ಭಾನುವಾರ, ಸೆಪ್ಟೆಂಬರ್ 19, 2021
27 °C

'ವಾಯುದಾಳಿ ನಡೆಸಿದ್ದು ಸೂರತ್ ಮೂಲದ ಪೈಲಟ್ ಊರ್ವಶಿ' ಎಂಬುದು ಸುಳ್ಳುಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾಕಿಸ್ತಾನದ ಬಾಲಾಕೋಟ್‍ನಲ್ಲಿದ್ದ ಜೈಷ್- ಎ- ಮೊಹಮ್ಮದ್ (ಜೆಇಎಂ)ನ ಅತ್ಯಂತ  ದೊಡ್ಡ ತರಬೇತಿ ಶಿಬಿರದ ಮೇಲೆ ಮೇಲೆ ಫೆ 26ರಂದು ಬೆಳಗ್ಗಿನ ಜಾವ 3.45ಕ್ಕೆ ಭಾರತ ವಾಯುದಾಳಿ ನಡೆಸಿದೆ. ಈ ವಾಯುದಾಳಿ ನಡೆಸಿದ್ದು ಸೂರತ್ ಮೂಲದ ಪೈಲಟ್ ಊರ್ವಶಿ ಜರೀವಾಲಾ ಎಂಬ ಪೋಸ್ಟೊಂದು ಫೇಸ್‍ಬುಕ್, ಟ್ವಿಟರ್‌ ಮತ್ತು ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ. ಸೂರತ್‍ನ ಭುಲ್ಕಾ ಭವನ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದ ಊರ್ವಶಿ, ಪಾಕ್ ಮೇಲೆ ವಾಯುದಾಳಿ ನಡೆಸಿದ ಪೈಲಟ್ ಎಂದು ರಾಜಸ್ಥಾನದ ಬಿಜೆಪಿ ನೇತಾರ ರಿತಲ್ಬಾ ಸೋಲಂಕಿ  ಟ್ವೀಟ್ ಮಾಡಿದ್ದರು. ಈ ಟ್ವೀಟ್ ಈಗ ಅಳಿಸಲಾಗಿದೆ.

ಹಲವಾರು ನೆಟ್ಟಿಗರು ಫೇಸ್‍ಬುಕ್‍ನಲ್ಲಿ ಇದೇ ರೀತಿಯ ಪೋಸ್ಟ್ ಹಾಕಿದ್ದಾರೆ. ಇನ್ನು ಕೆಲವರು ಫೈಟರ್ ವಿಮಾನದಲ್ಲಿ ಕುಳಿತಿರುವ  'ಊರ್ವಶಿ'ಯ ಫೋಟೊವನ್ನು ಶೇರ್ ಮಾಡಿದ್ದಾರೆ. ವಾಟ್ಸ್ಆ್ಯಪ್‍ನಲ್ಲಿಯೂ ಈ ಸಂದೇಶ ಹರಿದಾಡಿದೆ.

ಈ ಸಂದೇಶ, ಪೋಸ್ಟ್ ಗಳ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದ್ದು, ಇದು ಸುಳ್ಳು ಸುದ್ದಿ ಎಂದು ವರದಿ ಮಾಡಿದೆ.

ನಿಜ ಸಂಗತಿ ಏನು?
1.  Urvisha Jariwala Indian air force  ಮತ್ತು Urvashi Jariwala Indian air force ಎಂದು ಗೂಗಲಿಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. 

ಆದರೆ ಇದೇ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಫೋಟೊ ಭಾರತೀಯ ವಾಯುಪಡೆಯ ಪೈಲಟ್ ಸ್ನೇಹಾ ಶೆಖಾವತ್ ಎಂದು ತಿಳಿದು ಬಂದಿದೆ.

2015ರಲ್ಲಿ ಪ್ರಕಟವಾದ  ಟೈಮ್ಸ್ ಆಫ್ ಇಂಡಿಯಾ  ಪ್ರಕಾರ,  63 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಗಣರಾಜ್ಯೋತ್ಸದ ಪರೇಡ್‍ಗೆ ನೇತೃತ್ವ ವಹಿಸಿದ್ದ ಮೊದಲ ಮಹಿಳಾ ಪೈಲಟ್ ಸ್ನೇಹಾ ಶೆಖಾವತ್ ಎಂಬ ಸುದ್ದಿ ಇದೆ.

2. ಫೈಟರ್ ಜೆಟ್ ನಲ್ಲಿ ಕುಳಿತಿರುವ ಈ ಫೋಟೊವನ್ನು ರಿವರ್ಸ್ ಇಮೇಜ್ ಚೆಕ್ ಮಾಡಿದಾಗ ತಿಳಿದುಬಂದಿದ್ದೇನೆಂದರೆ ಈ ಫೋಟೊ ಯುಎಇಯ ಫೈಟರ್ ಜೆಟ್‍ನ ಮೊದಲ ಪೈಲಟ್ ಅಲ್ ಮನ್ಸೋರಿಯದ್ದು. ಈ ಬಗ್ಗೆ 2014ರಲ್ಲಿ ಎನ್‍ಬಿಸಿ ವರದಿ ಪ್ರಕಟಿಸಿತ್ತು.

3. ಊರ್ವಶಿ ಜರೀವಾಲಾ ಅವರ ಫೇಸ್‍ಬುಕ್  ಪ್ರೊಫೈಲ್‍ನ ಸ್ಕ್ರೀನ್ ಶಾಟ್ ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ. ಊರ್ವಶಿ ಜರೀವಾಲಾ ಅವರ ಫೇಸ್‍ಬುಕ್ ಖಾತೆಯನ್ನು ಹುಡುಕಿದರೆ ಅವರ ಖಾತೆ ನಿಷ್ಕ್ರಿಯಗೊಂಡಿದೆ ಅಥವಾ ಡಿಲೀಟ್ ಮಾಡಲಾಗಿದೆ.  ಊರ್ವಶಿ ಜರೀವಾಲ ಅವರ ಪ್ರೊಫೈಲ್‍ನ Google cache ಲಿಂಕ್ ಇಲ್ಲಿದೆ.

ಇದು ರಾಷ್ಟ್ರೀಯ ಭದ್ರತೆ ವಿಚಾರ

ವಾಯುದಾಳಿ ನಡೆಸಿದ ಪೈಲಟ್‍ಗಳ ಹೆಸರು ಬಹಿರಂಗ ಪಡಿಸಿ ಎಂದು  ಬೂಮ್‍ಲೈವ್ ಭಾರತೀಯ ವಾಯುಪಡೆಯ ಮೂಲಗಳನ್ನು ಸಂಪರ್ಕಿಸಿತ್ತು. ಆದರೆ ರಾಷ್ಟ್ರೀಯ ಭದ್ರತೆ ವಿಚಾರವಾಗಿರುವುದರಿಂದ ಈ ರೀತಿಯ ಮಾಹಿತಿಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ವಾಯುಪಡೆ ಹೇಳಿದೆ.

ವಾಯುದಾಳಿ ನಡೆಸಿದ ಅಧಿಕಾರಿಗಳ ಹೆಸರನ್ನು ನಾವು ಬಹಿರಂಗ ಪಡಿಸಿಲ್ಲ. ವಿದೇಶಾಂಗ ಕಾರ್ಯದರ್ಶಿಯವರು ವಾಯುದಾಳಿ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿದ ವಿಚಾರವಲ್ಲದೆ ಭಾರತೀಯ ವಾಯಪಡೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವಾಯುದಾಳಿ ನಡೆಸಿದ ಅಧಿಕಾರಿಗಳಿವರು ಎಂದು ಹೇಳುತ್ತಿರುವ ಸುದ್ದಿಗಳೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಭಾರತೀಯ ವಾಯುಸೇನೆ ಬೂಮ್‍ಲೈವ್‍ಗೆ ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೇರೆ ಚಿತ್ರಗಳಿವು
ವಾಯುದಾಳಿ ನಡೆಸಿದ ವಾಯುಪಡೆಯ ಪೈಲಟ್ ಊರ್ವಶಿ ಜರೀವಾಲಾ ಎಂದು ಹೇಳುತ್ತಿರುವ ಬೇರೆ ಬೇರೆ ಚಿತ್ರಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇಲ್ಲಿರುವ ಫೋಟೊ ಅವನಿ ಚತುರ್ವೇದಿಯದ್ದು, ಈಕೆ  MiG-21 Bison ಹಾರಾಟ ಮಾಡಿದ ಭಾರತದ ಮೊದಲ ಮಹಿಳಾ ಪೈಲಟ್.


ಈ ಫೋಟೊ ಮೋಹನಾ ಸಿಂಗ್ ಅವರದ್ದು. ಇಂಥಾ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು  ಮಾತ್ರವಲ್ಲದೆ ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿಯೂ ಬಳಕೆಯಾಗಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು