ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಹಿಂದುಳಿದ ವರ್ಗದಲ್ಲಿ ಏಕಿಲ್ಲ ಒಳಮೀಸಲು ಸೊಲ್ಲು?

Last Updated 16 ಸೆಪ್ಟೆಂಬರ್ 2020, 2:13 IST
ಅಕ್ಷರ ಗಾತ್ರ

ಸಾಮಾಜಿಕವಾಗಿ ತಾರತಮ್ಯಕ್ಕೆ ಒಳಗಾದ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವುದೇ ಮೀಸಲಾತಿಯ ಪ್ರಮುಖ ಉದ್ದೇಶ. ಪ್ರಾತಿನಿಧ್ಯ ಕಡಿಮೆ ಇರುವ ಸಮುದಾಯಗಳನ್ನು ಹೆಚ್ಚು ಪ್ರಾತಿನಿಧ್ಯ ಪಡೆದ ಸಮುದಾಯಗಳ ಮಟ್ಟಕ್ಕೆ ತರುವುದು ಕೂಡ ಮೀಸಲಾತಿಯ ಗುರಿಗಳಲ್ಲಿ ಒಂದು.ಸಂವಿಧಾನದತ್ತವಾಗಿ ಸಿಗಬೇಕಾದ ಸವಲತ್ತುಗಳು ಎಲ್ಲ ಜಾತಿಗಳಿಗೂ ಸಿಗಲೇಬೇಕು. ಪರಿಶಿಷ್ಟ ಜಾತಿ ಯಲ್ಲಿ ಒಳಮೀಸಲು ಜಾರಿಗೆ ಸಂಬಂಧಿಸಿ ಈಗ ಚರ್ಚೆ ನಡೆಯುತ್ತಿದೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಯಾಗಬೇಕು ಎಂದು ದಲಿತ ಪರವಾದ ಹಲವು ಸಂಘಟನೆಗಳು ಒತ್ತಡ ಹೇರುತ್ತಿವೆ.

ಆದರೆ, ಇತರ ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ಕೂಡ ಮೀಸಲಾತಿಯ ಲಾಭ ಪಡೆಯದ ಜಾತಿಗಳ ಸಂಖ್ಯೆ 70ಕ್ಕೂ ಹೆಚ್ಚು ಎಂಬುದನ್ನು ಗಣನೆಗೆ ತೆಗೆದುಕೊಂಡರೆ, ಇಲ್ಲಿಯೂ ಒಳ ಮೀಸಲಾತಿಯ ಅಗತ್ಯ ಮತ್ತು ಅನಿವಾರ್ಯ ಇದೆ ಎಂಬುದು ವೇದ್ಯವಾಗುತ್ತದೆ.ಹಿಂದುಳಿದ ವರ್ಗಗಳಲ್ಲಿನ 102 ಜಾತಿಗಳ ಪೈಕಿ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಳ್ಳುವ 28 ಜಾತಿಗಳು ಮಾತ್ರ ಮೀಸಲಾತಿಯ ಲಾಭ ಪಡೆಯುತ್ತಿವೆ. ಉಳಿದ ಜಾತಿಗಳವರು ಇದರ ಗಂಧ ಗಾಳಿಯೂ ಗೊತ್ತಿಲ್ಲದಂತೆ ಇದ್ದಾರೆ.

ಹಿಂದುಳಿದ ವರ್ಗಗಳಿಗೆ ಸ್ವಾತಂತ್ರ‍್ಯ ಪೂರ್ವ ದಲ್ಲಿಯೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ವಿಸ್ತಾರ ಪ್ರದೇಶವನ್ನು ಒಳಗೊಂಡ ಪ್ರೆಸಿಡೆನ್ಸಿ ಆಡಳಿತ ಪ್ರಾಂತ್ಯಗಳಲ್ಲಿ ಮತ್ತು ವಿಂಧ್ಯ ಪ್ರದೇಶದಲ್ಲಿನ ರಾಜರ ಆಡಳಿತಾವಧಿಯಲ್ಲಿ ಈ ಸವಲತ್ತು ನೀಡಲಾಗಿತ್ತು. ಛತ್ರಪತಿ ಶಾಹುಜಿ ಮಹಾರಾಜ, ಮಹಾರಾಷ್ಟ್ರದಲ್ಲಿನ ಕೊಲ್ಲಾಪುರದ ಮಹಾರಾಜ ಅವರು 1902ಕ್ಕೂ ಮುಂಚೆಯೇ ರಾಜ್ಯಾಡಳಿತಗಳಲ್ಲಿ ಹಿಂದುಳಿದವರ ಪಾಲನ್ನು ನೀಡಲು ಮೀಸಲಾತಿ ನೀತಿ ರೂಪಿಸಿದ್ದರು. ಆಗಿನ 1902ರ ಒಂದು ಸೂಚನಾ ಪತ್ರವು ಕೊಲ್ಹಾಪುರದ ಆಡಳಿತದಲ್ಲಿ ಶೇಕಡ 50ರಷ್ಟು ಮೀಸಲಾತಿಯನ್ನು ಹಿಂದುಳಿದ ಸಮುದಾಯ/ವರ್ಗದವರಿಗೆ ನೀಡಿತ್ತು ಎಂಬುದನ್ನು ತಿಳಿಸುತ್ತದೆ. ಇದರಿಂದ ಪ್ರಭಾವಿತಗೊಂಡ ಅಂದಿನ ಮೈಸೂರು ಮಹಾರಾಜರು ಶೇ 70ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದರು.

ಹಿಂದುಳಿದ ವರ್ಗಗಳ ಪ್ರವರ್ಗ 1 ಹಾಗೂ ಪ್ರವರ್ಗ 2ಎ ದಲ್ಲಿ ಇರುವ ಕೆಲವೇ ಜಾತಿಗಳವರು ಮೀಸಲಾತಿಯ ಬಹುಪಾಲು ಕಬಳಿಸಿದ್ದಾರೆ ಎನ್ನುವ ಅಂಶವನ್ನು ನೋಡಿದಾಗ ಇತರೆ ಹಿಂದುಳಿದವರ ಸ್ಥಿತಿಗತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಒಳ ವರ್ಗೀಕರಣ ಮಾಡಲೇಬೇಕು. 1931ರ ಜನಗಣತಿಯ ನಂತರ, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಸಂಗ್ರಹಿಸಿಲ್ಲ. 2011ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಡೆಸಿರುವ ಸಾಮಾಜಿಕ ಹಾಗೂ ಆರ್ಥಿಕ ಜಾತಿಗಣತಿ ಅಂಕಿ ಅಂಶಗಳನ್ನು ಈವರೆಗೆ ಪ್ರಕಟಿಸದೇ ಇರುವುದರಿಂದ ಅದರ ಸಾಧಕ-ಬಾಧಕಗಳನ್ನೂ ತಿಳಿಯಲಾಗಿಲ್ಲ.

ಇನ್ನು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದ ವೇಳೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿವಾರು ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದರೂ ಅದು ವಿಧಾನಸಭೆಯಲ್ಲಿ ಮಂಡನೆಯಾಗಿಲ್ಲ. ಪರಿಶಿಷ್ಟ ಜಾತಿಗೆ ಸಂಬಂಧಿಸಿದ ವರದಿಯ ಸ್ಥಿತಿಯೂ ಇದೇ ಆಗಿದೆ. ಸದಾಶಿವ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಗಷ್ಟೇ ಅಲ್ಲದೆ ಹಿಂದುಳಿದ ವರ್ಗಗಳಿಗೆ ಪೂರಕವಾದ ಅಂಶಗಳೂ ಇವೆ ಎನ್ನಲಾಗುತ್ತಿದೆ. ವರದಿಯು ಬಹಿರಂಗವಾದ ಬಳಿಕವಷ್ಟೇ ಅದರಲ್ಲಿ ಏನಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯ. ಅಲ್ಲಿಯವರೆಗೆ ಎಲ್ಲವೂ ಊಹಾಪೋಹವೇ ಆಗುತ್ತದೆ.

ಹಿಂದುಳಿದ ವರ್ಗಗಳಲ್ಲಿ ಸಬಲರು ಮತ್ತು ದುರ್ಬಲರನ್ನು ಗುರುತಿಸಬೇಕು. ಅಂತಹ ವರ್ಗೀಕರಣ ಇಲ್ಲದಿದ್ದರೆ ಸಾಮಾಜಿಕ ನ್ಯಾಯವು ಪರಿಣಾಮಕಾರಿಯಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಯಾಗುವುದು ಸಾಧ್ಯವಿಲ್ಲ. ವೈಜ್ಞಾನಿಕವಾದ ಅಂಕಿ ಅಂಶಗಳು ಇಲ್ಲದೇ ಹೋದರೆ ಒಳವರ್ಗೀಕರಣದ ಉದ್ದೇಶವೂ ಸಾಧನೆ ಆಗದು. ಹಾಗಾಗಿ, ಎಲ್ಲ ಜಾತಿ, ಜನಾಂಗಗಳ ವೈಜ್ಞಾನಿಕ ಸಮೀಕ್ಷೆಯು ರಾಷ್ಟ್ರಮಟ್ಟದಲ್ಲಿ ನಡೆಯಬೇಕು. ಮೀಸಲಾತಿ ಪಟ್ಟಿಯಲ್ಲಿ ಇರುವ ಅತ್ಯಂತ ಹಿಂದುಳಿದ ಜಾತಿಗಳು, ಈಗಾಗಲೇ ಮೀಸಲಾತಿಯ ಲಾಭ ಪಡೆದು ಪ್ರಬಲವಾಗಿರುವ ಜಾತಿಗಳ ಜತೆಗೆ ಸಮಾನ ನೆಲೆಯಲ್ಲಿ ಸ್ಪರ್ಧಿಸಬೇಕಾಗಿದೆ. ಇದು ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಅನ್ಯಾಯ.

ಇಲ್ಲಿ, ರಾಜಕೀಯ ಅಧಿಕಾರದ ವಿಚಾರವೂ ಇದೆ. ಹಿಂದುಳಿದ ವರ್ಗಗಳಲ್ಲಿನ ಪ್ರಮುಖ ಜಾತಿಗಳು ರಾಜಕೀಯ ಅಧಿಕಾರವನ್ನು ನಿರಂತರವಾಗಿ ಅನುಭವಿಸಿವೆ. ಬೇರೆಯವರು ಬೆಳೆಯದಂತೆ ನೋಡಿಕೊಳ್ಳುವ ಪ್ರಯತ್ನವೂ ಇಲ್ಲಿ ಇದೆ. ದೂರದೃಷ್ಟಿಯಿಂದ ನಡೆಸಲಾದ ಜಾತಿ ಜನಗಣತಿ ವರದಿಯು ಮಂಡನೆ ಆಗದಿರಲು ಈ ಸಂಘರ್ಷವೂ ಕಾರಣ. ಹಿಂದುಳಿದ ವರ್ಗಗಳಲ್ಲಿರುವ ಅಲ್ಪಸಂಖ್ಯಾತರಿಗೆ ಮೀಸಲಾತಿ ಸವಲತ್ತು ಸಿಗದಂತೆ ಮಾಡುವುದು, ಬಲಿಷ್ಠ ಜಾತಿಗಳವರು ತಮ್ಮ ಹಿಡಿತ ಬಿಡಲು ಒಲ್ಲದಿರುವುದೆಲ್ಲವೂ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಧ್ಯೇಯವನ್ನೇ ಬುಡಮೇಲು ಮಾಡುತ್ತವೆ.

(ಲೇಖಕ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT