ಉಪವಾಸವೇ ಫಿಟ್ನೆಸ್ ಮಂತ್ರ!

7

ಉಪವಾಸವೇ ಫಿಟ್ನೆಸ್ ಮಂತ್ರ!

Published:
Updated:
Deccan Herald

‘ಫಿ ಟ್‌ನೆಸ್‌ ಬೇಕೆ?ಹಾಗಿದ್ದರೆ ಉಪವಾಸ ಮಾಡುವುದನ್ನು ಕಲಿಯಿರಿ’ ಹೀಗೆನ್ನುತ್ತಾರೆ ನ್ಯಾಚುರಲ್‌ ಬಾಡಿ ಬಿಲ್ಡರ್‌, ಮಾಡೆಲ್‌, ಸಿನಿಮಾ ಕಲಾವಿದ, ಫಿಟ್‌ನೆಸ್‌ ಟ್ರೈನರ್‌ ರಘು ರಾಮಪ್ಪ.

ಹೌದು. ಬಗೆ ಬಗೆಯ ಆಹಾರ ತಿಂದು ಮೈ ಬೆಳೆಸಿದ್ದು ಆಯಿತು. ಜಿಮ್‌ ಮಾಡಿದ್ದೂ ಆಯಿತು, ಬೆವರು ಸುರಿಸಿದ್ದೂ ಆಯಿತು. ಈಗ ಮತ್ತೆ ಹೊಸ ಜಮಾನಾ ಶುರು ಆಗಿದೆ. ಆರೋಗ್ಯಕ್ಕಾಗಿ, ಫಿಟ್‌ನೆಸ್‌ ಗಾಗಿ ನೀವು ಉಪವಾಸದಿಂದ ಇರುವುದನ್ನು ರೂಢಿ ಮಾಡಿಕೊಳ್ಳುತ್ತ ಬಂದರೆ ಮತ್ತೆ ನಿಮ್ಮಲ್ಲಿ ನವ ಚೈತನ್ಯ ಮೂಡುತ್ತದೆ ಎನ್ನುತ್ತಾರೆ ಅವರು.

ಉಪವಾಸ ಅಂದರೆ, ಏನೂ ತಿನ್ನದೇ ಇರುವುದಲ್ಲ. ಆಹಾರ ಸೇವಿಸುವ ಅವಧಿಯನ್ನು ವ್ಯತ್ಯಾಸ ಮಾಡಿಕೊಂಡರೆ ಸಾಕು. ಈ ಉಪವಾಸದ ವಿಧಾನಕ್ಕೆ ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ಎನ್ನುತ್ತಾರೆ(ವಿವರಕ್ಕೆ ಬಾಕ್ಸ್ ನೋಡಿ). ಇದೊಂದು ಹೊಸ ಟ್ರೆಡ್. ಈ ವಿಧಾನದಲ್ಲಿ ತಿನ್ನುವ ಮತ್ತು ಉಪವಾಸದ ಅವಧಿಯೊಂದು ಚಕ್ರವಾಗಿದೆ. ಇದು ಯಾವ ಆಹಾರವನ್ನು ತಿನ್ನಬೇಕೆಂಬುದರ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ನೀವು ಅವುಗಳನ್ನು ತಿನ್ನಬೇಕಾದರೆ ಹಲವಾರು ವಿಧಾನಗಳಿವೆ. ಅವೆಲ್ಲವೂ ದಿನ ಅಥವಾ ವಾರದ ನಡುವಿನ ಅವಧಿಯನ್ನು ವಿಭಜಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ.  ಇದೇ ವಿಧಾನವನ್ನು ರಘು ಅನುಸರಿಸಿ ಸ್ವಾಭಾವಿಕವಾಗಿ ದೇಹವನ್ನು ಶೇಪ್‌ಗೆ ತಂದುಕೊಂಡಿದ್ದಾರೆ. ‘ದೇಹದಾರ್ಢ್ಯ ಕ್ರೀಡೆಯಲ್ಲ; ಅದೊಂದು ಕಲೆ. ಹೀಗಾಗಿ ದೇಹವನ್ನು ಸುಂದರವಾಗಿ ಕಡೆದ ಶಿಲ್ಪದಂತೆ ಮಾಡುವುದು ನಮ್ಮ ಕೈಯಲ್ಲೇ ಇದೆ. ಆದರೆ ಅದಕ್ಕೆ ತಕ್ಕಂತೆ ಕಷ್ಟಪಡಬೇಕಷ್ಟೆ’ ಎನ್ನುವುದು ರಘು ಅವರ ಅನುಭವದ ಮಾತು.

ಮಲೆನಾಡಿನ ಹುಡುಗ : ರಘು ರಾಮಪ್ಪ ಮೂಲತಃ ಮಲೆನಾಡಿನವರು. ಅವರ ತಂದೆ–ತಾಯಿ ಶಿವಮೊಗ್ಗದವರು. ರಘು ಹುಟ್ಟಿ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ‘ಮಸಲ್‌ಮೇನಿಯಾ ಇಂಡಿಯಾ’ ಲೈಟ್‌ವೇಟ್‌ ಚಾಂಪಿಯನ್‌ಷಿಪ್‌ ವಿನ್ನರ್‌. ವಲ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಕೂಡ ಭಾಗವಹಿಸಿದ್ದಾರೆ. ಬಳಿಕ ಮಾಡೆಲ್‌ ಹಾಗೂ ಸಿನಿಮಾ ನಟ. ಕೆಲವು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದಾರೆ. ಈಗ ಸಿನಿಮಾದಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲಿ ನೂರಾರು ಮಂದಿಗೆ ಫಿಟ್‌ನೆಸ್‌ ಟ್ರೈನರ್‌ ಆಗಿದ್ದಾರೆ.

‘ನೈಸರ್ಗಿಕ ವಿಧಾನದಲ್ಲಿ ನಾನು ದೇಹ ದಾರ್ಢ್ಯ ಪಡೆದವನು. ಯಾವತ್ತಿಗೂ ಸ್ಟಿರಾಯ್ಡ್ ಬಳಸಿ ಕೃತಕ ವಿಧಾನಗಳಿಂದ ದೇಹ ಬೆಳೆಸಿದವನಲ್ಲ. ಆ ರೀತಿ ಬೆಳೆಸುವುದರಿಂದ ದೇಹ ತಾತ್ಕಾಲಿಕವಾಗಿ ಟೋನ್ಡ್‌ ಆಗಬಹುದು. ಆದರೆ ನಿರಂತರವಾಗಿ ಇರಬೇಕೆಂದರೆ ನೈಸರ್ಗಿಕ ವಿಧಾನವೇ ಮೇಲು’ ಎನ್ನುತ್ತಾರೆ.

‘ನನ್ನ ಮಸಲ್ಸ್‌ ಬೆಳೆಸಲು ಪ್ರೊಟೀನ್‌ ಇರುವ ಹಣ್ಣು, ತರಕಾರಿ, ಮೊಟ್ಟೆ, ಮೀನು, ಚಿಕನ್‌ ಹೆಚ್ಚು ಹೆಚ್ಚು  ಸೇವಿಸುತ್ತೇನೆ. ಎಲ್ಲರೂ ಕಾರ್ಬೊಹೈಡ್ರೇಟ್‌ ಮತ್ತು ಫ್ಯಾಟ್‌ ಕಡಿಮೆ ಇರುವ ಆಹಾರ ಸೇವಿಸುವುದು ಉತ್ತಮ. ಬಾಡಿ ಬಿಲ್ಡಿಂಗ್ ಸ್ಪರ್ಧೆ ಇದ್ದಾಗ ದಿನಕ್ಕೆ ನಾಲ್ಕೈದು ಸಲ ತಿನ್ನುತ್ತೇನೆ. ಹೆಚ್ಚು ಹೆಚ್ಚು ವರ್ಕೌಟ್‌ ಮಾಡುತ್ತೇನೆ. ಅದಿಲ್ಲದಾಗ ದಿನಕ್ಕೆ ಒಂದೂವರೆ ಗಂಟೆ ಮಾತ್ರ ಬೆವರಳಿಸುತ್ತೇನೆ; ಕಡಿಮೆ ತಿನ್ನುತ್ತೇನೆ’ ಎನ್ನುತ್ತಾರೆ ಅವರು.

‘ಕಡಿಮೆ ತಿನ್ನುವ ವಿಚಾರಕ್ಕೆ ಈಗ ಬರುತ್ತೇನೆ. ಜತೆಗೆ ಉಪವಾಸ ಮಾಡಿ ಅಂತಲೂ ಹೇಳುತ್ತೇನೆ. ಏನು ಬಾಡಿ ಬಿಲ್ಡರ್‌ ಆಗಿ ಉಪವಾಸ ಮಾಡಿದ್ರೆ ಸೊರಗಿ ಹೋಗೋದಿಲ್ವೆ ಅಂತೆ ಹಲವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆದರೆ ವಿಷಯ ಬೇರೇನೇ ಇದೆ. ಇಂಟರ್‌ಮಿಟೆಂಟ್‌ ಫಾಸ್ಟಿಂಗ್ ಅನ್ನು ನಾನು ಫಾಲೊ ಮಾಡುತ್ತಿದ್ದೇನೆ. ವಿದೇಶಗಳಲ್ಲಿಯಂತೂ ಸದ್ಯಕ್ಕೆ ಇದು ಬಹಳ ಚಾಲ್ತಿಯಲ್ಲಿದೆ’ ಎನ್ನುತ್ತಾರೆ.

ಅಪ್ಪನಿಂದ ಕಲಿತಿದ್ದು..

ರಘು ರಾಮಪ್ಪ ಅವರಿಗೆ ಬಾಲ್ಯದಿಂದಲೂ ಫಿಟ್‌ನೆಸ್‌ ನತ್ತ ಹೆಚ್ಚು ಆಸಕ್ತಿ. ತಂದೆ ರಾಮಪ್ಪ(ದೇಹ ದಾರ್ಢ್ಯಪಟು) ಮಾಡುತ್ತಿದ್ದ ದೈಹಿಕ ಕಸರತ್ತು ನೋಡುತ್ತ ನೋಡುತ್ತ ಬೆಳೆದ ರಘು ಕಾಲೇಜಿಗೆ ಬರುವ ಹೊತ್ತಿಗೆ ಬಾಡಿಗೊಂದು ಶೇಪ್‌ ಕೊಡತೊಡಗಿದರು. ತಂದೆಯವರಿಂದಲೇ ಒಂದಿಷ್ಟು ತರಬೇತಿ ಪಡೆದುಕೊಂಡ ಅವರು ಬಳಿಕ ಹೆಚ್ಚಿನ ತರಬೇತಿಯನ್ನು ಅಮೆರಿಕದ ವಿವಿಯ ಸರ್ಟಿಫಿಕೇಟ್ ಕೋರ್ಸ್ ಮಾಡಿದರು. ಸುಮಾರು 15 ವರ್ಷಗಳಿಂದ ಅವರು ತಾಲೀಮಿನಲ್ಲಿದ್ದಾರೆ.

ಸಿನಿಮಾದಲ್ಲಿ ಅಭಿನಯಿಸುವ ಜತೆಗೆ ಚಾರಣ ಮಾಡುವುದು ಅವರಿಗೆ ಪ್ರಿಯವಾದದ್ದು. ‘ಪೇಟೆ ಮಂದಿ ಕಾಡಿಗೆ ಬಂದ್ರು’, ‘ನೋಡಿ ಸ್ವಾಮಿ ನಾವಿರೋದು ಹೀಗೆ...’ ಮತ್ತು ‘ಲೈಫ್ ಸೂಪರ್‌ ಗುರು’ ರಿಯಾಲಿಟಿ ಶೋಗಳಲ್ಲಿ ಅವರು ಪಾಲ್ಗೊಂಡಿದ್ದರು. ‘ಶತಾಯ ಗತಾಯ’ ಎನ್ನುವ ಸಿನಿಮಾ ಮಾಡಿದ್ದರು. ‘ಸಂಪುಟ 72’ ಮತ್ತು ‘ಲೈಫ್ ಆಫ್‌ ಕಾನೂರು’ ಎಂಬ ಇನ್ನೆರಡು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ಕೆಲವು ಐಪಿಎಲ್ ಕ್ರೀಡಾಪಟುಗಳಿಗೆ ತರಬೇತಿ ಕೂಡ ನೀಡಿದ್ದಾರೆ.

ಐಜಿಪಿ ಬಿ.ದಯಾನಂದ ಅವರು ಇವರ ಟ್ರಕಿಂಗ್‌ ಮತ್ತು ಜಿಮ್‌ ಪಾರ್ಟ್‌ನರ್. ಐದು ವರ್ಷಗಳಿಂದ ಪ್ರತಿ ದಿನ ಅವರೊಂದಿಗೇ ತಾವು ಜಿಮ್‌ ಮಾಡುವುದಾಗಿ ರಘು ಹೇಳುತ್ತಾರೆ. ಅಲ್ಲದೇ ಹೊಸ ಹೊಸ ಸಂಗತಿ ಕಲಿಕೆ, ಉಪವಾಸ ವಿಧಾನ, ಪ್ರತಿ ವಾರಾಂತ್ಯದಲ್ಲಿ ಅವರೊಂದಿಗೆ ಟ್ರಕ್ಕಿಂಗ್‌ ಹೋಗುವುದು...ಒಟ್ಟಿನಲ್ಲಿ ಅವರು ತಮಗೆ ಮಾರ್ಗದರ್ಶಕ ಹಾಗೂ ಗುರು ಎನ್ನುತ್ತಾರೆ.

‘ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌’ ಹೇಗೆ ?

ನೀವು ಉಪಾಹಾರವನ್ನು ತ್ಯಜಿಸಿ 12 ಗಂಟೆಗೆ ಮಧ್ಯಾಹ್ನದ ಊಟ ಮಾಡಿ, ನಂತರ 8 ಗಂಟೆಗೆ ರಾತ್ರಿ ಊಟ ಮಾಡಬಹುದು. ಬಳಿಕ ಮಾರನೆಯ ದಿನ ಮತ್ತೆ ಮಧ್ಯಾಹ್ನ 12 ಗಂಟೆಗೇ ಭೋಜನ ಸ್ವೀಕರಿಸಬೇಕು. ಅಲ್ಲಿಗೆ ನೀವು ತಾಂತ್ರಿಕವಾಗಿ 16 ಗಂಟೆಗಳ ಕಾಲ ಉಪವಾಸ (ರಾತ್ರಿ 8ರಿಂದ ಮಾರನೆಯ ದಿನ 12ಗಂಟೆಯವರೆಗೆ) ಮಾಡಿದಂತಾಯಿತು. ಇದು 16/8 ವಿಧಾನ ಎಂದು ಕರೆಯಲಾಗುವ ಅತ್ಯಂತ ಪ್ರಸಿದ್ಧ ಉಪವಾಸದ ಅಥವಾ ಆಹಾರದ ಕ್ರಮವಾಗಿದೆ. ಇದನ್ನು ವಾರಾಂತ್ಯದಲ್ಲಿ ಕೂಡ ಒಮ್ಮೆ ಪಾಲಿಸಬಹುದು.

‘ವಾಸ್ತವವಾಗಿ ಇದನ್ನು ಮಾಡುವುದು ತುಂಬಾ ಸುಲಭ. ಹಸಿವು ಸಾಮಾನ್ಯವಾಗಿ ಒಂದು ಸಮಸ್ಯೆಯಷ್ಟೇ ಅಲ್ಲ, ಇದು ಆರಂಭದಲ್ಲಿ ಸಮಸ್ಯೆಯಾಗಿದ್ದರೂ, ನಿಮ್ಮ ದೇಹವು ದೀರ್ಘಕಾಲದವರೆಗೆ ತಿನ್ನುವುದಿಲ್ಲವೆಂದು ನಿರ್ಧಾರ ಮಾಡಿದಲ್ಲಿ ಸುಲಭವಾಗಿ ಇದನ್ನು ಪಾಲಿಸಬಹುದು. ಹೀಗೆ ಉಪವಾಸ ಮಾಡುವ ವಿಧಾನವನ್ನು ಕಲಿತುಕೊಂಡು ಈಗ ನೀವು ಅನಗತ್ಯವಾಗಿ ಆಹಾರ ತೆಗೆದುಕೊಳ್ಳುವ ವಿಧಾನಕ್ಕೆ ಕಡಿವಾಣ ಹಾಕಬಹುದು. ಜತೆಗೆ ಈ ಅವಧಿಯಲ್ಲಿ  ನೀರು, ಬ್ಲಾಕ್‌ ಕಾಫಿ, ಗ್ರೀನ್‌ ಟೀ ಮಾತ್ರ ಅಗತ್ಯವಿದ್ದರೆ ಕುಡಿಯಬಹುದಷ್ಟೆ’ ಎನ್ನುತ್ತಾರೆ ರಘು.

ಹೀಗೆ ಉಪವಾಸ ಮಾಡುವುದರಿಂದ ನಮ್ಮ ಅಂಗಾಂಗಗಳು ಶುದ್ಧವಾಗುತ್ತವೆ. ಹಳೆಯ ಕೆಟ್ಟ ಕೋಶಗಳು ನಾಶವಾಗುತ್ತವೆ. ಹಸಿದಾಗ ತಿನ್ನುವ ಕ್ರಮವನ್ನು ಅನುಸರಿಸಬೇಕು. ಹೊಟ್ಟೆಬಾಕತನಕ್ಕೆ ಕಡಿವಾಣ ಹಾಕಬೇಕು. ಉಪವಾಸದಿಂದ ಮನಸ್ಸು ಶುದ್ಧವಾಗುತ್ತದೆ. ದೇಹ ಮನಸ್ಸು ಶುದ್ಧವಾಗಿದ್ದರೆ ಕಾಯಿಲೆಯೂ ಬರುವುದಿಲ್ಲ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !