ಭಾನುವಾರ, ಆಗಸ್ಟ್ 1, 2021
27 °C

ಆಳ–ಅಗಲ | ಸಮಾಜವಾದಿ ಚಿಂತನೆಗೆ ಮಾರುಕಟ್ಟೆ ಸಡ್ಡು

ಪ್ರಣಬ್‌ ಆರ್. ಚೌಧುರಿ Updated:

ಅಕ್ಷರ ಗಾತ್ರ : | |

Prajavani

ನಗರೀಕರಣ, ಔದ್ಯಮೀಕರಣ ಹಾಗೂ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಬೇಕಾದಷ್ಟು ಭೂಮಿ ಲಭ್ಯವಾಗಬೇಕು ಎಂಬುದು ಪ್ರತಿಪಾದನೆ 90ರ ದಶಕದಲ್ಲಿ ಕೇಳಿಬಂದ ಪ್ರತಿಪಾದನೆ. ಕರ್ನಾಟಕದಲ್ಲಿ ಈಗ ಮಾಡಲು ಹೊರಟಿರುವ ತಿದ್ದುಪಡಿಯನ್ನು ‘ಸರ್ಕಾರದ ಮಧ್ಯಸ್ಥಿಕೆಯಲ್ಲೇ ಬಡವರು ಮತ್ತು ಸಣ್ಣ ರೈತರಿಂದ ಭೂಮಿಯನ್ನು ಕಸಿದುಕೊಳ್ಳುವುದು’ ಎಂದು ನೋಡಲಾಗುತ್ತದೆ...

***

ಅನಿರೀಕ್ಷಿತವಾಗಿ ಎದುರಾದ ಕೋವಿಡ್‌ ಸಂಕಷ್ಟದ ನಂತರದ ಈ ಅವಧಿಯಲ್ಲಿ ‘ಭೂ ಸುಧಾರಣೆ’ಯ ವಿಚಾರವೂ ರಾಜಕೀಯ ಕಾರ್ಯಸೂಚಿಯಲ್ಲಿ ಸೇರಿಕೊಂಡಿದೆ. ‘ಮೇಕ್‌ ಇನ್‌ ಇಂಡಿಯಾ’ ಮೂಲಕ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬೇಕೆಂಬ ಪ್ರಧಾನಿ ಹೇಳಿಕೆಯ ಬಳಿಕ, ರಾಜ್ಯ ಸರ್ಕಾರಗಳು ಕೈಗಾರಿಕೆಗಳಿಗಾಗಿ, ವಿಶೇಷವಾಗಿ ಚೀನಾವನ್ನು ಬಿಟ್ಟು, ಭಾರತಕ್ಕೆ ಬರಲು ಸಿದ್ಧವಿರುವ ಬಹುರಾಷ್ಟ್ರೀಯ ಕಂಪನಿಗಳಿಗಾಗಿ ಭೂಮಿಯನ್ನು ಗುರುತಿಸುವ ಕೆಲಸವನ್ನು ಆರಂಭಿಸಿವೆ. ಕರ್ನಾಟಕವು ಕೈಗಾರಿಕೆಗಳಿಗಾಗಿ ಕೃಷಿಭೂಮಿಯನ್ನು ಖರೀದಿಸಲು ಸಾಧ್ಯವಾಗುವ ರೀತಿಯಲ್ಲಿ ಭೂ ಸುಧಾರಣಾ ಕಾನೂನಿಗೆ ತಿದ್ದುಪಡಿ ತರಲು ಹೊರಟಿದೆ.

ಕೃಷಿಕರಲ್ಲದವರು ಕೃಷಿಭೂಮಿ ಖರೀದಿಸುವುದಕ್ಕೆ 1961ರ ಕರ್ನಾಟಕ ಭೂಸುಧಾರಣಾ ಕಾಯ್ದೆಯಲ್ಲಿ ಇದ್ದ ನಿರ್ಬಂಧವನ್ನು ಹಂತಹಂತವಾಗಿ ಸಡಿಲಿಸಲಾಗಿದೆ. 1995ರಲ್ಲಿ ಮಾಡಿದ ತಿದ್ದುಪಡಿಯು ವಾರ್ಷಿಕ ₹2 ಲಕ್ಷಕ್ಕೂ ಕಡಿಮೆ ಆದಾಯ ಇರುವವರು ಕೃಷಿ ಭೂಮಿಯನ್ನು ಖರೀದಿಸಲು ಅನುವು ಮಾಡಿಕೊಟ್ಟಿತು. 2015ರಲ್ಲಿ ಆ ಮಿತಿಯನ್ನು ₹25 ಲಕ್ಷಕ್ಕೆ ಹೆಚ್ಚಿಸಲಾಯಿತು. 1966ರ ಭೂ ಸುಧಾರಣಾ ಕಾನೂನು, ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಾಗಿ ಪರಿವರ್ತಿಸುವುದನ್ನು ನಿರ್ಬಂಧಿಸಿತ್ತು. ಆದರೆ, 2015ರಲ್ಲಿ ಇದಕ್ಕೆ ತಿದ್ದುಪಡಿ ಮಾಡಿ, ಭೂಪರಿವರ್ತನೆಗೆ ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. ಇಂಥ ಕಾನೂನು ಸಡಿಲಿಕೆ ಪ್ರಕ್ರಿಯೆಯು ಒಕ್ಕೂಟ ವ್ಯವಸ್ಥೆಯ ರಾಜಕೀಯ ಆರ್ಥಿಕತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ.

ಭೂಮಿಯು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದರೂ ಕೇಂದ್ರ ಸರ್ಕಾರದ ಕಾರ್ಯಸೂಚಿಗೆ ಅನುಗುಣವಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಬಡವರು, ಗೇಣಿದಾರನ್ನು ಗಮನದಲ್ಲಿಟ್ಟುಕೊಂಡು ಸಮಾಜವಾದಿ ತಳಹದಿ ಮತ್ತು ಆಹಾರ ಉತ್ಪಾದನೆ ಹೆಚ್ಚಿಸುವ ರಾಷ್ಟ್ರೀಯ ಕಾರ್ಯಸೂಚಿಯೊಂದಿಗೆ ಮೊದಲ ಹಂತದ ಸುಧಾರಣೆಯನ್ನು ಮಾಡಲಾಗಿತ್ತು. ಉದಾರೀಕರಣದ ನಂತರ, ಆರ್ಥಿಕತೆ ಮತ್ತು ಮಾರುಕಟ್ಟೆ ಸುಧಾರಣೆ ಎಂಬುದು ಕಾರ್ಯಸೂಚಿಯಾಗಿದೆ.

ಸ್ವಾತಂತ್ರ್ಯಾನಂತರ ದೇಶದಲ್ಲಿ ಶುರುವಾದ ಭೂಸುಧಾರಣೆಯ ತುಡಿತವು ದೊಡ್ಡ ಕ್ರಾಂತಿಯನ್ನೇ ಮಾಡಬಹುದು ಎಂದು ನೆಹರೂ ಭಾವಿಸಿದ್ದರು. ಆದ್ದರಿಂದ, ಮಾರುಕಟ್ಟೆ ಸುಧಾರಣೆ ಹಾಗೂ ಆರ್ಥಿಕ ಅಭಿವೃದ್ಧಿಯ ದೊಡ್ಡ ಉದ್ದೇಶವನ್ನಿಟ್ಟುಕೊಂಡು ಭೂಮಿಯ ಮರು ಹಂಚಿಕೆಗೆ ಅನುಕೂಲವಾಗುವಂಥ ಭೂಸುಧಾರಣೆಯನ್ನು ಅವರು ಬೆಂಬಲಿಸಿದರು. ಪೂರ್ವ ಏಷ್ಯಾದ ಮಾದರಿಗಳು ಅವರ ಕಣ್ಣಮುಂದಿದ್ದವು. ಆದರೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಈ ಸುಧಾರಣೆಯನ್ನು ವಿರೋಧಿಸಿದ್ದರಿಂದ ಉದ್ದೇಶಕ್ಕೆ ನಿರೀಕ್ಷಿತ ಯಶಸ್ಸು ಲಭಿಸಲಿಲ್ಲ. ‘ಜಮೀನ್ದಾರಿ’ ವ್ಯವಸ್ಥೆ ಮುಂದುವರಿಯಿತು.

90ರ ದಶಕದಲ್ಲಿ ಭೂಮಿ ಮರುಹಂಚಿಕೆಯ ವಿಚಾರ ಮತ್ತೆ ಚರ್ಚೆಗೆ ಬಂತು. ಕೃಷಿಯನ್ನು ಉದ್ಯಮವೆಂದು ಪರಿಗಣಿಸಿ, ಮಾರುಕಟ್ಟೆ ಆಧರಿತ ಕೃಷಿ ಬೆಳವಣಿಗೆ ಸಾಧಿಸಬೇಕೆಂಬ ಉದ್ದೇಶ ಮುಖ್ಯವಾಯಿತು. ನಗರೀಕರಣ, ಔದ್ಯಮೀಕರಣ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸಲು ಬೇಕಾದಷ್ಟು ಭೂಮಿ ಲಭ್ಯವಾಗಬೇಕು ಎಂದು ಪ್ರತಿಪಾದಿಸಲಾಯಿತು.  ಪರಿಣಾಮ, ಭೂಪರಿವರ್ತನೆಯ ನಿಬಂಧನೆ ಹಾಗೂ ಗರಿಷ್ಠ ಮಿತಿಯನ್ನು ಸಡಿಲಿಸಬೇಕೆಂಬ ವಾದಕ್ಕೂ ಪುಷ್ಟಿ ಲಭಿಸಿತು. ಕರ್ನಾಟಕದಲ್ಲಿ ಈಗ ಮಾಡಿರುವ ತಿದ್ದುಪಡಿಯು ಈ ದಿಕ್ಕಿನಲ್ಲೇ ಇದೆ.

90ರ ದಶಕದ ಕೊನೆಯ ಭಾಗದಲ್ಲಿ ಹಲವು ರಾಜ್ಯಗಳು ಕೃಷಿಕರಲ್ಲದವರಿಗೂ ಕೃಷಿಭೂಮಿಯನ್ನು ಖರೀದಿಸಲು ಹಾಗೂ ಭೂಪರಿವರ್ತನೆಗೆ ಅನುವು ಮಾಡಿಕೊಟ್ಟವು. ಕೃಷಿಕರ ಮತ್ತು ಕೃಷಿ ಭೂಮಿಯ ಪ್ರಮಾಣ ಕಡಿಮೆಯಾಗಬಾರದೆಂಬ ಉದ್ದೇಶದಿಂದ ಕೃಷಿಕರೇತರರು ಮತ್ತು ಹೊರರಾಜ್ಯದವರು ಕೃಷಿಭೂಮಿಯನ್ನು ಖರೀದಿಸುವುದಕ್ಕೆ ಹಲವು ರಾಜ್ಯಗಳಲ್ಲಿ ಕಾನೂನಾತ್ಮಕ ನಿರ್ಬಂಧ ವಿಧಿಸಲಾಗಿತ್ತು. 2012ರಲ್ಲಿ ಹೈಕೋರ್ಟ್‌ ನೀಡಿದ ತೀರ್ಪಿನಿಂದಾಗಿ ಈಗ, ದೇಶದ ಯಾವ ಕೃಷಿಕನೂ ಗುಜರಾತ್‌ನಲ್ಲಿ ಕೃಷಿ ಭೂಮಿಯನ್ನು ಖರೀದಿಸಬಹುದು. ಹಿಮಾಚಲ ಪ್ರದೇಶದಲ್ಲೂ ಈಗ ಪೂರ್ವಾನುಮತಿ ಪಡೆದು ಯಾರು ಬೇಕಾದರೂ ಕೃಷಿಭೂಮಿ ಖರೀದಿಸಬಹುದು.

ಆಂಧ್ರಪ್ರದೇಶ, ಕೇರಳ, ಒಡಿಶಾ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು, ಭಾರತೀಯ ಯಾವುದೇ ಪ್ರಜೆಯು ಕೃಷಿ ಉದ್ದೇಶಕ್ಕಾಗಿ ಮಾತ್ರ ಗರಿಷ್ಠ ಮಿತಿಗೊಳಪಟ್ಟು ಕೃಷಿ ಭೂಮಿಯನ್ನು ಖರೀದಿಸಬಹುದು ಎಂಬ ತಿದ್ದುಪಡಿ ಮಾಡಿ ದವು. ರಾಜಸ್ಥಾನ (2010) ಮತ್ತು ಮಹಾರಾಷ್ಟ್ರದಲ್ಲೂ (2016) ಇಂಥ ತಿದ್ದುಪಡಿಗಳನ್ನು ಮಾಡಲಾಯಿತು.

ಭೂ ಸುಧಾರಣಾ ಕಾಯ್ದೆಗಳು ಕೃಷಿ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವುದನ್ನು ಸಹ  ನಿರ್ಬಂಧಿಸಿದ್ದವು. ಆದರೆ ಈಗ ಕೆಲವು ರಾಜ್ಯಗಳಲ್ಲಿ, ಅಧಿಕಾರಿಗಳ ಅನುಮತಿ ಪಡೆದು ಭೂ ಪರಿವರ್ತನೆ ಮಾಡಬಹುದಾದಂಥ ವ್ಯವಸ್ಥೆ ಇದೆ. 1993ರಲ್ಲಿ ಒಡಿಶಾ ಸರ್ಕಾರವು ಈ ಪರಿಪಾಟ ಆರಂಭಿಸಿತ್ತು. 2014ರಲ್ಲಿ ಉತ್ತರಪ್ರದೇಶದಲ್ಲಿ ಮಾಡಿರುವ ತಿದ್ದುಪಡಿಯು ಕೃಷಿಭೂಮಿಯನ್ನು ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಸಲೂ ಅನುಮತಿ ನೀಡಿತು. ಸತತ 10 ವರ್ಷಗಳಿಂದ ಕೃಷಿ ಚಟುವಟಿಕೆಯೇ ನಡೆಯದಿರುವ ಕೃಷಿ ಭೂಮಿಯನ್ನು ಖರೀದಿಸಿ, ಪರಿವರ್ತಿಸಲು ತಮಿಳುನಾಡಿನಲ್ಲಿ ಅವಕಾಶ ಇದೆ. ಇತರ ಕೆಲವು ರಾಜ್ಯಗಳೂ ನಿರ್ದಿಷ್ಟ ಬಳಕೆ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಅವಕಾಶ ನೀಡಿವೆ. 

ಕರ್ನಾಟಕದಲ್ಲಿ ಕಾಯ್ದೆಯ ಸೆಕ್ಷನ್‌ 63–ಎ, 79–ಎ, ಬಿ ಹಾಗೂ ಸಿ ಅನ್ನು ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಿದ್ದರ ಹಿಂದಿನ ಉದ್ದೇಶವು ಭೂ ಮಾರುಕಟ್ಟೆಯನ್ನು ಮುಕ್ತಗೊಳಿಸಿ ಉತ್ತಮ ಬೆಲೆ ಬರುವಂತೆ ಮಾಡುವುದು ಮತ್ತು ಅದರ ಉತ್ಪಾದಕತೆಯನ್ನು ಹೆಚ್ಚಿಸುವುದು ಎಂದು ವಾದಿಸಲಾಗಿದೆ. ಇದು ಪೆರು ದೇಶದ ಅರ್ಥಶಾಸ್ತ್ರಜ್ಞ ಡೆ ಸೊಟೊ ಅವರ ನೀತಿಯನ್ನು ಪ್ರತಿಧ್ವನಿಸುತ್ತಿದೆ. ಆದರೆ, ಕೃಷಿಭೂಮಿಯ ಈ ರೀತಿಯ ಮಾರಾಟವನ್ನು, ‘ಸರ್ಕಾರದ ಮಧ್ಯಸ್ಥಿಕೆಯಲ್ಲೇ ಬಡವರು ಮತ್ತು ಸಣ್ಣ ರೈತರಿಂದ ಭೂಮಿಯನ್ನು ಕಸಿದುಕೊಳ್ಳುವುದು’ ಎಂದು ನೋಡಲಾಗುತ್ತದೆ. ಬಲ್ಲವರು ಇದನ್ನು ‘ಭೂ ಕಬಳಿಕೆ’ ಎಂದು ವಿಶ್ಲೇಷಿಸುತ್ತಾರೆ.


ಪ್ರಣಭ್‌ ಆರ್‌. ಚೌಧರಿ

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗುತ್ತಿರುವ ಸಂಕಷ್ಟದ ಸಮಯದಲ್ಲೇ ಈ ತಿದ್ದುಪಡಿಯ ಮಾತುಗಳೂ ಬಂದಿವೆ. ಊರಿಗೆ ಬಂದಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಸದ್ಯದಲ್ಲಿ ಊರನ್ನು ಬಿಡುವ ಸ್ಥಿತಿಯಲ್ಲಿಲ್ಲ. ಸಣ್ಣ ಪ್ರಮಾಣದ ಕೃಷಿ ಚಟುವಟಿಕೆ ಹಾಗೂ ಇತರ ಉದ್ಯೋಗಗಳು ಅವರಿಗೆ ಆದಾಯ ಮತ್ತು ಆಹಾರವನ್ನು ನೀಡಬಲ್ಲವು. ಪಾಳುಬಿದ್ದಿರುವ, ಕೃಷಿಗೆ ಬಳಸಬಹುದಾದ ಶೇ 23ರಷ್ಟು ಕೃಷಿಭೂಮಿಯನ್ನು ಮಾರಾಟ ಮಾಡುವ ತೀರ್ಮಾನವನ್ನು ಕೈಗೊಳ್ಳುವ ಮುನ್ನ, ಕಾರ್ಮಿಕರ ಕೋವಿಡೋತ್ತರ ಸ್ಥಿತಿಗತಿಯ ವಿಚಾರವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ನೀತಿ ಆಯೋಗವು 2016ರಲ್ಲಿ ಸಿದ್ಧಪಡಿಸಿದ ಮಾದರಿ ಭೂ ಗುತ್ತಿಗೆ ಕಾಯ್ದೆಯ ಆಧಾರದಲ್ಲಿ ಭೂಗುತ್ತಿಗೆ ಸುಧಾರಣೆ ಜಾರಿಯ ಬಗ್ಗೆಯೂ ರಾಜ್ಯ ಶಾಸನಸಭೆಗಳು ಈಗ ಗಮನ ಹರಿಸಬೇಕಿದೆ.

ಕೃಷಿಕರಲ್ಲದವರಿಗೆ ನೀಡಲಾಗಿರುವ ಕೃಷಿ ಭೂಮಿಯೂ ಬಳಕೆಯಾಗದಿರುವ ಅಥವಾ ದುರ್ಬಳಕೆಯಾಗಿರುವ ಅನೇಕ ಉದಾಹರಣೆಗಳಿವೆ. ಭೂ ಸಂಘರ್ಷಗಳು ಹೆಚ್ಚಾಗಿ ಹೂಡಿಕೆಗೆ ತಡೆಯಾಗಿರುವುದು, ಭೂ ಸುಧಾರಣಾ ಕ್ರಮಗಳು ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಭಾರತದಂಥದ್ದೇ ಕೃಷಿ ಪರಿಸರವನ್ನು ಹೊಂದಿರುವ ಜಪಾನ್‌ ಹಾಗೂ ಕೊರಿಯಾಗೆ ಹೋಲಿಸಿದರೆ ಭಾರತದಲ್ಲಿ ಸಮಾಜವಾದಿ ಮತ್ತು ಮಾರುಕಟ್ಟೆ ಪ್ರಭಾವಿತ ಭೂ ಸುಧಾರಣಾ ಕ್ರಮಗಳಿಗೆ ಸಿಕ್ಕಿರುವುದು ಸೀಮಿತ ಯಶಸ್ಸು. ನಾವು ಇನ್ನೂ ಹೆಚ್ಚು ಸಮತೋಲಿತ ಮತ್ತು ಸಮಗ್ರ ಸ್ವರೂಪದ ವಿಧಾನವನ್ನು ಅನುಸರಿಸುವ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ.

ಕೃಷಿಯ ಬದಲಿಗೆ ಕಂಪನಿಗಳಿಗೆ ಜಮೀನು ನೀಡು ವುದಕ್ಕೆ ಒತ್ತು ಕೊಡುವ ಭೂ ಸುಧಾರಣೆಗಳು ಹೇಗೆ ವಿಫಲವಾದವು ಎಂಬುದನ್ನು ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಕೋಟ್ಯಂತರ ಜನರು ಅನುಭವಿಸಿದ ಸಂಕಷ್ಟವು ಬಿಂಬಿಸಿದೆ. ಈ ಪಿಡುಗಿನ ಸಂದರ್ಭದಲ್ಲಿ ಜನರು ಪಟ್ಟ ಪಡಿಪಾಟಲಿನ ಕಾರಣವು ಭೂ ಬಳಕೆಯ ಬದಲಾವಣೆಯಲ್ಲಿ ಅಡಗಿದೆ. 50 ಕೋಟಿ ಕಾರ್ಮಿಕರಿಗೆ ಆಹಾರ ಮತ್ತು ಉದ್ಯೋಗವನ್ನು ಒದಗಿಸಬೇಕಿದೆ ಎಂಬ ಸತ್ಯವೇ ಭೂ ಸುಧಾರಣೆಯ ನೆಲೆಗಟ್ಟಾಗಬೇಕು. ಸಮಾಜವಾದಿ ಚಿಂತನೆಯ ಸುಧಾರಣೆಯೊಂದನ್ನು ಮಾರುಕಟ್ಟೆಗೆ ಅನುಕೂಲಕರವಾದ ಸುಧಾರಣೆ ಯಾಗಿ ಪುನರ್‌ರಚಿಸುವುದು ಪರಿಹಾರ ಅಲ್ಲ. ಇದು ಅಥವಾ ಅದು ಎಂಬ ಪರಿಹಾರ ಇಲ್ಲಿ ಸಾಧ್ಯವೂ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು