Fact Check: ಆಹಾರದ ಮೇಲೆ ಮುಸ್ಲಿಂ ಮೌಲ್ವಿ ಉಗುಳಿದರೇ?

ಸಾಮೂಹಿಕ ಭೋಜನಕ್ಕೆ ಸಿದ್ಧಪಡಿಸಲಾದ ಆಹಾರದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬರು ಉಗುಳುತ್ತಿದ್ದಾರೆ ಎಂದು ಹೇಳಲಾಗುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಳಿವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಅನ್ನದ ದೊಡ್ಡ ಪಾತ್ರೆಯ ಎದುರು ನಿಂತು, ತಟ್ಟೆಯೊಂದಕ್ಕೆ ಅನ್ನ ಬಡಿಸಿಕೊಂಡು ಅದನ್ನು ತಮ್ಮ ಬಾಯಿಯ ಬಳಿಗೆ ಒಯ್ದು ಏನನ್ನೋ ಮಾಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ನಂತರ, ತಟ್ಟೆಯಲ್ಲಿರುವ ಅನ್ನವನ್ನು ದೊಡ್ಡ ಪಾತ್ರೆಗೆ ಸುರಿಯಲಾಗುತ್ತದೆ. ‘ಅನ್ನಕ್ಕೆ ಈ ರೀತಿ ಉಗುಳುವುದರ ಹಿಂದಿನ ತರ್ಕವೇನು’ ಎಂದು ಟ್ವಿಟರ್ ಬಳಕೆದಾರ ಮೇಜರ್ ಸುರೇಂದ್ರ ಪೂನಿಯಾ ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೊವನ್ನು ನೂರಾರು ಜನರು ತಮ್ಮ ಫೇಸ್‌ಬುಕ್, ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಆರೋಪ ಸುಳ್ಳು.
ಕೇರಳದ ಮುಸ್ಲಿಂ ಮೌಲ್ವಿ ಉಲ್ಲಾಳ್ ಥಂಗಲ್ ಅವರು ಅನ್ನ ಸಂತರ್ಪಣೆಗೂ ಮುನ್ನ, ತಟ್ಟೆಯಲ್ಲಿ ಬಡಿಸಿಕೊಂಡ ಅನ್ನದ ಮೇಲೆ ಗಾಳಿಯನ್ನು ಊದಿ ದುವಾ ಸಲ್ಲಿಸಿ ಧಾರ್ಮಿಕ ಆಚರಣೆ ಪಾಲಿಸಿದ್ದಾರೆ. ಆದರೆ, ಮೌಲ್ವಿ ಅವರು ಅನ್ನಕ್ಕೆ ಉಗುಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ‘ದಿ ಲಾಜಿಕಲ್ ಇಂಡಿಯನ್’ ವೆಬ್‌ಸೈಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಈ ವಿಡಿಯೊ ಸಹ ಇತ್ತೀಚಿನದ್ದಲ್ಲ. 2021ರಲ್ಲೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತು. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹಲವು ವೆಬ್‌ಸೈಟ್‌ಗಳು ಫ್ಯಾಕ್ಟ್‌ಚೆಕ್ ಪ್ರಕಟಿಸಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.