ಮಂಗಳವಾರ, ಆಗಸ್ಟ್ 9, 2022
20 °C
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯ ಇಂದಿನಿಂದ; ಭಾರತ–ನ್ಯೂಜಿಲೆಂಡ್ ಹಣಾಹಣಿ

ಆಳ–ಅಗಲ: ಕೊರೊನಾ ನೆರಳಲ್ಲಿ ಟೆಸ್ಟ್‌ ಮುಕುಟಕ್ಕೆ ಹೋರಾಟ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ‘ಅಸಾಧ್ಯ’ವೆಂದೇ ಹೇಳಲಾಗುತ್ತಿದ್ದ ಕಾರ್ಯವೊಂದು ಸಾಧ್ಯವಾಗುವ ದಿನ ಇಂದು.  ‌

ಶುಕ್ರವಾರ ಸೌತಾಂಪ್ಟನ್‌ನ ಏಜಿಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪಂದ್ಯವು 144 ವರ್ಷಗಳ ಇತಿಹಾಸವಿರುವ ಟೆಸ್ಟ್‌ ಕ್ರಿಕೆಟ್‌ಗೆ ಕಿರೀಟಪ್ರಾಯವಾಗಲಿದೆ. 

ಕ್ರಿಕೆಟ್‌ ಆರಂಭವಾಗಿದ್ದೇ ಟೆಸ್ಟ್ ಮಾದರಿಯಿಂದ. ಆದರೆ ನಂತರ ಪ್ರವರ್ಧಮಾನಕ್ಕೆ ಬಂದ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಮಾದರಿಗಳಲ್ಲಿ ವಿಶ್ವಕಪ್ ಟೂರ್ನಿಗಳು ನಡೆದಿವೆ. ಏಕದಿನ ಕ್ರಿಕೆಟ್‌ಗೆ 1975ರಲ್ಲಿ ಮತ್ತು ಚುಟುಕು ಕ್ರಿಕೆಟ್‌ಗೆ 2007ರಲ್ಲಿ ವಿಶ್ವಕಪ್ ಟೂರ್ನಿಗಳು ಆರಂಭವಾದವು. ಆದರೆ, ಐದು ದಿನಗಳ ಮಾದರಿಯಲ್ಲಿ 10–12 ತಂಡಗಳನ್ನು ಒಂದೇ ವೇದಿಕೆಗೆ ತಂದು ವಿಶ್ವಕಪ್ ಟೂರ್ನಿ ಆಯೋಜಿಸುವ ಚಿಂತನೆಗಳು ನಡೆದವಾದರೂ ಸಾಕಾರಗೊಳ್ಳಲಿಲ್ಲ. ದೀರ್ಘ ಮಾದರಿಯೇ ಅದಕ್ಕೆ ಅಡ್ಡಿಯಾಯಿತು. ಆದರೆ 2017ರಲ್ಲಿ ಎರಡು ವರ್ಷಗಳ ದೀರ್ಘ ಅವಧಿಯ ವಿಶ್ವ ಚಾಂಪಿಯನ್‌ಷಿಪ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಸ್ತು ಎಂದಿತು. ಈ ಅವಧಿಯಲ್ಲಿ ನಡೆದ ದ್ವಿಪಕ್ಷೀಯ ಟೆಸ್ಟ್ ಸರಣಿಗಳನ್ನೇ ವಿಶ್ವಕಪ್ ಫೈನಲ್‌ಗೆ ಮಾನದಂಡವಾಗಿ ನಿಗದಿಪಡಿಸಲಾಯಿತು. ಅದಕ್ಕೆ ತಕ್ಕಂತೆ ವೇಳಾಪಟ್ಟಿಯೂ ಸಿದ್ಧವಾಯಿತು.

ಎಲ್ಲವೂ ಸಾಂಗವಾಗಿ ಹೊರಟಿದ್ದ ಸಮಯದಲ್ಲಿ ಹೋದ ವರ್ಷ ವಕ್ಕರಿಸಿದ ಕೊರೊನಾ ಕಂಟಕದಿಂದಾಗಿ ಯೋಜನೆ ಏರುಪೇರಾಯಿತು. ಕೆಲವು ಸರಣಿಗಳನ್ನು ರದ್ದು ಮಾಡಬೇಕಾಯಿತು. ಪಾಯಿಂಟ್ಸ್‌ ಲೆಕ್ಕಾಚಾರ ಪದ್ಧತಿಯನ್ನು ಬದಲಿಸಲಾಯಿತು. ಅದರಿಂದಾಗಿ ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಘಟಾನುಘಟಿ ತಂಡಗಳು ಫೈನಲ್‌ ಪ್ರವೇಶಕ್ಕಾಗಿ ಪರದಾಡಿದವು. ಆದರೆ, ಅತ್ಯಂತ ಕಠಿಣ ಹಾದಿಯನ್ನು ಕ್ರಮಿಸಿದ ಭಾರತ ಪ್ರಶಸ್ತಿಯ ಹೊಸ್ತಿಲಲ್ಲಿ ಬಂದು ನಿಂತಿದೆ. ‘ಕೂಲ್ ಕ್ಯಾಪ್ಟನ್’ ಕೇನ್ ವಿಲಿಯಮ್ಸನ್ ಬಳಗವು ಭಾರತಕ್ಕಿಂತ ಮುಂಚೆಯೇ ಅರ್ಹತೆ ಗಿಟ್ಟಿಸಿತ್ತು.

ಕ್ರಿಕೆಟ್ ಜನಕರ ನಾಡಿನಲ್ಲಿ ಪಾರುಪತ್ಯ!: ಕ್ರಿಕೆಟ್ ಜನಿಸಿದ ಇಂಗ್ಲೆಂಡ್‌ನಲ್ಲಿ ಈ ಫೈನಲ್ ನಡೆಯುತ್ತಿದೆ. ಆದರೆ, ಇಂಗ್ಲೆಂಡ್ ತಂಡ ಆಡುತ್ತಿಲ್ಲ. 1983ರಲ್ಲಿ  ಏಕದಿನ ವಿಶ್ವಕಪ್ ಜಯಿಸಿದ ನೆಲದಲ್ಲಿ ಭಾರತಕ್ಕೆ ಮತ್ತೊಂದು ಇತಿಹಾಸ ಬರೆಯುವ ಅವಕಾಶ ಒದಗಿಬಂದಿದೆ. 2019ರಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವೀರೋಚಿತವಾಗಿ ಹೋರಾಡಿದರೂ ಪ್ರಶಸ್ತಿ ದಕ್ಕದ ಹತಾಶೆ ಅನುಭವಿಸಿದ್ದ ಕಿವೀಸ್ ಬಳಗ ಎದುರಾಳಿಯಾಗಿರುವುದು ವಿಶೇಷ. ಎರಡು ವರ್ಷಗಳ ಹಿಂದಿನ ಆ ಟೂರ್ನಿಯಲ್ಲಿ ಭಾರತವು ಸೆಮಿಫೈನಲ್‌ನಲ್ಲಿ ಸೋತಿದ್ದು ಕೂಡ ಇದೇ ‘ಬ್ಲ್ಯಾಕ್‌ಕ್ಯಾಪ್ಸ್‌’ ಬಳಗದ ಎದುರು.

ವಿರಾಟ್ ಕೊಹ್ಲಿ ನಾಯಕತ್ವದ ಬಳಗಕ್ಕೆ ಇಲ್ಲಿಯವರೆಗಿನ ಹಾದಿಯು ಹೂವಿನ ಹಾಸಿಗೆಯೇನಾಗಿರಲಿಲ್ಲ. ಆದರೆ ಕಳೆದ ಏಳು ತಿಂಗಳುಗಳಲ್ಲಿ ಭಾರತ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆಯನ್ನು ಮೆಚ್ಚಿ ಕೊಂಡಾಡದವರೇ ಇಲ್ಲ. ಅದರಲ್ಲೂ ಭಾರತದ ಬೆಂಚ್‌ ಶಕ್ತಿಯ ಪ್ರತಾಪಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಕ್ರಿಕೆಟ್ ರಂಗದಲ್ಲಿ ತಾವೇ ದೊಡ್ಡವರು ಎಂದುಕೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಸದೆಬಡಿದ ದಾಖಲೆ ಬರೆದದ್ದು ಇದೇ ಅವಧಿಯಲ್ಲಿ. ಹೋದ ನವೆಂಬರ್‌–ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದ ಸ್ಲೆಡ್ಮಿಂಗ್ ಮತ್ತು ಬಾಡಿಲೈನ್ ಬೌಲಿಂಗ್‌ಗೆ ಎದೆಕೊಟ್ಟು ಆಡಿದ ಯುವಪಡೆಯು ಇತಿಹಾಸವನ್ನೇ ಬರೆಯಿತು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿಯೂ ಸರಣಿ ಗೆದ್ದು ತಂಡವು ಮೆರೆಯಿತು.  ಆ ಸರಣಿಯ ಮೊದಲ ಪಂದ್ಯದಲ್ಲಿ  ಭಾರತ ತಂಡವು  ಹೀನಾಯ ಸೋಲು ಕಂಡಿತ್ತು. ಆಗಲೇ ಫೈನಲ್ ಆಸೆ ಕೈತಪ್ಪುವ ಅತಂಕ ಮೂಡಿತ್ತು. ಆದರೆ, ಅನುಭವವಿಲ್ಲದ ಹುಡುಗರ ದಂಡು ಆಸೆಯನ್ನು ಜೀವಂತವಾಗಿ ಉಳಿಸಿತು. 

ಭಾರತದ ಆತಿಥ್ಯದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಏಳು, ಬೀಳುಗಳ ನಡುವೆಯೂ ವಿರಾಟ್ ಬಳಗವು ಸರಣಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಹಾದಿಯಲ್ಲಿ ರಿಷಭ್ ಪಂತ್, ಶುಭಮನ್ ಗಿಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಹನುಮವಿಹಾರಿ ಅವರಂತಹ ಆಟಗಾರರ ಪ್ರತಿಭೆ ಕಣ್ಣು ಕೋರೈಸಿತು. ಚೇತೇಶ್ವರ್ ಪೂಜಾರ ಎಂಬ ಗೋಡೆ ಮತ್ತಷ್ಟು ಬಲಿಷ್ಠವಾಯಿತು. ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅಂಥವರ ಆಲ್‌ರೌಂಡ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿತು.

ಈ ಎಲ್ಲ ಸವಿನೆನಪುಗಳೇ ಈಗ ವಿರಾಟ್ ಎದೆಯಲ್ಲಿ ಆತ್ಮವಿಶ್ವಾಸದ ಪ್ರವಾಹವೇ ಹರಿಯುವಂತೆ ಮಾಡಿವೆ. ಈ ಪಂದ್ಯಕ್ಕೂ ಮುನ್ನ ಹೆಚ್ಚು ಅಭ್ಯಾಸಕ್ಕೆ ಅವಕಾಶ ಸಿಕ್ಕಿಲ್ಲ. ಸರಣಿಗಳಲ್ಲಿ ಆಡಲು ಸಾಧ್ಯವಾಗಿಲ್ಲ. ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಸಾವು, ನೋವುಗಳ ಸರಮಾಲೆಯನ್ನೇ ಕಂಡ  ಭಾರತದ ಅಭಿಮಾನಿಗಳ ಹೃದಯಕ್ಕೆ ವಿಶ್ವಕಪ್ ಗೆಲುವಿನ ಸಿಹಿ ಸಾಂತ್ವನ ಹೇಳುವ ‘ಟೆಸ್ಟ್‌’ ವಿರಾಟ್ ಬಳಗಕ್ಕಿದೆ.

ಲಾರ್ಡ್ಸ್‌ನಿಂದ ಸೌತಾಂಪ್ಟನ್‌ಗೆ

ವಿಶ್ವ ಚಾಂಪಿಯನ್‌ಷಿಪ್ ಫೈನಲ್ ಪಂದ್ಯವೊಂದು ಬಯೋಬಬಲ್‌ನಲ್ಲಿ (ಜೀವ ಸುರಕ್ಷತಾ ನಿಯಮ) ನಡೆಯುತ್ತಿರುವುದು ಇದೇ ಮೊದಲು.

2020ರ ಜುಲೈನಲ್ಲಿ ಮೊದಲ ಬಾರಿಗೆ ಬಯೋಬಬಲ್‌ ಟೆಸ್ಟ್ ನಡೆದ ತಾಣವೂ ಆಗಿರುವ ಸೌತಾಂಪ್ಟನ್‌ನಲ್ಲಿಯೇ ಈ ಐತಿಹಾಸಿಕ ಫೈನಲ್ ನಡೆಯುತ್ತಿದೆ. ವಿಶ್ವ ಚಾಂಪಿಯನ್‌ಷಿಪ್ ವೇಳಾಪಟ್ಟಿ ರಚಿಸಿದಾಗ ಫೈನಲ್ ಪಂದ್ಯಕ್ಕೆ ಲಾರ್ಡ್ಸ್‌ ಕ್ರೀಡಾಂಗಣವನ್ನು ನಿಗದಿ ಮಾಡಲಾಗಿತ್ತು.

ಆದರೆ ಈಚೆಗಷ್ಟೇ ಬಯೋಬಬಲ್ ಕಾರಣಗಳಿಗಾಗಿ ಸೌತಾಂಪ್ಟನ್‌ಗೆ ಸ್ಥಳಾಂತರಿಸಲಾಯಿತು. ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಹೋಟೆಲ್‌ನಲ್ಲಿ ಉಭಯ ತಂಡಗಳ ಆಟಗಾರರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಭಾರತ ತಂಡದ ಆಟಗಾರರು ಜೂನ್ 2ರಿಂದಲೇ ಇಲ್ಲಿ ಬೀಡುಬಿಟ್ಟಿದ್ದಾರೆ. ಕಡ್ಡಾಯ ಕ್ವಾರಂಟೈನ್ ಪೂರೈಸಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಐದು ಬಾರಿ ಕೋವಿಡ್ ಪರೀಕ್ಷೆಗೂ ಒಳಗಾಗಿದ್ದಾರೆ.

ಮೇ ತಿಂಗಳದಲ್ಲಿ ಐಪಿಎಲ್ ಸ್ಥಗಿತಗೊಂಡಾಗ ನ್ಯೂಜಿಲೆಂಡ್ ಆಟಗಾರರು ಇಂಗ್ಲೆಂಡ್‌ಗೆ ತೆರಳಿದ್ದರು. ಈಚೆಗೆ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಸರಣಿಯಲ್ಲಿ 1–0 ಜಯವನ್ನೂ ಕಿವೀಸ್ ಗಳಿಸಿತ್ತು.

ಪೂಜಾರಾಗೆ ಮೊದಲ ವಿಶ್ವಕಪ್!

ಹನ್ನೊಂದು ವರ್ಷಗಳ ಹಿಂದೆಯೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರು ಮೊದಲ ಬಾರಿ ಐಸಿಸಿ ವಿಶ್ವಕಪ್ ಟೂರ್ನಿಯೊಂದರಲ್ಲಿ ಆಡಲಿದ್ದಾರೆ.

ತಮ್ಮ ಕಲಾತ್ಮಕ ಮತ್ತು ತಾಳ್ಮೆಯ ಬ್ಯಾಟಿಂಗ್‌ನಿಂದಾಗಿ ಟೆಸ್ಟ್‌ ಕ್ರಿಕೆಟ್‌ ತಂಡದ ಅವಿಭಾಜ್ಯ ಅಂಗವಾಗಿರುವ ಪೂಜಾರ ಅವರಿಗೆ ಇದುವರೆಗೆ ಸೀಮಿತ ಓವರ್‌ಗಳಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಆದ್ದರಿಂದ ವಿಶ್ವಕಪ್ ಟೂರ್ನಿಗಳಲ್ಲಿಯೂ ಆಡಿಲ್ಲ. ಇದೀಗ ಚೊಚ್ಚಲ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ನ್ಯೂಜಿಲೆಂಡ್‌ಗೆ ಸುಲಭ. ಅಲ್ಲದೇ ತಂಡದ ಎಲ್ಲ ಆಟಗಾರರು ಶಿಸ್ತಿನಿಂದ ಇದ್ದಾರೆ. ಆದ್ದರಿಂದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಿವೀಸ್ ಬಳಗದ ಗೆಲುವು ಖಚಿತ

-ಮೈಕೆಲ್ ವಾನ್, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭದ 20 ಓವರ್‌ಗಳನ್ನು ಆಡಬೇಕು. ಆ ಅಡಿಪಾಯದ ಮೇಲೆ ಪೂಜಾರ, ಕೊಹ್ಲಿ, ರಹಾನೆ, ಹನುಮವಿಹಾರಿ ಮತ್ತು ಪಂತ್ ರನ್‌ಸೌಧ ಕಟ್ಟಬಲ್ಲರು. ಇದು ಗೆಲುವಿಗೆ ಸೋಪಾನವಾಗಲಿದೆ

ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು