ಬುಧವಾರ, ಜುಲೈ 6, 2022
21 °C

ಎಲ್‌ಪಿಜಿ ಸಿಲಿಂಡರ್ ದರ ದೇಶದಲ್ಲೇ ಗರಿಷ್ಠ ಇರುವುದು ಹೈದರಾಬಾದ್‌ನಲ್ಲಿ ಅಲ್ಲ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ವೈರಲ್ ಆದ ವಿಷಯ
ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆ ಇಡೀ ದೇಶದಲ್ಲಿಯೇ ಹೆಚ್ಚಿರುವುದು ತೆಲಂಗಾಣದಲ್ಲಿ ಅಥವಾ ಹೈದಾರಾಬಾದ್‌ನಲ್ಲಿ ಎಂದು ಹಲವು ಮಂದಿ, ವಿಶೇಷವಾಗಿ ತೆಲುಗು ಭಾಷಿಗರು ಟ್ವಿಟರ್ ಮತ್ತು ಇತರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಬೇರೆ ಬೇರೆ ರಾಜ್ಯಗಳಲ್ಲಿ ಎಷ್ಟೆಷ್ಟು ದರ ಇದೆ ಅಂಕಿ-ಅಂಶಗಳನ್ನು ತೋರಿಸುವ ಒಂದು ಚಿತ್ರವನ್ನೂ ಸೇರಿಸಲಾಗಿತ್ತು. ಇದಕ್ಕೆ ಟಿಆರ್‌ಎಸ್ ನಾಯಕಿ, ತೆಲಂಗಾಣ ಎಂಎಲ್‌ಸಿ ಆಗಿರುವ ಕವಿತಾ ರಾವ್ ಅವರನ್ನು ಟ್ಯಾಗ್ ಮಾಡಿ, ನೀವೆಲ್ಲ ಧರಣಿ ಯಾಕಾಗಿ ಮಾಡುತ್ತಿದ್ದೀರಿ ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು. ಟಿಆರ್‌ಎಸ್ ತೆರಿಗೆಯೇ 53 ರೂ. ಇದೆ. ಪ್ರತಿಭಟಿಸುತ್ತಿರುವುದೇಕೆ? 50 ರೂ. ತೆರಿಗೆ ಇಳಿಸಿ ಅಂತ ಅದರಲ್ಲಿ ಬರೆಯಲಾಗಿತ್ತು. ಈ ಕುರಿತು ಪ್ರಜಾವಾಣಿ ಸತ್ಯಾಂಶ ಪರಿಶೀಲನೆ ನಡೆಸಿ, ನಿಜವೇನು ಎಂಬುದನ್ನು ಕಂಡುಕೊಂಡಿದೆ.

ಈ ಕುರಿತು ಪ್ರಜಾವಾಣಿಯ ಫ್ಯಾಕ್ಟ್‌ಚೆಕ್ ತಂಡವು ಪರಿಶೀಲನೆ ನಡೆಸಿತು.

ರಿವರ್ಸ್ ಇಮೇಜ್ ಸರ್ಚ್ ಮೂಲಕ ಈ ಚಿತ್ರದಲ್ಲಿರುವ ಅಂಕಿ ಅಂಶಗಳ ಅಸಲೀಯತ್ತಿನ ಬಗ್ಗೆ ಅಂತರಜಾಲದಲ್ಲಿ ಹುಡುಕಾಟ ನಡೆಸಲಾಯಿತು. ಸಾಕಷ್ಟು ಮಂದಿ ಇದನ್ನು ಹಂಚಿಕೊಂಡಿರುವುದು ತಿಳಿಯಿತು.

ಜೊತೆಗೆ, ಹೈದರಾಬಾದ್ ನಿವಾಸಿ ರಘು ರೆಡ್ಡಿ ಎಂಬವರು ತೀರಾ ಇತ್ತೀಚೆಗಿನ ಬಿಲ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಮಾರ್ಚ್ 15, 2022ರ ಬಿಲ್. ಅದರಲ್ಲಿರುವ ಮಾಹಿತಿ ಪ್ರಕಾರ, ಗ್ಯಾಸ್ ಸಿಲಿಂಡರ್ ಮೂಲ ಬೆಲೆ ₹906.66, ಹಾಗೂ ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ತಲಾ ₹22.67 ಸೇರಿ, ಒಟ್ಟು ಮೊತ್ತ ₹952.00.

ಆದರೆ, ಈ ಮೊದಲು ಶೇರ್ ಮಾಡಿರುವ ಇನ್ಫೋಗ್ರಾಫಿಕ್ಸ್‌ನಲ್ಲಿರುವ ಅಂಕಿ ಅಂಶಗಳು ನಿಜವೆಂಬುದು ತಿಳಿಯಿತು. ಅದು ಮಾರ್ಚ್ 22ರ ಹಿಂದಿನ ದರ ಪಟ್ಟಿ ಆಗಿತ್ತು. ಹೈದರಾಬಾದ್‌ನಲ್ಲಿ ಗರಿಷ್ಠ ದರವೇ ಎಂಬ ಹೇಳಿಕೆಯ ಬಗ್ಗೆ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಲಾಯಿತು.


ಮಾ.31, 2022ರಂದು ಭಾರತದ ವಿವಿಧ ನಗರಗಳಲ್ಲಿ ಸಿಲಿಂಡರ್‌ನ ದರ ಪಟ್ಟಿ

ಈ ಕುರಿತು Gas Prices in India ಎಂದು ಗೂಗಲ್ ಹುಡುಕಾಟ ನಡೆಸಿದಾಗ, ದೊರೆತ ಹಲವು ವಿಶ್ವಾಸಾರ್ಹ ತಾಣಗಳಲ್ಲಿ ಮಾಹಿತಿ ದೊರೆಯಿತು. ವಿಶೇಷವಾಗಿ ಬ್ಯಾಂಕ್ ಬಝಾರ್ ಡಾಟ್ ಕಾಂನಲ್ಲಿ ಪರಿಶೀಲನೆ ನಡೆಸಿದಾಗ ಹೈದರಾಬಾದ್ ಅಥವಾ ತೆಲಂಗಾಣದಲ್ಲಿ ಗರಿಷ್ಠ ದರ ಎಂಬ ಹೇಳಿಕೆ ಸುಳ್ಳು ಎಂಬುದು ದೃಢಪಟ್ಟಿತು. ಪಟ್ಟಿ ಶೇರ್ ಆಗಿದ್ದ ಮಾ.25ರಂದು ಅದರಲ್ಲಿದ್ದ ಅಂಕಿ ಸಂಖ್ಯೆಗಳು ಸರಿಯಾಗಿದ್ದವು. ಇದಕ್ಕೂ ಮೊದಲು ಮಾರ್ಚ್ 22ರಂದು ಸಿಲಿಂಡರ್ ದರವನ್ನು ₹50 ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ವೈರಲ್ ಆಗಿರುವ ಪಟ್ಟಿಯು ಅದಕ್ಕಿಂತ ಮೊದಲಿನದು ಎಂಬುದು ದೃಢವಾಯಿತು.

ಹೊಚ್ಚ ಹೊಸ ಪಟ್ಟಿಯ ಪ್ರಕಾರ, ಮಾ.31ರ ವೇಳೆಗೆ ಹೈದರಾಬಾದ್‌ನಲ್ಲಿ ಸಿಲಿಂಡರ್ ಒಂದರ ದರ ₹1002 (ಮಾ.22ರಂದು ಏರಿಕೆಯಾದ ₹50 ಸೇರಿ). ಆದರೆ, ಇದಕ್ಕಿಂತಲೂ ಗರಿಷ್ಠ ದರ ಇರುವುದು ಪಟನಾ (ಬಿಹಾರ)ದಲ್ಲಿ. ಅಲ್ಲಿ ಅದರ ಬೆಲೆ ₹1039.50 (ಮಾ.31). ವೈರಲ್ ಆಗಿರುವ ಪಟ್ಟಿಯು ಹಿಂದಿನದು ಆಗಿರುವುದರಿಂದ ಎಲ್ಲ ಬೆಲೆಯೂ ₹50 ಕಡಿಮೆ ಇತ್ತು ಮತ್ತು ಪಟನಾವನ್ನು ಅಳಿಸಲಾಗಿತ್ತು. ಹೀಗಾಗಿ ಅದರ ಮೌಲ್ಯ ಕಾಣಿಸುತ್ತಿರಲಿಲ್ಲ.

ಅಂತಿಮ ನಿರ್ಣಯ
ಎಲ್‌ಪಿಜಿ ಬೆಲೆಯು ಇಡೀ ದೇಶದಲ್ಲಿಯೇ ಗರಿಷ್ಠ ಇರುವುದು ಹೈದರಾಬಾದ್‌ನಲ್ಲಿ ಎಂಬ ಹೇಳಿಕೆಯು ಸತ್ಯಕ್ಕೆ ದೂರವಾದುದು. ಮಾ.31ರ ಪಟ್ಟಿಯ ಪ್ರಕಾರ, ಪಟನಾದಲ್ಲಿ ಗರಿಷ್ಠ ದರ (₹1039.50) ಇದ್ದರೆ, ಹೈದರಾಬಾದ್ ಎರಡನೇ ಸ್ಥಾನದಲ್ಲಿ (₹1002) ಇದೆ.

ರೇಟಿಂಗ್: ವೈರಲ್ ಆದ ಸುದ್ದಿ ಸುಳ್ಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು