ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಪೊಲೀಸರೆದುರೇ ಸಾಧುಗಳನ್ನು ಹೊಡೆದು ಹತ್ಯೆ, 101 ಬಂಧನ

Last Updated 20 ಏಪ್ರಿಲ್ 2020, 3:41 IST
ಅಕ್ಷರ ಗಾತ್ರ

ಮುಂಬೈ: ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧು ಸೇರಿದಂತೆ ಮೂವರನ್ನು ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗ್ರಾಮವೊಂದರ ಜನರು ಪೊಲೀಸರ ಎದುರೇ ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ. ಘಟನೆ ಸಂಬಂಧ ಮಹಾರಾಷ್ಟ್ರ ಪೊಲೀಸರು ಈ ವರೆಗೆ 101 ಮಂದಿಯನ್ನು ಬಂಧಿಸಿದ್ದಾರೆ.

ಪಾಲ್ಗರ್ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಘಟನೆ ನಡೆದಿದೆ. ಉದ್ರಿಕ್ತ ಗ್ರಾಮಸ್ಥರನ್ನು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕ ಮೃತಪಟ್ಟಿದ್ದಾನೆ. ಗ್ರಾಮಸ್ಥರು ಸಾಧುಗಳನ್ನು ಎಳೆದಾಡಿ ದೊಣ್ಣೆ, ಕಲ್ಲುಗಳಿಂದ ಹೊಡೆಯುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಘಟನೆ ಸದ್ಯ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ.

ಸಾಧುಗಳು ತಮ್ಮನ್ನು ರಕ್ಷಿಸುವಂತೆ ಪೊಲೀಸರಲ್ಲಿ ಬೇಡುತ್ತಿರುವ ಸನ್ನಿವೇಶಗಳು ವೈರಲ್‌ ಆಗಿರುವ ವಿಡಿಯೊದಲ್ಲಿವೆ. ಉದ್ರಿಕ್ತ ಗ್ರಾಮಸ್ಥರ ಗುಂಪು ಸಾಧುಗಳು ಪ್ರಯಾಣಿಸುತ್ತಿದ್ದ ಕಾರು ಮತ್ತು ಪೊಲೀಸರ ಗಸ್ತು ವಾಹನವನ್ನು ಧ್ವಂಸಗೊಳಿಸುವ ದೃಶ್ಯಗಳು ಮತ್ತೊಂದು ವಿಡಿಯೊದಲ್ಲಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪಾಲ್ಗರ್‌ ಜಿಲ್ಲಾಧಿಕಾರಿ ಕೈಲಾಸ್‌ ಶಿಂದೆ, ‘ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಅದಾಗಲೇ ಹಲ್ಲೆಗೊಳಗಾಗಿದ್ದ ಸಾಧುಗಳು ಸೇರಿದಂತೆ ಮೂವರನ್ನು ಪೊಲೀಸ್‌ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ಆಗ ಗುಂಪು ಮತ್ತೆ ದಾಳಿ ಆರಂಭಿಸಿದೆ. ಪೊಲೀಸರಿಗೂ ಗಾಯಗಳಾಗಿವೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರನ್ನು ಪೊಲೀಸ್‌ ಅಧಿಕಾರಿಗಳು ಗ್ರಾಮಸ್ಥರಿಂದ ಬಿಡಿಸಿಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಅವರು ಪ್ರಾಣಬಿಟ್ಟಿದ್ದರು. ಪ್ರಕರಣದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈಗಲಾಗಲೇ 101 ಜನರನ್ನು ನಾವು ಬಂಧಿಸಿದ್ದೇವೆ. ದಯವಿಟ್ಟು ಯಾವುದೇ ಗ್ರಾಮಸ್ಥರು ಊಹಾಪೋಹಗಳನ್ನು, ಗಾಳಿ ಸುದ್ದಿಗಳನ್ನು ನಂಬಬಾರದು. ಮಕ್ಕಳನ್ನು ಅಪಹರಿಸಲು ಯಾರೂ ಊರುಗಳಿಗೆ ಬರುವುದಿಲ್ಲ. ಗ್ರಾಮಸ್ಥರು ಹೀಗೆ ಕಾನೂನು ಕೈಗೆತ್ತಿಕೊಂಡರೆ ನಾವು ಕ್ರಮ ಕೈಗೊಳ್ಳುತ್ತೇವೆ,’ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಟ್ವೀಟ್‌ ಮಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಅಪರಾಧಿಗಳಿಗೆ ಶಿಕ್ಷೆ

ವಿಷಯ ದೊಡ್ಡದಾಗಿ, ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಲೇ ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ.

‘ ಪಾಲ್ಗರ್‌ ಜಿಲ್ಲೆಯಲ್ಲಿ ನಡೆದ ಘಟನೆ ಸಂಬಂಧ ಸರ್ಕಾರ ಕ್ರಮ ಕೈಗೊಂಡಿದೆ. ಇಬ್ಬರು ಸಾಧು, ಒಬ್ಬ ಕಾರು ಚಾಲಕನನ್ನು ಕೊಂದ, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಘಟನೆ ನಡೆದ ದಿನವೇ ಬಂಧಿಸಲಾಗಿದೆ,’ ಎಂದು ಹೇಳಿದ್ದಾರೆ.

‘ಈ ಘೋರ, ನಾಚಿಕೆಗೇಡಿನ ಅಪರಾಧ ಕೃತ್ಯದಲ್ಲಿ ಭಾಗಿಯಾದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ಕಾನೂನಿನ ಕಠಿಣ ಶಿಕ್ಷೆ ಕೊಡಿಸಲಾಗುವುದು,’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಟ್ವೀಟ್‌ ಮೂಲಕ ತಿಳಿಸಿದೆ.

ವಿಡಿಯೊ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT