ಗುರುವಾರ , ಜನವರಿ 20, 2022
15 °C
ಬೆಂಗಳೂರು, ಚೆನ್ನೈ, ಮುಂಬೈ ಸೇರಿ ಮಹಾನಗರಗಳಲ್ಲಿ ಅಪಾಯ; ‘ಸಿ40 ಸಿಟೀಸ್’ ವರದಿ

ಕಲ್ಲಿದ್ದಲು ಮಾಲಿನ್ಯ: ಅಕಾಲಿಕ ಮರಣ ಶೇ 60ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಗತ್ತಿನ ಇತರ ಪ್ರಮುಖ ನಗರಗಳಲ್ಲಿ ವಾಸಿಸುತ್ತಿರುವ ಜನರಿಗೆ ಹೋಲಿಸಿದರೆ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ವಾಸಿಸುವ ಜನರು ಕಲ್ಲಿದ್ದಲು ಸಂಬಂಧಿತ ಮಾಲಿನ್ಯದಿಂದ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ.

ದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಮತ್ತು ಮುಂಬರುವ ದಿನಗಳಲ್ಲಿ ಕಲ್ಲಿದ್ದಲು ಘಟಕಗಳನ್ನು ವಿಸ್ತರಿಸುವ ವಿವಿಧ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸಿ, ‘ಸಿ40 ಸಿಟೀಸ್’ ಸಂಸ್ಥೆಯು ಅಧ್ಯಯನ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ.  

‘ಪ್ರಸ್ತುತ ಕಲ್ಲಿದ್ದಲು ಯೋಜನೆಗಳು ಭಾರತದ ಪ್ರಮುಖ ನಗರಗಳಲ್ಲಿ ಕಲ್ಲಿದ್ದಲು ಸಂಬಂಧಿತ ವಾಯು ಮಾಲಿನ್ಯದಿಂದ ವಾರ್ಷಿಕ ಅಕಾಲಿಕ ಮರಣಗಳ ಸಂಖ್ಯೆಯನ್ನು ಶೇ 60ರಷ್ಟು ಹೆಚ್ಚಿಸಬಹುದು’ ಎಂದು ಅಧ್ಯಯನ ತಂಡದ ಮುಖ್ಯಸ್ಥ ಡಾ. ರಾಚೆಲ್ ಹಕ್ಸ್ಲೆ ಹೇಳಿದ್ದಾರೆ.

ಸಿ40 ಸಿಟೀಸ್, ವಿಶ್ವದ 97 ಮಹಾನ್ ನಗರಗಳ ಹವಾಮಾನ, ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯದ ಕುರಿತು ಬೆಳಕು ಚೆಲ್ಲುತ್ತದೆ. ಅಧ್ಯಯನದ ಪ್ರಕಾರ, ಪ್ರಮುಖ ಭಾರತೀಯ ನಗರಗಳಲ್ಲಿ ಮುಂದಿನ ಒಂದು ದಶಕದಲ್ಲಿ 52,700 ಅಕಾಲಿಕ ಮರಣಗಳು, 31,300 ಅಕಾಲಿಕ ಜನನಗಳು ಆಗಲಿವೆ. 46,800 ಬಾರಿ ಆಸ್ತಮಾ ತುರ್ತು ಚಿಕಿತ್ಸೆಗಾಗಿ ಜನರು ಆಸ್ಪತ್ರೆಗಳಿಗೆ ಎಡತಾಕಲಿದ್ದಾರೆ. ಜನರು 2.58 ಕೋಟಿ ದಿನಗಳ ಅನಾರೋಗ್ಯದ ರಜೆ ಪಡೆಯಲಿದ್ದಾರೆ. 

ಭಾರತದಲ್ಲಿ ಕಲ್ಲಿದ್ದಲಿನಿಂದ ಉತ್ಪಾದಿಸಲಾಗುವ ವಿದ್ಯುತ್ತಿನ ಪೈಕಿ ಶೇ 55ರಷ್ಟು ವಿದ್ಯುತ್ ಈ ಮಹಾನಗರಗಳ 500 ಕಿ.ಮೀ. ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತದೆ. ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಂದ ಹೊರಸೂಸುವ ಮಲಿನ ಕಣಗಳು ಬಹಳ ದೂರ ಪ್ರಯಾಣಿಸುತ್ತವೆ. ಮಹಾನಗರಗಳಿಂದ ಸುಮಾರು 500 ಕಿ.ಮೀ. ವ್ಯಾಪ್ತಿಯಲ್ಲಿರುವ ಕಲ್ಲಿದ್ದಲು ಸ್ಥಾವರಗಳು ನಗರದ ಯುವಕರು, ವೃದ್ಧರು ಮತ್ತು ಗರ್ಭಿಣಿಯರ ಆರೋಗ್ಯವ‌ನ್ನು ಅಪಾಯಕ್ಕೆ ತಳ್ಳುತ್ತವೆ ಎಂದು ವರದಿ ತಿಳಿಸಿದೆ. 

ಈಗ ಅಸ್ತಿತ್ವದಲ್ಲಿರುವ ಶೇ 20ರಷ್ಟು ಕಲ್ಲಿದ್ದಲು ಸ್ಥಾವರಗಳನ್ನು ಬಂದ್ ಮಾಡುವುದರಿಂದ ಮತ್ತು ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು ಹಾಗೂ ಚೆನ್ನೈ ಬಳಿ ಹೊಸ ಕಲ್ಲಿದ್ದಲು ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸುವುದರಿಂದ 2020-2030 ಅವಧಿಯಲ್ಲಿ ಗಮನಾರ್ಹ ಪ್ರಯೋಜನ ಕಂಡುಬರಲಿದೆ. ಕಲ್ಲಿದ್ದಲು ವಿದ್ಯುತ್ ಘಟಕಗಳನ್ನು 2020ರಿಂದ 2030ರ ನಡುವೆ ಶೇ 28ರಷ್ಟು ಹೆಚ್ಚಿಸಲು ಗುರಿಹಾಕಿಕೊಳ್ಳಲಾಗಿದೆಯೇ ವಿನಾ, ಶೇ 20ರಷ್ಟು ಕಡಿಮೆ ಮಾಡುವ ದಿಕ್ಕಿನಲ್ಲಿಲ್ಲ ಎಂದು ಅಭಿಪ್ರಾಯಪಟ್ಟಿದೆ.

 

ಶುದ್ಧ ಇಂಧನ ಅಗತ್ಯ

ಹೊಸ ಕಲ್ಲಿದ್ದಲು ಸ್ಥಾವರಗಳನ್ನು ನಿರ್ಮಿಸುವ ಬದಲು ಶುದ್ಧ ಇಂಧನದಲ್ಲಿ ಹೂಡಿಕೆ ಮಾಡುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾಯುಗುಣಮಟ್ಟ ಯೋಜನೆಯಲ್ಲಿ ಪ್ರಕಟಿಸಬೇಕು. ಹಳೆಯ ಮತ್ತು ಅತ್ಯಂತ ಮಾಲಿನ್ಯಕಾರಕ ಕಲ್ಲಿದ್ದಲು ಘಟಕಗಳಿಗೆ ನಿವೃತ್ತಿ ಘೋಷಿಸಬೇಕು ಎಂದು ವರದಿ ಸಲಹೆ ನೀಡಿದೆ.

ಭಾರತದಲ್ಲಿ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಗಿಂತ ಸೌರ ಮತ್ತು ಪವನ ಶಕ್ತಿಯು ಈಗಾಗಲೇ ಅಗ್ಗವಾಗಿದೆ. ಹೊಸ ಕಲ್ಲಿದ್ದಲು ಸ್ಥಾವರಗಳಿಗಿಂತ ಶುದ್ಧ ಶಕ್ತಿಯ ಮೇಲೆ ಹೂಡಿಕೆ ಮಾಡುವುದರಿಂದ ಮನೆ ಬಳಕೆ ಹಾಗೂ ಉದ್ದಿಮೆಗಳ ವಿದ್ಯುತ್ ವೆಚ್ಚ ಕಡಿಮೆಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಮಾಲಿನ್ಯ ಪರಿಣಾಮ

l ನಗರಗಳ ಆರ್ಥಿಕತೆಯ ಮೇಲೆ ಪರಿಣಾಮ

l ಕಾರ್ಮಿಕ ಉತ್ಪಾದಕತೆ ಇಳಿಕೆ

l ಉದ್ಯೋಗಿಗಳ ಅನುಪಸ್ಥಿತಿ ಹೆಚ್ಚಳ

l ಆರ್ಥಿಕ ನಷ್ಟಕ್ಕೆ ದಾರಿ

l ಆರೋಗ್ಯ ವೆಚ್ಚಗಳಿಗೆ ಕಾರಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು