ಸೋಮವಾರ, ಆಗಸ್ಟ್ 19, 2019
23 °C
ಆ. 21ರಂದು ರೈತರ ಸಮಸ್ಯೆ ಕುರಿತು ಸಭೆ; ಆನಂದ್‌ ವಿರುದ್ಧ ಕಾನೂನು ಕ್ರಮಕ್ಕೆ ಪಟ್ಟು

ಎಡಿಸಿ ವಿರುದ್ಧ ರೈತರ ಆಕ್ರೋಶ, ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಸಿ.ಎಲ್‌. ಆನಂದ್‌ ಅವರು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ರೈತರು ಆನಂದ್‌ ಅವರ ಪ್ರತಿಕೃತಿಯನ್ನು ಸುಟ್ಟು ಹಾಕಿ, ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ರಸ್ತೆಯೂ ತಡೆಸಿದರು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸ್ಥಳಕ್ಕೆ ಬಂದು ಅಹವಾಲು ಆಲಿಸಬೇಕು. ಎಡಿಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. 

‘ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಬೇಕು ಎಂದು ಒತ್ತಾಯಿಸಿ ರೈತರು ಅಹೋರಾತ್ರಿ ಧರಣಿ ನಡೆಸಿದ ಪರಿಣಾಮ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಬಳಿಕ ಈವರೆಗೂ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ರೈತರ ಅನೇಕ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳ ಮುಂದೆ ಇದನ್ನು ಪ್ರಶ್ನಿಸಿದರೆ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಅವರು ನಮ್ಮನ್ನು ರೌಡಿಗಳು ಎಂದು ಕರೆಯುತ್ತಾರೆ. ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸುತ್ತಾರೆ’ ಎಂದು ಆರೋಪಿಸಿದರು. 

ಆದರೆ, ಸ್ಥಳಕ್ಕೆ ಜಿಲ್ಲಾಧಿಕಾರಿ ಅವರು ಬರಲಿಲ್ಲ. ಪ್ರತಿಭಟನಾ ನಿರತರನ್ನು ಕಚೇರಿಗೆ ಬರಲು ತಿಳಿಸಿದರು. ನಂತರ ಪ್ರತಿಭಟನಾಕಾರರು ಅರೆ ಬೆತ್ತಲೆಯಾಗಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಪ್ರತಿಭಟನಾ ನಿರತರೊಂದಿಗೆ ಸಭೆ ನಡೆಸಿದರು. 

‘ರೈತರ ಸಮಸ್ಯೆಗಳನ್ನು ಆಲಿಸಲು ಬುಧವಾರ ನಡೆದ ಸಭೆಯಲ್ಲಿ ಆನಂದ್‌ ಅವರು ರೈತರೊಂದಿಗೆ ದುರ್ವರ್ತನೆ ತೋರಿದ್ದಾರೆ. ಜಿಲ್ಲಾಧಿಕಾರಿ ಕೋರ್ಟ್‌ ಆವರಣದಲ್ಲಿ, ಜಿಲ್ಲಾಧಿಕಾರಿ ಅವರು ಕುಳಿತುಕೊಳ್ಳುವ ಕುರ್ಚಿಯನ್ನು ಒದ್ದು ಅಗೌರವ ತೋರಿದ್ದಾರೆ. ಇದನ್ನು ತನಿಖೆಗೆ ಒಳಪಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹಾಗೂ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಅವರು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರನ್ನು ಆಗ್ರಹಿಸಿದರು. 

‘ನಾವೇನು ರೌಡಿಗಳಾ? ದೇಶದ್ರೋಹದ ಕೆಲಸ ಏನು ಮಾಡಿದ್ದೇವೆ? ನ್ಯಾಯ ಕೇಳುವುದು ತಪ್ಪಾ? ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು. 

 ತನಿಖೆ ನಡೆಸಿ ಕ್ರಮ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಈ ಬಗ್ಗೆ ತನಿಖೆ ನಡೆಸುತ್ತೇನೆ. ಎಡಿಸಿ ಅವರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. 

ರೈತ ಮುಖಂಡರಾದ ಮಾಡ್ರಳ್ಳಿ ಮಹದೇವಪ್ಪ, ಪೃಥ್ವಿ, ಹೆಗ್ಗೋಠಾರ ಶಿವಕುಮಾರ್, ಪುಟ್ಟಮಾದಪ್ಪ, ಮಹೇಶ್ ಸೇರಿದಂತೆ ಹಲವರು ಇದ್ದರು.

21ರಂದು ರೈತರೊಂದಿಗೆ ಸಭೆ: ಭತ್ತದ ಬೆಳೆಗೆ ನೀರು ಬಿಡುವುದು, ಕೆರೆಗಳಿಗೆ ನೀರು ತುಂಬಿಸುವುದು, ಕುಡಿಯುವ ನೀರು ಪೂರೈಕೆ ಸೇರಿದಂತೆ ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕುರಿತು 21ರಂದು ಸಭೆ ನಡೆಸಿ ಚರ್ಚಿಸೋಣ ಎಂದು ಬಿ.ಬಿ. ಕಾವೇರಿ ಅವರು ರೈತರಿಗೆ ತಿಳಿಸಿದರು. 

‘ಗ್ರಾಮಗಳಿಗೆ ನುಗ್ಗುವ ಪ್ರವಾಹದ ನೀರನ್ನು ತಡೆದು ಅದನ್ನು ಯಾವ ರೀತಿಯಲ್ಲಿ ಸಂಗ್ರಹ ಮಾಡಬಹುದು ಎಂಬ ಬಗ್ಗೆ ಪ್ರಸ್ತಾವ ಸಿದ್ದಪಡಿಸಿ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ ಅವರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ. ಅವರು ಜಿಲ್ಲೆಗೆ ಭೇಟಿ ನೀಡಿದಾಗ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಕಾವೇರಿ ಹೇಳಿದರು. 

Post Comments (+)