ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ರೈತ!

7

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ರೈತ!

Published:
Updated:

ಬೆಚ್ಚನೆಯ ಮನೆಯಾಗಿ, ವೆಚ್ಚಕ್ಕೆ ಹೊನ್ನಾಗಿ, ಇಚ್ಛೆಯನ್ನರಿವ ಸತಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದ ಸರ್ವಜ್ಞ. ಇದು ಸರ್ವಜ್ಞನ ಮಾತು ಆಯಿತು. ಈಗ ಬ್ರೇಕಿಂಗ್ ನ್ಯೂಸ್ ಏನಪ ಎಂದರೆ ಶಿರಸಿ, ಸಿದ್ದಾಪುರ ತಾಲ್ಲೂಕಿನ ರೈತರು ‘ಇಚ್ಛೆಯನ್ನರಿವ ಸೊಸೈಟಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿ’ ಎನ್ನುತ್ತಾರೆ. ಜೊತೆಗೆ, ಈಗಾಗಲೇ ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದಾರೆ. ಸ್ವರ್ಗ ಸುಖವನ್ನೂ ಅನುಭವಿಸುತ್ತಿದ್ದಾರೆ.

ಹೌದು, ಈ ಎರಡು ತಾಲ್ಲೂಕಿನ ಸಹಕಾರ ಸಂಘಗಳನ್ನು ನಮ್ಮ ಆಡಳಿತಗಾರರು ಒಮ್ಮೆ ನೋಡಬೇಕು. ರೈತರಿಗೆ ಅನುಕೂಲ ಮಾಡಿಕೊಡುವುದು ಎಂದರೆ ಹೇಗೆ ಎನ್ನುವುದನ್ನು ಕಲಿಯಬೇಕು. ಸಾಲ ಮನ್ನಾ ವಿವಾದ ಮತ್ತು ರೈತರ ಆತ್ಮಹತ್ಯೆ ವಿಷಯ ಬಹುಚರ್ಚಿತವಾಗುತ್ತಿರುವ ಈ ಕಾಲದಲ್ಲಿ ನಮ್ಮ ಮುಖ್ಯಮಂತ್ರಿ, ಕೃಷಿ ಸಚಿವರು ಶಿರಸಿ ತಾಲ್ಲೂಕಿನ ಮಾದರಿಯನ್ನು ಗಮನಿಸಬೇಕು. ನಿಜವಾದ ಅರ್ಥದಲ್ಲಿ ರೈತರ ಅಭಿವೃದ್ಧಿಗೆ ರಹದಾರಿ ಇಲ್ಲಿದೆ.

ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನಲ್ಲಿ ಯಾವುದೋ ಒಂದು ಸೊಸೈಟಿ ಚೆನ್ನಾಗಿದೆ ಎಂದಲ್ಲ. ಬಹುತೇಕ ಎಲ್ಲ ಸೊಸೈಟಿಗಳೂ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿವೆ. ಇದಕ್ಕೆಲ್ಲ ಕಳಶಪ್ರಾಯದಂತೆ ತೋಟಗಾರ್ಸ್ ಸೇಲ್ ಸೊಸೈಟಿ (ಟಿ.ಎಸ್.ಎಸ್) ಇದೆ. ಹುಳಗೋಳ, ಮತ್ತಿಘಟ್ಟ, ತಟ್ಟೀಸರ, ನಾಣಿಕಟ್ಟಾ, ಉಮ್ಮಚಗಿ, ವಾನಳ್ಳಿ ಹೀಗೆ ಸಣ್ಣ ಸಣ್ಣ ಗ್ರಾಮಗಳ ಸಹಕಾರ ಸಂಘಗಳೂ ರೈತರಿಗೆ ಮಹಾನಗರದ ಸೌಲಭ್ಯಗಳನ್ನು ನೀಡುತ್ತಿವೆ.

‘ನಮ್ಮನ್ನು ಕೇವಲ ಸಹಕಾರ ಸಂಘ ಎಂದು ಯಾಕೆ ಕರೆಯುತ್ತೀರಿ... ನಾವೆಲ್ಲ ಈಗ ಕಾರ್ಪೊರೇಟ್ ಕಂಪನಿಯ ತರಹ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಘಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿ.ಇ.ಒ) ಇದ್ದಾರೆ. ರೈತರ ಬದುಕನ್ನು ಹಸನು ಮಾಡಲು ನಮ್ಮದು ನಿರಂತರ ಯತ್ನ’ ಎಂದು ಅತ್ಯಂತ ಸಣ್ಣ ಗ್ರಾಮ ನಾಣಿಕಟ್ಟಾದಲ್ಲಿ ಇರುವ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್.ಬಿ. ಹೆಗಡೆ ಹೇಳುತ್ತಾರೆ.

‘ರೈತರ ಕೆಲಸ ಎಂದರೆ ಹೊಲದಲ್ಲಿ ದುಡಿಯುವುದು ಅಷ್ಟೆ. ಮಾರುಕಟ್ಟೆ ಹುಡುಕಿಕೊಂಡು ಹೋಗುವುದು ಅವರ ಕೆಲಸ ಅಲ್ಲ. ಅದು ನಮ್ಮ ಕೆಲಸ. ರೈತರ ಬೆಳೆಗಳಿಗೆ ಅತ್ಯುತ್ತಮ ಬೆಲೆ ದೊರಕಿಸಿಕೊಡುವುದು ನಮ್ಮ ಕೆಲಸ. ಹೊಲದಲ್ಲಿ ದುಡಿಯುವುದಕ್ಕೆ ರೈತರಿಗೆ ಹೆಚ್ಚಿನ ಸಮಯ ಸಿಗುವಂತೆ ಮಾಡುವುದೂ ನಮ್ಮ ಕೆಲಸ. ಅದಕ್ಕೇ ನಾವು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ’ ಎನ್ನುತ್ತಾರೆ ಹುಳಗೋಳ ಸಂಘದ ನಿರ್ದೇಶಕ ಜಿ.ಎಂ. ಹೆಗಡೆ.

(ಹಿಟ್ಟಿನ ಗಿರಣಿ​)

ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಏಲಕ್ಕಿ ಮತ್ತು ಕಾಳುಮೆಣಸು ಕೂಡ ಇದೆ. ಇವುಗಳನ್ನು ಈ ಸಹಕಾರ ಸಂಘಗಳು ಖರೀದಿ ಮಾಡುತ್ತವೆ. ಮಾರಾಟದಿಂದ ಬಂದ ಹಣವನ್ನು ತಮ್ಮದೇ ಸಂಘದಲ್ಲಿ ಇರುವ ರೈತರ ಖಾತೆಗೆ ಜಮಾ ಮಾಡುತ್ತವೆ. ಬಹುತೇಕ ಎಲ್ಲ ಸಹಕಾರ ಸಂಘಗಳೂ ರೈತರಿಗೆ ಬೇಕಾಗುವ ಎಲ್ಲ ಸೌಕರ್ಯಗಳನ್ನೂ ಒದಗಿಸುತ್ತವೆ. ಒಂದರ್ಥದಲ್ಲಿ ಬ್ಯಾಂಕ್ ರೀತಿಯೂ ಕೆಲಸ ಮಾಡುತ್ತವೆ.

ಇಲ್ಲಿನ ಸಹಕಾರ ಸಂಘಗಳು ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ತರಹ ಕೆಲಸ ಮಾಡುತ್ತವೆ. ರೈತರ ಮೊಬೈಲ್ ರೀಚಾರ್ಜ್, ಟಿ.ವಿ ರೀಚಾರ್ಜ್ ಮಾಡಿಸುತ್ತವೆ. ವಿದ್ಯುತ್ ಬಿಲ್ ಕಟ್ಟುತ್ತವೆ. ರೈತರಿಗೆ ಎಲ್ಲಿಯಾದರೂ ಹೋಗಬೇಕು ಎಂದರೆ ಬಸ್ ಸೀಟು ಮುಂಗಡ ಕಾಯ್ದಿರಿಸುತ್ತವೆ. ರೈತರ ಮನೆಗಳಿಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತಮ್ಮದೇ ವಾಹನಗಳಲ್ಲಿ ಮನೆ ಬಾಗಿಲಿಗೆ ತಲುಪಿಸುತ್ತವೆ. ವಾಹನಗಳ ವಿಮೆ ಕಂತನ್ನು ಪಾವತಿ ಮಾಡುತ್ತವೆ. ಬಟ್ಟೆ, ರೈತಾಪಿ ಸಲಕರಣೆ ಯಾವುದೇ ಬೇಕಿದ್ದರೂ ಕಳಿಸಿಕೊಡುತ್ತವೆ. ರೈತರ ಉತ್ಪನ್ನಗಳನ್ನು ರೈತರ ಮನೆಗಳಿಗೇ ಹೋಗಿ ತರುತ್ತವೆ.

ರೈತರಿಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಒದಗಿಸುತ್ತವೆ. ಯಂತ್ರೋಪಕರಣಗಳು ಬಾಡಿಗೆ ಆಧಾರದಲ್ಲಿ ಮತ್ತು ಖರೀದಿಗೂ ಸಿಗುತ್ತವೆ. ಬಟ್ಟೆ, ಛತ್ರಿ, ಪಾತ್ರೆ, ಸಿಮೆಂಟ್, ಮರಳು, ಕಬ್ಬಿಣದ ಸಾಮಗ್ರಿಗಳನ್ನು ಒದಗಿಸುತ್ತವೆ. ರೈತರಿಗೆ ಬೇಕಾಗುವ ಸಸಿಗಳನ್ನು ನೀಡುವುದಕ್ಕಾಗಿಯೇ ನರ್ಸರಿ ವ್ಯವಸ್ಥೆಯೂ ಇಲ್ಲಿದೆ. ರೈತರ ಮನೆಯಲ್ಲಿ ಏನಾದರೂ ವಿಶೇಷ ಇದ್ದರೆ ಶಾಮಿಯಾನ, ಊಟದ ಪಾತ್ರೆ, ಕುರ್ಚಿಗಳನ್ನೂ ಒದಗಿಸುತ್ತವೆ. ಯಾವುದೂ ಪುಕ್ಕಟೆ ಸೇವೆಯಲ್ಲ. ಆದರೆ, ದುಬಾರಿಯೂ ಅಲ್ಲ.

ಅಡಿಕೆ ಗೊನೆ ಕೊಯ್ಯುವ ವ್ಯಕ್ತಿಗೆ ಅಪಘಾತ ವಿಮೆಯೂ ಇದೆ. ಜೊತೆಗೆ ತೋಟದ ಮಾಲೀಕರಿಗೆ ವಿಮೆ ಸೌಲಭ್ಯ ಇದೆ. ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ವಿಮೆಯೂ ದೊರೆಯುತ್ತದೆ. ಸದಸ್ಯರ ಮನೆಯಲ್ಲಿ ಯಾರೇ ನಿಧನರಾದರೂ ₹ 10,000 ನೀಡಲಾಗುತ್ತದೆ. ವೈಕುಂಠ ಸಮಾರಾಧನೆಗೆ ಬೇಕಾಗುವ ಸಾಮಗ್ರಿಗಳನ್ನೂ ಕೆಲವು ಸಂಘಗಳು ಮನೆಯ ಬಾಗಿಲಿಗೇ ತಲುಪಿಸುತ್ತವೆ. ಬಹುತೇಕ ಎಲ್ಲ ಸೌಲಭ್ಯಗಳೂ ಕ್ಯಾಶ್‌ಲೆಸ್!

 

‘ಪ್ರಧಾನಿ ನರೇಂದ್ರ ಮೋದಿ ಅವರು ಈಗ ಕ್ಯಾಶ್‌ಲೆಸ್ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಈ ಸೌಲಭ್ಯ ಬಂದು 30 ವರ್ಷಗಳೇ ಕಳೆದಿವೆ’ ಎನ್ನುತ್ತಾರೆ ಜಿ.ಎಂ. ಹೆಗಡೆ. ‘ರೈತರ ಖಾತೆಯಿಂದಲೇ ಹಣ ಮುರಿದುಕೊಂಡು ಅವರಿಗೆ ಸೌಲಭ್ಯ ಒದಗಿಸುತ್ತೇವೆ. ಲೆಕ್ಕಾಚಾರ ಪಕ್ಕಾ. ಸಾಲ ಸೌಲಭ್ಯವೂ ಇದೆ. ರೈತರ ಬಹುತೇಕ ಹಣಕಾಸು ನಿರ್ವಹಣೆಯನ್ನೂ ಸಂಘವೇ ಮಾಡುತ್ತದೆ’ ಎನ್ನುತ್ತಾರೆ ಅವರು.

ರೈತರ ತೋಟಗಳಿಗೆ ನಿರಂತರವಾಗಿ ತಜ್ಞರು ಭೇಟಿ ನೀಡುತ್ತಾರೆ. ಕೃಷಿ ಬಗ್ಗೆ ಸಲಹೆ, ಸೂಚನೆ ನೀಡುತ್ತಾರೆ. ರೈತರ ಆದಾಯ ಹೆಚ್ಚಿಸಲು ಮಿಶ್ರ ಬೆಳೆಗಳ ಮಾಹಿತಿಯನ್ನೂ ನೀಡಲಾಗುತ್ತದೆ.

‘ಸಹಕಾರ ಸಂಘ ಕಾರ್ಪೊರೇಟ್ ಕಂಪನಿ ತರಹ ಕೆಲಸ ಮಾಡುವುದರಿಂದ ಸಂಘದ ಆದಾಯವೂ ಹೆಚ್ಚುತ್ತಿದೆ. ರೈತರ ಆದಾಯವೂ ಹೆಚ್ಚುತ್ತಿದೆ. ನಮ್ಮ ಆದಾಯವನ್ನು ಹೆಚ್ಚಿಸಲು ಕಳೆದ ಬಾರಿ ನಾವು ಕಾಳು ಮೆಣಸನ್ನು ಬೆಳೆಯುವಂತೆ ರೈತರನ್ನು ಉತ್ತೇಜಿಸಿದೆವು. ರೈತರಿಗೆ ನಾವೇ ಉತ್ತಮ ತಳಿಯ ಸಸಿಗಳನ್ನೂ ವಿತರಿಸಿ ತಾಂತ್ರಿಕ ಸಲಹೆಗಳನ್ನೂ ನೀಡಿದೆವು. ಇದರಿಂದ ರೈತರ ಆದಾಯವೂ ಹೆಚ್ಚಾಗಿದೆ. ಸಂಘದ ಆದಾಯವೂ ಹೆಚ್ಚಾಗಿದೆ. ರೈತರಿಗೆ ಮಾತ್ರವಲ್ಲ. ಕೃಷಿ ಕೂಲಿ ಕಾರ್ಮಿಕರಿಗೂ ಸೌಲಭ್ಯ ಒದಗಿಸಿದ್ದೇವೆ. ಸ್ವಸಹಾಯ ಗುಂಪುಗಳನ್ನು ರಚಿಸಿ ಅವರೂ ವಿವಿಧ ಬೆಳೆ ಬೆಳೆಯುವಂತೆ ಉತ್ತೇಜಿಸಿದ್ದೇವೆ’ ಎಂದು ನಾರಾಯಣ ಮತ್ತೀಹಳ್ಳಿ ಹೇಳುತ್ತಾರೆ.

(ಶಿರಸಿಯಲ್ಲಿ ತಲೆಎತ್ತಿರುವ ಸೂಪರ್‌ ಮಾರ್ಕೆಟ್)

‘ಮಹಾನಗರಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನೂ ಹಳ್ಳಿಗಳಲ್ಲಿಯೇ ಒದಗಿಸುವುದು ನಮ್ಮ ಗುರಿ. ಇದರಿಂದ ನಗರದತ್ತ ವಲಸೆ ಹೋಗುವುದನ್ನು ತಡೆಯಬಹುದು. ಜೊತೆಗೆ ಈಗಾಗಲೇ ನಗರದಲ್ಲಿ ನೆಲೆಸಿರುವವರೂ ಹಳ್ಳಿಗಳತ್ತ ಮತ್ತೆ ಮುಖ ಮಾಡಲು ಕೂಡ ಅನುಕೂಲವಾಗುತ್ತದೆ. ಈಗಾಗಲೇ ಸಾಕಷ್ಟು ಜನರು ನಗರದಿಂದ ವಾಪಸಾಗಿ ಇಲ್ಲಿಯೇ ಕೃಷಿ ಕೈಗೊಂಡಿದ್ದಾರೆ. ಇಲ್ಲಿ ನಗರದ ಸೌಲಭ್ಯ ಸಿಗುತ್ತದೆ. ಜೊತೆಗೆ ಉತ್ತಮ ಗಾಳಿ, ಪರಿಸರ, ಶುದ್ಧ ನೀರು ಲಭ್ಯ. ನಗರದಲ್ಲಿ ಇದು ಸಿಗುವುದಿಲ್ಲವಲ್ಲ?! ನೋಡ್ತಾ ಇರಿ. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಭಾಗದ ಬಹುತೇಕ ಯುವಜನರು ಮತ್ತೆ ಹಳ್ಳಿಗಳತ್ತ ಮುಖ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ತ್ಯಾಗಲಿ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಮಾದ್ನಕಳ್.

ಶಿರಸಿ ತಾಲ್ಲೂಕಿನ ಇಂತಹ ಸಹಕಾರ ಸಂಘಗಳಲ್ಲಿ ಸಿಗುವ ಎಲ್ಲ ವಸ್ತುಗಳ ಬೆಲೆ ಇತರ ಮಾರುಕಟ್ಟೆಗಿಂತ ಕಡಿಮೆ ಇರುತ್ತದೆ. ಲಾಭವನ್ನು ರೈತರಿಗೇ ತಲುಪಿಸಬೇಕು ಎನ್ನುವುದು ಒಂದು ಕಾರಣವಾದರೆ ಇನ್ನೊಂದು ಮುಖ್ಯ ಕಾರಣ ಈಗ ಸಹಕಾರ ಸಂಘಗಳ ಲಾಭಕ್ಕೂ ಆದಾಯ ತೆರಿಗೆ ಇದೆ. ಆದಾಯವನ್ನು ಹೆಚ್ಚಿಸಿಕೊಂಡು ತೆರಿಗೆ ಪಾವತಿ ಮಾಡುವುದಕ್ಕಿಂತ ಸಂಘದ ಸದಸ್ಯರಿಗೇ ಕಡಿಮೆ ದರದಲ್ಲಿ ಸೌಲಭ್ಯ ಒದಗಿಸುವುದು ಉತ್ತಮ ಎನ್ನುವುದು ಬಹುತೇಕ ಎಲ್ಲ ಸಹಕಾರ ಸಂಘಗಳ ಅಭಿಮತ.

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಟಿ.ಎಸ್.ಎಸ್ ಸೂಪರ್ ಮಾರ್ಕೆಟ್. ಇಲ್ಲಿ ಬಹುತೇಕ ಎಲ್ಲ ವಸ್ತುಗಳೂ ಇತರ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಜೊತೆಗೆ ಗುಣಮಟ್ಟ ಕೂಡ ಇದೆ. ಬಟ್ಟೆಯಿಂದ ಬಂಗಾರದವರೆಗೆ ಎಲ್ಲವೂ ಇಲ್ಲಿ ಲಭ್ಯ. ಟಿ.ಎಸ್.ಎಸ್ ಸೂಪರ್ ಮಾರ್ಕೆಟ್ ನಿಜವಾದ ಅರ್ಥದಲ್ಲಿ ಶಿರಸಿ ಮಾರುಕಟ್ಟೆಯನ್ನು ನಿಬ್ಬೆರಗಾಗಿಸಿದೆ. ಅದೇ ರೀತಿಯಲ್ಲಿ ಟಿ.ಎಂ.ಎಸ್ ಕೂಡ ಕೆಲಸ ಮಾಡುತ್ತಿದೆ.

‘ನಮ್ಮ ಮಕ್ಕಳು ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿ ಇದ್ದಾರೆ. ಅಲ್ಲಿ ಅವರಿಗೆ ಮಾಲ್‌ಗಳಿಗೆ ಹೋಗುವುದು ಮಾಮೂಲು. ಇಲ್ಲಿದ್ದವರಿಗೆ ಮಾಲ್‌ಗಳ ಪರಿಚಯ ಇರಲಿಲ್ಲ. ಶಿರಸಿ ಮತ್ತು ಸಿದ್ದಾಪುರದಲ್ಲಿ ಟಿ.ಎಸ್‌.ಎಸ್ ಸೂಪರ್ ಮಾರ್ಕೆಟ್ ಮಾಡಿರುವುದರಿಂದ ಮಾಲ್‌ಗಳ ಪರಿಚಯ ನಮಗೂ ಆಗಿದೆ’ ಎನ್ನುತ್ತಾರೆ ಗ್ರಾಹಕ ದಂಟಕಲ್ ವೆಂಕಟರಮಣ ಹೆಗಡೆ.

(ಸಹಕಾರ ಸಂಘದಿಂದ ನಡೆಯುತ್ತಿರುವ ಆಭರಣದ ಅಂಗಡಿ)

ಇಲ್ಲಿರುವ ಬಹುತೇಕ ಸಹಕಾರ ಸಂಘಗಳಲ್ಲಿ ಸೇಫ್ ಲಾಕರ್‌ಗಳಿವೆ. ರೈತರ ಅಮೂಲ್ಯ ವಸ್ತುಗಳಿಗೆ ಇಲ್ಲಿ ರಕ್ಷಣೆ ಇದೆ. ಎಲ್ಲ ಸಂಘಗಳೂ ಸಿ.ಸಿ.ಟಿ.ವಿ ಸೌಲಭ್ಯ ಬಳಸುತ್ತಿವೆ.

ಶಿರಸಿಯಲ್ಲಿ ಇನ್ನೊಂದು ವಿಶಿಷ್ಟ ಸಹಕಾರ ಸಂಘ ಇದೆ. ಉಳಿದೆಲ್ಲ ಸಹಕಾರ ಸಂಘಗಳು ವಾಣಿಜ್ಯ ಬೆಳೆಗಳಾದ ಅಡಿಕೆ, ಏಲಕ್ಕಿ, ಕಾಳು ಮೆಣಸು, ಬಾಳೆಕಾಯಿ, ತೆಂಗಿನಕಾಯಿ ಖರೀದಿ ಮಾಡಿದರೆ ಶಿರಸಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾಂಗಣದಲ್ಲಿಯೇ ತಲೆ ಎತ್ತಿ ನಿಂತಿರುವ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಘ ರೈತರ ಉಪ ಉತ್ಪನ್ನಗಳನ್ನು ಖರೀದಿ ಮಾಡಿ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತದೆ.

ಜೇನುತುಪ್ಪ, ಕರಿಮೆಣಸು, ಬಿಳಿ ಮೆಣಸು, ಗೇರುಬೀಜ, ಲವಂಗ, ಜಾಯಿಕಾಯಿ ಮತ್ತು ಜಾಪತ್ರೆ, ಅರಿಸಿನ, ದಾಲ್ಚಿನ್ನಿ, ಸೂಜಿ ಮೆಣಸು, ಕಷಾಯದ ಪುಡಿ, ಶೀಗೆಕಾಯಿ ಪುಡಿ, ಹಲಸಿನ ಹಪ್ಪಳ, ಬಾಳೆಕಾಯಿ ಹಪ್ಪಳ ಮತ್ತು ಚಿಪ್ಸ್, ವಾಟೆಹುಳಿ, ಪೈನಾಪಲ್, ಕೋಕಂ ಜ್ಯೂಸ್, ಕೋಕಂ ಜಾಮ್, ಜೋನಿ ಬೆಲ್ಲ, ಬ್ರಾಹ್ಮಿ ಹೀಗೆ ಉಪ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುತ್ತದೆ. ಹಲಸಿನ ಬೀಜ, ಕೊಳೆತ ತೆಂಗಿನಕಾಯಿಗಳನ್ನೂ ಇಲ್ಲಿ ಖರೀದಿ ಮಾಡಲಾಗುತ್ತದೆ. ಎಲ್ಲ ರೀತಿಯ ಸಾವಯವ ಉತ್ಪನ್ನಗಳಿಗೆ ಇದು ಮಾರುಕಟ್ಟೆಯನ್ನು ಕಲ್ಪಿಸುತ್ತದೆ.

ರಾಜ್ಯದಲ್ಲಿ ಈಗ ಕೆ.ಎಂ.ಎಫ್ ಪ್ರಸಿದ್ಧ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಆದರೆ ಕೆ.ಎಂ.ಎಫ್ ಆರಂಭಕ್ಕೆ 15 ವರ್ಷಗಳ ಮೊದಲೇ ಶಿರಸಿ ತಾಲ್ಲೂಕು ಮಿಲ್ಕ್ ಯೂನಿಯನ್ ಇತ್ತು. ಹುಳಗೋಳ ಸಹಕಾರ ಸಂಘದಿಂದ ಇದು ಹುಟ್ಟಿಕೊಂಡು ಶಿರಸಿ ಪಟ್ಟಣಕ್ಕೆ ಹಾಲು ಒದಗಿಸುತ್ತಿತ್ತು. ಈಗ ಅದು ಕೆ.ಎಂ.ಎಫ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

(ವ್ಯಾಪಾರ)

ಪರಿಸರ ಕಾಳಜಿ ಇಲ್ಲಿನ ಎಲ್ಲ ಸಂಘಗಳ ಮುಖ್ಯ ಧ್ಯೇಯದಲ್ಲಿ ಒಂದು. ಹುಳಗೋಳ ಸಂಘ 1981ರಿಂದಲೇ ವಿದ್ಯಾರ್ಥಿ ಕ್ಯಾಶ್ ಸರ್ಟಿಫಿಕೇಟ್ ಆರಂಭಿಸಿ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದೆ. ಶಿಕ್ಷಣ ಸಾಲವನ್ನೂ ನೀಡಲಾಗುತ್ತಿದೆ. ಅತಿಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರೋತ್ಸಾಹಧನದ ಯೋಜನೆಯೂ ಇಲ್ಲಿದೆ.

ಪ್ರಮುಖ ವಾಣಿಜ್ಯ ಬೆಳೆಗಳಿಗೆ ಟಿ.ಎಸ್.ಎಸ್, ಟಿ.ಎಂ.ಎಸ್, ಗ್ರಾಮ ಸಹಕಾರ ಸಂಘಗಳಾದರೆ ಉಪ ಉತ್ಪನ್ನಗಳಿಗೆ ಕದಂಬ. ಹೀಗೆ ರೈತರ ಬದುಕನ್ನು ಹಸನು ಮಾಡುವುದಕ್ಕೆ ಇಲ್ಲಿನ ಸಂಘಗಳು ಒಮ್ಮನಸಿನಿಂದ ದುಡಿಯುತ್ತಿವೆ.

ಸಾಲ ಮನ್ನಾಕ್ಕೆ ಒತ್ತಾಯಿಸುವವರು, ರೈತರ ಇಂದಿನ ದುಃಸ್ಥಿತಿಗೆ ಮರುಗುವವರು ಒಮ್ಮೆ ಇಲ್ಲಿ ಬಂದು ಇಲ್ಲಿನ ಸಹಕಾರ ಸಂಘಗಳ ಕಾರ್ಯವೈಖರಿಯನ್ನು ನೋಡಿದರೆ ರೈತರಿಗೆ ಹೇಗೆ ನೆರವಾಗಬಹುದು ಎನ್ನುವುದು ಗಮನಕ್ಕೆ ಬರುತ್ತದೆ. ಪ್ರಾಮಾಣಿಕ ಮತ್ತು ಪಾರದರ್ಶಕ ಯತ್ನಗಳಿಂದ ರೈತರ ಬದುಕನ್ನು ಹಸನು ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಆಡಳಿತಗಾರರು ಬಂದು ನೋಡಲಿ. ಇಂತಹ ಸಂಘಗಳು ರಾಜ್ಯದ ಇತರ ಕಡೆಯೂ ತಲೆ ಎತ್ತಲಿ. ರೈತ ತಲೆ ಎತ್ತಿ ನಿಲ್ಲಲಿ.

(ಈ ವರ್ಷ ಯಾವ ಬೆಳೆ ಬೆಳೆದರೆ ಹೆಚ್ಚು ಲಾಭ ಎಂಬ ಮಾಹಿತಿ ಅಷ್ಟೇ ಅಲ್ಲ, ಸಸಿ ಕೂಡ ಒದಗಿಸುವ ಸೌಲಭ್ಯ​)

**

ವಧುಶ್ರೀ ಠೇವಣಿ

ಇಲ್ಲಿನ ಸಹಕಾರ ಸಂಘಗಳು ಕೇವಲ ವ್ಯಾಪಾರ ಮಾಡುವುದಿಲ್ಲ. ಸಂಘದ ಸದಸ್ಯರ ಎಲ್ಲ ರೀತಿಯ ಸಂಕಷ್ಟಗಳಿಗೂ ನೆರವಾಗುತ್ತವೆ. ಹುಳಗೋಳ ಸಹಕಾರ ಸಂಘದಲ್ಲಿ ‘ವಧುಶ್ರೀ’ ಎಂಬ ವಿಶಿಷ್ಟ ಯೋಜನೆ ಇದೆ. ಇದು ಹೆಣ್ಣುಮಕ್ಕಳ ವಿವಾಹಕ್ಕೆ ನೆರವಾಗುವ ಠೇವಣಿ ಯೋಜನೆ. ಸಂಘದ ಸದಸ್ಯರು ಈ ಯೋಜನೆಯಲ್ಲಿ ಹಣ ತೊಡಗಿಸಿ ಹೆಣ್ಣುಮಕ್ಕಳ ವಿವಾಹದ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಬಹುದು.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಯೂ ಇದೆ. ಸಂಘದ ಸದಸ್ಯರು ಕೊಂಚ ಮೊದಲೇ ಆಲೋಚಿಸಿದರೆ ಇಲ್ಲಿನ ನಿವಾಸಿಗಳಿಗೆ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ವಿವಾಹ ಹೊರೆಯಾಗುವುದಿಲ್ಲ. ಸದಸ್ಯರ ಹೊರೆಯನ್ನು ತಪ್ಪಿಸುವುದೇ ಸಂಘದ ಧ್ಯೇಯ. ತೋಟಗಾರ್ಸ್ ಸೊಸೈಟಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ತನ್ನ ಸೂಪರ್ ಮಾರ್ಕೆಟ್‌ನಲ್ಲಿ ಬಂಗಾರದ ಅಂಗಡಿಯನ್ನೇ ತೆರೆದಿದೆ.

ಗುಣಮಟ್ಟದ ಚಿನ್ನ ಕಡಿಮೆ ಬೆಲೆಗೆ ಇಲ್ಲಿ ಲಭ್ಯವಿದೆ. ಈಗ ಇಲ್ಲಿನ ಜನರು ಮದುವೆ ಮತ್ತು ಇತರ ಸಮಾರಂಭಗಳಿಗೆ ಚಿನ್ನವನ್ನು ಇಲ್ಲಿಯೇ ಖರೀದಿಸುತ್ತಿದ್ದಾರೆ. ವಿವಾಹಕ್ಕೆ ಬೇಕಾಗುವ ಹಣ ವಧುಶ್ರೀ ಯೋಜನೆಯಿಂದ ಲಭ್ಯ. ಉತ್ತಮ ಗುಣಮಟ್ಟದ ಚಿನ್ನ ಟಿ.ಎಸ್‌.ಎಸ್‌.ನಲ್ಲಿ ಲಭ್ಯ. ಇನ್ನೇನು ಬೇಕು?

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !