'ಕರಾವಳಿ ಜನತೆ ಬುದ್ಧಿವಂತರಲ್ಲ' ಎಂದು ಎಚ್‍ಡಿಕೆ ಹೇಳಿದ್ದಾರಾ?ನಿಜ ಸಂಗತಿ ಇಲ್ಲಿದೆ

ಬುಧವಾರ, ಏಪ್ರಿಲ್ 24, 2019
27 °C

'ಕರಾವಳಿ ಜನತೆ ಬುದ್ಧಿವಂತರಲ್ಲ' ಎಂದು ಎಚ್‍ಡಿಕೆ ಹೇಳಿದ್ದಾರಾ?ನಿಜ ಸಂಗತಿ ಇಲ್ಲಿದೆ

Published:
Updated:

ಬೆಂಗಳೂರು: 'ಕರಾವಳಿ ಜನರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೀಳಾಗಿ ಮಾತನಾಡಿದ್ದಾರೆ'. 'ಉಡುಪಿ ಜಿಲ್ಲೆಯ ಜನರಿಗೆ ತಿಳುವಳಿಕೆ ಕಡಿಮೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬ ವಿಷಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪೋಸ್ಟ್ ಕಾರ್ಡ್ ಕನ್ನಡ ವೆಬ್‍ಪೋರ್ಟಲ್ ಕರಾವಳಿ ಜನರ ಬಗ್ಗೆ ಕೀಳಾಗಿ ಮಾತನಾಡಿದ ಕುಮಾರಸ್ವಾಮಿ ಅವರಿಗೆ ಕರಾವಳಿಯ ಯುವಕನಿಂದ ಬಹಿರಂಗ ಪತ್ರ! ಇನ್ನಾದರೂ ತಿಳುವಳಿಕೆಯಿಂದ ಮಾತನಾಡಿ ಮುಖ್ಯಮಂತ್ರಿಗಳೇ.. ಎಂಬ ಶೀರ್ಷಿಕೆಯೊಂದಿಗೆ ಪ್ರಸಾದ್ ಅಂಚನ್ ಎಂಬವರು ಬರೆದ ಪತ್ರವೊಂದನ್ನು ಪ್ರಕಟಿಸಿದೆ.

ಇದೇ ಪತ್ರ ನಮೋ ಕರುನಾಡು ಯುಟ್ಯೂಬ್ ಚಾನೆಲ್‍ನಲ್ಲಿಯೂ ಅಪ್‍ಲೋಡ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕರಾವಳಿಯ ನೆಟ್ಟಿಗರು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.

 

ಹೀಗಿರುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಸುಳ್ಳು ಹೇಳುವುದರಲ್ಲಿ, ಸತ್ಯವನ್ನು ತಿರುಚುವುದರಲ್ಲಿ #bjp ಮತ್ತು ಅವರ ಐಟಿಸೆಲ್ ಮೀರಿಸಲು ಯಾರಿಗೂ ಸಾಧ್ಯವಿಲ್ಲ.ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ನಾನು ಕರಾವಳಿಯ ಜನತೆ ಬುದ್ದಿವಂತರಲ್ಲ ಎಂದು ಹೇಳಿಲ್ಲ.ಶಿಕ್ಷಣದಲ್ಲಿ, ಬೌದ್ಧಿಕತೆಯಲ್ಲಿ ಕರಾವಳಿ ದೇಶಕ್ಕೇ ಮಾದರಿ. ಬಿಜೆಪಿ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಬಂದ ಪ್ರತಿಕ್ರಿಯೆಗಳಲ್ಲಿ ನೆಟ್ಟಿಗರು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಹಾಗಾದರೆ ಏನಿದು ವಿಷಯ? ಕರಾವಳಿ ಜನರು ಬುದ್ದಿವಂತರಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆಯೇ? ಈ ಬಗ್ಗೆ ಪ್ರಜಾವಾಣಿ ಫ್ಯಾಕ್ಟ್ ಚೆಕ್ ಮಾಡಿದೆ.

ನಿಜ ಸಂಗತಿ ಏನು?
ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ತೀರ್ಮಾನದ ಕುರಿತಂತೆ ಆ ಭಾಗದ ಮುಖಂಡರ ಅಭಿಪ್ರಾಯ ಆಲಿಸಲು ಪಕ್ಷದ ಕಚೇರಿಯಲ್ಲಿ ಕುಮಾರಸ್ವಾಮಿ ಸೋಮವಾರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅವರು ನಿಮ್ಮ ಜಿಲ್ಲೆಯ ಜನರ ಜತೆ ನೇರವಾಗಿ ಚರ್ಚೆ ಮಾಡಿ ಎಂದು ಕರಾವಳಿ ಭಾಗದ ಮುಖಂಡರಿಗೆ ಹೇಳಿದ್ದಾರೆ.

ಜೆಪಿ ಭವನದಲ್ಲಿ ಕುಮಾರಸ್ವಾಮಿ ಮಾತನಾಡಿರುವ ವಿಡಿಯೊ ಇಲ್ಲಿದೆ.

ಕುಮಾರಸ್ವಾಮಿ ಹೇಳಿದ್ದೇನು?
ಆವತ್ತು 12  ವರ್ಷಗಳ ಹಿಂದೆ ನೀರಾವರಿಯ ವಿಷಯದಲ್ಲಿ ನಾನು ಕಳಸ ಭಾಗವನ್ನು ಉಳಿಸಲು ಪ್ರಯತ್ನ ಪಟ್ಟಿದ್ದೇನೆ. ಇವತ್ತು ಕುಮಾರಣ್ಣ ಮೂಡಿಗೆರೆಗೆ ಕೊಟ್ಟಂಥಾ ಕೊಡುಗೆ ಏನಿದೆ ಕಳಸ ಭಾಗದ ಜನತೆಗೆ, ಕೆಲಸ ಮಾಡಿಸ್ಕೊಂಡು ನೀವು ಬಿಜೆಪಿಗೆ ಮತ ಕೊಟ್ಟರೆ ದೇವರು ಮೆಚ್ತಾನಾ ಅಂತ? ನೇರವಾಗಿ ಪ್ರಶ್ನೆ ಮಾಡಿ. ಅದರಲ್ಲಿ ಯಾವುದೂ ಹಿಂದೆ ಮುಂದೆ ನೋಡಬೇಕಾದ ಅವಶ್ಯಕತೆ ಇಲ್ಲ. ಬಹುಶಃ ಉಡುಪಿ, ಕಾಪು ಮತ್ತು ಬ್ರಹ್ಮಾವರ ಅಲ್ಲಿಂದ ನಿಮ್ಮ ಕಾರ್ಕಳ, ಕುಂದಾಪುರ ಈ ಒಂದು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಷಃ, ಜನ, ಜನತೆ ಈ ಬಾರಿ ಬಹುಮತ ಕೊಡುವಂತಾ ವಿಶ್ವಾಸವನ್ನು ನಾನು ಯಾಕೆ ಹೊಂದಿದ್ದೇನೆ ಅಂದರೆ ಕಳೆದ ಬಾರಿ ಬಿಜೆಪಿ ಕಡೆ ಇದ್ದಂಥಾ ಒಲವು ದಿನೇ ದಿನೇ ಇವತ್ತು ಕ್ಷೀಣಿಸುತ್ತಿದೆ. ನರೇಂದ್ರ ಮೋದಿಯ ಹೆಸರು ಬಿಟ್ಟು ಬೇರೇನೂ ಹೇಳಲು ಸಾಧ್ಯವಿಲ್ಲ.

ನರೇಂದ್ರ ಮೋದಿಯವರು ಈ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ನಾನು ದೇಶದ ಬಗ್ಗೆ ಚರ್ಚೆ ಮಾಡಲ್ಲ. ಈ ರಾಜ್ಯಕ್ಕೆ ಕೊಟ್ಟಂತ ಕೊಡುಗೆ ಏನು? ಈ ವಿಷಯಗಳನ್ನು ಇಟ್ಟುಕೊಂಡು ಜನತೆಯ ಮುಂದೆ ಹೋಗಬೇಕು.
ನನಗೆ ಆಶ್ಚರ್ಯವಾಗುತ್ತಿದೆ. ಕೆಲವು ಯಂಗ್‌ಸ್ಟರ್ಸ್ ಮಾಧ್ಯಮದಲ್ಲಿ ಇಂಟರ್ವ್ಯೂ ಮಾಡ್ತಾರೆ. ಪಾಪ ಅವರಿಗೆ ತಿಳುವಳಿಕೆ
ಇಲ್ಲ ಯಂಗ್‍‌ಸ್ಟರ್ಸ್‍ಗೆ. ಹೆಣ್ಣು ಮಕ್ಕಳು ಹೇಳ್ತಾರೆ ಇಲ್ಲ.. ಇಲ್ಲ.. ನಾವು ನಾವು ನರೇಂದ್ರ ಮೋದಿಗೆ ಕೊಡ್ತೀವಿ ಅಂತಾರೆ, ಬಿಜೆಪಿಗೆ ಅಲ್ಲ.
ಪಾಪ ಅವರಿಗೆ ಒಂದು ಸ್ಕೂಲು, ಒಂದು ಕಾಲೇಜು ಬೇಕಾದರೆ ಈ ಹೆಣ್ಣು ಮಕ್ಕಳಿಗೆ ಈ ಕುಮಾರಸ್ವಾಮಿ ಇಲ್ಲಾ ರೇವಣ್ಣ ಬೇಕು. ವೋಟ್ ಮಾತ್ರ ನರೇಂದ್ರ ಮೋದಿಗೆ. ಇವರಿಗೆ ತಿಳುವಳಿಕೆ ಮೂಡಿಸಬೇಕು, ಈ ರೀತಿ ಒಂದು ವರ್ಗದ ಜನ  ಇಲ್ಲಿದ್ದಾರೆ. 

ಇವತ್ತು ಏನು ಒಂದು ಕಾಲ್ಸಂಕ ಸೇತುವೆಗಳಿವೆ ಕರಾವಳಿ,ಮಲೆನಾಡು ಪ್ರದೇಶದಲ್ಲಿ ಸ್ಕೂಲಿಗೆ ಹೋಗಬೇಕಾದರೆ ಮಳೆಗಾಲದಲ್ಲಿ ಈ ಹೆಣ್ಮಕ್ಕಳು ನೀರಿನಲ್ಲಿ ಕೊಚ್ಚಿಕೊಂಡು ಹೋಗ್ಬೇಕಾದಂತ ಘಟನೆಗಳು ನಡೆದದ್ದಿದೆ. ಸ್ಕೂಲಿಗೆ ಹೋಗುವಂತ ಮಕ್ಕಳಿಗೆ ನರೇಂದ್ರ ಮೋದಿ ಬಂದ್ರಾ ಸೇತುವೆ ಕಟ್ಟಲಿಕ್ಕೆ? ಇವತ್ತು ಈ ಸರ್ಕಾರದಲ್ಲಿ ಈ ಘಟನೆಗಳನ್ನು ನೋಡಿ ದೊಡ್ಡ ಮಟ್ಟದಲ್ಲಿ ಈ ರಾಜ್ಯದಲ್ಲಿ ಮಲೆನಾಡು ಪ್ರದೇಶ ಮತ್ತು ಕರಾವಳಿ ಪ್ರದೇಶಗಳಲ್ಲಿ ಈ ಕಾಲ್ಸಂಕ  ಸೇತುವೆಗಳನ್ನು ನಿರ್ಮಾಣ ಮಾಡಬೇಕು ಅಂತ ಹೇಳಿ ನೂರಾರು ಕೋಟಿ ಹಣ ಬಿಡುಗಡೆ ಮಾಡಿದ್ದು ಕುಮಾರಸ್ವಾಮಿಯೇ ಹೊರತು ನರೇಂದ್ರ ಮೋದಿ ಬರಲಿಲ್ಲ. ದನ್ನು ಆ ತಿಳುವಳಿಕೆ ಇಲ್ಲದಂಥಾ ಮಕ್ಕಳಿಗೆ ಹೇಳ್ಬೇಕಾತ್ತದೆ. ನೀವು ಪ್ರಚಾರ ಮಾಡಬೇಕಾಗುವಾಗ.

ಮೇಲಿನ ಮಾತುಗಳನ್ನು ಗಮನಿಸಿ, ಇಲ್ಲಿ ಎಲ್ಲಿಯೂ ಕುಮಾರಸ್ವಾಮಿ ಕರಾವಳಿಯವರಿಗೆ ತಿಳುವಳಿಕೆ ಇಲ್ಲ ಎಂದು ಹೇಳಿಲ್ಲ. ಕುಮಾರಸ್ವಾಮಿ ಕರಾವಳಿಯವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ಈ ವಿಡಿಯೊದಲ್ಲಿನ ಮಾತುಗಳನ್ನು ಕೇಳಿದರೆ ಸ್ಪಷ್ಟವಾಗುತ್ತದೆ.

ಬರಹ ಇಷ್ಟವಾಯಿತೆ?

 • 52

  Happy
 • 5

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !