‘ಸಾವಯವ ರೈತರ ಸಹಕಾರ ಸಂಘ, ಸಾಮೂಹಿಕ ಕೃಷಿಯೇ ಭವಿಷ್ಯ’

7
ರೈತ ಸಂತೆ ಬಗ್ಗೆ ರೈತರ ಮುಖಂಡರ ಚರ್ಚೆ: ಸಾವಯವ, ನೈಸರ್ಗಿಕ ಕೃಷಿಗೆ ಒತ್ತು ಕೊಡಲು ಕರೆ

‘ಸಾವಯವ ರೈತರ ಸಹಕಾರ ಸಂಘ, ಸಾಮೂಹಿಕ ಕೃಷಿಯೇ ಭವಿಷ್ಯ’

Published:
Updated:
Prajavani

ಚಾಮರಾಜನಗರ: ಎದುರಿಸುತ್ತಿರುವ ಸಂಕಷ್ಟಗಳಿಂದ ಪಾರಾಗಬೇಕಾದರೆ ರೈತರು ಪ್ರಾಮಾಣಿಕವಾಗಿ ಸಾವಯವ, ನೈಸರ್ಗಿಕ ಹಾಗೂ ಸುಸ್ಥಿರ ಕೃಷಿಯತ್ತ ಮುಖಮಾಡಬೇಕು. ಒಂದು ಬೆಳೆಯನ್ನು ಎಕರೆಗಟ್ಟಲೆ ಬೆಳೆಯದೆ, ಸಮಗ್ರ ಕೃಷಿಯನ್ನು ಮಾಡಬೇಕು. ಜಿಲ್ಲೆಯಲ್ಲಿ ಸಾವಯವ ರೈತರ ಸಹಕಾರ ಸಂಘ ಸ್ಥಾಪನೆಯಾಗಬೇಕು. ಒಟ್ಟಾಗಿ ಸಾಮೂಹಿಕ ಕೃಷಿ ಮಾಡುವ ಮೂಲಕ ಆರ್ಥಿಕವಾಗಿ ಪ್ರಬಲರಾಗಬಹುದು... 

– ಅಮೃತಭೂಮಿಯಲ್ಲಿ ಬುಧವಾರ ನಡೆದ ರೈತ ಮುಖಂಡರ ಚರ್ಚೆಯಲ್ಲಿ ಕೇಳಿ ಬಂದ ಅಭಿಪ್ರಾಯಗಳಿವು. ನಗರದಲ್ಲಿ 24ರಂದು ಉದ್ಘಾಟನೆಗೊಳ್ಳಲಿರುವ ಸಾವಯವ ರೈತ ಸಂತೆಯ ಬಗ್ಗೆ ರೈತರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ರೈತರ ಪರಿಸ್ಥಿತಿ, ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಸ್ತಾಪವಾಯಿತು. ಸವಾಲುಗಳನ್ನು ಯಾವ ರೀತಿ ಎದುರಿಸಬಹುದು ಎಂಬುದರ ಕುರಿತಾಗಿಯೂ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ನಿಸರ್ಗ ಟ್ರಸ್ಟ್‌ನ ಅಧ್ಯಕ್ಷ ಕುಕ್ಕರಹಳ್ಳಿ ಬಸವರಾಜು ಅವರು, ‘ನಮ್ಮದೇ ಆದ ಮಾರುಕಟ್ಟೆ ಸ್ಥಾಪನೆ ಮಾಡಿ, ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಬೇಕು. ರೈತ ಸಂತೆಯಲ್ಲಿ ಭಾಗವಹಿಸಲು ಸಾವಯವ ರೈತರು ಎಲ್ಲರೂ ಹೆಸರು ನೋಂದಾಯಿಸಿಕೊಂಡು ನಿಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡಬೇಕು’ ಎಂದರು. 

ಕೃಷಿಕ ದೊಡ್ಡರಾಯಪೇಟೆ ಮಹದೇವಸ್ವಾಮಿ ಅವರು ಮಾತನಾಡಿ, ‘ಸಾವಯವ ಉತ್ಪನ್ನಗಳನ್ನು ಬೆಳೆಯುವ ವಿಚಾರದಲ್ಲಿ ರೈತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಅಮೃತಭೂಮಿ ಟ್ರಸ್ಟ್‌ನ ಕಾವೇರಿ ಅವರು ಮಾತನಾಡಿ, ‘ದೇಸಿ ತಳಿಗಳ ಬೀಜಗಳ ಸಂರಕ್ಷಣೆಗೆ ಅಮೃತಭೂಮಿಯಲ್ಲಿ ಪ್ರಾಮುಖ್ಯ ನೀಡಲಾಗುತ್ತಿದೆ. ಬೀಸಗಳ ಸಂಗ್ರಹ, ಅವುಗಳಿಂದ ಬೆಳೆ ಬೆಳೆದು, ನಂತರ ಅಗತ್ಯವಿರುವ ರೈತರಿಗೆ ನೀಡುವ ವ್ಯವಸ್ಥೆ ಇದೆ. ನೈಸರ್ಗಿಕ ಕೃಷಿಯ ಬಗ್ಗೆಯೂ ತರಬೇತಿಗಳನ್ನು ಕೊಡಲಾಗುತ್ತಿದೆ. ಯಾರು ಬೇಕಾದರೂ ಇಲ್ಲಿಗೆ ಬಂದು ತರಬೇತಿ ಪಡೆಯಬಹುದು’ ಎಂದು ಹೇಳಿದರು. 

ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕ‌ದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಮಾತನಾಡಿ, ‘ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡುವುದಕ್ಕೆ ತುಂಬಾ ಕಷ್ಟವಾಗುತ್ತಿದೆ. ಒಮ್ಮೆ ಖರೀದಿಸಿದ ಗ್ರಾಹಕರು ಮತ್ತೊಮ್ಮೆ ಕೊಳ್ಳುವುದಿಲ್ಲ. ಸಾವಯವ ರೈತರ ಸಹಕಾರ ಸಂಘ ಸ್ಥಾಪನೆ ಇದಕ್ಕೆ ಪರಿಹಾರವಾಗಬಲ್ಲುದು. ಈ ನಿಟ್ಟಿನಲ್ಲಿ ಯೋಚನೆ ನಡೆಯುತ್ತಿದೆ’ ಎಂದರು. 

‘ನಮ್ಮ ಉತ್ಪನ್ನಗಳು, ನಾವು ಮಾಡುತ್ತಿರುವ ಕೆಲಸಗಳು ಜನರಿಗೆ ತಲುಪಬೇಕಿದೆ. ಜಿಲ್ಲಾಡಳಿತ ಭವನದಲ್ಲಿರುವ ಮಾಹಿತಿ ಕೇಂದ್ರ ದೂಳು ಹಿಡಿಯುತ್ತಿದೆ. ಆ ಜಾಗವನ್ನು ನಮಗೆ ಕೊಡಿ ಎಂದು ಜಿಲ್ಲಾಧಿಕಾರಿ ಅವರಿಗೆ ಹಿಂದೆ ಕೇಳಿದ್ದೆವು. ಈಗ ಮತ್ತೆ ಮನವಿ ಮಾಡುತ್ತೇವೆ. ಅಲ್ಲಿ ಸಾವಯವ ಕೇಂದ್ರ ತೆರೆದರೆ ಜಿಲ್ಲಾಡಳಿತ ಭವನಕ್ಕೆ ಬರುವ ರೈತರು ಹಾಗೂ ಜನ ಸಾಮಾನ್ಯರಿಗೆ ಈ ಬಗ್ಗೆ ಮಾಹಿತಿ ಕೊಡಬಹುದು’ ಎಂದರು.

‘ರೈತರು ಬಿಗುಮಾನ ಬಿಟ್ಟು, ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಬೇಕು. ರೈತ ಸಂತೆ ಇದಕ್ಕೆ ನೆರವಾಗಲಿದೆ’ ಎಂದರು.

ಸಾಫ್ಟ್‌ವೇರ್‌ ಉದ್ಯೋಗ ಹಾಗೂ ಕೃಷಿ ಎರಡರಲ್ಲೂ ತೊಡಗಿಸಿಕೊಂಡಿರುವ ಶಶಿಕುಮಾರ್‌ ಅವರು ಮಾತನಾಡಿ, ‘ಶೂನ್ಯ ಬಂಡವಾಳ ಕೃಷಿಗೆ ಸರ್ಕಾರವೂ ಪ್ರೋತ್ಸಾಹ ಕೊಡುತ್ತಿದೆ. ನಾವು ಕೂಡ ಅದನ್ನು ಅಳವಡಿಸಿಕೊಳ್ಳಬೇಕು. ಒಂದೇ ಬೆಳೆಯನ್ನು ಮಾತ್ರ ಬೆಳೆಯಬಾರದು. ಸಮಗ್ರ ಕೃಷಿ ಬಗ್ಗೆ ಒತ್ತು ನೀಡಬೇಕು’ ಎಂದರು.

ಸಾವಯವ ಜಿಲ್ಲೆ ಆಗಬೇಕು: ‘ನಗರ ಪ್ರದೇಶಗಳಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಇದೆ. ಒಳ್ಳೆಯ ದರವೂ ಇದೆ. ಕ್ವಿಂಟಲ್‌ ಗಟ್ಟಲೆ ಬೆಳೆದು ಸಂಪಾದಿಸುವ ದುಡ್ಡನ್ನು ಸಾವಯವ ಕೃಷಿ ಮೂಲಕ ಕೆಲವೇ ಕ್ವಿಂಟಲ್‌ಗಳಲ್ಲಿ ದುಡಿಯಬಹುದು. ಆದರೆ, ಇದಕ್ಕೆ ತಾಳ್ಮೆ ಬೇಕು. ಪ್ರಾಮಾಣಿಕವಾಗಿ ಕೃಷಿ ಮಾಡಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು.

‘ನಾವು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಲು ಗಮನ ಹರಿಸಬೇಕು. ನಾವೇ ನೇರವಾಗಿ ಗ್ರಾಹಕರಿಗೆ ನೀಡಲು ವ್ಯವಸ್ಥೆ ಮಾಡಬೇಕು. ರೈತ ಸಂತೆ ಇದಕ್ಕೆ ವೇದಿಕೆಯಾಗಲಿದೆ. ನಮ್ಮ ಜಿಲ್ಲೆ ಸಾವಯವ ಜಿಲ್ಲೆಯಾಗಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಲ್ಲರೂ ಒಟ್ಟಾಗಿ ಹೋದರೆ, ಪ್ರೊ. ನಂಜುಂಡಸ್ವಾಮಿ ಅವರ ಕನಸನ್ನು ನನಸು ಮಾಡಬಹುದು’ ಎಂದರು.

ರೈತ ಮುಖಂಡರಾದ ಮಾಡ್ರಳ್ಳಿ ಮಹದೇವಪ್ಪ, ಬಸವಣ್ಣ, ಆಲೂರು ಚೆನ್ನಬಸಪ್ಪ, ಶಿವು, ಹೆಗ್ಗವಾಡಿಪುರ ಮಹೇಶ್‌ ಕುಮಾರ್‌, ಶಿವಕುಮಾರ್‌ ಶಂಕರಮೂರ್ತಿ, ಆಲನಹಳ್ಳಿ ಮಹೇಶ್‌, ಸಿದ್ದರಾಜು ಮತ್ತಿತರರು ಇದ್ದರು.

ಹೊನ್ನೂರು: ಸಾಮೂಹಿಕ ಹೈನೋದ್ಯಮಕ್ಕೆ ಮುನ್ನುಡಿ

ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ 15 ರೈತರು ಸೇರಿ ಮೈಸೂರಿನ ನಿಸರ್ಗ ಟ್ರಸ್ಟ್‌ನ ಸಹಯೋಗದಲ್ಲಿ ಸಾಮೂಹಿಕ ಹೈನೋದ್ಯಮ ನಡೆಸಲು ಮುಂದಡಿ ಇಟ್ಟಿರುವುದನ್ನು ಪ್ರಕಾಶ್‌ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

‘ರೈತರು ಗುಂಪಾಗಿ ಕೆಲಸ ಮಾಡುವುದು ಈಗಿನ ಕಾಲಕ್ಕೆ ಪ್ರಸ್ತುತ. ಹೊನ್ನೂರಿನಲ್ಲಿ ಸಾಮೂಹಿಕ ಹೈನೋದ್ಯಮದ ಪ್ರಯತ್ನ ನಡೆಯುತ್ತಿದೆ. 15 ಮಂದಿ ಸೇರಿ ದೇಸಿ ತಳಿ ಹಸುಗಳನ್ನು ಸಾಕಿ ಹಾಲು ಮಾರಾಟ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಈಗಾಗಲೇ ₹10 ಲಕ್ಷ ಸಾಲ ಮಂಜೂರಾಗಿದೆ’ ಎಂದರು.

‘ಒಂದು ಸ್ಥಳದಲ್ಲಿ ಹಸುಗಳನ್ನು ಕಟ್ಟಿ ಸಾಕಲಾಗುತ್ತದೆ. ಅವುಗಳನ್ನು ನೋಡಿಕೊಳ್ಳಲು ಕೆಲಸದವರು ಇರುತ್ತಾರೆ. ದಿನಕ್ಕೊಬ್ಬರಂತೆ 15 ರೈತರು ಒಂದೊಂದು ದಿನ ದಿನ ಇದರ ಮೇಲ್ವಿಚಾರಣೆ ಮಾಡುತ್ತಾರೆ. ಪ್ರತಿ ದಿನ ಹಾಲನ್ನು ನೇರವಾಗಿ ಮೈಸೂರಿಗೆ ಕಳುಹಿಸಲಾಗುವುದು. ಒಂದು ಲೀಟರ್‌ಗೆ ₹50–₹60ವರೆಗೆ ದರ ನಿಗದಿ ಮಾಡಲಾಗಿದೆ. ಹಸುಗಳ ಹುಡುಕಾಟ ನಡೆದಿದೆ. ಈಗಾಗಲೇ ಎರಡು ಹಸುಗಳನ್ನು ಗುರು‌ತಿಸಿದ್ದೇವೆ’ ಎಂದರು.

‘ಇದೇ ರೀರಿ 15 ಜನರು ಸೇರಿ 5 ಎಕರೆ ಜಮೀನು ಖರೀದಿಸಿ ಅಲ್ಲಿ ಸಾಮೂಹಿಕವಾಗಿ ಸಾವಯವ ಕೃಷಿ ಮಾಡುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !