‘ಮಾಲ್ದಂಡಿ’ ತಳಿಯ ಜೋಳ ಮರೆತ ರೈತರು..!

7
ಬಿಜಾಪುರದ ಬಿಳಿಜೋಳದ ಬಿತ್ತನೆ ಪ್ರದೇಶ ಕುಸಿತ; ತೊಗರಿ–ಕಡಲೆಯತ್ತ ಚಿತ್ತ

‘ಮಾಲ್ದಂಡಿ’ ತಳಿಯ ಜೋಳ ಮರೆತ ರೈತರು..!

Published:
Updated:
Deccan Herald

ವಿಜಯಪುರ: ಎಲ್ಲೆಡೆ ಹೆಸರುವಾಸಿಯಾಗಿರುವ ಬಿಜಾಪುರದ ಬಿಳಿಜೋಳದ ಬಿತ್ತನೆ ಪ್ರದೇಶ ದಶಕದಿಂದಲೂ ಕುಸಿತಗೊಳ್ಳುತ್ತಿದೆ. ಈಚೆಗೆ ಬಿಳಿಜೋಳದ ರೊಟ್ಟಿ ಬಳಸುವವರ ಸಂಖ್ಯೆ ಒಂದೆಡೆ ಹೆಚ್ಚುತ್ತಿದ್ದರೆ; ಇನ್ನೊಂದೆಡೆ ಬೆಳೆಯುವ ಪ್ರದೇಶ ಕುಂಠಿತಗೊಂಡಿದೆ.

2008–09ರಲ್ಲಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 2.40 ಲಕ್ಷ ಹೆಕ್ಟೇರ್‌ನಲ್ಲಿ ಬಿಳಿ ಜೋಳ ಬಿತ್ತನೆಯಾಗಿತ್ತು. ಇದನ್ನು ಹೊರತುಪಡಿಸಿದರೆ 2017–18ರಲ್ಲಿ 2.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದೆ ದಾಖಲೆ. ಇನ್ನುಳಿದ ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್‌ನಿಂದ 1.77 ಲಕ್ಷ ಹೆಕ್ಟೇರ್‌ವರೆಗೂ ಮಾತ್ರ ಬಿತ್ತನೆಯಾಗಿದೆ ಎಂಬುದನ್ನು ಜಿಲ್ಲಾ ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢೀಕರಿಸುತ್ತವೆ.

‘ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಜೋಳ ಬಿತ್ತನೆ ಪ್ರದೇಶದ ಗುರಿಯನ್ನು ಇಲಾಖೆ ಕುಂಠಿತಗೊಳಿಸಿಕೊಂಡು, 2.08 ಲಕ್ಷ ಹೆಕ್ಟೇರ್‌ ಗುರಿ ನಿಗದಿಪಡಿಸಿಕೊಂಡರೂ; 1.48 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಹಿಂದಿನ ವರ್ಷದ ಸಾಧನೆಗೆ ಹೋಲಿಸಿದರೆ ಈ ಬಾರಿ 1 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿಲ್ಲ’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಿತ್ತನೆ ಕುಸಿತದ ಕಾರಣ

‘ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಮೊದಲು ಮುಂಗಾರು ಹಂಗಾಮಿನಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳ ಬಿತ್ತುತ್ತಿದ್ದರು. ಇದೀಗ ಹತ್ತಿಯ ಬದಲು ತೊಗರಿ ಬಿತ್ತುತ್ತಿದ್ದಾರೆ. ಇದು ಡಿಸೆಂಬರ್‌ನಲ್ಲಿ ಕಟಾವಿಗೆ ಬರುವುದರಿಂದ ಎರಡನೇ ಬೆಳೆ ಬೆಳೆಯಲು ಅವಕಾಶ ಸಿಗ್ತಿಲ್ಲ’ ಎನ್ನುತ್ತಾರೆ ಶಿವಕುಮಾರ್.

‘ಕಡಲೆ–ತೊಗರಿ ಕೊಯ್ಲಿಗೂ ಯಂತ್ರೋಪಕರಣ ಬಂದಿವೆ. ಧಾರಣೆಯೂ ಜೋಳಕ್ಕಿಂತ ಹೆಚ್ಚಿದೆ. ಆದರೆ ಜೋಳದ ಕೊಯ್ಲಿಗೆ ಇಂದಿಗೂ ಕಾರ್ಮಿಕರನ್ನೇ ಅವಲಂಬಿಸಬೇಕಿದೆ. ಇದರ ಜತೆ ಆಹಾರ ಪದ್ಧತಿಯೂ ರೊಟ್ಟಿಯಿಂದ ಚಪಾತಿಗೆ ಬದಲಾಗಿರುವುದರ ಪರಿಣಾಮ ಜೋಳದ ಬಿತ್ತನೆ ಕುಂಠಿತಗೊಳ್ಳುತ್ತಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ತಿಳಿಸಿದರು.

ಬೆಳೆದರೂ ಬೆಲೆಯಿಲ್ಲ..!

‘ಬಿಳಿಜೋಳ ಬೆಳೆದರೂ ಬೆಲೆಯಿಲ್ಲ. ಸರ್ಕಾರದಿಂದ ಯಾವೊಂದು ಅನುಕೂಲ ಸಿಗ್ತಿಲ್ಲ. ಇಂಥ ಸನ್ನಿವೇಶದಲ್ಲಿ ಏಕಾದರೂ ಬೆಳೆಯಬೇಕು ನೀವೇ ಹೇಳಿ ?’ ಎನ್ನುತ್ತಾರೆ ಸಾರವಾಡ ಗ್ರಾಮದ ರೈತ ಈರಪ್ಪ ಪಾರಶೆಟ್ಟಿ.

‘ಕಡಲೆ–ತೊಗರಿಗಿರುವ ಬಾಧೆ ಬಿಳಿಜೋಳಕ್ಕಿಲ್ಲ. ಆದರೆ ಸೂಕ್ತ ಪ್ರೋತ್ಸಾಹ ಸಿಗ್ತಿಲ್ಲ. ಬೆಳೆ ನಷ್ಟವಾದರೂ ವಿಮೆ ಸಿಗೋದು ಒಂದು ಎಕರೆಗೆ ₹ 400. ಆದರೆ ಕಡಲೆಗೆ ₹ 2400 ಇದೆ. ಸರ್ಕಾರ ವಿಶೇಷ ಒತ್ತು ನೀಡಿದರೆ ನಾವು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತೇವೆ’ ಎಂದು ಅವರು ಹೇಳಿದರು.

‘ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಧಾರಣೆ ಒಂದು ಕ್ವಿಂಟಲ್‌ಗೆ ₹ 4800ರಿಂದ ₹ 5000. ಕನಿಷ್ಠ ಬೆಂಬಲ ಬೆಲೆ ₹ 4400 ಇದೆ. ಬಿಳಿಜೋಳದ ಕನಿಷ್ಠ ಬೆಂಬಲ ಬೆಲೆ ₹ 2450. ಮುಕ್ತ ಮಾರುಕಟ್ಟೆಯಲ್ಲಿ ₹ 2800 ಇದೆ. ಧಾರಣೆಯಲ್ಲಿನ ಈ ವ್ಯತ್ಯಾಸದಿಂದಲೂ ಹೆಚ್ಚಿನ ರೈತರು ಕಡಲೆ, ತೊಗರಿಯತ್ತ ಒಲವು ತೋರುತ್ತಿದ್ದಾರೆ’ ಎಂದು ವಿಜಯಪುರ ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಎಚ್‌.ಎಸ್‌.ಅವಟಿ ತಿಳಿಸಿದರು.

**

ಜಾನುವಾರು ಸಂಖ್ಯೆ ಕಡಿಮೆಯಾಗಿದ್ದು, ಗೋಧಿ–ಅಕ್ಕಿಯ ಬಳಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಬಿಳಿಜೋಳಕ್ಕೆ ವೈಜ್ಞಾನಿಕ ಧಾರಣೆ ಸಿಗದಿರುವುದು ಸಹ ಬಿತ್ತನೆ ಪ್ರದೇಶ ಕುಂಠಿತಗೊಳ್ಳಲು ಕಾರಣ

– ಶಿವಕುಮಾರ್, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !