ಭಾನುವಾರ, ಆಗಸ್ಟ್ 18, 2019
21 °C

ಮಳೆಗಾಲಕ್ಕೂ ಫೇಸ್‌ಪ್ಯಾಕ್‌

Published:
Updated:
Prajavani

ಮಳೆಗಾಲದಲ್ಲಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ಒಂದು ಸವಾಲು. ತ್ವಚೆ ಶುಷ್ಕವಾಗುವುದು, ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುವುದು, ನೀರು ತಾಕಿ ಅಲರ್ಜಿಯಾಗುವುದು ಸಾಮಾನ್ಯ. ಅನೇಕರು ಮಳೆಗಾಲದಲ್ಲಿ ತ್ವಚೆಯ ಸೌಂದರ್ಯಕ್ಕೆ ಒತ್ತು ನೀಡುವುದು ಕಡಿಮೆ. ಬ್ಯೂಟಿಪಾರ್ಲರ್‌ಗೆ ಹೋಗುವುದಕ್ಕೂ ಉದಾಸೀನ ಮಾಡುವ ಕಾಲ ಮಳೆಗಾಲ.

ಆದರೆ ಮನೆಯಲ್ಲಿಯೇ ಸಿಗುವ ಕೆಲ ವಸ್ತುಗಳು ಹಾಗೂ ಹಣ್ಣುಗಳಿಂದ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳುವುದರಿಂದ ಮಳೆಗಾಲದಲ್ಲೂ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ಜೊತೆಗೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಅಂತಹ ಕೆಲವು ಫೇಸ್ ಪ್ಯಾಕ್‌ಗಳನ್ನು ಇಲ್ಲಿ ತಿಳಿಸಲಾಗಿದೆ.

ಫ್ರೆಶ್ ಪ್ರೂಟ್ ಮಾಸ್ಕ್‌

ಹಣ್ಣುಗಳನ್ನು ತಿನ್ನುವುದರಿಂದ ಚರ್ಮದ ಕಳೆ ಹೆಚ್ಚುವ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ವಿವಿಧ ಹಣ್ಣುಗಳಿಂದ ತಯಾರಿಸಿದ ಫೇಸ್‌ಪ್ಯಾಕ್ ಮುಖದ ಹೊಳಪನ್ನು ಹೆಚ್ಚಿಸಿ, ಅಂದವನ್ನು ಕಾಪಾಡುತ್ತದೆ ಎಂದರೆ ನಂಬಲೇಬೇಕು. ಬಾಳೆಹಣ್ಣು, ಸೇಬು, ಸ್ಟ್ರಾಬೆರಿ, ಪೀಚ್‌ನಂತಹ ತಾಜಾ ಹಣ್ಣುಗಳನ್ನು ಸೇರಿಸಿ ಫೇಸ್‌ ಪ್ಯಾಕ್ ತಯಾರಿಸಿ.

ಪ್ಯಾಕ್ ತಯಾರಿಸುವುದು: ಒಂದು ಜ್ಯೂಸರ್‌ನಲ್ಲಿ ಹಣ್ಣುಗಳನ್ನೆಲ್ಲಾ ಸೇರಿಸಿ ರುಬ್ಬಬೇಕು. ರುಬ್ಬಿದ ಹಣ್ಣಿನ ಮಿಶ್ರಣಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡೀ ಮುಖಕ್ಕೆ ಹಚ್ಚಬೇಕು. ಇದನ್ನು 20 ನಿಮಿಷಗಳ ಕಾಲ ಒಣಗಿಸಬೇಕು. ನಂತರ ತೊಳೆದರೆ ನೀವು ಊಹಿಸದ ರೀತಿಯಲ್ಲಿ ನಿಮ್ಮ ಮುಖ ಹೊಳೆಯುತ್ತದೆ.

ಸೇಬು ಹಾಗೂ ಕ್ಯಾಮೊಮೈಲ್‌ ಪ್ಯಾಕ್‌

ಸೇಬುಹಣ್ಣಿನ ಫೇಸ್‌ಪ್ಯಾಕ್ ಮುಖವನ್ನು ಸದಾ ಆಕರ್ಷಕವಾಗಿಡುತ್ತದೆ. ಸೇಬುಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ ಅದರ ತಿರುಳು ಚರ್ಮ ಹೊಳೆಯುವಂತೆ ಮಾಡಲು ಸಹಕಾರಿ. 
ಮಳೆಗಾಲದಲ್ಲಿ ಸೇಬುಹಣ್ಣಿನ ಫೇಸ್‌ಪ್ಯಾಕ್‌ ಅನ್ನು ವಾರಕ್ಕೆ 3 ಬಾರಿಯಾದರೂ ಹಚ್ಚುವುದರಿಂದ ಮುಖದ ಅಂದ ಹೆಚ್ಚುತ್ತದೆ.

ಪ್ಯಾಕ್ ತಯಾರಿಸುವುದು: ಸೇಬುಹಣ್ಣನ್ನು ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಅದಕ್ಕೆ ಹಾಲು ಸೇರಿಸಿ ನಂತರ ಅದಕ್ಕೆ ಕೆಲ ಹನಿ ಕ್ಯಾಮೊಮೈಲ್‌ ಸೇರಿಸಿ ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚಿ, ಸ್ವಚ್ಛವಾಗುತ್ತದೆ.

ಪಪ್ಪಾಯ ಹಾಗೂ ಓಟ್ಸ್ ಫೇಸ್ ಫ್ಯಾಕ್‌

ಚರ್ಮದ ಕಾಂತಿ ಹೆಚ್ಚಲು ಪಪ್ಪಾಯ ತುಂಬಾನೇ ಸಹಕಾರಿ. ಬ್ಲ್ಯಾಕ್‌ಹೆಡ್‌, ಮೊಡವೆಯನ್ನು ಕೂಡ ಇದು ದೂರ ಮಾಡುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಚರ್ಮವನ್ನು ಸದಾ ಕಾಂತಿಯುವಾಗಿರಿಸುತ್ತದೆ.

ಪ್ಯಾಕ್ ಹೀಗೆ ತಯಾರಿಸಿ: 1/2 ಕಪ್ ಪಪ್ಪಾಯ ಹಣ್ಣಿನ ತಿರುಳಿಗೆ ಒಂದು ಚಮಚ ಓಟ್ಸ್ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲೆಸಿ. ನಂತರ ತಣ್ಣೀರಿನಲ್ಲಿ ಮುಖ ತೊಳೆದು ಒಣಗಿಸಿ. ಒಣಗಿದ ಮುಖಕ್ಕೆ ಪೇಸ್ಟ್ ಹಚ್ಚಿ. 1/2 ಗಂಟೆ ಬಿಟ್ಟು ಮುಖ ತೊಳೆದರೆ ನಿಮ್ಮ ಮುಖ ಶುಭ್ರವಾಗಿ ಹೊಳೆಯುತ್ತದೆ.

ಬೆಣ್ಣೆ ಹಣ್ಣು ಹಾಗೂ ಜೇನುತುಪ್ಪ

ಬೆಣ್ಣೆ ಅಥವಾ ಅವಕಾಡೋ ಚರ್ಮದ ರಕ್ಷಣೆಯೊಂದಿಗೆ ಕೂದಲಿನ ರಕ್ಷಣೆಯನ್ನು ಮಾಡುತ್ತದೆ. ಇದು ಚರ್ಮ ಸುಕ್ಕಾದಂತೆ ತಡೆಯುತ್ತದೆ. ಜೊತೆಗೆ ಶುಷ್ಕ ತ್ವಚೆಯನ್ನು ನಿವಾರಿಸುತ್ತದೆ.

ಪ್ಯಾಕ್ ತಯಾರಿಸುವುದು: ಬೆಣ್ಣೆಹಣ್ಣಿನ ತಿರುಳಿನೊಂದಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ನುಣ್ಣನೆಯ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು 2 ದಿನಕ್ಕೊಮ್ಮೆ ಮಾಡಿದರೆ 15 ದಿನಗಳಲ್ಲಿ ಫಲಿತಾಂಶ ಗುರುತಿಸುತ್ತೀರಿ.

ಜೇನುತುಪ್ಪ ಹಾಗೂ ನಿಂಬೆಹಣ್ಣು: ಎರಡು ಚಮಚ ಜೇನುತುಪ್ಪಕ್ಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಬೇಕು. ಇದರಿಂದ ಮುಖವನ್ನು ಬ್ಲ್ಯಾಕ್‌ಹೆಡ್‌ಗಳಿಂದ ದೂರ ಮಾಡುವ ಜೊತೆಗೆ ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.

Post Comments (+)