ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕಾರುಗಳಲ್ಲಿ ಸೀಟ್‌ಬೆಲ್ಟ್‌ ಏಕೆ ಧರಿಸಬೇಕು?

Last Updated 31 ಡಿಸೆಂಬರ್ 2022, 5:44 IST
ಅಕ್ಷರ ಗಾತ್ರ

ಪ್ರತೀಬಾರಿ ಗಣ್ಯರೊಬ್ಬರು ರಸ್ತೆ ಅಪಘಾತಕ್ಕೆ ತುತ್ತಾದಾಗ ಸಂಚಾರ ಮತ್ತು ಚಾಲನಾ ನಿಯಮಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಅಂತಹ ಚರ್ಚೆಗಳಲ್ಲಿ ಸೀಟ್‌ಬೆಲ್ಟ್‌ ಸಹ ಒಂದು. ಕಾರಿನಲ್ಲಿ ಚಾಲನೆ ಮತ್ತು ಪ್ರಯಾಣದ ವೇಳೆ ಸೀಟ್‌ಬೆಲ್ಟ್‌ ಧರಿಸುವುದರ ಅಗತ್ಯದ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ.

***

ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್‌ಬೆಲ್ಟ್‌ ಧರಿಸುವುದು ಎಷ್ಟು ಅತ್ಯಗತ್ಯ ಎಂಬುದನ್ನು ಒತ್ತಿ ಒತ್ತಿ ಹೇಳುವ ಹಲವು ಅಪಘಾತಗಳು ಈಚೆಗೆ ನಡೆದಿವೆ. ಉದ್ಯಮಿ ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ, ಸೀಟ್‌ಬೆಲ್ಟ್‌ ಧರಿಸದೇ ಇದ್ದುದ್ದಕ್ಕೆ ಮೃತಪಟ್ಟಿದ್ದರು. ಕಾರಿನಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್‌ಬೆಲ್ಟ್‌ ಧರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಆದರೆ, ಅದು ಜಾರಿಯಾಗಿಲ್ಲ. ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪಘಾತದಲ್ಲಿ ಸೀಟ್‌ಬೆಲ್ಟ್‌ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಪಂತ್ ಅವರು ಶುಕ್ರವಾರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ‘ಭಾರಿ ವೇಗದ ಚಾಲನೆ ವೇಳೆ ರಿಷಭ್ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ. ಸೀಟ್‌ಬೆಲ್ಟ್‌ ಧರಿಸದೇ ಇದ್ದ ಕಾರಣ ಅವರು, ಅಪಘಾತದ ಸಂದರ್ಭದಲ್ಲಿ ಕಾರಿನ ಮುಂಬದಿಯ ಗಾಜಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ರಸ್ತೆಯಲ್ಲಿ ಬಿದ್ದು, ಬಹಳ ದೂರದವರೆಗೆ ಉಜ್ಜಿಕೊಂಡು ಹೋಗಿರುವ ಕಾರಣ, ಅವರ ಬೆನ್ನಿನಲ್ಲಿ ತೀವ್ರ ಸ್ವರೂಪದ ತರಚು ಗಾಯಗಳಾಗಿವೆ’ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಪೊಲೀಸರು ಇದನ್ನು ದೃಢಪಡಿಸಿಲ್ಲ. ಆದರೆ, ‘ರಸ್ತೆಯಲ್ಲಿ ಬಿದ್ದಿರುವ ಕಾರಣದಿಂದಲೇ ಬೆನ್ನಿನಲ್ಲಿ ತೀವ್ರ ಸ್ವರೂಪದ ತರಚು ಗಾಯಗಳಾಗಿವೆ’ ಎಂದು ಪಂತ್ ಅವರಿಗೆ ಚಿಕಿತ್ಸೆ ನೀಡಿದ ಡೆಹ್ರಾಡೂನ್‌ ಆಸ್ಪತ್ರೆಯ ವೈದ್ಯ ಸುಶೀಲ್‌ ನಗರ್ ಹೇಳಿದ್ದಾರೆ. ಸಿಟ್‌ಬೆಲ್ಟ್‌ ಧರಿಸದೇ ಇದ್ದು ಅಪಘಾತದ ಸಂದರ್ಭದಲ್ಲಿ ಕಾರಿನಿಂದ ಪಂತ್ ಅವರು ಎಸೆಯಲ್ಪಟ್ಟಿದ್ದುನಿಜವೇ ಆಗಿದ್ದರೆ, ಸೀಟ್‌ಬೆಲ್ಟ್‌ ಏಕೆ ಧರಿಸಬೇಕು ಎಂಬುದನ್ನು ಈ ಅಪಘಾತವು ಒತ್ತಿ ಹೇಳುತ್ತದೆ.

‘ಪ್ರಾಥಮಿಕ ಸುರಕ್ಷತಾ ಸವಲತ್ತು’
ಸೀಟ್‌ಬೆಲ್ಟ್‌ ಯಾವುದೇ ಕಾರಿನ ಪ್ರಾಥಮಿಕ ಸುರಕ್ಷತಾ ಸವಲತ್ತಾಗಿರುತ್ತದೆ.ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರು ಆಸನದಲ್ಲಿಯೇ ಇರುವಂತೆ ಹಿಡಿದಿಡುವ ಕೆಲಸವನ್ನು ಸೀಟ್‌ಬೆಲ್ಟ್‌ ಮಾಡುತ್ತದೆ. ಸೀಟ್‌ಬೆಲ್ಟ್‌ ಧರಿಸದೇ ಇರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ, ಅಂತಹ ಪ್ರಯಾಣಿಕರು ಕಾರಿನಲ್ಲಿರುವ ಇತರ ಪ್ರಯಾಣಿಕರಿಗೆ ಅಪ್ಪಳಿಸುವ ಅಪಾಯವಿರುತ್ತದೆ. ಜತೆಗೆ ಕಾರಿನ ಮುಂಬದಿ/ಹಿಂಬದಿಯ ಗಾಜಿನಿಂದ ತೂರಿ ಹೊರಗೆ ಚಿಮ್ಮುವ ಅಪಾಯವೂ ಇರುತ್ತದೆ. ಇವೆಲ್ಲವನ್ನೂ ಸೀಟ್‌ಬೆಲ್ಟ್‌ ತಡೆಯುತ್ತದೆ. ಹೀಗಾಗಿ ಕಾರಿನಲ್ಲಿರುವ ಎಲ್ಲರೂ ಸೀಟ್‌ಬೆಲ್ಟ್‌ ಧರಿಸುವುದು ಅತ್ಯಗತ್ಯ.

2005ರಲ್ಲೇ ಕಡ್ಡಾಯ, ಆದರೆ ಜಾರಿಯಾಗಿರಲಿಲ್ಲ
ಕಾರು, ಟ್ರಕ್‌, ಬಸ್‌ ಚಾಲಕರು ಸೀಟ್‌ಬೆಲ್ಟ್‌ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮ 2005ರಿಂದಲೇ ಜಾರಿಯಲ್ಲಿದೆ. ಆದರೆ ಈಗ ಕಾರಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸೀಟ್‌ಬೆಲ್ಟ್‌ ಧರಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.ಕಾರು ಮತ್ತು ಎಸ್‌ಯುವಿಗಳ ಫ್ರಂಟ್‌ ಫೇಸಿಂಗ್‌ ಸೀಟ್‌ಗಳಲ್ಲಿ (ಮುಂಬದಿಗೆ ಮುಖಮಾಡಿದ ಆಸನಗಳು) ಕುಳಿತಿರುವ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸುವುದನ್ನು ರಾಜ್ಯ ಪೊಲೀಸ್‌ ಇಲಾಖೆಯೂ ಕಡ್ಡಾಯ ಮಾಡಿದೆ. ಫ್ರಂಟ್‌ ಫೇಸಿಂಗ್‌ ಸೀಟ್‌ಗಳಲ್ಲಿ ಕೂರುವ ಎಲ್ಲಾ ಪ್ರಯಾಣಿಕರು ಸೀಟ್‌ ಬೆಲ್ಟ್‌ ಧರಿಸುವುದನ್ನು ಕೇಂದ್ರ ಸರ್ಕಾರವು 2005ರಲ್ಲೇ ಕಡ್ಡಾಯಗೊಳಿಸಿತ್ತು. ಆದರೆ 17 ವರ್ಷಗಳ ನಂತರ ರಾಜ್ಯದಲ್ಲಿ ಇದನ್ನು ಕಡ್ಡಾಯಗೊಳಿಸಿ ಆದೇಶ ಮಾಡಲಾಗಿದೆ.

1993ರಲ್ಲಿ ಕೇಂದ್ರೀಯ ಮೋಟಾರು ವಾಹನ ನಿಯಮಗಳು–1989ಗೆ ತಿದ್ದುಪಡಿ ತರಲಾಗಿತ್ತು. ಅದರಲ್ಲಿ ಎಂ1 ವರ್ಗದ (ಚಾಲಕ ಸೇರಿ ಒಂಬತ್ತು ಮತ್ತು ಅದಕ್ಕಿಂತ ಕಡಿಮೆ ಆಸನಗಳಿರುವ ವಾಹನಗಳು) ವಾಹನಗಳ ಫ್ರಂಟ್‌ ಫೇಸಿಂಗ್‌ ಸೀಟ್‌ಗಳಿಗೆ ಸೀಟ್‌ಬೆಲ್ಟ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಸೀಟ್‌ಬೆಲ್ಟ್‌ ಧರಿಸುವುದನ್ನು ಕಡ್ಡಾಯ ಮಾಡಿರಲಿಲ್ಲ. 2003ರಲ್ಲಿ ಈ ನಿಯಮಗಳಿಗೆ ಮತ್ತೆ ತಿದ್ದುಪಡಿ ತಂದು ಎಲ್ಲಾ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸುವುದನ್ನು ಕಡ್ಡಾಯ ಮಾಡಲಾಯಿತು. ಅದನ್ನು 2005ರಿಂದ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ಸೂಚಿಸಿತ್ತು. ಆದರೆ, ಈವರೆಗೆ ಇದನ್ನು ಜಾರಿಗೆ ತಂದಿರಲಿಲ್ಲ.

ರಸ್ತೆ ಸಾರಿಗೆ ವಿಚಾರವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರವು ರಸ್ತೆ ಸಂಚಾರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಮತ್ತು ಕಾಯ್ದೆಗಳನ್ನು ಜಾರಿಗೆ ತಂದರೂ ರಾಜ್ಯ ಸರ್ಕಾರಗಳು ಅದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲೇಬೇಕು. ಆದರೆ, ಫ್ರಂಟ್‌ ಪೇಸಿಂಗ್‌ ಆಸನಗಳಲ್ಲಿ ಕೂರುವ ಎಲ್ಲ ಪ್ರಯಾಣಿಕರೂ ಸೀಟ್‌ಬೆಲ್ಟ್‌ ಧರಿಸುವುದನ್ನು ಕಡ್ಡಾಯ ಮಾಡುವ ಸಂಬಂಧ ರಾಜ್ಯಗಳು ಅಧಿಸೂಚನೆ ಹೊರಡಿಸಿರಲೇ ಇಲ್ಲ.

ಜಾರಿಯಲ್ಲಿ ಹಲವು ಗೊಂದಲ
ಚಾಲಕ ಹಾಗೂ ಎಂಟು ಜನರಿಗಿಂತ ಕಡಿಮೆ ಆಸನ ಸಾಮರ್ಥ್ಯ ಇರುವ ಎಂ–1 ವರ್ಗದ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸಿದರೆ ₹1,000 ದಂಢ ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ. ಆದರೆ ಸೀಟ್‌ ಬೆಲ್ಟ್ ಹಾಕುವುದನ್ನು ಕಡ್ಡಾಯಗೊಳಿಸಿದ್ದರ ಬಗ್ಗೆ ಬಹಳ ಗೊಂದಲಗಳಿವೆ. ಆದೇಶ ಹೊರಡಿಸಿ ಹಲವು ತಿಂಗಳು ಕಳೆದರೂ, ಅದು ಜಾರಿಯಾಗಿಲ್ಲ.

₹1,000 ದಂಡ ವಿಧಿಸುವ ಸ್ವರೂಪದ ಬಗ್ಗೆ ಗೊಂದಲವಿದೆ.ನಾಲ್ಕೈದು ಜನರು ಪ್ರಯಾಣಿಸುತ್ತಿರುವಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಪ್ರತಿ ಪ್ರಯಾಣಿಕರಿಗೂ ಪ್ರತ್ಯೇಕವಾಗಿ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆಯೇ ಅಥವಾ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಎಲ್ಲ ಪ್ರಯಾಣಿಕರಿಗೂ ಸೇರಿ ₹1,000 ದಂಡ ವಿಧಿಸಲಾಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಪ್ರಯಾಣಿಕರು ತಕ್ಷಣವೇ ದಂಡ ಪಾವತಿಸಬೇಕೇ ಅಥವಾ ನಂತರದ ದಿನಗಳಲ್ಲಿ ಪಾವತಿಸಲು ಅವಕಾಶವಿದೆಯೇ ಎಂಬ ಬಗ್ಗೆಯೂ ಮಾಹಿತಿಯಿಲ್ಲ.

ಸೀಟ್ ಬೆಲ್ಟ್ ಇರುವ ವಾಹನಗಳಲ್ಲಿ, ಅದನ್ನು ಧರಿಸದ ಪ್ರಯಾಣಿಕರಿಗೆ ದಂಡ ವಿಧಿಸುವುದು ಸಾಮಾನ್ಯ. ಆದರೆ, ಸೀಟ್ ಬೆಲ್ಟ್ ಇಲ್ಲದ ವಾಹನಗಳ ವಿಚಾರದಲ್ಲಿ ಈ ನಿಯಮ ಹೇಗೆ ಪಾಲನೆಯಾಗುತ್ತದೆ ಎಂದು ತಿಳಿದಿಲ್ಲ.ಸುಮಾರು 15–20 ವರ್ಷಗಳಷ್ಟು ಹಳೆಯದಾಗಿರುವ ಬಹುತೇಕ ಟ್ಯಾಕ್ಸಿಗಳಲ್ಲಿ ಸೀಟ್ ಬೆಲ್ಟ್ ಇರುವುದಿಲ್ಲ. ಕನಿಷ್ಠಪಕ್ಷ ಚಾಲಕನಿಗೂ ಸೀಟ್ ಬೆಲ್ಟ್ ಸೌಲಭ್ಯ ಇಲ್ಲದಹಲವು ಟ್ಯಾಕ್ಸಿಗಳು ರಸ್ತೆಯಲ್ಲಿ ಓಡಾಡುತ್ತಿವೆ. ಈ ವಾಹನಗಳಲ್ಲಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಸಂಚಾರ ಪೊಲೀಸರು ಸೀಟ್ ಬೆಲ್ಟ್ ಕಡ್ಡಾಯ ನಿಮಯವನ್ನು ಹೇಗೆ ಅನುಷ್ಠಾನ ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.

ಇಂತಿಷ್ಟು ವರ್ಷ ಕಳೆದ ಬಳಿಕ, ಹಳೆಯ ವಾಹನಗಳು ರಸ್ತೆಯಲ್ಲಿ ಓಡಾಡಲು ಯೋಗ್ಯವಾಗಿವೆಯೇ ಎಂದು ಪರಿಶೀಲಿಸಿ, ಪ್ರಮಾಣೀಕರಿಸುವ ವ್ಯವಸ್ಥೆ ಇದೆ. ಹಳೆಯ ವಾಹನಗಳ ಬಳಿ ಯೋಗ್ಯತಾ ಪ್ರಮಾಣಪತ್ರ (ಎಫ್‌ಸಿ) ಕಡ್ಡಾಯವಾಗಿ ಇರಬೇಕು. ವಾಹನಗಳು ರಸ್ತೆಯಲ್ಲಿ ಸಂಚರಿಸಲು ಸಮರ್ಥವಾಗಿಯೇ ಮತ್ತು ಅವುಗಳ ಎಲ್ಲಾ ಉಪಕರಣಗಳು ಕೆಲಸ ಮಾಡುತ್ತವೆಯೇ ಎಂಬುದನ್ನುಪರಿಶೀಲಿಸಿ ಈ ಪ್ರಮಾಣಪತ್ರ ನೀಡಲಾಗುತ್ತದೆ. ಪರಿಶೀಲನೆ ಸಮಯದಲ್ಲಿ ಸೀಟ್‌ ಬೆಲ್ಟ್ ಇದೆಯೇ ಹಾಗೂ ಬಳಸಲು ಯೋಗ್ಯವಿದೆಯೇ ಎಂದು ಪರಿಶೀಲನೆ ನಡೆಸಬೇಕು. ಈ ಬಗ್ಗೆ ಸರಿಯಾದ ಪರಿಶೀಲನೆ ನಡೆಯುತ್ತದೆ ಎಂಬ ಬಗ್ಗೆ ಖಾತರಿಯಿಲ್ಲ.

ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ವಾಹನಗಳು ಹಾಗೂ ಖಾಸಗಿ ವಾಹನಗಳಲ್ಲಿ ಹಿಂಬದಿ ಪ್ರಯಾಣಿಕರಿಗೆ ಸೀಟ್‌ ಬೆಲ್ಟ್ ಅನ್ನು ಬಳಸಲು ಕೆಲವು ಬಾರಿ ಸಾಧ್ಯವಿರುವುದಿಲ್ಲ. ಟ್ಯಾಕ್ಸಿಗಳಲ್ಲಿ ಸೀಟ್‌ ಬೆಲ್ಟ್ ಹಾಗೂ ಬಕಲ್‌ಗಳನ್ನು ಸೀಟ್‌ನ ಒಳಗಡೆ ಹಾಕಿ ಹೊಸ ಸೀಟ್‌ ಕವರ್ ಹಾಕಿರಲಾಗಿರುತ್ತದೆ. ಹೀಗಾಗಿ, ಸೀಟ್ ಬೆಲ್ಟ್ ಧರಿಸಬೇಕೆಂದರೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಟ್ಯಾಕ್ಸಿಗಳ ಮೇಲೆ ಪೊಲೀಸರು ಏನು ಕ್ರಮ ಜರುಗಿಸುತ್ತಾರೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಚೈಲ್ಡ್‌ ಸೀಟ್‌ ಬಗ್ಗೆ ನಿರ್ಲಕ್ಷ್ಯ
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರಿನಲ್ಲಿ ಕೂರಿಸುವಾಗ ಚೈಲ್ಡ್‌ಸೀಟ್‌ ಅಥವಾ ಬೂಸ್ಟರ್ ಸೀಟ್‌ ಬಳಸುವುದು ಕಡ್ಡಾಯ ಎಂದು ಕೇಂದ್ರೀಯ ಮೋಟಾರು ವಾಹನ ನಿಯಮದ 94(2)ನೇ ಸೆಕ್ಷನ್‌ ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆಯ 194ಬಿ(2) ಸೆಕ್ಷನ್‌ನಲ್ಲಿ ಉಲ್ಲೇಖಿಸಲಾಗಿದೆ.ಮಕ್ಕಳನ್ನು ಚೈಲ್ಡ್‌ಸೀಟ್‌ನಲ್ಲಿ ಕೂರಿಸದೇ ಇದ್ದರೆ, ಚಾಲಕನಿಗೆ ₹1,000 ದಂಡ ವಿಧಿಸಲು ಮೋಟಾರು ವಾಹನ ಕಾಯ್ದೆಯ 194ಬಿ(2) ಸೆಕ್ಷನ್‌ ಅವಕಾಶ ಮಾಡಿಕೊಡುತ್ತದೆ. ಇದನ್ನು 2019ರ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಆದರೆ, ಯಾವ ರಾಜ್ಯವೂ ಇದನ್ನು ಜಾರಿಗೆ ತಂದಿಲ್ಲ. ಕಾರಿನ ಸಾಮಾನ್ಯ ಸೀಟ್‌ಗಳಿಗೆ ಅಳವಡಿಸಿರುವ ಸೀಟ್‌ಬೆಲ್ಟ್‌ಗಳನ್ನು ಮಕ್ಕಳಿಗೆ ಬಳಸಲು ಸಾಧ್ಯವಿಲ್ಲ. ಸಾಮಾನ್ಯ ಸೀಟಿನಲ್ಲೇ ಮಕ್ಕಳನ್ನು ಕೂರಿಸಿದ್ದರೆ, ಅಪಘಾತ ಮತ್ತು ತುರ್ತು ಬ್ರೇಕಿಂಗ್‌ ಸಂದರ್ಭದಲ್ಲಿ ಸೀಟ್‌ಬೆಲ್ಟ್‌ ಅಡಿಯಿಂದ ಮಕ್ಕಳು ಜಾರಿ ಹೋಗುವ ಮತ್ತು ಸೀಟ್‌ಬೆಲ್ಟ್‌ಗಳು ಮಕ್ಕಳ ಕುತ್ತಿಗೆಗೆ ಗಾಯ ಮಾಡುವ ಅಪಾಯವಿರುತ್ತದೆ. ಹೀಗಾಗಿ ಮಕ್ಕಳನ್ನು ಸುರಕ್ಷಿತವಾಗಿ ಕೂರಿಸಲು ಚೈಲ್ಡ್‌ಸೀಟ್‌ ಬಳಸಲಾಗುತ್ತದೆ.

ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚೈಲ್ಡ್‌ಸೀಟ್‌ ಬಳಸಬೇಕು. 8ರಿಂದ 14 ವರ್ಷದ ಮಕ್ಕಳಿಗೆ ಬೂಸ್ಟರ್‌ ಸೀಟ್‌ ಬಳಸಬೇಕು ಎಂದು ಈ ನಿಯಮಗಳಲ್ಲಿ ವಿವರಿಸಲಾಗಿದೆ.

ಆಧಾರ:ಕೇಂದ್ರೀಯ ಮೋಟಾರು ವಾಹನ ನಿಯಮಗಳು–1989, ಕೇಂದ್ರೀಯ ಮೋಟಾರು ವಾಹನ ಕಾಯ್ದೆ–1988, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸುತ್ತೋಲೆ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT