ಸಾಲ ಮನ್ನಾ: ₹ 16 ಸಾವಿರ ಕೋಟಿಗೆ ಇಳಿಕೆ

ಸೋಮವಾರ, ಜೂನ್ 24, 2019
29 °C

ಸಾಲ ಮನ್ನಾ: ₹ 16 ಸಾವಿರ ಕೋಟಿಗೆ ಇಳಿಕೆ

Published:
Updated:

ಬೆಂಗಳೂರು: ರೈತರ ಬೆಳೆ ಸಾಲ ಮನ್ನಾದ ಒಟ್ಟು ಮೊತ್ತ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಸಾಗಿದ್ದು, ಪ್ರಸ್ತುತ ₹16 ಸಾವಿರ ಕೋಟಿಗೆ ಇಳಿದಿದೆ.

ಆರಂಭದಲ್ಲಿ ₹46 ಸಾವಿರ ಕೋಟಿ ಎಂದು ಸರ್ಕಾರ ಅಂದಾಜಿಸಿತ್ತು. ನಂತರ ₹18 ಸಾವಿರ ಕೋಟಿಗೆ ತಗ್ಗಿದ್ದು, ಈಗ ಇನ್ನೂ ಕಡಿಮೆಯಾಗಿದೆ.

ಸಾಲದ ಒಟ್ಟು ಮೊತ್ತದಲ್ಲಿ ಕಡಿಮೆಯಾಗಲು ವಾಣಿಜ್ಯ ಬ್ಯಾಂಕ್‌ಗಳ ತಪ್ಪು ಲೆಕ್ಕಾಚಾರ ಪ್ರಮುಖ ಕಾರಣ. ಬೆಳೆ ಸಾಲದ ಬಾಕಿ ವಿವರ ಕೊಡಬೇಕಿದ್ದ ಬ್ಯಾಂಕ್‌ಗಳು ಅದರ ಬದಲು ರೈತರು ಪಡೆದಿದ್ದ ಟ್ರಾಕ್ಟರ್, ವಾಹನ, ಮನೆ ನಿರ್ಮಾಣ ಹಾಗೂ ಇತರ ಎಲ್ಲ ರೀತಿಯ ಸಾಲದ ವಿವರಗಳನ್ನು ಸೇರಿಸಿ ನೀಡಿದ್ದವು. ಹೀಗಾಗಿ, ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಲ ಮನ್ನಾದ ಮಿತಿಯನ್ನು ಸರ್ಕಾರ ₹2 ಲಕ್ಷಕ್ಕೆ ಸೀಮಿತಗೊಳಿಸಿದ್ದರೂ, ರೈತರ ಹೆಸರಿನಲ್ಲಿ ಇದ್ದ ಸಾಲದ ಒಟ್ಟು ಮೊತ್ತವನ್ನು ಸಾಲ ಮನ್ನಾದ ಲೆಕ್ಕಕ್ಕೆ ಸೇರಿಸಲಾಗಿತ್ತು. (₹10, ₹20 ಲಕ್ಷ– ಹೀಗೆ ರೈತರ ಹೆಸರಿನಲ್ಲಿ ಇದ್ದ ಎಲ್ಲ ಸಾಲದ ಮೊತ್ತವನ್ನು ಸೇರಿಸಿ ಲೆಕ್ಕಹಾಕಿರುವುದು). ಇಂತಹ ತಪ್ಪು ಲೆಕ್ಕಾಚಾರದಿಂದ ಸಾಲದ ಒಟ್ಟು ಮೊತ್ತ ₹46 ಸಾವಿರ ಕೋಟಿಗೆ ಏರಿಕೆಯಾಗಿತ್ತು.  

ಜತೆಗೆ ಸಾಲ ಮನ್ನಾಗೆ ಸರ್ಕಾರ ಸಹ ಕೆಲವು ಷರತ್ತುಗಳನ್ನು ವಿಧಿಸಿದೆ. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ನಿವೃತ್ತಿ ವೇತನದಾರರು, ಕೃಷಿಯೇತರ ಆದಾಯ ಹೊಂದಿದವರನ್ನು ಕೈಬಿಡಲಾಗಿದೆ. ಹಾಗಾಗಿ ಗಣನೀಯ ಪ್ರಮಾಣದಲ್ಲಿ ಸಾಲ ಮನ್ನಾ ಸೌಲಭ್ಯ ವ್ಯಾಪ್ತಿಗೆ ಒಳಪಡುವ ಫಲಾನುಭವಿ ರೈತರ ಸಂಖ್ಯೆ ಕಡಿಮೆಯಾಗಿದೆ.

ಬೆಳೆಸಾಲದ ಮೊತ್ತ ₹16 ಸಾವಿರ ಕೋಟಿಯಾಗಿದ್ದು, ರೈತರು ವಾಣಿಜ್ಯ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕ್‌
ಗಳಲ್ಲಿ ಮಾಡಿದ ಕೃಷಿ ಸಾಲಗಳ ಮೊತ್ತ ₹30 ಸಾವಿರ ಕೋಟಿಗಳಷ್ಟಿದೆ ಎಂದು ಸಾಲ ಮನ್ನಾ ಯೋಜನೆಯ ಉಸ್ತುವಾರಿ ಅಧಿಕಾರಿ ಮುನೀಷ್‌ ಮೌದ್ಗಿಲ್ ತಿಳಿಸಿದ್ದಾರೆ.

ಈವರೆಗೆ 9 ಲಕ್ಷ ರೈತರು ಆಧಾರ್, ಪಡಿತರ ಚೀಟಿ, ಭೂಮಿ ಸರ್ವೆ ನಂಬರ್ ಮಾಹಿತಿ ನೀಡಿದ್ದು, ₹6 ಸಾವಿರ ಕೋಟಿ ಬಿಡುಗಡೆಗೆ ಕ್ರಮ ವಹಿಸಲಾಗಿದೆ. ಕಳೆದ ಮೇ ತಿಂಗಳ ಅಂತ್ಯಕ್ಕೆ ₹4,830 ಕೋಟಿ ಬಿಡುಗಡೆ ಮಾಡಿದ್ದು, ಜೂನ್– ಜುಲೈ ಅಂತ್ಯಕ್ಕೆ ₹2 ಸಾವಿರ ಕೋಟಿ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಸಹಕಾರಿ ಸಂಘಗಳಿಗೆ ಒಟ್ಟು ₹6,830 ಕೋಟಿ ಪಾವತಿಸದಂತೆ ಆಗಲಿದೆ ಎಂದರು.

 ಎನ್‌ಪಿಎ ಸಾಲಕ್ಕೆ ರಿಯಾಯಿತಿ: ವಾಣಿಜ್ಯ ಬ್ಯಾಂಕ್‌ಗಳು ಸಹ ರೈತರ ಎನ್‌ಪಿಎ ಸಾಲದ ಮನ್ನಾಕ್ಕೆ ನೆರವು ನೀಡಲು ನಿರ್ಧರಿಸಿವೆ. ಶುಕ್ರವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ, ಸಾಲ ಮನ್ನಾದ ಬಾಕಿ ಮೊತ್ತದ ಮೇಲೆ ಶೇ 25ರಷ್ಟು ರಿಯಾಯಿತಿ ಪ್ರಕಟಿಸಲಾಯಿತು. ಪ್ರಸ್ತುತ ಸುಮಾರು 1 ಲಕ್ಷ ರೈತರ ಸಾಲ ಮನ್ನಾಗೆ ಆದೇಶಿಸಲಾಗಿದೆ. ಈ ರೈತರ ಬಾಕಿ ₹965 ಕೋಟಿ ಬಿಡುಗಡೆ ಮಾಡಬೇಕಿದ್ದು, ಬ್ಯಾಂಕ್‌ಗಳು ರಿಯಾಯಿತಿ ನೀಡಿದ್ದರಿಂದ ₹750 ಕೋಟಿ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಬ್ಯಾಂಕ್‌ಗಳು ₹215 ಕೋಟಿ ರಿಯಾಯಿತಿ ನೀಡಿವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !