ಲಿ ತಾರೆಯರ ದಂಡು

ತಮಿಳುನಾಡು ರಾಜಕಾರಣದ ಜತೆ ರಜನಿಕಾಂತ್ ಅವರು ಇರಿಸಿಕೊಂಡಿರುವ ಸಂಬಂಧ 25 ವರ್ಷದಷ್ಟು ಹಳೆಯದು. ನಟನಾಗಿ ಉತ್ತುಂಗಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ರಜನಿ ಅವರು ಕರುಣಾನಿಧಿ ಅವರ ಡಿಎಂಕೆಗೆ ಬೆಂಬಲ ಸೂಚಿಸಿದ್ದರು. 1996ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ರಾಜ್ಯದಾದ್ಯಂತ ಜೋರಾಗಿತ್ತು. ಇದನ್ನು ಸ್ಪಷ್ಟವಾಗಿ ಗ್ರಹಿಸಿದ್ದ ರಜನಿಕಾಂತ್, ‘ಜಯಲಲಿತಾ ಮತ್ತೆ ಗೆದ್ದು ಬಂದರೆ, ದೇವರು ಸಹ ತಮಿಳುನಾಡನ್ನು ರಕ್ಷಿಸಲಾರ’ ಎಂದು ಹೇಳಿದ್ದರು. ಹಲವು ಸಭೆಗಳಲ್ಲಿ ಈ ಮಾತನ್ನು ಪುನರುಚ್ಚರಿಸಿದ್ದರು. ಆ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ ನಾಲ್ಕು ಸ್ಥಾನಗಳಲ್ಲಿ ಗೆದ್ದು, ಹೀನಾಯ ಸೋಲು ಅನುಭವಿಸಿತು. ಸ್ವತಃ ಜಯಲಲಿತಾ ಚುನಾವಣೆಯಲ್ಲಿ ಸೋತರು. ಆಗ ಜನರ ನಾಡಿಮಿಡಿತವನ್ನು ರಜನಿ ಸರಿಯಾಗಿ ಗ್ರಹಿಸಿದ್ದರು.

1996ರ ಚುನಾವಣೆಯ ನಂತರದ ಹಲವು ಚುನಾವಣೆಗಳಲ್ಲಿ ರಜನಿ ಅವರು ಕೆಲವು ಪಕ್ಷಗಳನ್ನು ಬೆಂಬಲಿಸಿದ್ದರು. ಆದರೆ ಆ ಪಕ್ಷಗಳು ಹೀನಾಯ ಸೋಲು ಅನುಭವಿಸಿದವು. ಜನರ ನಾಡಿಮಿಡಿತವನ್ನು ಗ್ರಹಿಸುವಲ್ಲಿ ರಜನಿ ವಿಫಲವಾಗುತ್ತಿದ್ದಾರೆ ಎಂದು ವಿರೋಧಿಗಳು ಬಹಿರಂಗವಾಗಿ ಹೇಳಿದರು. ನಂತರದ ವರ್ಷಗಳಲ್ಲಿ ರಜನಿ ರಾಜಕೀಯದಿಂದ ದೂರ ಉಳಿದರು. ಆದರೆ ಈಚಿನ ವರ್ಷಗಳಲ್ಲಿ ರಾಜಕೀಯಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ರಾಜಕೀಯ ಪ್ರವೇಶಿಸುವುದಾಗಿ ಅವರು ಗುರುವಾರವಷ್ಟೇ ಘೋಷಿಸಿದ್ದಾರೆ. ತಮಿಳು ಜನರಿಗೆ ಸಿನಿಮಾ ತಾರೆಯರ ಬಗ್ಗೆ ಇರುವ ಮಮಕಾರ ರಜನಿ ಅವರಿಗೆ ಅನುಕೂಲವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ರಾಜ್ಯದ ಮುಂದಿನ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಬಿಜೆಪಿಯು ರಜನಿ ಅವರನ್ನು ಕೋರಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಜತೆ ರಜನಿ ಆಪ್ತರಾಗಿದ್ದಾರೆ. ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ದ್ರಾವಿಡ ಚಳವಳಿಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ನಟ ಕಮಲ್‌ ಹಾಸನ್ ಸಕ್ರಿಯರಾಗಿದ್ದಾರೆ. ಕಮಲ್ ಅವರ ‘ಮಕ್ಕಳ ನೀತಿ ಮಯ್ಯಂ’ ಪಕ್ಷವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ‘ಯಾವುದೇ ಪಕ್ಷದ ಜತೆ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಕಮಲ್ ಸ್ಪಷ್ಟಪಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಿದ್ದರೂ, ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಕಮಲ್ ಬಹಿರಂಗವಾಗಿ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ‘ಜನ ವಿರೋಧಿ’ ನೀತಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ತಮ್ಮ ಪಕ್ಷದ ನಿಲುವುಗಳ ವಿಚಾರದಲ್ಲಿ ಅವರು ಅತ್ಯಂತ ಸ್ಪಷ್ಟವಾಗಿದ್ದಾರೆ. ಈ ಬಾರಿಯೂ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬುದನ್ನು ಕಮಲ್ ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಪಕ್ಷವು ತಮಿಳುನಾಡು ರಾಜಕಾರಣದ ತೃತೀಯ ರಂಗವಾಗಿ ಹೊರಹೊಮ್ಮಲಿದೆ’ ಎಂದು ಅವರು ಹೇಳಿದ್ದಾರೆ.

ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಚುನಾವಣೆಗಳಲ್ಲಿ ಸತತ ಸೋಲು ಕಂಡಿದೆ. ಆದರೆ ಪ್ರತಿ ಚುನಾವಣೆಯಲ್ಲೂ ಡಿಎಂಡಿಕೆ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆಗೆ ಪರ್ಯಾಯವಾಗಲಿದೆ ಎಂದು ಪಕ್ಷದ ನಾಯಕರು, ಕಾರ್ಯಕರ್ತರು ಪ್ರತಿಪಾದಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಪಕ್ಷವು ಸ್ಪರ್ಧಿಸಲಿದೆ.

ನಟಿ ಖುಷ್ಬೂ 10 ವರ್ಷಗಳಿಂದ ತಮಿಳುನಾಡು ರಾಜಕೀಯದಲ್ಲಿ ಇದ್ದಾರೆ. ಈ ಅವಧಿಯಲ್ಲಿ ಅವರು ಡಿಎಂಕೆಯಿಂದ ಕಾಂಗ್ರೆಸ್‌ಗೆ ಮತ್ತು ಈಗ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಎರಡೂ ಪಕ್ಷಗಳಲ್ಲಿ ತಮ್ಮನ್ನು ಕಡೆಗಣಿಸಲಾಯಿತು ಎಂದು ಆಯಾ ಪಕ್ಷವನ್ನು ತೊರೆಯುವಾಗ ಅವರು ಹೇಳಿದ್ದರು. ಈಗ ಬಿಜೆಪಿ ಮಾತ್ರವೇ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲದು ಎಂದು ತಾವು ಬಿಜೆಪಿ ಸೇರಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು