ಕೆರೆಗಳಿಗೆ ನೀರು ಹರಿಸಲು ವಿಳಂಬ ನೀತಿ: ಆಕ್ರೋಶ

ಬುಧವಾರ, ಮಾರ್ಚ್ 20, 2019
23 °C
ಸಚಿವ ಪುಟ್ಟರಂಗಶೆಟ್ಟಿ ಕಾರನ್ನು ಅಡ್ಡಗಟ್ಟಿದ ಗುಂಡ್ಲುಪೇಟೆ ರೈತರು

ಕೆರೆಗಳಿಗೆ ನೀರು ಹರಿಸಲು ವಿಳಂಬ ನೀತಿ: ಆಕ್ರೋಶ

Published:
Updated:
Prajavani

ಚಾಮರಾಜನಗರ: ‘ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಗುಂಡ್ಲುಪೇಟೆ ತಾಲ್ಲೂಕಿನ ಉತ್ತೂರು ಕೆರೆಯಿಂದ ವಡ್ಡಗೆರೆ ಗ್ರಾಮದ ಕೆರೆಗೆ ನೀರು ಹರಿಸುವುದಕ್ಕೆ  ಚಾಲನೆ ನೀಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿ ಜಿಲ್ಲಾಡಳಿತ ಭವನದ ಎದುರು ಗುಂಡ್ಲುಪೇಟೆ ತಾಲ್ಲೂಕು ರೈತರು ಮಂಗಳವಾರ ಸಚಿವರ ಕಾರಿಗೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು. 

ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಮತ್ತು ಚಾಮರಾಜನಗರ ತಾಲ್ಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸುವ ಉತ್ತೂರು ಏತ ಯೋಜನೆಯನ್ನು ₹53 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ವಡ್ಡಗೆರೆ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಇತರ ಕೆರೆಗಳಿಗೆ ನೀರು ಹರಿಸಲು ಅಗತ್ಯವಿದ್ದ ಕಾಮಗಾರಿಗಳು ಈಗಾಗಲೇ ಮುಗಿದಿವೆ. ಚಾಮರಾಜನಗರ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅಲ್ಲಿಂದ ಅರಕಲವಾಡಿ ಕೆರೆಗೆ ನೀರು ಹರಿಸಲು ಪೈಪ್‌ಲೈನ್‌ ಕಾಮಗಾರಿ ಆಗಬೇಕಿದೆ.

ಇಡೀ ಯೋಜನೆ ಪೂರ್ಣಗೊಳ್ಳದಿದ್ದರು, ಅವಕಾಶ ಇರುವ ಕೆರೆಗಳಿಗೆ ನೀರು ತುಂಬಿಸಲು ನಿರ್ಧರಿಸಲಾಗಿತ್ತು. ಹಾಗಾಗಿ, ವಡ್ಡಗೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ ಪ್ರಕ್ರಿಯೆಗೆ ಸೋಮವಾರ (ಮಾರ್ಚ್‌ 4) ಚಾಲನೆ ನೀಡಲು ಸಚಿವಬ ಸಿ.ಪುಟ್ಟರಂಗಶೆಟ್ಟಿ ಅವರು ದಿನಾಂಕ ನಿಗದಿಪಡಿಸಿದ್ದರು. ಆದರೆ ಕಾರ್ಯಕ್ರಮವನ್ನು ಕಾರಣಾಂತರದಿಂದ ಮಂಗಳವಾರಕ್ಕೆ ಮುಂದೂಡಲಾಯಿತು. ಆದರೆ, ಮಂಗಳವಾರವೂ ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಲು ಒಪ್ಪಲಿಲ್ಲ. ಇದು ಗುಂಡ್ಲುಪೇಟೆ ತಾಲ್ಲೂಕಿನ ರೈತರ ಆಕ್ರೋಶಕ್ಕೆ ಕಾರಣವಾಯಿತು. 

ಉತ್ತೂರು ಕೆರೆ ಸಮೀಪ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿತ್ತು. ವಡ್ಡಗೆರೆ, ಕುಂದುಕೆರೆ, ಚಿರಕನಹಳ್ಳಿ, ಬೊಮ್ಮಲಾಪುರ ಸೇರಿದಂತೆ ಸಮೀಪದ ಗ್ರಾಮಗಳಿಂದ ಸುಮಾರು 100ಕ್ಕೂ ಹೆಚ್ಚು ರೈತರು ಜಮಾಯಿಸಿದ್ದರು. ಕಾರ್ಯಕ್ರಮ ಮುಂದೂಡಿದ ಮಾಹಿತಿ ತಿಳಿದು ಆಕ್ರೋಶಗೊಂಡ ರೈತರು ಅಲ್ಲಿಂದ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರೊಂದಿಗೆ ನೇರವಾಗಿ ನಗರದ ಜಿಲ್ಲಾಡಳಿತ ಭವನಕ್ಕೆ ಬಂದು ಪ್ರತಿಭಟನೆಗೆ ಮುಂದಾದರು. 

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಹೊರಬಂದ ಪುಟ್ಟರಂಗಶೆಟ್ಟಿ ಅವರ ಕಾರನ್ನು ತಡೆದ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತರು ಹಾಗೂ ಶಾಸಕ ನಿರಂಜನ್‌ ಕುಮಾರ್‌ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ ಸಚಿವರು, ಪ್ರವಾಸಿ ಮಂದಿರದಲ್ಲಿ ಕುಳಿತು ಮಾತನಾಡೋಣ ಎಂದು ಶಾಸಕರನ್ನು ಕರೆದುಕೊಂಡು ಹೋದರು. 

ರೈತರು ಪ್ರವಾಸಿ ಮಂದಿರಕ್ಕೆ ತೆರಳಿದಾಗ, ಅಲ್ಲಿ ಶಾಸಕರಾಗಲಿ, ಸಚಿವರಾಗಲಿ ಇರಲಿಲ್ಲ. ಇದರಿಂದ ರೈತರು ಮತ್ತಷ್ಟು ಕೋಪಗೊಂಡರು.

ಸ್ವಲ್ಪ ಸಮಯದ ನಂತರ ಬಂದ ಶಾಸಕ ನಿರಂಜನ್‌ಕುಮಾರ್‌ ಅವರು, ‘ಕೆರೆ ತುಂಬಿಸುವ ಯೋಜನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಅನುಮತಿ ದೊರೆಯಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಬೆಂಗಳೂರಿಗೆ ತೆರಳಿ ಅವರನ್ನು ಭೇಟಿ ಮಾಡೋಣ’ ಎಂದು ತಿಳಿಸಿದರು.

ರಾಜಕೀಯ ಕಾರಣ?: ಚುನಾವಣೆ ಹೊಸ್ತಿಲಲ್ಲಿ ಕೆರೆಗಳಿಗೆ ನೀರು ಹರಿಸಿದರೆ ಅದರ ಲಾಭ ಸ್ಥಳೀಯ ಶಾಸಕರಿಗೆ ಹೋಗುತ್ತದೆ ಎಂಬ ಕಾರಣಕ್ಕೆ ಉಸ್ತುವಾರಿ ಸಚಿವರು ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದೆ ಸಚಿವರಾಗಿದ್ದ ಎಚ್‌.ಎಸ್‌. ಮಹದೇವ ‌ಪ್ರಸಾದ್‌ ಅವರ ಅವಧಿಯಲ್ಲಿ ಕೆರೆ ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಬಗ್ಗೆ ಪುಟ್ಟರಂಗಶೆಟ್ಟಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಮಾಡಿದ ಯತ್ನ ಸಫಲವಾಗಲಿಲ್ಲ.

‘ಹೋರಾಟ ಮಾಡುತ್ತೇವೆ’
ಮಂಗಳವಾರದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಂಪತ್‌ ಅವರು, ‘ಶಾಸಕರಿಗೆ ಏನೋ ಒಂದು ಕಥೆ ಕಟ್ಟಿ ಜಿಲ್ಲಾ ಉಸ್ತುವಾರಿ ಸಚಿವರು ಕಳುಹಿಸಿದ್ದಾರೆ. ಹಾಗಿದ್ದರೆ, ಮಾರ್ಚ್‌ 4ರಂದು ಕಾರ್ಯಕ್ರಮಕ್ಕೆ ದಿನಾಂಕ ಯಾಕೆ ನಿಗದಿ ಪಡಿಸಬೇಕಿತ್ತು. ಇವರ ರಾಜಕೀಯ ತಿಕ್ಕಾಟಕ್ಕೆ ರೈತರು ಯಾಕೆ ಬಲಿಯಾಗಬೇಕು’ ಎಂದು ಪ್ರಶ್ನಿಸಿದರು.

‘ಗುಂಡ್ಲುಪೇಟೆಯ ಎಲ್ಲ 9 ಕೆರೆಗಳನ್ನು ತುಂಬಿಸುವ ಕಾಮಗಾರಿ ಮುಗಿದಿದೆ. ಹೀಗಿರುವಾಗ ಈಗ ಅವುಗಳಿಗೆ ನೀರು ತುಂಬಿಸಿದರೆ, ಮುಂದೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಚಾಮರಾಜನಗರದ ಎರಡು ಕೆರೆಗಳ ಕಾಮಗಾರಿ ಬಾಕಿ ಇದೆ. ಅದನ್ನು ಬೇಗ ಮುಗಿಸಲು ಸಚಿವರು ಕ್ರಮ ವಹಿಸಲಿ’ ಎಂದು ಅವರು ಹೇಳಿದರು.

‘ಬುಧವಾರ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರ ಬಳಿ ಮಾತನಾಡುವುದಾಗಿ ಶಾಸಕರು ಹೇಳಿದ್ದಾರೆ. ಒಂದು ದಿನ ಕಾಯುತ್ತೇವೆ. ನೀರು ಹರಿಸದಿದ್ದರೆ ಹೋರಾಟ ಮಾಡುತ್ತೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !