‘ಪಾಕ್ ವಿರುದ್ಧ ಸಿಖ್ ರೆಜಿಮೆಂಟ್ ಹೋರಾಡದು’: ಇದು ಸುಳ್ಳು, ಸೇನೆಯ ಸ್ಪಷ್ಟನೆ

ಶನಿವಾರ, ಮಾರ್ಚ್ 23, 2019
31 °C

‘ಪಾಕ್ ವಿರುದ್ಧ ಸಿಖ್ ರೆಜಿಮೆಂಟ್ ಹೋರಾಡದು’: ಇದು ಸುಳ್ಳು, ಸೇನೆಯ ಸ್ಪಷ್ಟನೆ

Published:
Updated:

ಬೆಂಗಳೂರು: ಬಾಲಾಕೋಟ್ ದಾಳಿಯ ನಂತರ ಭಾರತ ಮತ್ತು ಪಾಕ್ ನಡುವಣ ಸಂಬಂಧ ಬಿಗಡಾಯಿಸಿದೆ. ಗಡಿಯಲ್ಲಿ ಗುಂಡಿನ ಚಕಮಕಿಯ ಜೊತೆಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿಯ ಹರಿದಾಟವೂ ಜೋರಾಗಿದೆ. ಪಾಕಿಸ್ತಾನದ ಸುದ್ದಿ ಚಾನೆಲ್‌ ಪ್ರಕಟಿಸಿದ್ದ ಸುಳ್ಳು ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೆಸರಿನಲ್ಲಿ ಚಾಲ್ತಿಗೆ ಬಂದಿರುವ ಫೇಕ್ ಅಕೌಂಟ್‌ಗಳ ಬಗ್ಗೆ ಭಾರತೀಯ ಸೇನೆ ಮತ್ತು ವಾಯುಪಡೆ ಸ್ಪಷ್ಟನೆ ನೀಡಿವೆ.

ಸಿಖ್ ರೆಜಿಮೆಂಟ್‌ನ ಬದ್ಧತೆ ಪ್ರಶ್ನಿಸಬೇಡಿ

‘ಸೇನೆಯ ಸಿಖ್ ರೆಜಿಮೆಂಟ್ ಭಾರತದ ಪರವಾಗಿ ಹೋರಾಡಲು ನಿರಾಕರಿಸಿದೆ’ ಎಂದು ಪಾಕಿಸ್ತಾನದ ಸುದ್ದಿ ಚಾನೆಲ್ ‘ಅಬ್‌ತಕ್’ ಮಾರ್ಚ್ 5ರಂದು ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ಹಲವರು ವಾಟ್ಸ್ಯಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಭಾರತೀಯ ಸೇನೆಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ಇದು ಸುಳ್ಳುಸುದ್ದಿ’ ಎಂದು ಹೇಳಿದೆ.

ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರು @adgpi ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಈ ಕುರಿತು ಗುರುವಾರ ಸ್ಪಷ್ಟನೆ ನೀಡಿದ್ದಾರೆ.

‘ಭಯೋತ್ಪಾದಕರನ್ನು ಬೆಂಬಲಿಸುವವರಿಂದ ಸುಳ್ಳು ಮತ್ತು ಸಶಸ್ತ್ರಪಡೆಗಳ ಬಗ್ಗೆ ಅವಹೇಳನಕಾರಿ ಸುದ್ದಿಗಳು ಬರುತ್ತಿವೆ. ಭಾರತೀಯ ಸೇನೆಯ ವಿರುದ್ಧ ನಡೆಯುತ್ತಿರುವ ಸುಳ್ಳು ಸುದ್ದಿಯ ಆಂದೋಲನಕ್ಕೆ ಕಡಿವಾಣ ಹಾಕಿ. ಭಯೋತ್ಪಾದಕರ ಬೆಂಬಲಿಗರು ಹರಡುವ ಅವಹೇಳನಕಾರಿ ಸುದ್ದಿಗಳನ್ನು ನಂಬಬೇಡಿ’ ಎಂದು ಹೇಳಿರುವ ಭೂಸೇನೆ ಫೇಕ್ ಸುದ್ದಿ ಹೊತ್ತ ಟ್ವೀಟ್‌ನ ಮಾದರಿಯೊಂದನ್ನು ಪ್ರಕಟಿಸಿದೆ.

ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದದ್ದೇನು?

ಸಿಖ್ ರೆಜಿಮೆಂಟ್ ಕುರಿತ ಸುದ್ದಿಯನ್ನು ಮಾರ್ಚ್ 5ರಂದು ಪಾಕಿಸ್ತಾನದ ‘ಅಬ್‌ತಕ್‌’ ನ್ಯೂಸ್ ಚಾನೆಲ್ ಪ್ರಸಾರ ಮಾಡಿತ್ತು. ‘ಅಬ್‌ತಕ್’ ತನ್ನ ಸುದ್ದಿಯಲ್ಲಿ ಗುರ್ಮೀತ್ ಕೌರ್ @GurmeetKaur2020 ಟ್ವೀಟ್ ಕುರಿತು ಉಲ್ಲೇಖಿಸಿತ್ತು. ಭಾರತದ ನ್ಯೂಸ್ ಚಾನೆಲ್ ‘ರಿಪಬ್ಲಿಕ್ ಟಿವಿ’ ಸಿಖ್ ರೆಜಿಮೆಂಟ್ ಬಗ್ಗೆ ಹೀಗೆ ಹೇಳಿದೆ ಎಂದು ಗುರ್ಮೀತ್ ಕೌರ್ ಟ್ವೀಟ್ ಮಾಡಿದ್ದರು.

ಸಿಖ್ ರೆಜಿಮೆಂಟ್‌ ಕುರಿತ ಟ್ವೀಟ್ ವೈರಲ್ ಆದ ನಂತರ ‘ಬೂಮ್‌ಲೈವ್’ ಜಾಲತಾಣ ಫ್ಯಾಕ್ಟ್‌ಚೆಕ್ ಮಾಡಿತು. ಸ್ಕ್ರೀನ್‌ಶಾಟ್‌ನಲ್ಲಿದ್ದ ಸಮಯ 4.49 ತೋರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿವಿಯ ಮಾರ್ಚ್ 3 ಅಥವಾ 4ರ ಕಾರ್ಯಕ್ರಮಗಳನ್ನು ಪರಿಶೀಲಿಸಿದಾಗ ಆ ಎರಡೂ ದಿನಗಳಂದು 4.49ರ ಸಮಯದಲ್ಲಿ ಇಂಥ ಯಾವುದೇ ಸುದ್ದಿಯನ್ನು ಆ ಚಾನೆಲ್ ಪ್ರಸಾರ ಮಾಡಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂತು.

ರಿಪಬ್ಲಿಕ್ ಟಿವಿಯ ಕನ್ಸಲ್‌ಟಿಂಗ್ ಎಡಿಟರ್ ಮೇಜರ್ ಜನರಲ್ ಗೌರವ್ ಆರ್ಯ (ನಿವೃತ್ತ) @majorgauravarya ‘ಇದು ಫೇಕ್ ಸ್ಕ್ರೀನ್‌ಶಾಟ್’ ಎಂದು ಟ್ವಿಟರ್‌ನಲ್ಲಿ ಘೋಷಿಸಿದರು. ‘ಪಾಕ್ ಮಾಧ್ಯಮಗಳ ಈ ಪ್ರಚಾರಕ್ಕೆ ಭಾರತೀಯರು ಬಲಿಯಾಗುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದರು. ಸಿಖ್ಖರ ಬಗ್ಗೆ ಅಷ್ಟೊಂದು ಪ್ರೀತಿಯೇಕೆ? 1971ರ ಯುದ್ಧದಲ್ಲಿ ಪಾಕ್ ಸೇನೆಗೆ ಸಿಖ್ ರೆಜಿಮೆಂಟ್ ಎಂಥ ಏಟು ಕೊಟ್ಟಿತ್ತು ಎಂದು ಒಮ್ಮೆ ಕೇಳಿ’ ಎಂದು ಸವಾಲು ಹಾಕಿದ್ದರು.

ಈ ಬೆಳವಣಿಗೆಯ ನಂತರ ಪಾಕಿಸ್ತಾನದ ‘ಅಬ್‌ತಕ್’ ಟೀವಿಯ ಜಾಲತಾಣದಲ್ಲಿ ಸಿಖ್ ರೆಜಿಮೆಂಟ್ ಕುರಿತ ವರದಿಯನ್ನು ಡಿಲೀಟ್ ಮಾಡಲಾಯಿತು. ಮಾರ್ಚ್‌ 6ರಂದು ರಾತ್ರಿ 9.08ಕ್ಕೆ ಭಾರತೀಯ ಸೇನೆಯ ‘ಇದು ಸುಳ್ಳು ಸುದ್ದಿ, ನಂಬಬೇಡಿ’ ಎಂದು ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ನಲ್ಲಿ ಸ್ಪಷ್ಟನೆ ಪ್ರಕಟಿಸಿತು.

ಅಭಿನಂದನ್ ಅಕೌಂಟ್ ಯಾವುದೂ ಇಲ್ಲ

ಪಾಕಿಸ್ತಾನದ ಎಫ್–16 ಯುದ್ಧವಿಮಾನ ಹೊಡೆದುರುಳಿಸಿದ ಬಳಿಕ ಪಾಕ್‌ಗೆ ಸೆರೆ ಸಿಕ್ಕಿದ್ದ ವಾಯುಪಡೆಯ ಯುದ್ಧವಿಮಾನದ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮ ಅಕೌಂಟ್ ಹೊಂದಿಲ್ಲ. ಆದರೆ ಅವರ ಹೆಸರಿನಲ್ಲಿ ಸಾಕಷ್ಟು ಫೇಕ್ ಖಾತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.

ಈ ಕುರಿತು ‘ಪ್ರಜಾವಾಣಿ’ಯಲ್ಲಿ ಮಾರ್ಚ್ 2ರಂದು ‘ಪಾಕಿಸ್ತಾನದ ಪರವಾಗಿ ಯುದ್ಧ ಮಾಡುವೆ’–ಇದು ಪೈಲಟ್‌ ಅಭಿನಂದನ್‌ ಹೆಸರಿನ ನಕಲಿ ಖಾತೆ  ಶೀರ್ಷಿಕೆಯ ಸುದ್ದಿ ಪ್ರಕಟವಾಗಿತ್ತು. ಇದೀಗ ಭಾರತೀಯ ವಾಯುಸೇನೆಯ ಮಾಧ್ಯಮ ಸಂಯೋಜನಾ ಘಟಕ @IAF_MCC ಈ ಕುರಿತು ಸ್ಪಷ್ಟನೆ ನೀಡಿದೆ.

‘ವಿಂಗ್‌ ಕಮಾಂಡರ್ ಅಭಿನಂದನ್ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಹೊಂದಿಲ್ಲ. ಅವರ ಹೆಸರಿನಲ್ಲಿ ಭಾರತೀಯ ವಾಯುಪಡೆಯ ಬಗ್ಗೆ ಸುಳ್ಳು ಸುದ್ದಿ ಹರಡುವ ಖಾತೆಗಳನ್ನು ಫಾಲೊ ಮಾಡಬೇಡಿ’ ಎಂದು ವಿನಂತಿಸಿದೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !