ಗುರುವಾರ , ನವೆಂಬರ್ 14, 2019
18 °C
₹ 2,000 ಫೋಟೊಶಾಪ್‌ ಮೂಲಕ ಆಧಾರ್‌ನಲ್ಲಿ ವಯಸ್ಸನ್ನು ತಿದ್ದುಪಡಿ ಮಾಡುತ್ತಿದ್ದವರ ಬಂಧನ

ಜಿಲ್ಲೆಯಲ್ಲಿ ನಕಲಿ ಆಧಾರ್‌ ಸೃಷ್ಟಿಸುವ ಜಾಲ?

Published:
Updated:
Prajavani

ಚಾಮರಾಜನಗರ:  ಜಿಲ್ಲೆಯಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸುವ ಜಾಲ ಸಕ್ರಿಯವಾಗಿದೆಯೇ?

ಜನರಿಂದ ₹2,000 ಪಡೆದು ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸುತ್ತಿದ್ದ ಆರೋಪದಲ್ಲಿ ನಗರ ಪೊಲೀಸರು ಇತ್ತೀಚೆಗೆ ಮೂವರನ್ನು ಬಂಧಿಸಿರುವುದು ಈ ಪ್ರಶ್ನೆಯನ್ನು ಹುಟ್ಟುಹಾಕಿದೆ.

ವೃದ್ಧಾಪ್ಯ ವೇತನ ಸೇರಿ ಸರ್ಕಾರದ ಕೆಲವು ಸೌಲಭ್ಯ ಪಡೆಯಲು ಆಧಾರ್‌ನಲ್ಲಿರುವ ವಯಸ್ಸಿನ ಮಾಹಿತಿಯನ್ನು ಅಕ್ರಮವಾಗಿ ತಿದ್ದುಪಡಿ ಮಾ‌ಡಲಾಗುತ್ತಿದೆ ಎಂಬುದೂ ತನಿಖೆಯಿಂದ ಗೊತ್ತಾಗಿದೆ.  

ಜಿಲ್ಲೆಯಲ್ಲಿ ನಕಲಿ ಆಧಾರ್‌ ಸೃಷ್ಟಿಸುವ ದೊಡ್ಡ ಜಾಲ ಕಾರ್ಯಾಚರಿಸುತ್ತಿರುವ ಸಾಧ್ಯತೆಯನ್ನು ಪೊಲೀಸರು ನಿರಾಕರಿಸಿದ್ದರೂ, ಸೈಬರ್‌ ಸೆಂಟರ್‌ಗಳಲ್ಲಿ ಅಥವಾ ಜೆರಾಕ್ಸ್‌ ಅಂಗಡಿಗಳಲ್ಲಿ ಇಂತಹ ಅಕ್ರಮ ಎಸಗುವ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ. 

ಮೂರು ವಾರಗಳ ಹಿಂದೆ ಪಟ್ಟಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯಾನಗಳ್ಳಿಯ ರಾಮಾಚಾರಿ, ಹರದನಹಳ್ಳಿಯಲ್ಲಿ ಸೇವಾ ಕೇಂದ್ರ ಹೊಂದಿರುವ ಸಿದ್ದರಾಜು ಮತ್ತು ಕೊಳದ ಬೀದಿಯಲ್ಲಿ ಸೈಬರ್‌ ಸೆಂಟರ್‌ ನಡೆಸುತ್ತಿದ್ದ ಲಕ್ಷ್ಮಣನಾಯ್ಕ ಎಂಬುವವರನ್ನು ಪೊಲೀಸರು ಬಂಧಿದ್ದಾರೆ. ಪ್ರಭು ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ. 

ಪತ್ತೆಯಾಗಿದ್ದು ಹೇಗೆ?: ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ, ನಕಲಿ ಆಧಾರ್‌ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. 

ಆಸ್ಪತ್ರೆಯಲ್ಲಿ ವಯಸ್ಸು ದೃಢೀಕರಣಕ್ಕಾಗಿ ರಾಮಾಚಾರಿ ಅವರು ಬಂದಿದ್ದರು. ವಾಸ್ತವದಲ್ಲಿ 51 ವರ್ಷದ ರಾಮಾಚಾರಿ ಅವರು ಹಿರಿಯ ನಾಗರಿಕರ ಪ್ರಮಾಣಪತ್ರಕ್ಕಾಗಿ ಬಂದಿದ್ದರು. ಅಷ್ಟು ವಯಸ್ಸು ಆಗಿಲ್ಲ ಎಂದು ವೈದ್ಯರು ಹೇಳಿದ್ದಕ್ಕೆ ಜಗಳವಾಡಿ ಕೆಲವು ದಿನಗಳ ನಂತರ, ಹೆಚ್ಚು ವಯಸ್ಸನ್ನು ತೋರಿಸುತ್ತಿದ್ದ ಆಧಾರ್‌ ಕಾರ್ಡ್‌ ಪ್ರತಿಯನ್ನೂ ತೋರಿಸಿದ್ದರು. ಅನುಮಾನ‌ಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಸಿ.ನಾಗೇಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಎಲ್ಲವೂ ಬಯಲಾಗಿದೆ.

₹2,000ಕ್ಕೆ ನಕಲಿ ಆಧಾರ್‌: ‘ರಾಮಾಚಾರಿ ಅವರು ಮೊದಲು ಸಿದ್ದರಾಜು ಬಳಿಗೆ ಹೋಗಿದ್ದರು. ₹2,000 ಕೊಟ್ಟರೆ ಆಧಾರ್‌ ಮಾಡಿಕೊಡಿಸುವಾಗಿ ಅವರು ಭರವಸೆ ನೀಡಿದ್ದರು. ಕೊಳದ ಬೀದಿಯಲ್ಲಿರುವ ಲಕ್ಷ್ಮಣ ನಾಯ್ಕ ಅವರ ಸೈಬರ್‌ ಸೆಂಟರ್‌ನಲ್ಲಿ ನಕಲಿ ಆಧಾರ್‌ ಸೃಷ್ಟಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸೈಬರ್‌ ಸೆಂಟರ್‌ನಲ್ಲಿ ಆಧಾರ್‌ ಕಾರ್ಡ್‌ನ ಚಿತ್ರ ತೆಗೆದು ಫೋಟೊಶಾಪ್‌ನಲ್ಲಿ ಹುಟ್ಟಿದ ಇಸವಿಯಲ್ಲಿ ಒಂದು ಅಂಕಿಯನ್ನು ಮಾತ್ರ ತಿದ್ದುಪಡಿ ಮಾಡಲಾಗುತ್ತಿತ್ತು’ ಎಂದು ಮೂಲಗಳು ಹೇಳಿವೆ.

ಸದ್ಯ, ತನಿಖೆ ಮುಂದುವರಿಸಿರುವ ಪೊಲೀಸರು ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ. ವಶಕ್ಕೆ ಪಡೆದಿರುವ ನಕಲಿ ಆಧಾರ್‌ ಕಾರ್ಡ್‌ಗಳನ್ನು ವಿಶೇಷ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಕಳುಹಿಸಲು ಅವರು ಸಿದ್ಧತೆ ನಡೆಸಿದ್ದಾರೆ. ಇದೇ ರೀತಿಯಲ್ಲಿ ಜಿಲ್ಲೆಯ ಬೇರೆ ಕಡೆಗಳಲ್ಲಿ ನಕಲಿ ಆಧಾರ್‌ ಸೃಷ್ಟಿ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆಯೂ ನಿಗಾ ವಹಿಸಿದ್ದಾರೆ.

‘ಆಘಾತಕಾರಿ ವಿಚಾರ’

‘ಹಿಂದೆ ವಯಸ್ಸಿನ ದೃಢೀಕರಣ ವಿಚಾರದಲ್ಲಿ ಸಾರ್ವಜನಿಕರು ನಮ್ಮ ಬಳಿ ಜಗಳವೇ ಮಾಡುತ್ತಿದ್ದರು. ಅವರ ಒಂದೊಂದು ದಾಖಲೆಯಲ್ಲಿ ಒಂದೊಂದು ವಯಸ್ಸು ಇರುತ್ತಿತ್ತು. ವರ್ಷದಿಂದೀಚೆಗೆ ಎಕ್ಸ್‌ರೇ ತೆಗೆದು ಮೂಳೆಯನ್ನು ಪರಿಶೀಲಿಸಿದ ನಂತರವಷ್ಟೇ ವ್ಯಕ್ತಿಗೆ ಇಷ್ಟು ವಯಸ್ಸು ಆಗಿರಬಹುದು ಎಂದು ಪ್ರಮಾಣಪತ್ರ ನೀಡುತ್ತಿದ್ದೇವೆ’ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ಸರ್ಜನ್‌ ರಘುರಾಮ್ ಸರ್ವೇಗಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇತ್ತೀಚೆಗೆ ಆ ವ್ಯಕ್ತಿ ಬಂದು ವೈದ್ಯರಲ್ಲಿ ಜಗಳ ಮಾಡಿದ್ದಾನೆ. ವಾರದ ನಂತರ ಆಧಾರ್‌ ಕಾರ್ಡ್‌ ತೋರಿಸಿದ್ದಾನೆ. ಅನುಮಾನಗೊಂಡು ಪೊಲೀಸರ ಗಮನಕ್ಕೆ ವೈದ್ಯರು ತಂದಿದ್ದಾರೆ. ಇದೊಂದು ಆಘಾತಕಾರಿ ವಿಚಾರ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)