ರಹಸ್ಯ ಸಭೆಯಲ್ಲೂ ಅಸಮಾಧಾನ ಸ್ಫೋಟ

7
ಮನವೊಲಿಕೆ ತಂತ್ರಗಾರಿಕೆ ವಿಫಲ; ಚುನಾಯಿತರ ವಿರುದ್ಧ ಬಿಜೆಪಿ ‘ಮಂಡಲ’ ಕೆಂಡಾಮಂಡಲ..!

ರಹಸ್ಯ ಸಭೆಯಲ್ಲೂ ಅಸಮಾಧಾನ ಸ್ಫೋಟ

Published:
Updated:

ವಿಜಯಪುರ: ಸಮರ್ಥ ನಾಯಕನಿಲ್ಲದೆ ಕಂಗಾಲಾಗಿರುವ ವಿಜಯಪುರ ಜಿಲ್ಲಾ ಬಿಜೆಪಿ ಘಟಕ, ಲೋಕಸಭಾ ಚುನಾವಣಾ ಅಖಾಡಕ್ಕಿಳಿಯಲು ತಾಲೀಮು ಆರಂಭಿಸಿದೆ. ಇದಕ್ಕೆ ಆರಂಭದಲ್ಲೇ ಅಪಸ್ವರವೂ ವ್ಯಕ್ತವಾಗಿದೆ.

ಚುನಾವಣೆಗೆ ಜಿಲ್ಲೆಯ ಎಂಟು ಮಂಡಲಗಳ ದಳಪತಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸಲು ಬುಧವಾರ ನಗರದ ಗೋಲ್ಡನ್‌ಹೈಟ್ಸ್‌ ಹೋಟೆಲ್‌ನಲ್ಲಿ ಆಯೋಜಿಸಿದ್ದ ರಹಸ್ಯ ಸಭೆಯಲ್ಲೇ (ಗೆಟ್‌ ಟು ಗೆದರ್‌ ಹೆಸರಿನಲ್ಲಿ ನಡೆದ ಔತಣಕೂಟ) ಪ್ರಮುಖರು ಕೆಂಡಾಮಂಡಲರಾಗಿ ಆಕ್ರೋಶ ಹೊರಹಾಕಿದ್ದಾರೆ ಎಂಬುದು ತಿಳಿದು ಬಂದಿದೆ.

ಎಂಟು ಮಂಡಲಗಳ ಅಧ್ಯಕ್ಷರು, ತಲಾ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳು, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಸೇರಿದ್ದ ಈ ಸಭೆಯಲ್ಲಿ ಹಲವು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಚುನಾಯಿತ ಸಂಸದ, ಶಾಸಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಭೆಯ ಆರಂಭದಲ್ಲೇ ಪ್ರಾಸ್ತಾವಿಕವಾಗಿ ಲೋಕಸಭಾ ಚುನಾವಣೆಯ ಸಿದ್ಧತೆ ಪ್ರಸ್ತಾಪಿಸುತ್ತಿದ್ದಂತೆ ಕೆಲ ಮಂಡಲಗಳ ಪ್ರಭಾವಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿದರು ಎಂಬುದು ಬಲ್ಲ ಮೂಲಗಳಿಂದ ಖಚಿತಪಟ್ಟಿದೆ.

‘ವರ್ಷದ 365 ದಿನವೂ ಬೂತ್‌ ಹಂತದಲ್ಲಿ ಪಕ್ಷ ಸಂಘಟಿಸುತ್ತಿದ್ದೇವೆ. ದಿನೇ ದಿನೇ ಜವಾಬ್ದಾರಿ ಹೆಚ್ಚುತ್ತಿದೆ. ಟಾಸ್ಕ್‌ ರೂಪದಲ್ಲಿ ಕಾರ್ಯಕ್ರಮ ರೂಪಿಸಿ, ಟಾರ್ಗೆಟ್‌ ಕೊಡುತ್ತಿದ್ದೀರಿ. ಇವೆಲ್ಲವನ್ನೂ ದೇಶಕ್ಕಾಗಿ, ಪಕ್ಷಕ್ಕಾಗಿ, ಮೋದಿಗಾಗಿ ತಮ್ಮ ಜೇಬಿನಿಂದ ತನು–ಮನ–ಧನ ಅರ್ಪಿಸಿ ದುಡಿಯುತ್ತಿದ್ದೇವೆ.

ಚುನಾವಣೆ ಪೂರ್ವ, ಚುನಾವಣೆಯಲ್ಲಿ, ನಂತರವೂ ತಳಹಂತದ ಕಾರ್ಯಕರ್ತರೊಟ್ಟಿಗೆ ಸಂಪರ್ಕ ಇಟ್ಟುಕೊಳ್ಳುವವರು ನಾವು. ಚುನಾಯಿತರಾದ ಬಳಿಕ ನಿಮ್ಮ ಸಂಸದರು ನಮ್ಮನ್ನೇ ಗುರುತು ಹಿಡಿಯಲ್ಲ. ಅವರ ಬಳಿ ಯಾವುದಾದರೂ ಅನುದಾನ ಕೇಳಲು ಹೋದ್ರೇ ಏ ಯಾರಪ್ಪ ನೀನು..? ಹೋಗು ಹೋಗು ಇಲ್ಲಿಗ್ಯಾಕೆ ಬಂದೆ ಎಂದು ಗದರಿಸಿ ಕಳುಹಿಸುತ್ತಾರೆ..? ಬೈತಾರೆ.

ಅವರಾಡೋ ಮಾತು ನಮ್ಮನ್ನು ಮಾನಸಿಕ ಮಾಡುತ್ತೆ. ಮಂಡಲದ ಪ್ರಧಾನ ಕಾರ್ಯದರ್ಶಿಯನ್ನೇ ಗುರುತಿಸಲ್ಲ ಅಂದ್ಮೇಲೆ ಇನ್ನೇನು ಹೇಳ್ಬೇಕ್ ಗೊತ್ತಿಲ್ಲ. ನೀವು ಸಹ ಇದೀಗ ರಾಜ್ಯದವರು ಸೂಚನೆ ಕೊಟ್ಟಿದ್ದಾರೆ ಅಂತ ನಮ್ಮನ್ನು ಕರೆದು ಸಮಾಧಾನ ಮಾಡಲು ಮುಂದಾಗಿದ್ದೀರಿ. ಚುನಾವಣೆ ಮುಗಿದ ಬಳಿಕ ಮತ್ತದೇ ಹಳೆ ಚಾಳಿ ಮುಂದುವರೆಸುತ್ತೀರಿ’ ಎಂದು ಮಂಡಲಗಳ ಪ್ರಮುಖರು ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಭೆ ಆಯೋಜಿಸಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !