ಸೆಕೆಂಡುಮುಳ್ಳಿನಲ್ಲಿ ಭಾವದ ಟಿಕ್‌ ಟಿಕ್‌...

7

ಸೆಕೆಂಡುಮುಳ್ಳಿನಲ್ಲಿ ಭಾವದ ಟಿಕ್‌ ಟಿಕ್‌...

Published:
Updated:
Prajavani

ಜಗವೆಲ್ಲ ಉಂಡು ಮಲಗಿದ ಮೇಲೆ ಒಂದು ಕ್ಷಣ ಧ್ಯಾನಸ್ಥಳಾಗಿ ಕುಳಿತೆ. ಎಲ್ಲವೂ ಸ್ತಬ್ಧ. ಇಲ್ಲ ಎಲ್ಲವೂ ಸ್ತಬ್ಧವಾಗಿಲ್ಲ. ಎಲ್ಲೋ ನಿರಂತರವಾಗಿ ಶಬ್ದ ಕೇಳಿ ಬರುತ್ತಿದೆ. ಈ ಏಕತಾನತೆಯ ದುಂದುಭಿ ಮೊಳಗುತ್ತಿರುವುದಾದರೂ ಎಲ್ಲಿಂದ? ಚಿತ್ತ ಚಂಚಲಗೊಳಿಸುವ ಇಂಥ ಸದ್ದಿನಲ್ಲಿ ನನ್ನ ಲೇಖನಿ ಬಿಳಿ ಕಾಗದದ ಮೇಲೆ ಕಚಗುಳಿಯನ್ನು ಇಡುವುದಾದರೂ ಹೇಗೆ? ನೀರವ ಮೌನದಲ್ಲಿ ಮಾತ್ರ ಹುಟ್ಟುವ ನನ್ನ ಬರಹ ಎಂದಿನಂತೆ ಇಂದೂ ರಚ್ಚೆ ಹಿಡಿದು ಕುಳಿತಿತ್ತು.

ತಿಣುಕಾಡಿ ಬರೆದ ಬರಹ ಸಾಹಿತ್ಯವಲ್ಲ ಎಂದು ಎಲ್ಲೋ ಓದಿದ ನೆನಪು. ಸಂದಿ–ಗೊಂದಿಗಳನ್ನು ತಡಕಾಡಿದರೂ ಸದ್ದಿನ ಮೂಲ ಪತ್ತೆಯಾಗಲಿಲ್ಲ. ಲೇಖನಿಯ ಮೂತಿಗೆ ಮುಚ್ಚಳವನ್ನು ಚುಚ್ಚಿ ಏಳಬೇಕೆನ್ನುವಷ್ಟರಲ್ಲಿ ‘ಢಣ್’ ಎಂಬ ಗೋಡೆಯ ಗಡಿಯಾರದ ಸದ್ದು ಬೆಚ್ಚಿ ಬೀಳಿಸಿತ್ತು. ಲೋಕವೆಲ್ಲ ನಿದ್ರೆಗೆ ಜಾರಿದರೂ ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡುತ್ತಿರುವ ಗಡಿಯಾರದ ಬಗ್ಗೆ ಅಯ್ಯೋ ಎನ್ನಿಸಿತ್ತು. ಅದರ ಟಿಕ್, ಟಿಕ್ ಶಬ್ದ ನನ್ನ ಬರವಣಿಗೆಗೆ ಕುಂದು ತಂದರೂ ಅದರ ಕರ್ತವ್ಯಪ್ರಜ್ಞೆ ಕುರಿತು ಹೆಮ್ಮೆಯಾಗಿತ್ತು.

ಲೋಕವೆಲ್ಲ ಮಲಗಿದರೂ ತಾನು ಎಚ್ಚೆತ್ತುಕೊಂಡಿರುವ ಗಡಿಯಾರದಂತೆಯೇ ಹೆಣ್ಣಿನ ಜೀವನ ಕೂಡ. ಮನೆಯವರೆಲ್ಲ ಮಲಗಿದರೂ ಸೆಕೆಂಡಿನ ಮುಳ್ಳಿನಂತೆ ಸದಾ ಚಟುವಟಿಕೆಯಿಂದ ಇರುವಳು ಆಕೆ. ಗಂಟೆ ಹಾಗೂ ನಿಮಿಷದ ಮುಳ್ಳುಗಳಿಗೆ ಸಿಗುವ ವಿಶ್ರಾಂತಿ, ನಿಧಾನತೆ ಸೆಕೆಂಡಿನ ಮುಳ್ಳಿಗಿಲ್ಲ. ಸದಾ ‘ಟಿಕ್ ಟಿಕ್’ ಎನ್ನುವ ಸದ್ದಿನೊಂದಿಗೆ ಎಚ್ಚರವಾಗಿರಲೇಬೇಕು. ದೇಹ ಹಾಸಿಗೆಯಲ್ಲಿ ಪವಡಿಸಿದ್ದರೂ ಮನಸ್ಸು ‘ನಾಳೆ’ ಎಂಬ ಸಂತೆಯಲ್ಲಿಯೇ ಸಂಚಾರಿ. ಅವಳ ಸ್ವಪ್ನಗಳಲ್ಲಿ ರಾಜಕುಮಾರ, ಸುಂದರ ಹೂದೋಟ, ಬಾಯಲ್ಲಿ ನೀರೂರಿಸುವ ಖಾದ್ಯಗಳಿಗೆ ನೋ ಎಂಟ್ರಿ.

ತೀರಿಹೋದ ಪೇಸ್ಟು, ನಾಳೆಗೆ ಮಾಡಬೇಕಿರುವ ತಿಂಡಿ–ಅಡುಗೆ, ಪಾತ್ರೆಗಳ ರಾಶಿ, ಅಲ್ಲಲ್ಲಿ ನೇತಾಡುವ ಬಲೆಗಳು ಇವೇ ಅವಳ ಸ್ವಪ್ನಗಳ ಸರಕುಗಳು. ಸಂಜೆ ಹಾಲು ಕಾಯಿಸದೇ ಹೋದದ್ದು. ತನ್ನ ಮರೆಗುಳಿತನಕ್ಕೊಂದಷ್ಟು ಹೀಯಾಳಿಕೆ. ಎದ್ದೇಳಲು ಮನಸ್ಸು ಸೂಚಿಸಿದರೂ ಏಳಗೊಡದ ದಣಿದ ದೇಹ. ಬೆಳಗಿನ ಟೀ ಕೈಗೆ ಬರಲು ಕೊಂಚ ತಡವಾದರೂ ಹರಿ ಹಾಯುವ ಗಂಡ. ಹಾಲಿಲ್ಲದೆ ಮಕ್ಕಳು ಸೊರಗಿ ಬಿಡುವರೇನೋ ಎಂಬ ಹಳಹಳಿಕೆಗಳು.

ಒಂದು ಕಪ್ ಟೀ ಗಂಟಲಲ್ಲಿ ಇಳಿದರೆ ದೇಹವೆಂಬ ಗಾಡಿ ಜಾಸ್ತಿ ಮೈಲೇಜ್ ನೀಡುತ್ತದೆ ಎಂಬ ಯೋಚನೆ ಹಾಸಿಗೆಯಿಂದ ಎಬ್ಬಿಸಿಯೇ ಬಿಡುತ್ತದೆ. ಹಾಲಿನ ಪಾತ್ರೆಯನ್ನು ಒಲೆಯ ಮೇಲಿಟ್ಟು ನಿಂತರೆ ಹಾಲು ರಚ್ಚೆ ಹಿಡಿಯುತ್ತದೆ. ಆಕೆಯ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಹಲ್ಲಿಯ ಲೊಚಗೊಟ್ಟುವಿಕೆಯನ್ನೋ ರಾತ್ರಿಯ ನೀರವತೆಯಲ್ಲಿ ರೋಧಿಸುವ ನಾಯಿಗಳ ರೋದನೆಯನ್ನೋ ಇಲ್ಲಾ ಕಚ್ಚಾಡುವ ಬೆಕ್ಕುಗಳ ಜಗಳಗಳಿಗೆ ಕಿವಿಯಾಗಬೇಕಾಗುತ್ತದೆ. ‘ಬುಸ್’ ಎಂಬ ಶಬ್ದದೊಂದಿಗೆ ಉಕ್ಕಿದ ಹಾಲು ಅರ್ಧ ಹೊರ ಚೆಲ್ಲಿದಾಗಲೇ ಎಚ್ಚರ. ಮತ್ತೆ ಹೋಗಿ ಮೈ ಚೆಲ್ಲಿದರೆ ಅಬ್ಬಾ ಇಂದಿನ ಕೆಲಸ ಮುಗಿಯಿತಲ್ಲ ಎಂಬ ನಿರುಮ್ಮಳ ಭಾವ.

ರಾತ್ರಿ ಹೀಗೆಯೇ ನಿರಂತರವಾಗಿರಲೆಂಬ ಭಾವ. ಬೆಳಗು ಹರಿಯುವುದಾದರೂ ಏತಕ್ಕೋ. ಇದೀಗ ತಾನೇ ದಿಂಬಿಗೆ ತಲೆ ಕೊಟ್ಟಾಗಿತ್ತು. ಹಿಂಡುವ ಬೆನ್ನುನೋವು ಹಾಸಿಗೆಯಿಂದ ಚಿಮ್ಮಿಯೇ ಬಿಡುತ್ತದೆ. ಆರೋಗ್ಯಕ್ಕೆ ಒಳ್ಳೆಯದೆಂದೋ ದೇಹದ ತೂಕ ಜಾಸ್ತಿಯಾಯಿತೆಂದೋ ವಾಯುವಿಹಾರಕ್ಕೆ ಮನಸ್ಸು ಸೂಚಿಸಿದರೆ ಅದೇ ಅರ್ಧ ಗಂಟೆಯಲ್ಲಿ ಪಾತ್ರೆಯನ್ನಾದರೂ ತೊಳೆಯಬಹುದಲ್ಲ? ಇಲ್ಲಾ ಕರೆಂಟ್ ಕೈ ಕೊಡುವುದರಲ್ಲಿ ಚಟ್ನಿಯನ್ನಾದರೂ ಮಾಡಬಹುದೆಂಬ ಲೆಕ್ಕಾಚಾರ.

ನಿತ್ಯವೂ ಹೀಗೆಯೇ ದೇಹದಂಡನೆಗೆ ಕತ್ತರಿ ಬೀಳುತ್ತಲೇ ಹೋಗುತ್ತದೆ. ಸೆಕೆಂಡಿನ ಮುಳ್ಳಿನಂತೆ ಇಲ್ಲಿಂದ ಪ್ರಾರಂಭವಾಗುತ್ತದೆ ಅವಳ ದಿನಚರಿ. ಗಂಡುಮಕ್ಕಳಿಗೊಂದು ‘ಬೈ’ ಹೇಳಿ ಕೈ ಬೀಸಿದಾಗಲೇ ಧಾವಂತಕ್ಕೊಂದು ವಿಶ್ರಾಂತಿ ಸಿಕ್ಕುವುದು. ಸ್ನೇಹಿತೆಯರಿಗೋ ತವರಿಗೋ ಫೋನಾಯಿಸಿ ಹರಟಿದರೆ ಏನೋ ಒಂದು ರೀತಿಯ ಹುಮ್ಮಸ್ಸು.

ಮತ್ತೆ ಸಂಜೆ ಗಂಡ, ಮಕ್ಕಳು ಎಂಟ್ರಿ ಕೊಡುವಷ್ಟರಲ್ಲಿಯೇ ಚಿತ್ತಾರದಂತೆ ಹರಡಿ ಹೋಗಿರುವ ಮನೆಯನ್ನು ಒಪ್ಪ ಮಾಡುವುದು, ಅಡುಗೆ, ಪಾತ್ರೆ, ಕಸ, ನೆಲ – ಎಂದು ಸಮಯ ಕಳೆದು ಹೋಗುವುದು ಕಣ್ರೆಪ್ಪೆ ಬಡಿದಷ್ಟೇ ವೇಗದಲ್ಲಿ. ಪ್ರತಿನಿತ್ಯದ ಏಕತಾನತೆಯಲ್ಲೂ ಹೊಸತನವನ್ನು ಕಾಣುವವಳು.

ಕುಟುಂಬದ ನಿರ್ವಹಣೆಯಲ್ಲೇ ಕಲೆಯ ಬಲೆಯನ್ನು ಹೆಣೆಯುವವಳು. ಮಕ್ಕಳ ಆಟ-ಪಾಠ, ಗಂಡನ ಏಳಿಗೆಗಳಲ್ಲೇ ಸಂತಸವನ್ನು ಹುಡುಕುವವಳು. ಸದಾ ಗೋಡೆಯ ಗಡಿಯಾರದಂತೆ ಚಲನಶೀಲಳು. ಸೆಕೆಂಡಿನ ಮುಳ್ಳು ಕದಲುತ್ತಲಿದ್ದರೆ ಮಾತ್ರ ನಿಮಿಷ ಗಂಟೆಗಳ ಮುಳ್ಳಿಗೆ ಜೀವಂತಿಕೆ. ಇಲ್ಲದಿದ್ದಲ್ಲಿ ಅದರ ಇರುವಿಕೆಗೆ ಬೆಲೆಯೇ ಇಲ್ಲ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !