ಸೋಮವಾರ, ಜೂನ್ 21, 2021
28 °C

ಆಳ-ಅಗಲ | ಕೋವಿಡ್-19 ಎರಡನೇ ಅಲೆ: ಎಡವಿದ ಹಲವು ನಡೆ

ಜಯಸಿಂಹ ಆರ್./ಅಮೃತಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಕೋವಿಡ್‌ ಮೊದಲನೇ ಅಲೆಯು ಜನವರಿ ಹೊತ್ತಿಗೆ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಆದರೆ, ಪ್ರಕರಣಗಳ ಸಂಖ್ಯೆಯು ಏಪ್ರಿಲ್‌ನಿಂದ ಮತ್ತೆ ಏರುಗತಿಯಲ್ಲಿದೆ. ಕೊರೊನಾ ವೈರಾಣು ಹರಡುವಿಕೆಯ ವೇಗ ಹೆಚ್ಚಲು ರಾಜಕೀಯ ನಾಯಕರು, ಜನರ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಪರಿಣತರು ಹೇಳುತ್ತಿದ್ದಾರೆ.

ವಿವಿಧ ರಾಜ್ಯಗಳಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯ ಪ್ರಚಾರ, ವಿವಿಧ ಹಬ್ಬಗಳ ಆಚರಣೆಯನ್ನು ಗಮನಿಸಿದರೆ, ಕೋವಿಡ್‌ನಂತಹ ಜಗತ್ತನ್ನೇ ತಲ್ಲಣಗೊಳಿಸಿದ ಪಿಡುಗು ಇಲ್ಲಿ ಇದೆ ಎಂದೇ ಅನಿಸದು. ಮಾಸ್ಕ್‌ ಕೂಡ ಧರಿಸದೆ ಜನರು ಒತ್ತೊತ್ತಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಯಕರು ಜನರಿಗೆ ತಿಳಿ ಹೇಳಬೇಕಿತ್ತು. ಆದರೆ, ಪ್ರಧಾನಿಯಿಂದ ಹಿಡಿದು ಅಧಿಕಾರ ಸ್ಥಾನದಲ್ಲಿದ್ದ ಹಲವರು ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿದ್ದರು. ಚುನಾವಣಾ ಪ್ರಚಾರವೇ ಕೋವಿಡ್‌ ಎರಡನೇ ಅಲೆಯ ತೀವ್ರತೆಗೆ ಕಾರಣ ಎಂದು ಚುನಾವಣಾ ಆಯೋಗವನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಚುನಾವಣೆ ಮತ್ತು ಹೆಚ್ಚು ಜನರು ಜಮಾವಣೆಯಾದ ಕಾರ್ಯಕ್ರಮಗಳ ಬಳಿಕ ಕೋವಿಡ್‌ನ ಸ್ಥಿತಿಯ ವಿವರ ಇಲ್ಲಿದೆ:

***

ದೆಹಲಿ
2021ರ ಮಾರ್ಚ್‌ ವೇಳೆಗೆ ದೆಹಲಿಯಲ್ಲಿ ಕೋವಿಡ್‌ ಸಂಪೂರ್ಣ ನಿಯಂತ್ರಣಕ್ಕೆ ಬಂದಿತ್ತು ಎಂದೇ ಹೇಳಬಹುದು. ಆಗ ದೆಹಲಿಯಲ್ಲಿ ಪ್ರತಿದಿನ ಪತ್ತೆಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆ 300ರ ಆಸುಪಾಸಿನಲ್ಲಿ ಇತ್ತು. ಫೆಬ್ರುವರಿಯಲ್ಲೂ ಈ ಸಂಖ್ಯೆ 200ರ ಆಸುಪಾಸಿನಲ್ಲಿ ಇತ್ತು. ಅಲ್ಲದೆ ಮಾರ್ಚ್ 1ರಂದು ರಾಜ್ಯದಲ್ಲಿ 1,404 ಸಕ್ರಿಯ ಪ್ರಕರಣಗಳಷ್ಟೇ ಇದ್ದವು. ಆದರೆ ಮಾರ್ಚ್ 18ರ ನಂತರ ದೆಹಲಿಯ ಬೀದಿಗಳಲ್ಲಿ ಜನರು ಸಾಮೂಹಿಕವಾಗಿ ಹೋಳಿ ಆಚರಿಸಿದರು. ವಿವಿಧ ಸಮುದಾಯಗಳು ತಿಂಗಳ ಅಂತ್ಯದವರೆಗೂ ಹೋಳಿ ಆಚರಿಸಿದವು. ಆದರೆ ಹೋಳಿ ಆಚರಣೆಯ ಕಾರಣ ಮಾರ್ಚ್ 23ರಂದು ಒಂದೇ ದಿನ 1,100 ಹೊಸ ಪ್ರಕರಣಗಳು ದೃಢಪಟ್ಟವು. ಆಗ ಸಾರ್ವಜನಿಕ ಸ್ಥಳಗಳಲ್ಲಿ ಹೋಳಿ ಆಚರಿಸುವುದನ್ನು ದೆಹಲಿ ಸರ್ಕಾರ ನಿಷೇಧಿಸಿತು. ಆದರೂ ಸಣ್ಣ-ಸಣ್ಣ ಗುಂಪುಗಳು ಹೋಳಿ ಆಚರಿಸಿದವು. ಇದರ ಪರಿಣಾಮವಾಗಿ ಕೋವಿಡ್‌ ಮತ್ತೆ ವ್ಯಾಪಕವಾಗಿ ಹರಡಿತು. ಈಗ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಕೇರಳ
ಕೇರಳ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ಘೋಷಣೆಯಾದಾಗ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿತ್ತು. ಮಾರ್ಚ್‌ ತಿಂಗಳಲ್ಲಿ ಹೊಸ ಪ್ರಕಣಗಳ ಸಂಖ್ಯೆ ಮತ್ತಷ್ಟು ಇಳಿಯಿತು. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿತ್ತು. ಮಾರ್ಚ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ದೊಡ್ಡ ದೊಡ್ಡ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದವು. ಮಾರ್ಚ್ 23ರಂದು ರಾಜ್ಯದಲ್ಲಿ ಕೇವಲ 23,600 ಸಕ್ರಿಯ ಪ್ರಕರಣಗಳು ಇದ್ದವು. ಆದರೆ ಚುನಾವಣೆ ಪ್ರಚಾರ ಬಿರುಸು ಪಡೆದ ನಂತರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಯಿತು. ಮಾರ್ಚ್‌ನಲ್ಲಿ ಪ್ರತಿದಿನ ಸರಾಸರಿ 1,600 ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಏಪ್ರಿಲ್ 6ರ ಮತದಾನದ ನಂತರ ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ 5,000 ದಾಟಿದೆ. ಈಗ ಪ್ರತಿದಿನ ಸರಾಸರಿ 22,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.

* 51,368 ಫೆಬ್ರುವರಿ 26ರಂದು ಚುನಾವಣೆ ಘೋಷಣೆಯಾದಾಗ ಇದ್ದ ಸಕ್ರಿಯ ಪ್ರಕರಣಗಳು
* 29,948 ಏಪ್ರಿಲ್ 6ರಂದು ಮತದಾನ ನಡೆದಾಗ ಇದ್ದ ಸಕ್ರಿಯ ಪ್ರಕರಣಗಳು
* 2.32 ಲಕ್ಷ ಏಪ್ರಿಲ್ 26ರಂದು ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳು

ಪುದುಚೇರಿ
ಕೋವಿಡ್‌ನ 1ನೇ ಅಲೆ ತೀವ್ರತೆ ಕಳೆದುಕೊಂಡ ನಂತರ ಪುದುಚೇರಿಯಲ್ಲಿ ಹೆಚ್ಚು ಜನರು ಸೇರಿದ್ದು ಚುನಾವಣಾ ಪ್ರಚಾರ ಸಭೆಗಳಲ್ಲಿ ಮತ್ತು ಮತಗಟ್ಟೆಗಳಲ್ಲಿ. ಇಲ್ಲಿ ಬಿಜೆಪಿ ಹೆಚ್ಚು ಪ್ರಚಾರ ಸಭೆಗಳನ್ನು ನಡೆಸಿತ್ತು. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಚುನಾವಣಾ ಪ್ರಚಾರ ಆರಂಭವಾದ ನಂತರವೇ ಇಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಯಿತು.

* 194 ಫೆಬ್ರುವರಿ 26ರಂದು ಚುನಾವಣೆ ಘೋಷಣೆಯಾದಾಗ ಇದ್ದ ಸಕ್ರಿಯ ಪ್ರಕರಣಗಳು
* 1,773 ಏಪ್ರಿಲ್ 6ರಂದು ಮತದಾನ ನಡೆದಾಗ ಇದ್ದ ಸಕ್ರಿಯ ಪ್ರಕರಣಗಳು
* 7,750 ಏಪ್ರಿಲ್ 26ರಂದು ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳು

ತಮಿಳುನಾಡು
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಗಳು ನಡೆದ ನಂತರವೇ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಆಯಿತು. ಇಲ್ಲಿ ಎಐಎಡಿಎಂಕೆ, ಡಿಎಂಕೆ, ಕಾಂಗ್ರೆಸ್‌, ಕಮಲ್ ಹಾಸನ್ ಅವರ ಪಕ್ಷಗಳು ಭಾರಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದವು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಸಾವಿರಾರು ಜನರು ಸೇರಿರುವ ಬೃಹತ್ ಪ್ರಚಾರ ಸಭೆಗಳನ್ನು ನಡೆಸಿದರು.  ಮತದಾನದ ದಿನದ ನಂತರ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ.

* 4,046 ಫೆಬ್ರುವರಿ 26ರಂದು ಚುನಾವಣೆ ಘೋಷಣೆಯಾದಾಗ ಇದ್ದ ಸಕ್ರಿಯ ಪ್ರಕರಣಗಳು
* 25,598 ಏಪ್ರಿಲ್ 6ರಂದು ಮತದಾನ ನಡೆದಾಗ ಇದ್ದ ಸಕ್ರಿಯ ಪ್ರಕರಣಗಳು
* 1.07 ಲಕ್ಷ ಏಪ್ರಿಲ್ 26ರಂದು ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳು

ಪಶ್ಚಿಮ ಬಂಗಾಳ
ಫೆಬ್ರುವರಿ ಅಂತ್ಯದ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಆಗ ಪ್ರತಿದಿನ ಪತ್ತೆಯಾಗುತ್ತಿದ್ದ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ ಸಹ 180ರಷ್ಟಿತ್ತು. ಚುನಾವಣಾ ಪ್ರಚಾರ ಸಭೆಗಳು ಆರಂಭವಾದ ನಂತರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಯಿತು. ಬಿಜೆಪಿ ಮತ್ತು ಟಿಎಂಸಿ ಇಲ್ಲಿ ಪ್ರತಿದಿನ 8ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ನಡೆಸಿವೆ. ಬಿಜೆಪಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಮತ್ತು ಪಕ್ಷದ ಸ್ಥಳೀಯ ನಾಯಕರು 300ಕ್ಕೂ ಹೆಚ್ಚು ಸಭೆಗಳು ಮತ್ತು 160 ರೋಡ್‌ ‍ಷೋ ನಡೆಸಿದ್ದಾರೆ. ಟಿಎಂಸಿ ಸಹ 180ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ನಡೆಸಿದೆ. ಪ್ರಚಾರ ಸಭೆಗಳು ಆರಂಭವಾದ ನಂತರವೇ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಯಿತು. ಮಾರ್ಚ್ ಮೊದಲ ವಾರದಲ್ಲಿ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ 220, ಎರಡನೇ ವಾರದಲ್ಲಿ 260, ಮೂರನೇ ವಾರದಲ್ಲಿ 320ಕ್ಕೆ ಏರಿಕೆಯಾಯಿತು. ನಾಲ್ಕನೇ ವಾರದ ವೇಳಗೆ ಈ ಸರಾಸರಿ ಸಂಖ್ಯೆ 940 ಮುಟ್ಟಿತ್ತು. ಈಗ ರಾಜ್ಯದಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 15,000ಕ್ಕೂ ಹೆಚ್ಚು. 

* 3,343 ಫೆಬ್ರುವರಿ 26ರಂದು ಚುನಾವಣೆ ಘೋಷಣೆಯಾದಾಗ ಇದ್ದ ಸಕ್ರಿಯ ಪ್ರಕರಣಗಳು
* 3,310 ಮಾರ್ಚ್‌ 11ರಂದು ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ
* 17,775 ಏಪ್ರಿಲ್ 6ರಂದು ಮತದಾನ ನಡೆದಾಗ ಇದ್ದ ಸಕ್ರಿಯ ಪ್ರಕರಣಗಳು
* 94,949 ಏಪ್ರಿಲ್ 26ರಂದು ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳು

ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ 2021ರ ಫೆಬ್ರುವರಿ ಮಧ್ಯಂತರದ ವೇಳೆಗೆ ಕೋವಿಡ್‌ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಫೆಬ್ರುವರಿ ಮೊದಲ ಮೂರು ವಾರಗಳಲ್ಲಿ, ಪ್ರತಿದಿನ ಪತ್ತೆಯಾಗುತ್ತಿದ್ದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ 5,500ರ ಆಸುಪಾಸಿನಲ್ಲಿ ಇತ್ತು. ಮಾರ್ಚ್‌ನಲ್ಲಿ ಈ ಸಂಖ್ಯೆ ಸ್ವಲ್ಪ ಏರಿಕೆಯಾಯಿತು. ಹೀಗಿದ್ದೂ ರಾಜ್ಯದಲ್ಲಿ, ಮಾರ್ಚ್ ಕೊನೆಯ ವಾರದಲ್ಲಿ ಮಹಾರಾಷ್ಟ್ರದಲ್ಲಿ ಹೋಳಿ ಆಚರಿಸಲಾಗಿತ್ತು. ಹೋಳಿ ಆಚರಣೆಗೆ ನಿರ್ಬಂಧಗಳು ಇದ್ದವಾದರೂ, ಸಾರ್ವಜನಿಕವಾಗಿ ಹೋಳಿ ಆಚರಿಸುವುದನ್ನು ನಿಷೇಧಿಸಿರಲಿಲ್ಲ. ಮಾರ್ಚ್‌ 27ರಿಂದ ಮಾರ್ಚ್ 29ರವರೆಗೆ ಹೋಳಿ ಆಚರಿಸಲಾಗಿತ್ತು. ಆನಂತರವೇ ರಾಜ್ಯದಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರತೆ ಪಡೆಯಿತು. ಏಪ್ರಿಲ್ ಮೊದಲ ವಾರದಲ್ಲಿ ಪ್ರತಿದಿನ ಸರಾಸರಿ 43,000 ಹೊಸ ಪ್ರಕರಣಗಳು ಪತ್ತೆಯಾದವು. ಈಗ ರಾಜ್ಯದಲ್ಲಿ ಪ್ರತಿದಿನ 55,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.

* 21.61 ಲಕ್ಷ 2020ರ ಫೆಬ್ರುವರಿಯಿಂದ 2021ರ ಮಾರ್ಚ್‌ 1ರವರೆಗೆ ರಾಜ್ಯದಲ್ಲಿ ಪತ್ತೆಯಾಗಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ (13 ತಿಂಗಳು)
* 22.24 ಲಕ್ಷ 2021ರ ಮಾರ್ಚ್‌ 2ರಿಂದ ಏಪ್ರಿಲ್ 26ರವರೆಗೆ ಪತ್ತೆಯಾದ ಕೋವಿಡ್‌ನ ಹೊಸ ಪ್ರಕರಣಗಳು

ಉತ್ತರಾಖಂಡ
ಉತ್ತರಾಖಂಡದಲ್ಲಿ 2020ರ ಮಾರ್ಚ್‌ನಿಂದ 2021ರ ಜನವರಿ 15ರವರೆಗೆ 94 ಸಾವಿರ ಕೋವಿಡ್‌ ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. ಮೊದಲ ಅಲೆಯು ರಾಜ್ಯದಲ್ಲಿ ತೀವ್ರತೆ ಪಡೆದುಕೊಂಡಿರಲೇ ಇಲ್ಲ. ಆದರೆ ಹರಿದ್ವಾರದಲ್ಲಿ ಜನವರಿ 14ರಿಂದ ಕುಂಭ ಮೇಳ ಆರಂಭವಾದ ನಂತರ ಪ್ರಕರಣಗಳ ಸಂಖ್ಯೆ ಏರಿಕೆಯಾಗತೊಡಗಿತು. ಜನವರಿಯಿಂದ ಮಾರ್ಚ್‌ 15ರವರೆಗೆ ಕಡಿಮೆ ಸಂಖ್ಯೆಯಲ್ಲಷ್ಟೇ ಜನರು ಕುಂಭ ಮೇಳದಲ್ಲಿ ಭಾಗಿಯಾಗಿದ್ದರು. ಆದರೆ ಶಿವರಾತ್ರಿಯ ನಂತರ ಹೆಚ್ಚು ಜನರು ಪವಿತ್ರ ಸ್ನಾನದಲ್ಲಿ ಭಾಗಿಯಾಗಲು ಆರಂಭಿಸಿದರು. ಆನಂತರ ಇಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗತೊಡಗಿತು. ಏಪ್ರಿಲ್ ಮೊದಲ ಎರಡು ವಾರಗಳಲ್ಲಿ ಪ್ರತಿದಿನ 25 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಸಹ ಕುಂಭ ಮೇಳದಲ್ಲಿ ಜನರು ಭಾಗವಹಿಸುವುದರ ಪರವಾಗಿ ಮಾತನಾಡಿದರು. ತೀವ್ರ ವಿರೋಧ ವ್ಯಕ್ತವಾದ ಕಾರಣ ಏಪ್ರಿಲ್ 17ರಂದು ಕುಂಭ ಮೇಳ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು. ಆದರೆ ಆ ವೇಳೆಗೆ 2,000ಕ್ಕೂ ಹೆಚ್ಚು ಸಂತರಿಗೆ ಕುಂಭಮೇಳದಲ್ಲಿಯೇ ಕೋವಿಡ್‌ ದೃಢಪಟ್ಟಿತ್ತು.

* 581 ಮಾರ್ಚ್ 11ರಂದು ಮಹಾಶಿವರಾತ್ರಿಯ ಅಂಗವಾಗಿ ಮಹಾಸ್ನಾನ ನಡೆದಾಗ ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳು
* 7,846 ಏಪ್ರಿಲ್ 12ರಂದು ನಡೆದ ಶನಿಸ್ನಾನದ ದಿನ ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ
* 39,031 ಏಪ್ರಿಲ್ 26ರಂದು ರಾಜ್ಯದಲ್ಲಿ ಇದ್ದ ಸಕ್ರಿಯ ಪ್ರಕರಣಗಳು

ಪಂಜಾಬ್ ಮತ್ತು ಹರಿಯಾಣ
ಪಂಜಾಬ್ ಮತ್ತು ಹರಿಯಾಣದ ಹೆಚ್ಚಿನ ರೈತರು ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ರೈತರು ತಂಡ ತಂಡವಾಗಿ ಹಿಂದಿರುಗಿದ್ದಾರೆ ಮತ್ತು ಬೇರೆ ತಂಡಗಳು ಪ್ರತಿಭಟನೆ ಸ್ಥಳಕ್ಕೆ ಬಂದಿವೆ. ಇದರಿಂದಾಗಿ ಪಂಜಾಬ್, ಹರಿಯಾಣಗಳಲ್ಲಿ ಕೋವಿಡ್‌ ವ್ಯಾಪಿಸಿ ಆತಂಕ ಸೃಷ್ಟಿಸುತ್ತಿದೆ ಎಂಬ ಆರೋಪಗಳಿವೆ. ಪಂಜಾಬ್‌ನಲ್ಲಿ ಇದೇ ಮಾರ್ಚ್‌ 1ರಂದು 1.80 ಲಕ್ಷ ಇದ್ದ ಪ್ರಕರಣಗಳು ಏಪ್ರಿಲ್ 26ರಂದು 3.45 ಲಕ್ಷಕ್ಕೆ ತಲುಪಿದೆ. ಆದರೆ ಪಂಜಾಬ್‌ನ ಕೋವಿಡ್-19 ನೋಡಲ್ ಅಧಿಕಾರಿ ಡಾ.ರಾಜೇಶ್ ಭಾಸ್ಕರ್ ಅವರು ಹೇಳುವುದು ಬೇರೆ. ‘ಈ ವರ್ಷ ಇಲ್ಲಿಯವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇ 70ರಷ್ಟು ಪ್ರಕರಣಗಳು ನಗರ ಪ್ರದೇಶಗಳಿಂದ ವರದಿಯಾಗಿವೆ. ವ್ಯಾಪಾರ, ಉದ್ಯೋಗ ಸ್ಥಳ ಮತ್ತು ಸಮಾರಂಭಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸದಿರುವುದು ಪ್ರಕರಣ ಹೆಚ್ಚಲು ಕಾರಣ. ಕೇವಲ ಶೇ 30ರಷ್ಟು ಪ್ರಕರಣಗಳು ರೈತ ಪ್ರತಿಭಟನೆಯ ಕೇಂದ್ರಗಳಾದ ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ’ ಎಂದಿದ್ದಾರೆ.

* ಪಂಜಾಬ್‌ನಲ್ಲಿ ಫೆಬ್ರುವರಿ ಆರಂಭದಲ್ಲಿ ಕೇವಲ 2 ಸಾವಿರ ಸಕ್ರಿಯ ಪ್ರಕರಣ ಇದ್ದವು. ಆದರೆ ಏಪ್ರಿಲ್ 26ರ ವೇಳೆ ಇವುಗಳ ಸಂಖ್ಯೆ 49 ಸಾವಿಕ್ಕೆ ಏರಿಕೆ ಕಂಡಿದೆ
* ಹರಿಯಾಣದಲ್ಲಿ ಫೆಬ್ರುವರಿ 12ರಂದು ಕೇವಲ 887 ಸಕ್ರಿಯ ಪ್ರಕರಣ ಇದ್ದವು. ಅವುಗಳ ಸಂಖ್ಯೆ ಈಗ 79 ಸಾವಿರಕ್ಕೆ ಹೆಚ್ಚಳವಾಗಿದೆ

ಗುಜರಾತ್‌
ಗುಜರಾತಿನ ಅಹಮದಾಬಾದ್‌ನಲ್ಲಿ ಮಾರ್ಚ್ ತಿಂಗಳಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದವು. ಆಗ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ–ಇಂಗ್ಲೆಂಡ್ ನಡುವೆ ಟಿ–20 ಪಂದ್ಯಗಳು ನಡೆಯುತ್ತಿದ್ದವು. ಕ್ರೀಡಾಂಗಣದಲ್ಲೇ 50,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು. ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾದ ಕಾರಣ, ಉಳಿದ ಪಂದ್ಯಗಳನ್ನು ಪ್ರೇಕ್ಷಕರು ಇಲ್ಲದೇ ನಡೆಸಲು ನಿರ್ಧರಿಸಲಾಯಿತು. ಪಂದ್ಯಗಳು ನಡೆದ ಮಾರ್ಚ್‌ನಲ್ಲಿ ರಾಜ್ಯದ ಕೋವಿಡ್ ಪೀಡಿತರ ಸಂಖ್ಯೆ 3 ಲಕ್ಷದ ಆಸುಪಾಸಿನಲ್ಲಿತ್ತು. ಈಗ ಅದು ಐದು ಲಕ್ಷದ ಗಡಿ ದಾಟಿದೆ. ಪ್ರೇಕ್ಷಕರು ಇರುವ ಪಂದ್ಯಗಳನ್ನು ಮುಂದುವರಿಸಿದ್ದರೆ, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ತಜ್ಞರು.

* ಮಾರ್ಚ್ 1ರಂದು ಗುಜರಾತಿನಲ್ಲಿ 2,429 ಸಕ್ರಿಯ ಸೋಂಕಿತರು ಇದ್ದರು. ಇವರ ಸಂಖ್ಯೆ ಮಾರ್ಚ್ ಕೊನೆ ಹೊತ್ತಿಗೆ 12,610ಕ್ಕೆ ಏರಿದೆ
* ಗುಜರಾತಿನಲ್ಲಿ ಏಪ್ರಿಲ್ 26ರಂದು 1.26 ಲಕ್ಷ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ

ಉತ್ತರ ಪ್ರದೇಶ
ಉತ್ತರ ಪ್ರದೇಶವು ಬಹುಬೇಗನೇ ಕೋವಿಡ್ ಪಟ್ಟಿಯಲ್ಲಿ ಮೇಲೆ ಏರಲು ಅಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಕಾರಣ ಎನ್ನುವ ಅಭಿಪ್ರಾಯವಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕ ಸಮದಾಯದಲ್ಲಿ ಹಲವರಿಗೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಚುನಾವಣೆ ಮುಂದೂಡುವಂತೆ ಶಿಕ್ಷಕರ ಸಂಘವು ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಚುನಾವಣೆಯು ವೈರಸ್‌ ಅನ್ನು ವೇಗವಾಗಿ ಹರಡುತ್ತದೆ ಎಂದು ಎಚ್ಚರಿಸಿತ್ತು. ಕಳೆದ ತಿಂಗಳನಿಂದಲೇ ಇಲ್ಲಿ ಪ್ರಕರಣಗಳು ಏರುಗತಿಯಲ್ಲಿದ್ದವು. ಮಾರ್ಚ್‌ನಲ್ಲಿ 6 ಲಕ್ಷ ಇದ್ದ ರಾಜ್ಯದ ಕೋವಿಡ್ ಪ್ರಕರಣಗಳು ಏಪ್ರಿಲ್ ಕೊನೆ ಹೊತ್ತಿಗೆ 11 ಲಕ್ಷದ ಗಡಿ ದಾಟಿದೆ.

* ಮಾರ್ಚ್ 27ರಂದು ಪಂಚಾಯಿತಿ ಚುನಾವಣೆ ಘೋಷಣೆಯಾದಾಗ ರಾಜ್ಯದಲ್ಲಿ 6,615 ಸಕ್ರಿಯ ಪ್ರಕರಣಗಳು ಮಾತ್ರ ಇತ್ತು
* ಈಗ ಮೂರು ಹಂತಗಳ ಮತದಾನ ಮುಗಿದಿದ್ದು, ಏಪ್ರಿಲ್ 26ರ ಹೊತ್ತಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು