ಭಾನುವಾರ, ಅಕ್ಟೋಬರ್ 25, 2020
21 °C

ಆಳ–ಅಗಲ | ಕಲಿಯಲು ಕಲಿಸೋಣ: ಮನೆಯಲ್ಲಿರುವ ಮಕ್ಕಳಿಗೆ ಪೋಷಕರೇ ಶಿಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆ, ಆಟ, ಪಾಠ ಎಂದು ನಕ್ಕು ನಲಿಯಬೇಕಿದ್ದ ಮಕ್ಕಳು ಕೊರೊನಾದಿಂದಾಗಿ ಮನೆಯೊಳಗೆ ಉಳಿದಿದ್ದಾರೆ. ಗೆಳೆಯ–ಗೆಳತಿಯರೊಂದಿಗೆ ಕೂಡಿ ಕಲಿಯುವ ಸಡಗರ ಆನ್‌ಲೈನ್‌ ತರಗತಿಯಲ್ಲಿ ಇಲ್ಲ. ಆನ್‌ಲೈನ್‌ ತರಗತಿ ಕೆಲವು ತಾಸು ಮಾತ್ರ. ಉಳಿದ ಸಮಯ ಏನು ಮಾಡಬೇಕು ಎಂಬುದೂ ದೊಡ್ಡ ಪ್ರಶ್ನೆ. ರಜೆಯಲ್ಲದ ಈ ರಜೆ ಅವಧಿಯನ್ನು ಮಕ್ಕಳಿಗೆ ಉಪಯುಕ್ತವಾಗಿ ರೂಪಿಸುವುದು ಪೋಷಕರಿಗೂ ಸವಾಲು. ಈ ಅವಧಿಯಲ್ಲಿ ಮಕ್ಕಳಿಗೆ ಏನು ಕಲಿಸಬೇಕು, ಹೇಗೆ ಕಲಿಸಬೇಕು ಎಂಬುದರತ್ತ ಮಕ್ಕಳ ತಜ್ಞರು ಬೆಳಕು ಚೆಲ್ಲಿದ್ದಾರೆ.

***

ಕೋವಿಡ್–19 ಸೃಷ್ಟಿಸಿರುವ ಆರ್ಥಿಕ ಪರಿಣಾಮಗಳ ಬಗ್ಗೆ ಜಗತ್ತಿನ ಬಹುಪಾಲು ದೇಶಗಳು ಆತಂಕದಲ್ಲಿವೆ. ಜಾಗತಿಕ ಜಿಡಿಪಿ ಶೇ 5.2ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಆರ್ಥಿಕ ಪರಿಣಾಮಗಳ ಬಗ್ಗೆ ಇರುವ ಕಳಕಳಿ ಶಾಲೆಗಳ ಪುನರಾರಂಭದ ಬಗ್ಗೆ ವ್ಯಕ್ತವಾಗುತ್ತಿಲ್ಲ. ಭಾರತವೂ ಇದಕ್ಕೆ ಹೊರತಾಗಿಲ್ಲ. ಇಂತಹ ಸಮಯದಲ್ಲಿ ಮಕ್ಕಳನ್ನು ಸಕ್ರಿಯವಾಗಿ ಇರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ. 

ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ ಎನ್‌ಜಿಒಗಳ ಜತೆ ಕಳೆದ ತಿಂಗಳು ವಿಡಿಯೊ ಸಂವಾದ ನಡೆಸಿತ್ತು. ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕುರಿತು ಮೈಸೂರಿನ ಪ್ರಥಮ್ ಸಂಸ್ಥೆ ಯೋಜನೆಯೊಂದನ್ನು ಪ್ರಸ್ತಾಪಿಸಿತ್ತು. ಶಾಲೆಗಳು ಬಾಗಿಲು ಮುಚ್ಚಿರುವ ಈ ಹೊತ್ತಿನಲ್ಲಿ ‘ಪೋಷಕರನ್ನೇ ಶಿಕ್ಷಕರಾಗಿ ಬಳಸುವುದು’ ಈ ಯೋಜನೆಯ ಹಿಂದಿನ ಮೂಲ ಆಲೋಚನೆ. 

ಔಪಚಾರಿಕ ಶಾಲಾ ಶಿಕ್ಷಣ ಪ್ರಾರಂಭವಾದಾಗಿನಿಂದ, ಮಕ್ಕಳ ಶಿಕ್ಷಣ ವಿಚಾರದಲ್ಲಿ ಪೋಷಕರ ಪಾತ್ರ ಕ್ಷೀಣಿಸುತ್ತಾ ಬಂದಿತು. ಹೆಚ್ಚಿನ ಅಂಕ ಗಳಿಸಲು ಮಕ್ಕಳನ್ನು ಸಿದ್ಧಗೊಳಿಸುವುದೇ ಪೋಷಕರ ಮುಖ್ಯ ಉದ್ದೇಶವಾಗಿದೆ. ಪೋಷಕರು ಎಷ್ಟು ಬಾರಿ ಮಕ್ಕಳ ಜತೆ ಕುರಿತು ಪಠ್ಯಕ್ರಮದ ಹೊರತಾದ ವಿಷಯಗಳನ್ನು ಚರ್ಚಿಸುತ್ತಾರೆ? ತಮ್ಮ ವೃತ್ತಿಯ ಬಗ್ಗೆ, ನೈತಿಕ ಮೌಲ್ಯಗಳ ಬಗ್ಗೆ, ತಮ್ಮೂರು, ರಾಜ್ಯ, ದೇಶ, ಜಗತ್ತಿನ ಆಗುಹೋಗುಗಳ ಬಗ್ಗೆ ಹೇಳಿಕೊಟ್ಟಿದ್ದಾರೆ? ಇಲ್ಲ ಎಂಬ ಉತ್ತರವೇ ಬರುತ್ತದೆ.  

‘ಪೋಷಕರೇ ಶಿಕ್ಷಕರು’ ಪರಿಕಲ್ಪನೆಯನ್ನು ಹಲವರು ಮೆಚ್ಚಿದ್ದರೂ, ಅನಕ್ಷರಸ್ಥ ಪೋಷಕರು ಮಕ್ಕಳಿಗೆ ಏನನ್ನು ಹೇಳಿಕೊಡಬಲ್ಲರು ಎಂಬ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯಲು, ಅವರಲ್ಲಿ ಕುತೂಹಲವನ್ನು ಹುಟ್ಟಿಸಲು ಅಥವಾ ಪ್ರಶ್ನೆ ಕೇಳುವ ಮೂಲಗುಣ ಬೆಳೆಸಲು ಶಿಕ್ಷಣ ಬೇಕಾಗಿಯೇ ಇಲ್ಲ. ಅದು ಸಹಜಧರ್ಮ.

ಈಗಿನ ಶಿಕ್ಷಣವು ಮೂಲಕೌಶಲಗಳಾದ ಓದು, ಬರಹ, ಗಣಿತ ಕಲಿಕೆಯತ್ತಲೇ ಗಿರಕಿ ಹೊಡೆಯುತ್ತಿದೆ. ಮಕ್ಕಳು ಪ್ರಶ್ನೆ ಕೇಳುವ ಹಾಗೂ ಸುತ್ತಲಿನ ವಸ್ತುಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಒಬ್ಬ ರೈತ ತನ್ನ ಮಕ್ಕಳಿಗೆ ಬೇಸಾಯ ಪ್ರಕ್ರಿಯೆ, ನೀರಿನ ಸದ್ಬಳಕೆ, ಸ್ವಚ್ಛತೆ ಹಾಗೂ ಸಾಂಪ್ರದಾಯಿಕ ಆಹಾರಗಳ ಬಗ್ಗೆ ತಿಳಿಸಿಕೊಡಬಹುದು. ಅನಕ್ಷರಸ್ಥ ತಾಯಿಯೊಬ್ಬಳು ತನ್ನ ಮಗುವಿಗೆ ಹಳ್ಳಿಯ ಜೀವನದ ಬಗ್ಗೆ ಹೇಳಿಕೊಡಬಹುದು. ಅನಕ್ಷರಸ್ಥ ಅಜ್ಜ–ಅಜ್ಜಿಯಂದಿರು ಸಾಂಪ್ರದಾಯಿಕ ಮನೆಮದ್ದುಗಳ ಮಾಹಿತಿ ನೀಡಲು ಯಾವುದೇ ಅಡ್ಡಿಯಿಲ್ಲ. 

ಈ ತಳಹದಿಯಲ್ಲಿ ಶಿಕ್ಷಣ ನೀಡಲು ಯೋಜಿಸಿರುವ ಪ್ರಥಮ್ ಸಂಸ್ಥೆ ಸ್ವಚ್ಛತೆ ಕುರಿತ 50 ವಿಡಿಯೊಗಳನ್ನು ಸಿದ್ಧಪಡಿಸಿ ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಂಡಿದೆ. ಆ್ಯಪ್ ಸೌಲಭ್ಯ ಇಲ್ಲದವರಿಗೆ ಕರೆ ಮಾಡಿ ಸಾರಾಂಶವನ್ನು ಹೇಳುವ ಯೋಜನೆ ರೂಪಿಸಿದೆ. ಮೊಬೈಲ್‌ನಲ್ಲಿ ಮಾಹಿತಿ ಕೇಳಿಸಿಕೊಂಡ ಬಳಿಕ ಪೋಷಕರು ತಮ್ಮ ಮಕ್ಕಳ ಜತೆ ಕುಳಿತುಗೊಂಡು ಅವರೊಂದಿಗೆ ವಿಷಯದ ಬಗ್ಗೆ ಚರ್ಚಿಸಬೇಕಾಗುತ್ತದೆ. ಮಕ್ಕಳ ಆಸಕ್ತಿಯ 50 ವಿಷಯಗಳನ್ನು ಸಂಸ್ಥೆ ಪಟ್ಟಿಮಾಡಿದೆ. 

30 ವರ್ಷಗಳ ಹಿಂದೆ ಅಮೆರಿಕದ ವಿದ್ವಾಂಸ ಜೇಮ್ಸ್ ವೋಪಟ್ ಅವರು ವಲಸಿಗರು ಶಿಕ್ಷಕರಾಗಿ ತೊಡಗಿಸಿಕೊಳ್ಳುವ ಯೋಜನೆಯೊಂದನ್ನು ರೂಪಿಸಿದ್ದರು. ಯೋಜನೆಯ ಅಂ‌ಶಗಳು ಆಸಕ್ತಿದಾಯಕವಾಗಿವೆ. ಸಂದರ್ಶನ ಮಾಡಿ ತಮ್ಮ ಕುಟುಂಬ ಚರಿತ್ರೆ ಬರೆಯುವ, ಕೈತೋಟದಲ್ಲಿ ತರಕಾರಿ ಬೆಳೆಯುವ ಚಟುವಟಿಕೆಯನ್ನು ಮಕ್ಕಳಿಗೆ ನೀಡಬೇಕು. ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಪೋಷಕರು ಅವರ ಜತೆ ಕುಳಿತು ಚರ್ಚಿಸಬೇಕು. ಇಂತಹ ಅಂಶಗಳನ್ನು ಅಳವಡಿಸಿಕೊಂಡಾಗ, ಮಕ್ಕಳು ಸಂಶೋಧನೆ ಮಾಡುವ, ಪ್ರಯೋಗ ನಡೆಸುವ, ಬರೆಯುವ, ಸಂದರ್ಶನ ಮಾಡುವ, ಇತಿಹಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯ ಕಲಿತುಕೊಳ್ಳುತ್ತಾರೆ. ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವ ಕತೆಗಳು ನೈತಿಕ ಅಂಶಗಳು ಅವರ ಸ್ಮೃತಿಪಟಲಕ್ಕೆ ಸೇರುತ್ತವೆ. ಇಂತಹ ಹತ್ತಾರು ಚಟುವಟಿಕೆಗಳು ಮಕ್ಕಳನ್ನು ಜಾಗೃತವಾಗಿ ಇರಿಸಲು ಸಹಾಯ ಮಾಡುತ್ತವೆ.

-ಭಾಮಿ ವಿ. ಶೆಣೈ, ಅಶ್ವಿನಿ ರಂಜನ್
(ಲೇಖಕರಾದ ಭಾಮಿ ವಿ. ಶೆಣೈ ಅವರು ಪ್ರಥಮ್ ಸಂಸ್ಥೆಯ ಸಲಹೆಗಾರರು ಮತ್ತು ಅಶ್ವಿನಿ ರಂಜನ್ ಅವರು ಸಂಸ್ಥೆಯ ಟ್ರಸ್ಟಿ)

ಕಲಿಯುವ ಪ್ರಕ್ರಿಯೆಗೇ ಮಹತ್ವ
ಮೀನು ಹಿಡಿದು ಕೊಡುವುದಕ್ಕಿಂತ ಮೀನನ್ನು ಹಿಡಿಯಲು ಕಲಿಸುವುದು ಮುಖ್ಯ- ‘ಕಲಿಯಲು ಕಲಿಸುವುದು’ ಎಂಬ ಪರಿಕಲ್ಪನೆ ರೂಪತಾಳಿರುವುದು ಈ ಭೂಮಿಕೆಯಲ್ಲಿ. ಕೋವಿಡ್‌ನಿಂದಾಗಿ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗಾಗಿ ಶಿಕ್ಷಕರು ಸೇರಿ ರೂಪಿಸಿರುವ ಕಾರ್ಯಕ್ರಮವಿದು. ಇದು ಚಟುವಟಿಕೆ ಆಧಾರಿತ ಯೋಜನೆ. ಮಕ್ಕಳು ನೋಡುತ್ತಾ, ಮಾಡುತ್ತಾ ಕಲಿಯುತ್ತಾರೆ. ಫಲಿತಾಂಶವೊಂದೇ ಕಲಿಕೆಯ ಗುರಿಯಲ್ಲ. ಕಲಿಯಲು ಅನುಸರಿಸುವ ಮಾರ್ಗ ಅಥವಾ ಪ್ರಕ್ರಿಯೆ ನಿಜವಾದ ಕಲಿಕೆ. ಹೀಗಾಗಿ ಮಕ್ಕಳಿಗೆ ಅವರಿಗೆ ಅಸಕ್ತಿ ಇರುವ ಚಟುವಟಿಕೆಗಳ ಮೂಲಕವೇ ಶಿಕ್ಷಣ ನೀಡಬೇಕು ಎನ್ನುತ್ತಾರೆ ಪರಿಕಲ್ಪನೆ ರೂಪಿಸುವ ತಂಡದಲ್ಲಿರುವ ಚೇಗರೆಡ್ಡಿ. ಇವರು ಗದಗ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ.

ಶಾಲೆಗಳು ಬಾಗಿಲು ಹಾಕಿರುವ ಈ ಸಮಯದಲ್ಲಿ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿ ಅವರನ್ನು ಸಕ್ರಿಯವಾಗಿ ಇರಿಸಬೇಕು ಎಂಬ ಉದ್ದೇಶದಿಂದ ಈ ಪರಿಕಲ್ಪನೆ ಮೂಡಿತು. ಇದು ವಠಾರ ಶಾಲೆಗಳ ರೂಪ ತಳೆಯಿತು. ರಾಜ್ಯ ಸರ್ಕಾರ ಇದರ ಆಧಾರದಲ್ಲಿಯೇ ವಿದ್ಯಾಗಮ ಯೋಜನೆ ರೂಪಿಸಿದೆ ಎನ್ನುತ್ತಾರೆ ಚೇಗರೆಡ್ಡಿ. ಪ್ರತೀ ಪ್ರದೇಶದಲ್ಲಿ ಆರರಿಂದ ಎಂಟು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಚಟುವಟಿಕೆಗಳನ್ನು ನೀಡಲಾಗುತ್ತದೆ. ಶಿಕ್ಷಕರ ತಂಡ ರೂಪಿಸಿರುವ ಚಟುವಟಿಕೆಗಳನ್ನು ಅದೇ ಪ್ರದೇಶದ ವಿದ್ಯಾವಂತ ಸ್ವಯಂಸೇವಕ ಯುವಕ–ಯುವತಿಯರ ಮೂಲಕ ಮಕ್ಕಳಿಗೆ ತಲುಪಿಸಲಾಗುತ್ತದೆ. 

ನೂರಾರು ಚಟುವಟಿಕೆ: ಭಾಷಾ ಬೆಳವಣಿಗೆಗೆ ಒಂದು ಚಟುವಟಿಕೆ ರೂಪಿಸಲಾಗಿತ್ತು. ‘ಕೊರೊನಾ ಬಗ್ಗೆ ಏನು ಹೇಳುವಿರಿ. ಲಾಕ್‌ಡೌನ್ ಸಮಯವನ್ನು ಹೇಗೆ ಕಳೆದಿರಿ’ ಎಂಬ ಬಗ್ಗೆ ಮನೆಯವರನ್ನು ಮಾತನಾಡಿಸಿ ವಿದ್ಯಾರ್ಥಿಗಳು ಉತ್ತರಿಸಬೇಕು. ಮಕ್ಕಳು ನೀಡಿದ ಅಭಿಪ್ರಾಯಗಳು ನಿಜಕ್ಕೂ ಅದ್ಭುತವಾಗಿದ್ದವು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಲು ಸಮಯ ಸಿಕ್ಕಿದ್ದು ಸಂತಸದ ವಿಚಾರ ಎಂದು ಕೆಲವು ಮಕ್ಕಳು ಮನದಾಳ ಬಿಚ್ಚಿಟ್ಟರು. ‘ಊರಲ್ಲಿ ಅಜ್ಜ ಈ ಬಾರಿ ಈಜು ಕಲಿಸುತ್ತೇನೆ ಎಂದು ಹೇಳಿದ್ದ. ಆದರೆ ಕೊರೊನಾದಿಂದ ಅಪ್ಪ ಎಲ್ಲಿಗೂ ಕಳಿಸಲಿಲ್ಲ’ ಎಂದು ಮತ್ತೊಬ್ಬ ವಿದ್ಯಾರ್ಥಿ ಅಳಲು ತೋಡಿಕೊಂಡ. ಈ ಚಟುವಟಿಕೆಯ ಮೂಲಕ ಮಕ್ಕಳ ಗ್ರಹಿಕೆ ಸಾಮರ್ಥ್ಯ, ಸಂದರ್ಶನ ಮತ್ತು ಸಂವಹನ ಕಲೆ, ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳುವ ಸಾಮರ್ಥ್ಯ, ವಾಕ್ಯರಚನೆ ಸಾಮರ್ಥ್ಯ ವೃದ್ಧಿಯಾದವು. ಒಂದು ಚಟುವಟಿಕೆ ಈ ಎಲ್ಲ ಸಾಮರ್ಥ್ಯಗಳನ್ನು ಕಲಿಸಿತು.

ಕೊತ್ತಂಬರಿ ಮೊದಲಾದ ಒಂದಿಷ್ಟು ಬೀಜಗಳನ್ನು ಪ್ರತ್ಯೇಕ ಕಪ್‌ಗಳಲ್ಲಿ ಮಣ್ಣಿನಲ್ಲಿ ಬಿತ್ತುವ ಚಟುವಟಿಕೆಯು ವಿಜ್ಞಾನ ಕಲಿಕೆಗೆ ನೆರವಾಯಿತು. ಬೀಜ ಹಾಕಿದ ದಿನ, ಮೊದಲು ಯಾವ ಬೀಜ ಮೊಳಕೆಯೊಡೆಯಿತು ಎಂಬ ಮಾಹಿತಿ, ಗಿಡದ ಎಲೆಗಳು ಯಾವ ಬಣ್ಣದಲ್ಲಿವೆ – ಹೀಗೆ ಹತ್ತಾರು ವಿಚಾರಗಳನ್ನು ಮಕ್ಕಳು ದಾಖಲಿಸಬೇಕಿತ್ತು. ಈ ಚಟುವಟಿಕೆಯಿಂದ ಒಂದು ಬೀಜ ಮೊಳಕೆಯೊಡೆಯುವ ದಿನದ ಸರಾಸರಿ ಲೆಕ್ಕಸಿಕ್ಕಿತು. ಈ ಕುರಿತ ಚಾರ್ಟ್ ಮಾಡಿಸಲಾಯಿತು. ಗ್ರಹಿಕೆ, ದತ್ತಾಂಶ ದಾಖಲು, ಹೋಲಿಕೆ, ಸಾಮಾನ್ಯೀಕರಿಸುವ ಸಾಮರ್ಥ್ಯಗಳು ವೃದ್ಧಿಯಾದವು. ಈ ಎಲ್ಲವೂ ಕಲಿಕೆಯ ವಿವಿಧ ಹಂತಗಳನ್ನು ಪ್ರತಿನಿಧಿಸುತ್ತವೆ. ಇಂತಹ ನೂರಾರು ಚಟುವಟಿಕೆಗಳನ್ನು ರೂಪಿಸಲಾಗಿದೆ.

ಏನೇನು ಮಾಡಬಹುದು
* ಮನೆಯಲ್ಲಿ ಮಕ್ಕಳಿಗೆ ಓದುವ ಹವ್ಯಾಸ ಬೆಳಸಲು ಆಸಕ್ತಿ ಹುಟ್ಟಿಸುವ ಕತೆ ಪುಸ್ತಕಗಳನ್ನು ನೀಡಬೇಕು
* ಚಿತ್ರಕಲೆ ಮೊದಲಾದ ಖುಷಿ ನೀಡುವ ಚಟುವಟಿಕೆಗಳನ್ನು ನೀಡಬೇಕು
* ಚೌಕಾಬಾರದಂತಹ ಆಟಗಳನ್ನು ಹೇಳಿಕೊಡುವುದರಿಂದ ಮಕ್ಕಳಲ್ಲಿ ಲಾಜಿಕಲ್ ಥಿಂಕಿಂಗ್ ಬೆಳೆಸಬಹುದು
* ನಕ್ಷತ್ರಗಳ ವೀಕ್ಷಣೆ ಕಲಿಸಿಕೊಡಬಹುದು. ಈ ಮೂಲಕ ಸೌರಮಂಡಲದ ಮಾಹಿತಿ ಸಿಕ್ಕಂತಾಗುತ್ತದೆ
-ಅಮೃತ್‌ಕಿರಣ್ ಬಿ.ಎಂ.

ಶಿಕ್ಷಿಸುವ ಬದಲು ಸಂತೈಸಿ
ಮಕ್ಕಳಿಗೆ ಸಮಯ ಕೊಡಲಾಗದ ಪೋಷಕರು ಅವರ ಕೈಗೊಂದು ಮೊಬೈಲ್‌ ಕೊಟ್ಟು ಕೂಡಿಸುತ್ತಿದ್ದಾರೆ. ಇದು ಎಲ್ಲರೂ ಮಾಡುತ್ತಿರುವ ದೊಡ್ಡ ತಪ್ಪು. ಮಕ್ಕಳು ಸಮಾಜಮುಖಿಗಳಾಗುವ ಬದಲು ಒಬ್ಬಂಟಿಯಾಗುತ್ತಿದ್ದಾರೆ. ಟಿ.ವಿ, ಮೊಬೈಲ್‌ ಮತ್ತು ಇತರ ಗ್ಯಾಜೆಟ್‌‌ ಗೀಳು ಅಂಟಿಸಿಕೊಂಡಿದ್ದಾರೆ ಎನ್ನುತ್ತಾರೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈಕಾಲಜಿ ಆ್ಯಂಡ್‌‌ ರಿಸರ್ಚ್‌ನ‌ (ಐಐಪಿಆರ್) ಸಹಾಯಕ ಪ್ರಾಧ್ಯಾಪಕಿ ಡಾ. ಬೀನಾ ಡಾಲಿಯಾ ಆರ್‌.

ಕೊರೊನಾವನ್ನು ದೂರುವ ಬದಲು ಅದರೊಂದಿಗೆ ಹೊಂದಿಕೊಂಡು ಜೀವನ ನಡೆಸುವುದು ಅನಿವಾರ್ಯ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ರೂಪಿಸಿ. ಈ ವಾಸ್ತವ ಒಪ್ಪಿಕೊಳ್ಳುತ್ತಲೇ ಮಕ್ಕಳ ಭವಿಷ್ಯ ರೂಪಿಸುವುದು ಜಾಣತನ. ಮಕ್ಕಳ ಕೈಗೆ ಮೊಬೈಲ್‌ ಕೊಡುವಾಗ ಕಲಿಕೆ ಉತ್ತೇಜಿಸುವ ಆ್ಯಪ್ ಡೌನ್‌ಲೋಡ್‌ ಮಾಡಿಕೊಡಿ. ನೃತ್ಯ, ಗಾಯನ, ಚಿತ್ರಕಲೆ, ಸಾಮಾನ್ಯ ಜ್ಞಾನ ಉತ್ತೇಜಿಸುವ ‘ಮಕ್ಕಳಸ್ನೇಹಿ ಆ್ಯಪ್’‌ಗಳಿಂದ ಎಳೆಯ ಮನಸ್ಸುಗಳು ಅರಳುತ್ತವೆ.


ಡಾ. ಬೀನಾ ಡಾಲಿಯಾ ಆರ್‌.

ಕೃಷಿ, ಕೈತೋಟ, ಕುಂಬಾರಿಕೆ, ಭಾಷಣ, ಸಂವಾದ, ಚರ್ಚಾಸ್ಪರ್ಧೆ ಮುಂತಾದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬಹುದು. ಚೆಸ್‌, ಕೇರಂ, ಪಜಲ್ ಮುಂತಾದ ಒಳಾಂಗಣ ಆಟಗಳಲ್ಲಿ ಮಕ್ಕಳನ್ನು ತೊಡಗಿಸಬಹುದು. ಮನೆಯ ಬಳಿ ಜಾಗವಿದ್ದರೆ ಗಾರ್ಡನಿಂಗ್‌ ಕಲಿಸಿಕೊಡಿ. ಗಿಡ, ಮರ, ಪ್ರಾಣಿ, ಆಕಾಶ, ಸೂರ್ಯ, ಚಂದ್ರ, ನಕ್ಷತ್ರ ಹೀಗೆ ಸೌರಮಂಡಲ ಮತ್ತು ಪರಿಸರದ ಬಗ್ಗೆ ದಿನಕ್ಕೊಂದು ಆಸಕ್ತಿದಾಯಕ ವಿಷಯ ತಿಳಿಸಬಹುದು. ಇದು ಮಕ್ಕಳಲ್ಲಿ ಸಾಮಾಜಿಕ ಜೀವನದ ಪರಿಕಲ್ಪನೆ ಮೂಡಿಸುತ್ತದೆ. ಮನೆಯಲ್ಲಿ ಅಜ್ಜಿ, ತಾತಂದಿರು ಕೌಟುಂಬಿಕ ಮೌಲ್ಯ ಮತ್ತು ಸಂಬಂಧಗಳ ಬಗ್ಗೆ ಮೊಮ್ಮಕ್ಕಳಿಗೆ ತಿಳಿಸಲು ಇದೊಂದು ಸದವಕಾಶ. 

ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವತ್ತ ಗಮನ ಹರಿಸಿ. ಸಾಹಿತ್ಯ, ಕಲೆ, ವಿಜ್ಞಾನ ಮುಂತಾದ ಪುಸ್ತಕಗಳನ್ನು ತಂದುಕೊಡಿ. ಅದರಲ್ಲಿ ಕಡಿಮೆ ಅಕ್ಷರ ಮತ್ತು ಜಾಸ್ತಿ ಚಿತ್ರಗಳಿದ್ದರೆ ಚೆನ್ನ. ಕೊರೊನಾ ಸಮಯವನ್ನು ಸದುಪಯೋಗ ಪಡಿಸುವ ನೆಪದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ತನ್ನಿಂದ ತಾನಾಗಿಯೇ ಅವರಲ್ಲಿ ಆಸಕ್ತಿ ಮೂಡಬೇಕು. ಕಚೇರಿ ಮತ್ತು ಕೌಟುಂಬಿಕ ಒತ್ತಡಗಳನ್ನು ಮಕ್ಕಳಿಗೆ ವರ್ಗಾಯಿಸಬಾರದು. ಮಕ್ಕಳನ್ನು ಬದಲಿಸುವ ಮೊದಲು ಪೋಷಕರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಕೋವಿಡ್‌–19ನಿಂದ ಮೊದಲೇ ಆತಂಕದಲ್ಲಿರುವ ಮಕ್ಕಳೊಂದಿಗೆ ಎಲ್ಲರೂ ಸೂಕ್ಷ್ಮ ಸಂವೇದನೆಯೊಂದಿಗೆ ನಡೆದುಕೊಂಡರೆ ಚೆನ್ನ. ಮಕ್ಕಳನ್ನು ಶಿಕ್ಷಿಸುವ ಬದಲು ಅವರನ್ನು ಸಂತೈಸುವ ಕೈಗಳು ನಿಮ್ಮದಾಗಲಿ ಎನ್ನುವುದು ಡಾ.ಬೀನಾ ಸಲಹೆ.      

‌ವೇಳಾಪಟ್ಟಿ ಮೂಲಕ ಮಕ್ಕಳ ಜತೆ ಸಂಭಾಷಿಸುವುದು ಸುಲಭ
ಈ ರಜೆ ಮಕ್ಕಳಿಗೆ ವರವಾಗಬೇಕು ಎಂದು ಬಯಸುವ ಪೋಷಕರು ಮೊದಲು ಅವರಿಗಾಗಿ ದೈನಂದಿನ ವೇಳಾಪಟ್ಟಿ ಸಿದ್ಧಪಡಿಸಿ. ಮಕ್ಕಳೂ ಜೊತೆಗಿದ್ದರೆ ಚೆನ್ನ. ಈ ವೇಳಾಪಟ್ಟಿ ಮಕ್ಕಳ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಇರಲಿ ಎನ್ನುತ್ತಾರೆ ಮಕ್ಕಳ ಮನೋವೈದ್ಯೆ ಡಾ. ಮೇಘಾ ಮಹಾಜನ್‌.

ಬೆಳಗಿನ ಸ್ನಾನ, ತಿಂಡಿಯಿಂದ ರಾತ್ರಿ ಮಲಗುವವರೆಗೂ ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸಿ, ಸಮಯ ನಿಗದಿ ಮಾಡಿ. ಊಟ, ಆಟ, ಪಾಠ, ಟಿ.ವಿ ವೀಕ್ಷಣೆ ಹೀಗೆ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಸಮಯ ವಿಂಗಡಿಸಿ. ಇದು ಅವರಿಗೆ ಸಮಯ ನಿರ್ವಹಣೆಯ ಜವಾಬ್ದಾರಿ ಮತ್ತು ಶಿಸ್ತುಬದ್ಧ ಜೀವನದ ಮಹತ್ವ ಕಲಿಸಿಕೊಡುತ್ತದೆ. ಪೋಷಕರ ಅನುಪಸ್ಥಿತಿಯಲ್ಲಿಯೂ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಕ್ಕಳನ್ನು ಅಣಿಗೊಳಿಸಬೇಕು. ಇಡೀ ದಿನ ಏನು ಮಾಡಬೇಕು ಎಂದು ಅವರು ಮಾನಸಿಕವಾಗಿ ಸಿದ್ಧರಾಗುತ್ತಾರೆ. ವೇಳಾಪಟ್ಟಿಯ ಮೂಲಕವೇ ಮಕ್ಕಳೊಂದಿಗೆ ಸಂಭಾಷಿಸುವುದು ಸುಲಭದ ಮಾರ್ಗ.


ಡಾ. ಮೇಘಾ ಮಹಾಜನ್‌

ಮಕ್ಕಳಿಗಷ್ಟೇ ಅಲ್ಲ, ಪೋಷಕರಿಗೂ ವೇಳಾಪಟ್ಟಿ ಬೇಕಾಗುತ್ತದೆ. ಪ್ರತಿದಿನ ಮಕ್ಕಳೊಂದಿಗೆ ಒಂದಷ್ಟು ಸಮಯ ಕಳೆಯುವುದು ಕಡ್ಡಾಯವಾಗಬೇಕು. ಇದು ಮಕ್ಕಳ ಮನಸ್ಸು ಅರಿಯಲು ಸಹಕಾರಿ. ಕೌಟುಂಬಿಕ ಮೌಲ್ಯಗಳು ಮತ್ತು ಬಾಂಧವ್ಯಗಳು ಇದರಿಂದ ಗಟ್ಟಿಗೊಳ್ಳುತ್ತವೆ.

ಮಕ್ಕಳಿಗೂ ಸಣ್ಣಪುಟ್ಟ ಮನೆಗೆಲಸ ಒಪ್ಪಿಸಬೇಕು. ಅಡುಗೆ, ಬಟ್ಟೆ ತೊಳೆಯುವ ಮತ್ತು ಕಸಗೂಡಿಸುವ ಕೆಲಸವನ್ನು ಅವರಿಗೆ ವಹಿಸಿದರೆ ದುಡಿಮೆಯ ಮಹತ್ವ ಅರ್ಥವಾಗುತ್ತದೆ. ಎಲ್ಲ ಬಗೆಯ ಕೆಲಸ ಮತ್ತು ವೃತ್ತಿಗಳ ಬಗ್ಗೆ ಗೌರವ ಭಾವನೆ ಮೂಡುತ್ತದೆ. ದಿನಕ್ಕೆ ಎರಡು ತಾಸಿಗಿಂತ ಹೆಚ್ಚು ಟಿ.ವಿ, ಮೊಬೈಲ್‌, ಗ್ಯಾಜೆಟ್‌ ಬಳಸುವಂತಿಲ್ಲ ಎಂಬ ಷರತ್ತು ವಿಧಿಸಿ. ದೂರವಾಣಿ, ವಿಡಿಯೊ ಮೂಲಕ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರೆ ತಪ್ಪಲ್ಲ. ಇದು ಅವರಲ್ಲಿ ಸ್ನೇಹಮನೋಭಾವ ಮತ್ತು ಸಂವಹನ ಕಲೆ ಬೆಳೆಸುತ್ತದೆ ಎನ್ನುತ್ತಾರೆ ಡಾ. ಮೇಘಾ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು