ಪ್ರೇಕ್ಷಕರ ಮನಸೂರೆಗೊಂಡ ಫ್ಯಾಷನ್ ಶೋ

ಬುಧವಾರ, ಏಪ್ರಿಲ್ 24, 2019
29 °C

ಪ್ರೇಕ್ಷಕರ ಮನಸೂರೆಗೊಂಡ ಫ್ಯಾಷನ್ ಶೋ

Published:
Updated:
Prajavani

ಚಾಮರಾಜನಗರ: ನಗರದ ಸರ್ಕಾರಿ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ಅಂಗವಾಗಿ ಮತದಾನದ ಜಾಗೃತಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ಪದವಿಪೂರ್ವ ಶಿಕ್ಷಣ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ಸಂಜೆ ಹಾಗೂ ಫ್ಯಾಷನ್‌ ಶೋ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್‌.ಲತಾಕುಮಾರಿ ಉದ್ಘಾಟಿಸಿದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಪ್ಯಾಷನ್‌ ಶೋ ಮೂಲಕ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಸಂದೇಶ ನೀಡಿದರು. ಅಲ್ಲದೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮತದಾನ ಜಾಗೃತಿಗಾಗಿ ನಡೆದ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ಸೆಳೆಯಿತು. 

ಕೈಮಗ್ಗ ಸೀರೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿನಿಯರು: ಕೈಮಗ್ಗ ನೇಕಾರರು ತಯಾರಿಸಿದ ಮತದಾನ ಸಹಾಯವಾಣಿ, ಆ್ಯಪ್‌, ಮತಯಂತ್ರಗಳ ಲಾಂಛನವನ್ನು ಒಳಗೊಂಡ ರೇಷ್ಮೆಸೀರೆಗಳನ್ನು ತೊಟ್ಟು ಮಹಿಳೆಯರು, ವಿದ್ಯಾರ್ಥಿನಿಯರು ವೇದಿಕೆ ಮೇಲೆ ನಡೆದು ಸಂಭ್ರಮಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತದಾನದ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದರು. ಕಿರುನಾಟಕ ಪ್ರದರ್ಶನಗೊಂಡಿತು.

ಸನ್ಮಾನ: ಮತದಾನದ ಚಿಹ್ನೆಯುಳ್ಳ ರೇಷ್ಮೆ ಸೀರೆಗಳನ್ನು ನೇಯ್ಗೆ ಮಾಡಲಾಗಿದ್ದ ನೇಕಾರರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿ.ಆರ್.ಶ್ಯಾಮಲಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳ, ಕೈಮಗ್ಗ ಇಲಾಖೆಯ ನಹೀಂ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಅಧಿಕಾರಿ ರಾಜೇಂದ್ರ ಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !