ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಕ್ರೀಡಾ ಪ್ರಶಸ್ತಿಗಳ ಜಾಡು ಹಿಡಿದು...

Last Updated 28 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಇಂದು ರಾಷ್ಟ್ರೀಯ ಕ್ರೀಡಾ ದಿನ. ಕೊರೊನಾ ಕಾಲಘಟ್ಟದಲ್ಲಿ ಹಲವು ಬದಲಾವಣೆಗಳೊಂದಿಗೆ ಕ್ರೀಡಾ ಚಟುವಟಿಕೆಗಳು ಮತ್ತೆ ಆರಂಭವಾಗುತ್ತಿವೆ. ಕ್ರೀಡಾ ದಿನ ಹಲವು ಪ್ರಶಸ್ತಿಗಳು ಪ್ರದಾನ ಆಗುತ್ತವೆ. ಆದರೆ ‘ಕ್ರೀಡಾ ಅಭಿವೃದ್ಧಿ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಬೇಕು. ಹೊಸ ನಿಯಮಗಳೊಂದಿಗೆ ವ್ಯವಸ್ಥೆ ರೂಪುಗೊಳ್ಳಬೇಕು’ ಎಂಬುದು ಹಲವು ಕ್ರೀಡಾಪಟುಗಳ ಒತ್ತಾಯ

****

ಬೆಂಗಳೂರು: ಕ್ರಿಕೆಟಿಗ ರೋಹಿತ್ ಶರ್ಮಾರನ್ನು ರಾಜೀವಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ಕ್ರಿಕೆಟಿಗರನ್ನು ಕಡೆಗಣಿಸಿದ ಕುರಿತು ಚರ್ಚೆ ತಾರಕಕ್ಕೇರಿತ್ತು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರನ್ನು ಇದುವರೆಗೆ ಏಕೆ ಪರಿಗಣಿಸಿಲ್ಲ ಎಂಬ ಪ್ರಶ್ನೆ ಪ್ರತಿಧ್ವನಿಸಿತು.

ಆದರೆ, ಚೆಸ್‌ ಕ್ರೀಡೆಯಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಗಳಿಸಿದ ಕನ್ನಡಿಗ ಎಂ.ಎಸ್. ತೇಜಕುಮಾರ್, ಕಾಮನ್‌ವೆಲ್ತ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿಪದಕ ಗೆದ್ದಿದ್ದ ಕುಂದಾಪುರದ ಗುರುರಾಜ್, ಅವರ ನೆನಪು ಯಾರಿಗೂ ಬರಲಿಲ್ಲ.

ಪ್ರತಿಭಾನ್ವಿತ ಮತ್ತು ಸಾಧಕ ಕ್ರೀಡಾಪಟುಗಳನ್ನು ಉತ್ತೇಜಿಸಲು ಆರಂಭವಾದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಆಯ್ಕೆ ಪಟ್ಟಿ ಬಂದಾಗಲೆಲ್ಲ ವಿವಾದ ತಲೆದೋರುವುದು ಹೊಸದೇನಲ್ಲ. ಈ ಬಾರಿ ಕರ್ನಾಟಕದ ಆಟಗಾರರಿಗಾಗಿ ಕೂಗು ಎದ್ದಿದ್ದು ವಿಶೇಷ. ಆದರೆ ಅದು ಕ್ರಿಕೆಟ್‌ಗೆ ಸೀಮಿತವಾಗಿದ್ದು ಏಕೆ?

ಇವತ್ತು ಪ್ರಶಸ್ತಿಗಾಗಿ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಮೊದಲಿನಂತಿಲ್ಲ. ಸಾಧನೆಯೊಂದೇ ಮಾನದಂಡವಾಗಿ ಉಳಿದಿಲ್ಲ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆ ಕ್ರೀಡಾಪಟು ಪಡೆಯುವ ಜನಪ್ರಿಯತೆಯೂ ಮುಖ್ಯ ಪಾತ್ರವಹಿಸುತ್ತಿದೆ. ಜೊತೆಗೆ ಕ್ರೀಡಾ ಫೆಡರೇಷನ್‌ಗಳ ಸಾಮರ್ಥ್ಯವು ಗಣನೆಗೆ ಬರುತ್ತದೆ. ಅಲ್ಲದೇ ಆಯಾ ರಾಜ್ಯಗಳ ಕ್ರೀಡಾ ಇಲಾಖೆಗಳ ಕಾರ್ಯವೈಖರಿಯೂ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ರಾಜ್ಯಮಟ್ಟದ ಏಕಲವ್ಯ ಪ್ರಶಸ್ತಿ ನೀಡುವಾಗ ನಡೆಯುವ ಲಾಬಿಗಳನ್ನು ಗಮನಿಸಿದರೆ, ಕೇಂದ್ರ ಸರ್ಕಾರದ ಪ್ರಶಸ್ತಿಗೆ ನಡೆಯುವ ‘ಕಸರತ್ತು’ ಹೇಗಿರುತ್ತದೆಯೆಂಬುದನ್ನು ಊಹಿಸಬಹುದು. ಕರ್ನಾಟಕದ ಗಾಲ್ಫ್ ಪಟು ಅದಿತಿ ಅಶೋಕ್ ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ. ದ್ರೋಣಾಚಾರ್ಯಕ್ಕಾಗಿ ಪುರುಷೋತ್ತಮ ರೈ ಮತ್ತು ಜೂಡ್ ಫೆಲಿಕ್ಸ್‌ ಆಯ್ಕೆಯಾಗಿದ್ದಾರೆ. ಒಟ್ಟು 73 ಪ್ರಶಸ್ತಿಗಳಲ್ಲಿ ಕರ್ನಾಟಕದ ಪಾಲು ಇಷ್ಟೇ!

ಸಂಶಯಾಸ್ಪದ ಸಂಗತಿ

ಈ ಬಾರಿ ಕೇಂದ್ರ ಕ್ರೀಡಾ ಇಲಾಖೆಯು ಪ್ರಶಸ್ತಿಯ ಅಂತಿಮ ಆಯ್ಕೆ ಪಟ್ಟಿಯನ್ನು ನಿರ್ಧರಿಸಲು ಪರಿಣತರ ಆಯ್ಕೆ ಸಮಿತಿಯನ್ನು ರಚನೆ ಮಾಡಿತ್ತು. ಫೆಡರೇಷನ್‌ಗಳ ಶಿಫಾರಸುಗಳನ್ನು ಪರಿಶೀಲಿಸಿ, ಪುರಸ್ಕೃತರ ಪಟ್ಟಿ ಅಂತಿಮಗೊಳಿಸಲಾಗಿತ್ತು. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳು ಈಗಲೂ ಇವೆ. ಇದರಿಂದಾಗಿ ಆಯ್ಕೆ ಪ್ರಕ್ರಿಯೆಯನ್ನೇ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಈ ಸಲ ಐವರಿಗೆ ರಾಜೀವಗಾಂಧಿ ಖೇಲ್‌ ರತ್ನ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಅಂಗವಿಕಲ ಹೈಜಂಪ್‌ ಪಟು ತಂಗವೇಲು ಮರಿಯಪ್ಪನ್ ಒಬ್ಬರು. 2016ರ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರ ಚಿನ್ನದ ಸಾಧನೆಗಾಗಿ ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಆಗಲೇ ನೀಡಲಾಗಿತ್ತು. ಈಗಲೂ ಆ ಸಾಧನೆಗಾಗಿಯೇ ಪ್ರಶಸ್ತಿ ನೀಡಲಾಗಿದೆಯೇ ಎಂಬ ಸ್ಪಷ್ಟತೆ ಇಲ್ಲ.

ಇನ್ನೊಂದು ಉದಾಹರಣೆ ನೋಡಿ; ಈ ಸಲ ಅಥ್ಲೆಟಿಕ್ ಫೆಡರೇಷನ್ ಟ್ರಿಪಲ್ ಜಂಪ್ ಪಟು ಅರ್ಪಿಂದರ್ ಸಿಂಗ್, ಮಹಿಳೆಯರ ವಿಭಾಗದ 100 ಮೀಟರ್ ಓಟದ ಅಥ್ಲೀಟ್ ದ್ಯುತಿ ಚಾಂದ್, ಮಧ್ಯಮವೇಗದ ಓಟಗಾರ ಮಂಜೀತ್ ಸಿಂಗ್ ಮತ್ತು ಪಿಯು ಚೈತ್ರಾ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಅವರಿಗೆ ಖೇಲ್ ರತ್ನ ನೀಡಲು ಕೋರಿತ್ತು.

2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅರ್ಪಿಂದರ್ ಅವರನ್ನು ಕೈಬಿಟ್ಟು, ಅದೇ ಕೂಟದಲ್ಲಿ ಎರಡು ಬೆಳ್ಳಿ ಪದಕ ಗಳಿಸಿದ್ದ ದ್ಯುತಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ವಿಶ್ವದ ಅಗ್ರಶ್ರೇಯಾಂಕದ ಜಾವೆಲಿನ್ ಥ್ರೋ ಪಟುಗಳಲ್ಲಿ ಒಬ್ಬರಾಗಿರುವ ನೀರಜ್ ಹೆಸರು ಯಾವ ಪಟ್ಟಿಯಲ್ಲಿಯೂ ಇಲ್ಲ. ಶೂಟಿಂಗ್‌ನಲ್ಲಿ ಜಾಗತಿಕ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಅಭಿಷೇಕ್ ವರ್ಮಾಗೂ ಮನ್ನಣೆ ಸಿಕ್ಕಿಲ್ಲ. ಆಯ್ಕೆ ಮಾಡಿರುವುದಕ್ಕೆ ಮತ್ತು ಕೆಲವರನ್ನು ಕೈಬಿಟ್ಟಿರುವುದಕ್ಕೆ ಕಾರಣ ಏನು ಎಂಬುದನ್ನು ಕ್ರೀಡಾ ಇಲಾಖೆ ಸ್ಪಷ್ಟಪಡಿಸಿಲ್ಲ.

ಇಂತಹ ಇನ್ನು ಹತ್ತಾರು ಗೊಂದಲಗಳು ಇವೆ. ಸಮಿತಿಗಳು, ಸರ್ಕಾರಗಳು ಬದಲಾದರೆ ಸಾಲದು. ನೀತಿ, ನಿಯಮಗಳು ಮತ್ತು ಸಾಧಕರನ್ನು ಗುರುತಿಸುವ ವ್ಯವಸ್ಥೆ ಬದಲಾಗಬೇಕು. ಬಹುತೇಕ ಕ್ರೀಡಾ ಫೆಡರೇಷನ್‌ಗಳಿಗೆ ರಾಜಕಾರಣಿಗಳು ಮುಖ್ಯಸ್ಥರಾಗಿದ್ದು, ಪ್ರಭಾವಶಾಲಿಗಳು ಮೇಲುಗೈ ಸಾಧಿಸುವುದು ಗುಟ್ಟೇನಲ್ಲ. ಐದು ಲಕ್ಷ ರೂಪಾಯಿ ಮತ್ತು ಪ್ರಮಾಣಪತ್ರಗಳ ಜೊತೆಗೆ ಸಿಗುವ ಇನ್ನಿತರ ಸೌಲಭ್ಯಗಳು ಕ್ರೀಡಾಪಟುವಿನ ಜೀವನ ಬದಲಿಸಬಲ್ಲವು. ಪ್ರಶಸ್ತಿ ಬರದಿದ್ದರೂ ಆ ಕ್ರೀಡಾಪಟುವಿನ ಸಾಧನೆ ಮುಕ್ಕಾಗದು. ಆದರೆ ಅರ್ಹರನ್ನು ಆಯ್ಕೆ ಮಾಡಿದರೆ ಪ್ರಶಸ್ತಿಯ ಹೊಳಪು ಹೆಚ್ಚುತ್ತದೆ.

ಕ್ರಿಕೆಟಿಗರಿಗೆ ಏಕೆ ಪ್ರಶಸ್ತಿ?

ಒಲಿಂಪಿಕ್ ಕ್ರೀಡೆಯಲ್ಲದ ವಿಭಾಗದಲ್ಲಿ ಕ್ರಿಕೆಟ್‌ಗೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ, ಇದಕ್ಕಾಗಿ ಬೇರೆ ಕ್ರೀಡಾಪಟುಗಳಿಂದ ಮೊದಲಿನಿಂದಲೂ ಆಕ್ಷೇಪ ಇದೆ. ಹಣ, ಪ್ರಚಾರ ಮತ್ತಿತರ ವಿಷಯದಲ್ಲಿ ಕ್ರಿಕೆಟಿಗರಿಗೆ ಕೊರತೆ ಇಲ್ಲ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಕ್ರಿಕೆಟ್ ಸಾಧಕರನ್ನು ಪ್ರತಿವರ್ಷ ಗೌರವಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಅವರಿಗೆ ಮತ್ಯಾಕೆ ಇಲ್ಲಿ ಪ್ರಶಸ್ತಿ ಕೊಡಬೇಕು ಎಂದು ಪ್ರಶ್ನಿಸುತ್ತಾರೆ.

’ಕ್ರಿಕೆಟ್‌ ಒಂದು ಮನರಂಜನಾ ಕ್ರೀಡೆ. ಅಥ್ಲೆಟಿಕ್ಸ್ ಮತ್ತಿತರ ಕ್ರೀಡೆಗಳಂತಲ್ಲ. ಒಲಿಂಪಿಕ್ಸ್‌ ಮಾನ್ಯತೆಯೂ ಅದಕ್ಕಿಲ್ಲ. 10–12 ದೇಶಗಳು ಭಾಗವಹಿಸಿ ಆಡುವ ಕೂಟವನ್ನು ವಿಶ್ವಕಪ್ ಎಂದು ಪರಿಗಣಿಸುವುದು ಹೇಗೆ‘ ಎಂದು ಮಾಜಿ ಅಥ್ಲೀಟ್ ಅರ್ಜುನ್ ದೇವಯ್ಯ ಪ್ರಶ್ನಿಸುತ್ತಾರೆ.

ಈ ಬಾರಿ ರೋಹಿತ್ ಶರ್ಮಾ ಖೇಲ್ ರತ್ನ ಮತ್ತು ಇಶಾಂತ್ ಶರ್ಮಾ ಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ.

'ಇಡೀ ದೇಶ ನಮ್ಮ ಸಾಧನೆಯನ್ನೂ ಗುರುತಿಸಿದೆ ಎಂಬುದು ಮುಖ್ಯ. ದುಡ್ಡಿಗಿಂತ ಈ ಪ್ರಶಸ್ತಿ ನೀಡುವ ಸಂತೃಪ್ತಿಯೇ ದೊಡ್ಡದು‘ ಎಂದು ಕ್ರಿಕೆಟಿಗರು ಹೇಳುತ್ತಾರೆ.

‘ಖೇಲ್‌ರತ್ನ’ ಸಿಕ್ಕವರಿಗೆ ‘ಅರ್ಜುನ’ ಇಲ್ಲ

ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ವಿಶ್ವ ವೇಟ್‌ಲಿಫ್ಟಿಂಗ್ ಚಿನ್ನದ ಪದಕ ವಿಜೇತ ಮೀರಾಬಾಯಿ ಚಾನು ಅವರು ಅರ್ಜುನ ಪ್ರಶಸ್ತಿಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಇವರಿಬ್ಬರಿಗೂ ಈಗಾಗಲೇ ರಾಜೀವಗಾಂಧಿ ಖೇಲ್‌ ರತ್ನ ಪ್ರಶಸ್ತಿ ನೀಡಿರುವುದರಿಂದ ಅರ್ಜುನಕ್ಕೆ ಪರಿಗಣಿಸಿಲ್ಲ. ಖೇಲ್ ರತ್ನ ಪ್ರಶಸ್ತಿಯು ಅರ್ಜುನಕ್ಕಿಂತ ದೊಡ್ಡದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಇವರಿಬ್ಬರ ಅರ್ಜಿಗಳನ್ನು ಇಲಾಖೆಗೆ ಕಳಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಫೆಡರೇಷನ್‌ಗಳು ಯಾಕೆ ಯೋಚನೆ ಮಾಡಲಿಲ್ಲ. ಈ ವಿಷಯದಲ್ಲಿ ಆಯ್ಕೆ ಸಮಿತಿಯು ಸರಿಯಾದ ನಿಲುವು ತಳೆದಿದೆ ಎಂದು ಕೆಲವು ಕ್ರೀಡಾಪಟುಗಳು ಅಭಿಪ್ರಾಯಪಟ್ಟಿದ್ದಾರೆ.

***

ಅಳುವ ಮಗುವಿಗೆ ಆದ್ಯತೆ!

‘ಭಾರತದಲ್ಲಿ ಕ್ರೀಡೆಯು ಆದ್ಯತಾ ವಲಯವಾಗಿ ಬೆಳೆದಿಲ್ಲ. ಇಡೀ ದೇಶದ ಸಂಸ್ಕೃತಿಯಾಗಿ ಬೆಳೆಯಬೇಕು. ಕ್ರಿಕೆಟ್‌ನಲ್ಲಿರುವ ಮನರಂಜನೆಯಿಂದಾಗಿ ಜನಪ್ರಿಯವಾಗಿದೆ. ಆದರೆ ಉಳಿದ ಕ್ರೀಡೆಗಳಿಗೆ ಅದಕ್ಕಿಂತಲೂ ಹೆಚ್ಚು ಶ್ರಮ, ಸಮಯ ಮತ್ತು ಪ್ರಯತ್ನಗಳು ಬೇಕು. ಆದರೆ, ಪ್ರಶಸ್ತಿ ವಿಷಯಕ್ಕೆ ಬಂದಾಗ ಹಿತಾಸಕ್ತಿ ಮುಖ್ಯ ಪಾತ್ರ ವಹಿಸುವುದು ಗುಟ್ಟೇನಲ್ಲ. ಇದೊಂದು ತರಹ ಅಳುವ ಮಕ್ಕಳಿಗೆ ಮೊದಲು ಹಾಲು ಸಿಗುತ್ತದೆ ಎಂದ ಹಾಗೆ’.

– ಅರ್ಜುನ್ ದೇವಯ್ಯ,ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್

***

ನನಗಿನ್ನೂ ರಾಜ್ಯ ಪ್ರಶಸ್ತಿಯೇ ಬಂದಿಲ್ಲ!

‘ಕಳೆದ ಐದಾರು ವರ್ಷಗಳಿಂದ ಚೆಸ್‌ ಸಾಧಕರಿಗೆ ಈ ಪ್ರಶಸ್ತಿಗಳು ಬಂದಿಲ್ಲ. ನನಗಿಂತ ಉತ್ತಮ ಶ್ರೇಯಾಂಕದಲ್ಲಿರುವ ಹಿರಿಯ ಆಟಗಾರರಿಗೇ ಇನ್ನೂ ಅರ್ಜುನ, ಖೇಲ್ ರತ್ನ ಕೊಟ್ಟಿಲ್ಲ. 2018ರಲ್ಲಿ ಪ್ರಮೋದ್ ಮಧ್ವರಾಜ್ ಅವರು ಸಚಿವರಾಗಿದ್ದಾಗ ನನ್ನ ಅರ್ಜಿ ಶಿಫಾರಸು ಮಾಡಿದ್ದರು. ಆಮೇಲೆ ನಾನು ಅರ್ಜಿ ಹಾಕಿಲ್ಲ. ಇದುವರೆಗೆ ನನಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿಲ್ಲ. ಎರಡು ಮೂರು ಸಲ ಅರ್ಜಿ ಹಾಕಿ ಸುಮ್ಮನಾದೆ’.

– ಎಂ.ಎಸ್. ತೇಜಕುಮಾರ್,ಅಂತರರಾಷ್ಟ್ರೀಯ ಚೆಸ್ ಆಟಗಾರ

***

ನಮ್ಮ ಕೆಲಸ ನಾವು ಮಾಡೋಣ

ಪ್ರಶಸ್ತಿ, ಪುರಸ್ಕಾರಗಳು ಬರಲಿ ಬಿಡಲಿ ಕೆಲಸದಲ್ಲಿ ಉತ್ತಮ ಸಾಧನೆ ಮಾಡಬೇಕು. ನಾನೂ ಎರಡು ಮೂರು ಸಲ ಅರ್ಜಿ ಹಾಕಿದ ನಂತರವೇ ದ್ರೋಣಾಚಾರ್ಯ ಪ್ರಶಸ್ತಿ ಬಂದದ್ದು. ಕೇಂದ್ರ ಕ್ರೀಡಾ ಇಲಾಖೆಯು ತನ್ನದೇ ಆದ ನಿಯಮಗಳನ್ನು ಹೊಂದಿದೆ. ರಾಜ್ಯಮಟ್ಟದ ಇಲಾಖೆಗಳಲ್ಲಿ ನಡೆಯುವಷ್ಟು ಲಾಬಿ ಅಲ್ಲಿ ನಡೆಯಲಿಕ್ಕಿಲ್ಲ. ಸ್ವಲ್ಪ ತಡವಾದರೂ ಅರ್ಹರಿಗೆ ಸಿಗುವ ಭರವಸೆ ಇದೆ.

–ವಿ.ಆರ್. ಬೀಡು,ಹಿರಿಯ ಅಥ್ಲೆಟಿಕ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT