ಕುಟುಂಬ ರಾಜಕಾರಣ; ವಿಜಯಲಕ್ಷ್ಮೀ ಒಲಿಯುವಳೇ..?

7
ಏಳು ಅಭ್ಯರ್ಥಿಗಳ ಹಣೆಬರಹ ನಿರ್ಧಾರ; ನಿರೀಕ್ಷಿತ ಫಲಿತಾಂಶ ಹೊರಹೊಮ್ಮುವುದೇ..?

ಕುಟುಂಬ ರಾಜಕಾರಣ; ವಿಜಯಲಕ್ಷ್ಮೀ ಒಲಿಯುವಳೇ..?

Published:
Updated:

ವಿಜಯಪುರ: ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ತೆರವಾದ ಒಂದು ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಮಂಗಳವಾರ (ಸೆ 11) ನಡೆಯಲಿದೆ.

ಅಖಾಡದಲ್ಲಿ ಏಳು ಅಭ್ಯರ್ಥಿಗಳಿದ್ದರೂ; ಆರಂಭದಿಂದಲೂ ಏಕಪಕ್ಷೀಯ ಚುನಾವಣೆ ಎಂದೇ ಬಿಂಬಿತಗೊಂಡಿದ್ದ ಉಪ ಚುನಾವಣೆಯ ಚಿತ್ರಣ ಅಂತಿಮ ಹಂತದಲ್ಲಿ ತನ್ನ ಸ್ವರೂಪವನ್ನೇ ಬದಲಿಸಿಕೊಂಡಿತ್ತು.

ರಾಜ್ಯದಲ್ಲಿನ ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಮೊದಲ ಉಪ ಚುನಾವಣೆಯಿದು. ಕಾಂಗ್ರೆಸ್‌, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿದ್ದವು. ಏಳು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೂ ನೇರ ಹಣಾಹಣಿ ಏರ್ಪಟ್ಟಿತ್ತು.

ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಹೋದರ, ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಪಾಟೀಲ, ವಿಜಯಪುರ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಕಾರ್ಪೊರೇಟರ್‌, ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ ನಡುವೆಯೇ ಸ್ಪರ್ಧೆ ನಡೆದಿತ್ತು. ಇದೀಗ ಫಲಿತಾಂಶ ಕುತೂಹಲ ಕೆರಳಿಸಿದೆ.

ಕುಟುಂಬ ರಾಜಕಾರಣದ ಕುಡಿ

ವಿಜಯಪುರ ಜಿಲ್ಲಾ ರಾಜಕಾರಣದ ಈಚೆಗಿನ ದಶಕಗಳಲ್ಲಿ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ ಮನೆತನಕ್ಕೆ ಮಾತ್ರ ಕುಟುಂಬ ರಾಜಕಾರಣ ಕೈ ಹಿಡಿದಿತ್ತು. ಇದೀಗ ಮತ್ತೊಮ್ಮೆ ಅವಕಾಶ ಸಿಗುವುದೇ ಎಂಬ ಪ್ರಶ್ನೆ ಎಲ್ಲೆಡೆ ಮಾರ್ದನಿಸುತ್ತಿದೆ.

ಜಿಲ್ಲಾ ರಾಜಕಾರಣದಲ್ಲಿ ಒಮ್ಮೆಗೆ ಸಹೋದರರು ವಿಧಾನಸಭೆ ಪ್ರವೇಶಿಸಿದ ಇತಿಹಾಸವಿಲ್ಲ. ಆರೋಗ್ಯ ಸಚಿವ ಶಿವಾನಂದ ಪಾಟೀಲ ಸಹೋದರ ವಿಜುಗೌಡ ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸ್ಪರ್ಧಿಸಿದ್ದರೂ ಅವಕಾಶವೇ ಸಿಕ್ಕಿಲ್ಲ.

ಎಂ.ಬಿ.ಪಾಟೀಲ ತಿಕೋಟಾ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಿದ್ದ ಅವಧಿಯಲ್ಲೇ, ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಜಿ.ಕೆ.ಪಾಟೀಲ ವಿಧಾನ ಪರಿಷತ್‌ ಸದಸ್ಯರಿದ್ದರು. ಜಿ.ಕೆ.ಪಾಟೀಲ ಎಂ.ಬಿ.ಪಾಟೀಲ ತಂದೆ ಬಿ.ಎಂ.ಪಾಟೀಲರ ತಾಯಿಯ ಅಣ್ಣನ ಮಗ. ಹತ್ತಿರದ ಸಂಬಂಧಿ.

ಇದೀಗ ಇಂತಹ ಅವಕಾಶ ಮತ್ತೆ ಎಂ.ಬಿ.ಪಾಟೀಲ ಕುಟುಂಬಕ್ಕೆ ಒದಗಿ ಬಂದಿದೆ. ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತದಾರರು ಆಶೀರ್ವದಿಸಿದರೆ ಮಾತ್ರ, ಎಂ.ಬಿ. ಸಹೋದರ ಸುನೀಲಗೌಡ ಬಿ.ಪಾಟೀಲ ವಿಧಾನ ಪರಿಷತ್‌ಗೆ ಪ್ರವೇಶಿಸಲಿದ್ದಾರೆ. ಈಚೆಗಿನ ದಶಕಗಳಲ್ಲಿ ಸಹೋದರರಿಬ್ಬರೂ ವಿಧಾನಸಭೆ, ವಿಧಾನ ಪರಿಷತ್‌ ಪ್ರತಿನಿಧಿಸಿದ ಕುಟುಂಬದ ಕುಡಿಗಳು ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ. ನೆರೆಯ ಬಾಗಲಕೋಟೆ ಜಿಲ್ಲೆಯ ಹಣಮಂತ ನಿರಾಣಿ, ಮುರಗೇಶ ನಿರಾಣಿ ಸಹೋದರ ಜೋಡಿಯಂತೆ ವಿಧಾನ ಮಂಡಲದಲ್ಲಿ ಆಸೀನರಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !