ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಸಾಲದ ಸುಳಿಯಲ್ಲಿ ಹತ್ತಾರು ದೇಶಗಳು

Last Updated 20 ಜುಲೈ 2022, 19:30 IST
ಅಕ್ಷರ ಗಾತ್ರ

ಶ್ರೀಲಂಕಾದ ಆರ್ಥಿಕ ಕುಸಿತವು ಹಲವು ದೇಶಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಸಾಲದ ಸುಳಿಗೆ ಸಿಲುಕಿದಂತಹ ಸ್ಥಿತಿಯಲ್ಲಿ ಜಗತ್ತು ಇದೆ. ಹಲವು ದೇಶಗಳು ಬಿಕ್ಕಟ್ಟಿಗೆ ಒಳಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸಾಲ ಹೆಚ್ಚಾಗಿರುವುದರಿಂದ ಅದಕ್ಕೆ ಪಾವತಿಸಬೇಕಾದ ಬಡ್ಡಿಯ ಹೊರೆ ಹೆಚ್ಚಾಗಿದೆ. ಅದರಿಂದಾಗಿ ವಿದೇಶಿ ವಿನಿಮಯ ಮೀಸಲು ಕರಗಿದೆ.

ಜಗತ್ತಿನ ವಿವಿಧ ದೇಶಗಳ ಸರ್ಕಾರಗಳು, ಉದ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪಡೆದ ಒಟ್ಟು ಸಾಲವನ್ನು ಜಾಗತಿಕ ಸಾಲದ ಮೊತ್ತ ಎಂದು ಹೇಳಲಾಗುತ್ತಿದೆ. ಈ ಸಾಲದ ಮೊತ್ತವು ಅಪಾಯಕಾರಿ ಮಟ್ಟ ತಲುಪಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಚ್ಚರಿಕೆ ನೀಡಿದೆ. ಸಾಲದ ಪ್ರಮಾಣ ಹೆಚ್ಚಳವಾಗಲು ಸುಮಾರು ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್‌ ಸಾಂಕ್ರಾಮಿಕವು ಒಂದು ಕಾರಣ. ಉಕ್ರೇನ್‌ ಮತ್ತು ರಷ್ಯಾ ನಡುವಣ ಸಂಘರ್ಷವು ಜಾಗತಿಕ ವ್ಯಾಪಾರ ವಹಿವಾಟುಗಳನ್ನು ಏರು‍ಪೇರಾಗಿಸಿರುವುದು ಇನ್ನೊಂದು ಕಾರಣ.

ಕಡಿಮೆ ವರಮಾನದ ದೇಶಗಳು ಮತ್ತು ಕಡಿಮೆ ವರಮಾನದ ಕುಟುಂಬಗಳುಈಗಿನ ಸ್ಥಿತಿಯಿಂದ ಅತಿ ಹೆಚ್ಚು ತೊಂದರೆಗೆ ಸಿಲುಕುತ್ತವೆ.

ಜಾಗತಿಕ ಸಾಲವು 2021ರಲ್ಲಿ 300 ಟ್ರಿಲಿಯನ್‌ ಡಾಲರ್‌ (₹24,000 ಲಕ್ಷ ಕೋಟಿ) ತಲುಪಿತ್ತು ಎಂದು ಇನ್ಸ್‌ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್ ಹೇಳಿದೆ. 2020ರಲ್ಲಿ ಜಾಗತಿಕ ಸಾಲದ ಮೊತ್ತವು 226 ಟ್ರಿಲಿಯನ್‌ ಡಾಲರ್ (₹18,080 ಲಕ್ಷ ಕೋಟಿ) ಆಗಿತ್ತು ಎಂದು ಐಎಂಎಫ್‌ನ ಜಾಗತಿಕ ಸಾಲ ದತ್ತಾಂಶ ಕೋಶವು ಹೇಳಿತ್ತು. ಒಂದೇ ವರ್ಷದಲ್ಲಿ ಈ ಪ್ರಮಾಣದ ಏರಿಕೆ ಈವರೆಗಿನ ದಾಖಲೆ.

ಸುಸ್ತಿದಾರರಾಗುವುದನ್ನು ತಪ್ಪಿಸಬೇಕಿದ್ದರೆ ಕನಿಷ್ಠ 100 ದೇಶಗಳು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಮೇಲಿನ ವೆಚ್ಚವನ್ನು ತಗ್ಗಿಸಬೇಕಿದೆ. ಹೀಗೆ ವೆಚ್ಚ ತಗ್ಗಿದರೆ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಆರ್ಥಿಕ ಹಿಂಜರಿತಕ್ಕೆ ಇದು ಕಾರಣವಾಗಬಹುದು ಎಂದು ಐಎಂಎಫ್‌ ಎಚ್ಚರಿಸಿದೆ.

ಅರ್ಜೆಂಟೀನಾದ ಮೇಲೆ ಅತಿ ಹೆಚ್ಚು ಸಾಲ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧ್ಯವಾದರೆ ಮತ್ತು ಐಎಂಎಫ್‌ನಿಂದ ಸಕಾಲದಲ್ಲಿ ನೆರವು ದೊರೆತರೆ ಹಲವು ದೇಶಗಳು ಸುಸ್ತಿದಾರರಾಗುವುದನ್ನು ತಪ್ಪಿಸಬಹುದು ಎಂದು ಪರಿಣತರು ಹೇಳಿದ್ದಾರೆ.

ಅರ್ಜೆಂಟೀನಾ

ಅರ್ಜೆಂಟೀನಾದ ಸ್ಥಿತಿಯು ಶೋಚನೀಯವಾಗಿದೆ. ಅಲ್ಲಿನ ಕರೆನ್ಸಿ ಪೆಸೊದ ಮೌಲ್ಯವು ಶೇ 50ರಷ್ಟು ತಗ್ಗಿದೆ. ವಿವಿಧ ಮೀಸಲು ನಿಧಿಗಳು ಕರಗುತ್ತಿವೆ. ಡಾಲರ್ ಎದುರು ಪೆಸೊ ಮೌಲ್ಯ ಕುಗ್ಗಿದೆ. 2020ರಲ್ಲಿ ಒಂದು ಬಾರಿ ಸಾಲ ಮರುಹೊಂದಾಣಿಕೆ ಮಾಡಿಕೊಳ್ಳಲಾಗಿದೆ. 44 ಬಿಲಿಯನ್‌ ಡಾಲರ್ ( ₹3.52 ಲಕ್ಷ ಕೋಟಿ) ಸಾಲ ನೀಡಲು ಐಎಂಎಫ್‌ ಇದೇ ಮಾರ್ಚ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ಹಾಗಾಗಿ ಸದ್ಯಕ್ಕೆ ಸಾಲ ಮರುಪಾವತಿಯ ಹೊರೆ ಅರ್ಜೆಂಟೀನಾದ ಮೇಲೆ ಇಲ್ಲ. ಆದರೆ, 2024ರ ಹೊತ್ತಿಗೆ ಒಮ್ಮಿಂದೊಮ್ಮೆಲೆ ಸಾಲ ಮರುಪಾವತಿ ಆರಂಭವಾಗಲಿದೆ. ಆ ಹೊತ್ತಿಗೆ ದೇಶವು ಸಾಲ ಮರುಪಾವತಿಯ ಒಪ್ಪಂದ ಉಲ್ಲಂಘಿಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

ಎಲ್ ಸಲ್ವಡಾರ್

ಜನಪ್ರಿಯ ಕ್ರಿಪ್ಟೊಕರೆನ್ಸಿ ಬಿಟ್‌ಕಾಯಿನ್‌ಗೆ ಕಾನೂನಾತ್ಮಕ ಮಾನ್ಯತೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಎಲ್ ಸಲ್ವಡಾರ್ ದೇಶದ್ದು. ಬಿಟ್‌ಕಾಯಿನ್‌ಗಳನ್ನು ಸರ್ಕಾರವೇ ಯಥೇಚ್ಛವಾಗಿ ಖರೀದಿಸಿತು. ಸಲ್ವಡಾರ್ ಬಳಿ ಈಗ ₹584 ಕೋಟಿ ಮೊತ್ತದ 2,000ಕ್ಕೂ ಹೆಚ್ಚು ಬಿಟ್‌ಕಾಯಿನ್‌ಗಳಿವೆ ಎಂದು ಅಂದಾಜಿಸಲಾಗಿದೆ. ದೇಶದ ಎಲ್ಲ ವ್ಯವಹಾರಗಳಿಗೂ ಬಿಟ್‌ಕಾಯಿನ್ ಬಳಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತು. ಆದರೆ ಮಾರುಕಟ್ಟೆಯಲ್ಲಿ ಬಿಟ್‌ಕಾಯಿನ್‌ ಮೌಲ್ಯ ಶೇ 50ರಷ್ಟು ಕುಸಿದಿದ್ದರಿಂದ ದೇಶದ ಆರ್ಥಿಕತೆ ದುಃಸ್ಥಿತಿಗೆ ಬಂದಿತು. ಈಗ ಎಲ್ ಸಲ್ವಡಾರ್‌ಗೆ ಸಾಲ ಮರುಪಾವತಿ ಹಾಗೂ ಬಡ್ಡಿಪಾವತಿ ಕಷ್ಟವಾಗಿದೆ. ಇದೇ ಮಾರ್ಚ್‌ನಲ್ಲಿ ‘ಬಿಟ್‌ಕಾಯಿನ್ ಸಿಟಿ’ ನಿರ್ಮಾಣಕ್ಕೆ 100 ಕೋಟಿ ಡಾಲರ್ (₹8,000 ಕೋಟಿ) ಹಣ ಹೊಂದಿಸಲು ‘ವಾಲ್ಕನೊ ಬಾಂಡ್’ ಅನ್ನು ಸರ್ಕಾರ ಪರಿಚಯಿಸಿತ್ತು. ಆದರೆ ನಿರೀಕ್ಷೆಯಷ್ಟು ಹೂಡಿಕೆ ಆಗಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಕ್ರಿಪ್ಟೊಕರೆನ್ಸಿಯಿಂದ ಹಣಕಾಸು ಸ್ಥಿರತೆ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಲ್ ಸಲ್ವಡಾರ್ ಜೊತೆಗಿನ ಮಾತುಕತೆಯನ್ನು ಸ್ಥಗಿತಗೊಳಿಸಿದೆ. ಈ ನಡುವೆ, 2023ರ ಜನವರಿಯಲ್ಲಿ 8 ಕೋಟಿ ಡಾಲರ್‌ (₹640 ಕೋಟಿ) ಬಡ್ಡಿ ಮರುಪಾವತಿಯ ಒತ್ತಡಕ್ಕೆ ಸರ್ಕಾರ ಸಿಲುಕಿದೆ.

ಉಕ್ರೇನ್‌

ರಷ್ಯಾ–ಉಕ್ರೇನ್ ಸಂಘರ್ಷ ತಾರಕಕ್ಕೆ ಏರಿದೆ. 2,000 ಕೋಟಿ ಡಾಲರ್‌ಗಿಂತ (₹1.60 ಲಕ್ಷ ಕೋಟಿ) ಹೆಚ್ಚಿನ ಸಾಲವನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ ಎಂದು ಹೂಡಿಕೆದಾರ ಸಂಸ್ಥೆಗಳಾದ ಮಾರ್ಗನ್‌ ಸ್ಟ್ಯಾನ್ಲಿ ಮತ್ತು ಅಮುಂಡಿ ಎಚ್ಚರಿಸಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ದೇಶವು 120 ಕೋಟಿ ಡಾಲರ್‌ (₹9,600 ಕೋಟಿ) ಸಾಲ ಮರುಪಾವತಿ ಮಾಡಿಲ್ಲ. ಎರಡು ವರ್ಷದ ಮಟ್ಟಿಗೆ ಸಾಲಮರುಪಾವತಿ ಸ್ಥಗಿತಗೊಳಿಸ ಬೇಕು ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ‘ನಾಫ್ಟೊಗ್ಯಾಸ್‌’ ಇತ್ತೀಚೆಗೆ ಕೋರಿದೆ. ಸರ್ಕಾರವೂ ಇದನ್ನು ಅನುಸರಿಸಬಹುದು ಎಂಬ ಅನುಮಾನ ಹೂಡಿಕೆದಾರರಲ್ಲಿ ಈಗ ಇದೆ.

ಕೆನ್ಯಾ

ಬಡ್ಡಿ ಪಾವತಿಗಾಗಿ ಕೆನ್ಯಾವು ಒಟ್ಟು ವರಮಾನದ ಶೇ 30ರಷ್ಟನ್ನು ವೆಚ್ಚ ಮಾಡುತ್ತಿದೆ. ಈ ದೇಶದ ಬಾಂಡ್‌ಗಳು ಅದರ ಅರ್ಧದಷ್ಟು ಮೌಲ್ಯ ಕಳೆದುಕೊಂಡಿವೆ. ಬಂಡವಾಳ ಮಾರುಕಟ್ಟೆಗೆ ಈ ದೇಶಕ್ಕೆ ಪ್ರವೇಶವೇ ಇಲ್ಲ. 2024ರಲ್ಲಿ ದೇಶವು 200 ಕೋಟಿ ಡಾಲರ್‌ (₹16,000 ಕೋಟಿ) ಮರುಪಾವತಿ ಮಾಡಬೇಕಿದೆ. ಕೋವಿಡ್‌ ಸಾಂಕ್ರಾಮಿಕ ಆರಂಭಕ್ಕೆ ಮೊದಲೇ ಕೆನ್ಯಾವು ಭಾರಿ ಸಾಲವನ್ನು ಹೊಂದಿತ್ತು. ಕೋವಿಡ್ ಸಂದರ್ಭದಲ್ಲಿ ದೇಶವು ಮತ್ತಷ್ಟು ಸಾಲ ಮಾಡಿದೆ.

ನೈಜೀರಿಯಾ

ತನ್ನ ಆದಾಯದ ಶೇಕಡ 30ರಷ್ಟು ಪಾಲನ್ನು ಸಾಲದ ಮೇಲಿನ ಬಡ್ಡಿಪಾವತಿಗೆ ವ್ಯಯಿಸುತ್ತಿರುವ ದೇಶ ನೈಜೀರಿಯಾ. ದೇಶದ ಹಣದುಬ್ಬರ ಪ್ರಮಾಣ ಶೇ 17.7ಕ್ಕೆ ಏರಿಕೆಯಾಗಿದೆ. ಸರಕು ಮತ್ತು ಸೇವೆಗಳ ದರ ದುಬಾರಿಯಾಗಿದ್ದು, ನೈಜೀರಿಯಾ ಜನರು ಈಗಾಗಲೇ ಇದರ ಪರಿಣಾಮ ಎದುರಿಸುತ್ತಿದ್ದಾರೆ. ದಿನಸಿ, ಪಾನೀಯಗಳ ದರ ಒಂದು ವರ್ಷದ ಅವಧಿಯಲ್ಲಿ ದುಪ್ಪಟ್ಟಾಗಿದೆ. ಡೀಸೆಲ್ ಬೆಲೆಯು ಕೆಲವು ವಾರಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ದೇಶದ ಹಲವು ಕಂಪನಿಗಳೂ ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿವೆ. ಈ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇಥಿಯೋಪಿಯಾ

ಇಥಿಯೋಪಿಯಾ ಸಾಲದ ಸುಳಿಯಲ್ಲಿದೆ. 2015ರಲ್ಲಿ ಇಥಿಯೋಪಿಯಾದಲ್ಲಿ ಶುರುವಾದ ಸಾಮೂಹಿಕ ಪ್ರತಿಭಟನೆಗಳು ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯತ್ತ ಸಾಗುತ್ತಿದೆ ಎಂಬುದರ ಸೂಚಕವಾಗಿದ್ದವು. ಇದೇ ಅವಧಿಯಲ್ಲಿ ಟಿಗ್ರೆ ನಾಗರಿಕ ಯುದ್ಧಕ್ಕೂ ದೇಶ ಸಾಕ್ಷಿಯಾಯಿತು. 2020ರ ವೇಳೆಗೆ ದೇಶದ ಸಾಲದ ಪ್ರಮಾಣ ₹4.32 ಲಕ್ಷ ಕೋಟಿಗೆ (5,470 ಕೋಟಿ ಡಾಲರ್) ತಲುಪಿತ್ತು. ಜಿ–20 ಸಮಾವೇಶವು ಇಥಿಯೋಪಿಯಾವನ್ನು ಸಾಲದಿಂದ ಹೊರತರಲು ಕಾರ್ಯಕ್ರಮ ರೂಪಿಸಿತು. ಆದರೆ ಉಕ್ರೇನ್ ಯುದ್ಧ ಹಾಗೂ ಇಥಿಯೋಪಿಯಾದ ಆಂತರಿಕ ಯುದ್ಧದ ಕಾರಣ, ಜಿ–20 ದೇಶಗಳು ಇದರ ಕಡೆಗೆ ಗಮನ ಹರಿಸಲಿಲ್ಲ. ಸಾಲವನ್ನು ಮರುಹೊಂದಾಣಿಕೆ ಮಾಡುವ ಯತ್ನಗಳಿಗೆ ಮತ್ತೆ ಚಾಲನೆ ನೀಡಲಾಗುವುದು ಎಂದು ಫ್ರಾನ್ಸ್ ಹಾಗೂ ಚೀನಾ ಹೇಳಿರುವುದು ಇಥಿಯೋಪಿಯಾ ಸರ್ಕಾರದಲ್ಲಿ ಆಶಾಭಾವ ಮೂಡಿಸಿದೆ.

ಟ್ಯುನೀಷಿಯಾ

ಆಫ್ರಿಕಾದ ಹಲವು ದೇಶಗಳು ಐಎಂಎಫ್‌ ಮೊರೆ ಹೋಗಲೇಬೇಕಾದ ಸ್ಥಿತಿಯಲ್ಲಿ ಇವೆ. ಟ್ಯುನೀಷಿಯಾ ಅದರಲ್ಲಿ ಮುಂಚೂಣಿಯಲ್ಲಿ ಇದೆ. ಈ ದೇಶದ ಆರ್ಥಿಕ ಕೊರತೆಯು ಒಟ್ಟು ಬಜೆಟ್‌ನ ಶೇ 10ರಷ್ಟಿದೆ. ಹಾಗೆಯೇ ಸಾಲದ ಮೊತ್ತವು ಒಟ್ಟು ಆಂತರಿಕ ಉತ್ಪನ್ನದಷ್ಟೇ (ಜಿಡಿಪಿ) ಇದೆ ಎಂದು ಅಂದಾಜಿಸಲಾಗಿದೆ. 2020ರಲ್ಲಿ ಜಿಡಿಪಿಯಲ್ಲಿ ಶೇ 9ರಷ್ಟು ಕುಸಿತ ಆಗಿತ್ತು. ನಿರಂಕುಶಾಧಿಕಾರಿ ಝೈನ್‌ ಅಲ್‌ ಆಬಿದೀನ್‌ ಬಿನ್‌ ಅಲಿ ಸರ್ಕಾರವನ್ನು ಜನರ ಪ್ರತಿಭಟನೆಯು 2011ರಲ್ಲಿ ಪತನಗೊಳಿಸಿತು. ಆದರೆ, ಪ್ರಜಾಪ್ರಭುತ್ವದೆಡೆಗಿನ ಪರಿವರ್ತನೆಯು ಸುಲಲಿತವಾಗಿ ಆಗಲಿಲ್ಲ. ಅರ್ಥ ವ್ಯವಸ್ಥೆಗೆ ಪುನಶ್ಚೇತನವೂ ಸಿಗಲಿಲ್ಲ. ಐಎಂಎಫ್‌ನ ನೆರವು ಅನಿವಾರ್ಯವಾಗಿದೆ.

ಈಜಿಪ್ಟ್‌

ಈಜಿಪ್ಟ್‌ನ ಸಾಲದ ಪ್ರಮಾಣವು ಜಿಡಿಪಿಯ ಶೇ 95ರಷ್ಟಿದೆ. ಜೆ.ಪಿ. ಮಾರ್ಗನ್‌ ಪ್ರಕಾರ, ಅತಿ ಹೆಚ್ಚು ಅಂದರೆ 1,100 ಕೋಟಿ ಡಾಲರ್ (₹88,000 ಕೋಟಿ) ವಿದೇಶಿ ಹೂಡಿಕೆ ಈ ವರ್ಷದಲ್ಲಿ ಹೊರಹೋಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಈಜಿಪ್ಟ್‌ ಭಾರಿ ಮೊತ್ತದ ಸಾಲ ಪಾವತಿಸಬೇಕಿದೆ. ಹಾಗೆಯೇ 2024ರಲ್ಲಿ 3,300 ಕೋಟಿ ಡಾಲರ್‌ (₹26,400 ಕೋಟಿ) ಬಾಂಡ್‌ ಮೊತ್ತವನ್ನೂ ಪಾವತಿಸಬೇಕಿದೆ. ಈಜಿಪ್ಟ್‌ ಪೌಂಡ್‌ನ ಮೌಲ್ಯ ಶೇ 15ರಷ್ಟು ಕಡಿತಗೊಂಡಿದೆ. ದೇಶವು ಐಎಂಎಫ್‌ನ ನೆರವು ಕೋರಿದೆ. ಈಜಿಪ್ಟ್‌ಗೆ ಎಷ್ಟು ಸಾಲ ನೀಡಬೇಕೋ ಅದಕ್ಕಿಂತ ಹೆಚ್ಚಿನ ಸಾಲವನ್ನು ಐಎಂಎಫ್‌ ಈಗಾಗಲೇ ನೀಡಿದೆ.

ಪಾಕಿಸ್ತಾನ

ಪಾಕಿಸ್ತಾನವೂ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಆರ್ಥಿಕ ನೆರವಿಗಾಗಿ ಪಾಕಿಸ್ತಾನವು ಐಎಂಎಫ್ ಮೊರೆ ಹೋಗಿತ್ತು. ಆದರೆ ಐಎಂಎಫ್‌ ಜೊತೆಗಿನ ಒಡಂಬಂಡಿಕೆಯು ನನೆಗುದಿಗೆ ಬಿದ್ದಿದೆ. ಹೀಗಾಗಿ, ಪಾಕಿಸ್ತಾನ ಅಂದುಕೊಂಡಂತೆ ತಕ್ಷಣಕ್ಕೆ ಐಎಂಎಫ್ ನೆರವು ಸಿಗುವುದು ಕಷ್ಟ ಎನ್ನಲಾಗಿದೆ. ಆಮದು ವಸ್ತುಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪಾವತಿ ಕೊರತೆಯನ್ನು ದೇಶ ಎದುರಿಸುತ್ತಿದೆ. ಶ್ರೀಲಂಕಾದಲ್ಲಿ ಆಗಿರುವಂತೆಯೇ ಪಾಕಿಸ್ತಾನದಲ್ಲಿಯೂ ವಿದೇಶಿ ವಿನಿಮಯ ಸಂಗ್ರಹ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈಗ ₹78 ಸಾವಿರ ಕೋಟಿ ಮಾತ್ರ ವಿನಿಮಯ ಖಜಾನೆಯಲ್ಲಿ ಉಳಿದಿದೆ. ಇಲ್ಲಿನ ರೂಪಾಯಿ ಕೂಡಾ ದಾಖಲೆಯ ಮಟ್ಟಕ್ಕೆ ಕುಸಿದು ಆತಂಕ ಸೃಷ್ಟಿಸಿದೆ. ದೇಶವು ತನ್ನ ಆದಾಯದ ಶೇ 40ರಷ್ಟು ಭಾಗವನ್ನು ಬಡ್ಡಿ ಪಾವತಿಗಾಗಿಯೇ ಖರ್ಚು ಮಾಡುತ್ತಿರುವುದು ಜನರಲ್ಲಿ ದಿಗಿಲು ಮೂಡಿಸಿದೆ.

ಬೆಲರೂಸ್

ಉಕ್ರೇನ್ ಮೇಲಿನ ರಷ್ಯಾ ಯುದ್ಧಕ್ಕೆ ಬೆಂಬಲ ನೀಡಿರುವ ಬೆಲರೂಸ್‌ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ರಷ್ಯಾದ ರೀತಿ ಬೆಲರೂಸ್‌ ಮೇಲೂ ಜಾಗತಿಕ ಆರ್ಥಿಕ ನಿರ್ಬಂಧ ಹೇರಲಾಗಿದೆ. ಇದು ಬೆಲರೂಸ್‌ ಅನ್ನು ಬಿಕ್ಕಟ್ಟಿನಲ್ಲಿ ಇರಿಸಿದೆ. ರಷ್ಯಾದ ರೀತಿ ದೊಡ್ಡ ರಫ್ತು ಮಾರುಕಟ್ಟೆಗಳನ್ನು ಬೆಲರೂಸ್‌ ಹೊಂದಿಲ್ಲವಾದರೂ, ರಷ್ಯಾದಷ್ಟೇ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿನ ಖಾಸಗಿ ಬ್ಯಾಂಕ್‌ಗಳು ಹಾಗೂ ಸಣ್ಣ ಹಣಕಾಸು ಸಂಸ್ಥೆಗಳು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿವೆ. ಆರ್ಥಿಕ ನಿರ್ಬಂಧದ ಕಾರಣಕ್ಕೆ, ಇಲ್ಲಿನ ಪೊಟ್ಯಾಷ್ ರಸಗೊಬ್ಬರವನ್ನು ಭಾರತ, ಬ್ರೆಜಿಲ್ ಮೊದಲಾದ ದೇಶಗಳಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಪೊಟ್ಯಾಷ್ ಉತ್ಪಾದನಾ ಕಂಪನಿಗಳನ್ನು ಮುಚ್ಚುವ ಭೀತಿ ಎದುರಾಗಿದ್ದು, ಈ ಕಂಪನಿಗಳು ಸಾಲ ಮಾಡಿ ನೌಕರರಿಗೆ ಸಂಬಳ ನೀಡುತ್ತಿವೆ. ಕಳೆದ ವಾರವಷ್ಟೇ, ಬೆಲರೂಸ್‌ ನೀಡಬೇಕಿದ್ದ 100 ಕೋಟಿ ಡಾಲರ್‌ (₹8,000 ಕೋಟಿ) ಸಾಲ ಮರುಪಾವತಿಯ ಅವಧಿಯನ್ನು ರಷ್ಯಾ ವಿಸ್ತರಿಸಿದೆ. ಜಾಗತಿಕ ನಿರ್ಬಂಧ ತೆರವುಗೊಳ್ಳದ ಹೊರತು ದೇಶದ ಆರ್ಥಿಕ ಸ್ಥಿತಿ ಸರಿದಾರಿಗೆ ಬರುವುದು ಕಷ್ಟ ಎನ್ನಲಾಗಿದೆ.

ಇಕ್ವಡಾರ್‌

ಲ್ಯಾಟಿನ್ ಅಮೆರಿಕಾದ ಪ್ರಮುಖ ದೇಶ ಇಕ್ವಡಾರ್ ಕೋವಿಡ್–19 ಸಾಂಕ್ರಾಮಿಕದಿಂದಾಗಿ ಬಿಕ್ಕಟ್ಟಿಗೆ ಸಿಲುಕಿದೆ. ಎರಡು ವರ್ಷಗಳ ಹಿಂದೆಯೇ ಕೋವಿಡ್‌ನಿಂದ ಆರ್ಥಿಕವಾಗಿ ತತ್ತರಿಸಿದ್ದ ಇಕ್ವಡಾರ್‌ಗೆ ಜನರ ಹಿಂಸಾತ್ಮಕ ಪ್ರತಿಭಟನೆ ಕಂಟಕವಾಗಿ ಪರಿಣಮಿಸಿತು. ನಿತ್ಯ ಬಳಕೆಯ ವಸ್ತುಗಳು ಹಾಗೂ ತೈಲ ದರ ವಿಪರೀತ ಏರಿಕೆ ಖಂಡಿಸಿ ಜನರು ಸರ್ಕಾರದ ವಿರುದ್ಧ ಬೀದಿಗಿಳಿದರು. ಇದೇ ಜೂನ್‌ನಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಒತ್ತಡಕ್ಕೆ ಮಣಿದು ತೈಲ ಬೆಲೆಯನ್ನು ಸರ್ಕಾರ ಇಳಿಸಿತಾದರೂ, ಜನರ ಆಕ್ರೋಶ ತಣ್ಣಗಾಗಿಲ್ಲ. ತೈಲ ಹಾಗೂ ಆಹಾರ ಸಾಮಗ್ರಿಗಳಿಗೆ ಸಬ್ಸಿಡಿ ನೀಡುತ್ತಿರುವ ಸರ್ಕಾರ, ದೊಡ್ಡ ಪ್ರಮಾಣದ ಸಾಲ ಮರುಪಾವತಿಯ ಒತ್ತಡದಲ್ಲಿದೆ.

ಘಾನಾ

ಘಾನಾ ದೇಶವು ವಿವೇಚನಾರಹಿತವಾಗಿ ಸಾಲ ಮಾಡಿದೆ. ಈಗ ಈ ದೇಶದ ಸಾಲವು ಜಿಡಿಪಿಯ ಶೇ 85ರಷ್ಟಕ್ಕೆ ತಲುಪಿದೆ. ಐಎಂಎಫ್‌ ನೆರವು ಇಲ್ಲದೆಯೇ ಸಾಲದ ಸ್ಥಿತಿಯನ್ನು ದೇಶವು ನಿರ್ವಹಿಸಲಿದೆ ಎಂದು ಅಲ್ಲಿನ ಹಣಕಾಸು ಸಚಿವ ಕೆನ್‌ ಒಫೊರಿ ಅಟ್ಟ ಹೇಳಿದ್ದಾರೆ. ಅಲ್ಲಿನ ಕರೆನ್ಸಿ ಸೀಡಿಯ ಮೌಲ್ಯವು ಈ ವರ್ಷ ಶೇ 25ರಷ್ಟು ಕುಸಿದಿದೆ. ತೆರಿಗೆ ವರಮಾನದ ಅರ್ಧಭಾಗವು ಸಾಲದ ಮೇಲಿನ ಬಡ್ಡಿಗೆ ವ್ಯಯ ಆಗುತ್ತಿದೆ. ಹಣದುಬ್ಬರವು ಶೇ 30ರಷ್ಟನ್ನು ತಲುಪಿದೆ. ಹಣದುಬ್ಬರ ನಿಯಂತ್ರಣ, ಕರೆನ್ಸಿ ಮೌಲ್ಯ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಡ್ಡಿದರವನ್ನು ಹೆಚ್ಚಿಸಲಾಗಿದೆ.

ಆಧಾರ: ರಾಯಿಟರ್ಸ್, ಐಎಂಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT