ಭಾನುವಾರ, ಮೇ 29, 2022
31 °C

ಹಾಲು ಮಾರುವಾತ 800 ಮಕ್ಕಳ ತಂದೆಯಾಗಿದ್ದನೇ? ಸತ್ಯ ಸುದ್ದಿ ಏನು?

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ವೈರಲ್ ಆದ ವಿಷಯ ಏನು?
ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರನೊಬ್ಬ 1951-1964ರ ನಡುವೆ 800 ಮಕ್ಕಳನ್ನು ಹುಟ್ಟಿಸಿದ್ದಾನೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲದೆ, ಕೆಲವೊಂದು ಮಾಧ್ಯಮ ಸಂಸ್ಥೆಗಳ ಜಾಲತಾಣಗಳಲ್ಲಿಯೂ ಕಳೆದೊಂದು ವಾರದಿಂದ ವೈರಲ್ ಆಗಿದೆ.

13 ವರ್ಷಗಳಲ್ಲಿ ಒಬ್ಬ ವ್ಯಕ್ತಿಯು 800 ಮಕ್ಕಳಿಗೆ ಅಪ್ಪನಾಗುವುದು ಜೈವಿಕವಾಗಿ ಸಾಧ್ಯವೇ ಎಂಬ ಸಂದೇಹ ಬಂದ ಹಿನ್ನೆಲೆಯಲ್ಲಿ ಸತ್ಯಾಂಶ ಅರಿಯಲು ಪ್ರಜಾವಾಣಿ ಮುಂದಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಸುದ್ದಿ

ಸುದ್ದಿಯ ಸಾರಾಂಶವೇನೆಂದರೆ, ದಕ್ಷಿಣ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರ ರ‍್ಯಾಂಡಲ್ (ರ‍್ಯಾಂಡಿ) ಜೆಫ್ರೀಸ್ (Randall Jeffries) ಎಂಬಾತ, ಸ್ಯಾನ್ ಡೀಗೋ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆ ಹಾಲು ಮಾರುತ್ತಿದ್ದ. ಆ ಕಾಲದಲ್ಲಿ ಪ್ಯಾಕೆಟ್ ಹಾಲು ಇರಲಿಲ್ಲ, ಹೀಗಾಗಿ ಈತನೇ ವಿತರಿಸುತ್ತಿದ್ದ. ಆತ ಸುಂದರನಾಗಿದ್ದ. ಸ್ಥಳೀಯ ಗೃಹಿಣಿಯರು ಈತನಿಂದ ಆಕರ್ಷಿತರಾಗಿದ್ದರು. ಅನೈತಿಕ ಸಂಬಂಧ ಏರ್ಪಡುತ್ತಿತ್ತು. ಆ ಕಾಲದಲ್ಲಿ ಇವನ್ನೆಲ್ಲ ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ. ತಂತ್ರಜ್ಞಾನವೂ ಇರಲಿಲ್ಲ ಎಂದೆಲ್ಲಾ ಸುದ್ದಿಯಲ್ಲಿ ವಿವರಿಸಲಾಗಿತ್ತು.

ಹೀಗಾಗಿ, ಆ ಪ್ರದೇಶದಲ್ಲಿ ಕೆಲವರ ಹುಟ್ಟಿನ ಬಗ್ಗೆ ಸಂದೇಹವಿದ್ದಿದ್ದರಿಂದ, ಇತ್ತೀಚೆಗೆ 97ರ ಹರೆಯದ ರ‍್ಯಾಂಡಲ್‌ನನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ನೂರಾರು ಪರೀಕ್ಷೆಗಳ ಬಳಿಕ ಈತ 800ಕ್ಕೂ ಹೆಚ್ಚು ಮಕ್ಕಳಿಗೆ ತಂದೆ ಎಂಬುದು ದೃಢಪಟ್ಟಿತ್ತು ಎಂದು ಸುದ್ದಿಯಲ್ಲಿ ವಿವರಿಸಲಾಗಿತ್ತು.

ಅಷ್ಟೇ ಅಲ್ಲ. ರ‍್ಯಾಂಡಲ್ ಹೇಳಿಕೆಯೂ ಇತ್ತು! "ನಾನು ನಿರ್ವೀರ್ಯನೆಂದೇ ಇದುವರೆಗೂ ತಿಳಿದಿದ್ದೆ. ನನಗೆ ಮತ್ತು ಪತ್ನಿಗೆ ಯಾವುದೇ ಮಕ್ಕಳು ಹುಟ್ಟಿಲ್ಲ. ಆದರೀಗ 97ರ ಹರೆಯದಲ್ಲಿ ಈ ಸುದ್ದಿ ಕೇಳಿದ್ದು ಎಷ್ಟೊಳ್ಳೆ ಸಂಗತಿ! ಈಗ ನಾನು ಪರಿಪೂರ್ಣನಾಗಿದ್ದೇನೆ. ಎಲ್ಲ ಮಕ್ಕಳನ್ನೂ ಒಮ್ಮೆ ಭೇಟಿಯಾಗಬೇಕೆಂಬಾಸೆಯಾಗಿದೆ" ಎಂಬ ಹೇಳಿಕೆಯೂ ಡೈಲಿ ನ್ಯೂಸ್ ಹೆಸರಿನಲ್ಲಿ ಪ್ರಕಟವಾಗಿದ್ದ ಸುದ್ದಿಯಲ್ಲಿತ್ತು.

ಫೋಟೋದ ಅಸಲಿಯತ್ತು
ಜೊತೆಗೆ, ಈ ಸುದ್ದಿಯೊಂದಿಗೆ ಬಳಸಿದ ಚಿತ್ರವನ್ನೂ ಗೂಗಲ್‌ನ ರಿವರ್ಸ್ ಇಮೇಜ್ ಸರ್ಚ್ (ಚಿತ್ರಗಳನ್ನು ಅಪ್ಲೋಡ್ ಅಥವಾ ಯುಆರ್‌ಎಲ್ ಪೇಸ್ಟ್ ಮಾಡಿ, ಅಂಥದ್ದೇ ಚಿತ್ರ ಎಲ್ಲೆಲ್ಲ ಬಳಕೆಯಾಗಿದೆ ಎಂಬು ತಿಳಿಯುವ) ವಿಧಾನ ಬಳಸಿ ಹುಡುಕಾಟ ನಡೆಸಲಾಯಿತು.

ಆಗ, ಪೂರ್ಣ ಗುಣಮಟ್ಟದ (ಗರಿಷ್ಠ ರೆಸೊಲ್ಯುಶನ್ ಇರುವ) ಚಿತ್ರವು ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿರುವ ಚಿತ್ರಗಳ ಸಂಗ್ರಹಾಗಾರವಾಗಿರುವ ವೆಬ್ ಸೈಟೊಂದರಲ್ಲಿ ಲಭ್ಯವಾಯಿತು. ಇವುಗಳನ್ನು ಸ್ಟಾಕ್ ಇಮೇಜಸ್ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿ ರೀತಿಯ ಸ್ಟಾಕ್ ಚಿತ್ರಗಳನ್ನು ಯಾರು ಕೂಡ ಬಳಸಬಹುದಾಗಿದೆ. ಹೀಗಾಗಿ ಈ ಸುದ್ದಿಯಲ್ಲಿರುವ ಫೋಟೋ ವಿಶ್ವಾಸಾರ್ಹವಲ್ಲ ಎಂಬ ಸಂದೇಹ ಬಲವಾಯಿತು. ಇಲ್ಲಿದೆ ಫೋಟೋ

ಪತ್ತೆ ಮಾಡಿದ್ದು ಹೇಗೆ?
ಈ ಸುದ್ದಿಯ ಬೆಂಬತ್ತಿದ ಪ್ರಜಾವಾಣಿಯು ಸತ್ಯಾಂಶ ಕಂಡುಹುಡುಕುವ ನಿಟ್ಟಿನಲ್ಲಿ ಗೂಗಲ್‌ನಲ್ಲಿ ಈ ಸುದ್ದಿಗೆ ಸಂಬಂಧಿಸಿದ ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಶೋಧ ನಡೆಸಿತು. ಸಾಕಷ್ಟು ಜಾಲತಾಣಗಳಲ್ಲಿ ಈ ಸುದ್ದಿ ಪ್ರಕಟವಾಗಿರುವ ಕಳೆದ ಒಂದು ವಾರದ ಲಿಂಕುಗಳು ಭರಪೂರವಾಗಿ ಕಂಡುಬಂದವು. ಡಿಸೆಂಬರ್ ತಿಂಗಳಿಂದಲೇ ಈ ರೀತಿಯಲ್ಲಿ ಸಾಕಷ್ಟು ಪೋಸ್ಟುಗಳು ಹರಿದಾಡಿದ್ದವು. ಆದರೆ, ಯಾವುದೇ ಪ್ರಮುಖ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳ ಜಾಲತಾಣಗಳಲ್ಲಿ ಈ ಸುದ್ದಿಯೇ ಇಲ್ಲ ಎಂಬುದೂ ನಮ್ಮ ಶಂಕೆಗೆ ಪುಷ್ಟಿ ನೀಡಿತ್ತು.

ಲಭ್ಯವಾದ ಹಲವಾರು ಲಿಂಕುಗಳನ್ನು, ಜಾಲತಾಣಗಳನ್ನು ಓದಿ ಪರಿಶೀಲಿಸಲಾಯಿತು. ಇತ್ತೀಚಿನ ಸುದ್ದಿಗಳನ್ನು ಬಿಟ್ಟು, ಇದನ್ನು ಮೊದಲು ಪ್ರಕಟಿಸಿದ, ಅಥವಾ ತೀರಾ ಹಳೆಯ ಸುದ್ದಿ ಇದೆಯೇ ಎಂದು ಹುಡುಕಾಡಿದಾಗ ಈ ಸುದ್ದಿ ಕಂಡುಬಂದಿತು.

ಇಲ್ಲಿ ಓದಿ..

ಈ ಸುದ್ದಿ 2021ರ ಡಿಸೆಂಬರ್ 24ರಂದು ಪ್ರಕಟವಾಗಿತ್ತು. ಈ ಜಾಲತಾಣವನ್ನು ಸರಿಯಾಗಿ ಪರಿಶೀಲಿಸಿದಾಗ ವಿಷಯ ತಿಳಿಯಿತು. ಇದರ ಹೆಸರೇ ಡೈಲಿ ನ್ಯೂಸ್ ರಿಪೋರ್ಟೆಡ್ (ಇಂಗ್ಲಿಷ್ ಸುದ್ದಿಗಳಲ್ಲಿ ಸಾಮಾನ್ಯವಾಗಿ ಯಾವುದಾದರೂ ಸುದ್ದಿಯನ್ನು ಬೇರೆ ತಾಣಗಳಿಂದ ತೆಗೆದುಕೊಂಡರೆ Reported ಎಂದು ಬರೆಯುತ್ತಾರೆ. ಅದೇ ರೀತಿ ಇಲ್ಲಿಯೂ Daily News Reported ಅಂತಲೇ ಇತ್ತು.) ಇದೂ ಶಂಕೆಗೆ ಪುಷ್ಟಿ ನೀಡಿತು.

ಈ ಜಾಲತಾಣದ About Us ನೋಡಿದಾಗ, ವಿಷಯ ಖಚಿತವಾಯಿತು. ಇದು ಕಪೋಲಕಲ್ಪಿತ, ವಿಡಂಬನಾ ಸುದ್ದಿಗಳನ್ನೇ ಪ್ರಕಟಿಸುವ ಜಾಲತಾಣ ಎಂಬುದು ಗೊತ್ತಾಯಿತು. ಅವರೇ ಹೇಳಿಕೊಂಡಿದ್ದಾರೆ ಇದನ್ನು.


ಡೈಲಿನ್ಯೂಸ್ ರಿಪೋರ್ಟೆಡ್ ಹೆಸರುನ ಜಾಲತಾಣದಲ್ಲಿ ಅವರ ಬಗ್ಗೆ (About Us) ಪುಟ

ಹೀಗಾಗಿ, ವಿಡಂಬನೆಯ ಸುದ್ದಿಯನ್ನೇ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು ಮತ್ತು ಜನರೂ ಸೋಷಿಯಲ್ ಮೀಡಿಯಾಗಳಲ್ಲಿ ತಪ್ಪಾಗಿ ತಿಳಿದುಕೊಂಡೇ ನಕಲಿ ಸುದ್ದಿಯನ್ನು ನಿಜ ಸುದ್ದಿ ಎಂಬಂತೆ ಹಂಚಿಕೊಂಡಿದ್ದಾರೆ ಎಂಬುದು ತಿಳಿಯಿತು.

ತೀರ್ಪು
ಒಟ್ಟಾರೆಯಾಗಿ, ಕ್ಯಾಲಿಫೋರ್ನಿಯಾದಲ್ಲಿ ಹಾಲು ಮಾರುವವನೊಬ್ಬ 800ಕ್ಕೂ ಹೆಚ್ಚು ಮಕ್ಕಳಿಗೆ ಅಪ್ಪನಾಗಿದ್ದ ಎಂಬ ಸುದ್ದಿಯು ನಿಜವಲ್ಲ. ಅದೊಂದು ವಿಡಂಬನಾತ್ಮಕ ತಾಣದ ಕಾಲ್ಪನಿಕ ಸುದ್ದಿಯಷ್ಟೇ ಆಗಿದ್ದು, ಅವನ್ನೇ ಕೆಲವು ಜಾಲತಾಣಗಳು ನಿಜ ಸುದ್ದಿ ಎಂಬಂತೆ ಪ್ರಕಟಿಸಿವೆ ಎಂಬುದು ಖಚಿತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು