ಯುವತಿಗೆ ಬ್ಲ್ಯಾಕ್‌ಮೇಲ್; ಫೇಸ್‌ಬುಕ್ ಸ್ನೇಹಿತ ಬಂಧನ

7
ದೂರು ದಾಖಲಾದ ಎಂಟು ತಿಂಗಳ ಬಳಿಕ ಆರೋಪಿ ಸೆರೆ

ಯುವತಿಗೆ ಬ್ಲ್ಯಾಕ್‌ಮೇಲ್; ಫೇಸ್‌ಬುಕ್ ಸ್ನೇಹಿತ ಬಂಧನ

Published:
Updated:
Deccan Herald

ಬೆಂಗಳೂರು: ಫೇಸ್‌ಬುಕ್ ಮೂಲಕ ಪರಿಚಯವಾಗಿ ಯುವತಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದಡಿ ಮುಂಬೈನ ನಯನ್ ಜೈ ಕಿಶನ್ ತಿಲ್ವಾನಿ (30) ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ, ಆರೋಪಿ ವಿರುದ್ಧ ಫೆಬ್ರುವರಿಯಲ್ಲಿ ದೂರು ಕೊಟ್ಟಿದ್ದರು. ಅಂದಿನಿಂದಲೇ ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಭಾನುವಾರ ಮುಂಬೈಗೆ ಹೋಗಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ನಾಲ್ಕು ವರ್ಷಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ. ಆ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದರು.

‘ದೂರುದಾರ ಯುವತಿ, ಈ ಹಿಂದೆ ಕೊಲ್ಕತ್ತದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲೇ ಆರೋಪಿ ಸಹ ಕೆಲಸಕ್ಕಿದ್ದ. ಆದರೆ, ಅವರಿಬ್ಬರಿಗೂ ಅಷ್ಟೇನೂ ಪರಿಚಯವಿರಲಿಲ್ಲ. ಅಲ್ಲಿ ಕೆಲಸ ಬಿಟ್ಟಿದ್ದ ಯುವತಿ, ಬೆಂಗಳೂರಿಗೆ ಬಂದಿದ್ದರು. ಅವಾಗಲೇ ಆರೋಪಿ, ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಅದನ್ನು ಸ್ವೀಕರಿಸಿದ್ದ ಯುವತಿ, ಆತನೊಂದಿಗೆ ಮಾತನಾಡಲು ಆರಂಭಿಸಿದ್ದರು. ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು’.

‘ಯುವತಿಯ ವೈಯಕ್ತಿಕ ಹಾಗೂ ಕುಟುಂಬದ ಮಾಹಿತಿ ತಿಳಿದುಕೊಂಡಿದ್ದ ಆರೋಪಿ, ಅವರೆಲ್ಲ ಫೋಟೊಗಳನ್ನು ಸಂಗ್ರಹಿಸಿದ್ದ. ತದನಂತರ, ಪ್ರೀತಿಸುವಂತೆ ಒತ್ತಾಯಿಸಲು ಆರಂಭಿಸಿದ್ದ. ‘ಪ್ರೀತಿಸದಿದ್ದರೆ, ನಿನ್ನ ಫೋಟೊಗಳನ್ನು ಅಸಭ್ಯವಾಗಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಮರ್ಯಾದೆ ಕಳೆಯುತ್ತೇನೆ’ ಎಂದು ಬೆದರಿಕೆ ಹಾಕಲಾರಂಭಿಸಿದ್ದ. ದೂರುದಾರರ ಕುಟುಂಬದ ಸದಸ್ಯರಿಗೂ ಕರೆಮಾಡಿ ಕಿರುಕುಳ ನೀಡಿದ್ದ. ನೊಂದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಅಧಿಕಾರಿ ವಿವರಿಸಿದರು.

ಮಾತುಕತೆಗೆ ಆ್ಯಪ್: ‘ಯುವತಿ ಜೊತೆಗೆ ಮಾತುಕತೆ ನಡೆಸಲು ಆರೋಪಿ, ಆ್ಯಪ್‌ವೊಂದನ್ನು ಬಳಸುತ್ತಿದ್ದ. ಅದನ್ನು ಯುವತಿಯ ಮೊಬೈಲ್‌ನಲ್ಲೂ ಇನ್‌ಸ್ಟಾಲ್‌ ಮಾಡಿಸಿದ್ದ. ಅದರ ಮೂಲಕವೇ ಸಂದೇಶಗಳನ್ನೂ ಕಳುಹಿಸಿ ಯುವತಿಗೆ ಕಿರುಕುಳ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !