ಸೋಮವಾರ, ಡಿಸೆಂಬರ್ 9, 2019
22 °C
ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿ ಅಭಿಪ್ರಾಯ

ಬೆರಳೆಣಿಕೆ ಮಹಿಳೆಯರಿಂದಷ್ಟೇ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ‘ರಾಜಕೀಯ ಧುರೀಣರು ಮಾತ್ರ ಪ್ರಜಾಪ್ರಭುತ್ವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಮಾನ್ಯ ಮಹಿಳೆಯರಿಗೆ ಅವಕಾಶ ದೊರೆಯುತ್ತಿಲ್ಲ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಕಾಲೇಜು ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ, ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳಾ ಹಾಗೂ ಚುನಾವಣಾ ಸುಧಾರಣೆಗಳು’ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ಪ್ರಜಾಪ್ರಭುತ್ವದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮತದಾನ ಮಾಡುತ್ತಿದ್ದು, ಲಿಂಗ ತಾರತಮ್ಯವೂ ಕೂಡ ಇದಕ್ಕೆ ಕಾರಣವಾಗಿದೆ. ಸ್ತ್ರೀಯರು ತಮ್ಮ ಸ್ವಾಭಾವಿಕ ಗುಣಗಳಿಂದ ಹಾಗೂ ನಡೆದು ಬಂದ ಸಂಸ್ಕೃತಿಯ ಅಡ್ಡಗಾವಲಿನಿಂದ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಹಿಂದೆ ಉಳಿಯುತ್ತಿದ್ದಾರೆ. ಸ್ವಾತಂತ್ರ್ಯದ ಪೂರ್ವದಲ್ಲಿ ಚಳವಳಿಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದ್ದು, ನಂತರದಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ. ಅಕ್ಷರಸ್ಥರಿಗಿಂತ ಅನಕ್ಷರಸ್ಥರು ಉತ್ತಮ ಆಡಳಿತ ನಡೆಸಬಲ್ಲರು’ ಎಂದು ಹೇಳಿದರು.

ಮಹಿಳಾ ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಸಂಯೋಜಕಿ ಡಾ.ಲಕ್ಷ್ಮಿದೇವಿ ವೈ. ಮಾತನಾಡಿ, ‘ಮಹಿಳೆಯರು ಸಮಾಜದಲ್ಲಿನ ನೈತಿಕ ವಿಷಯಗಳ ಬಗ್ಗೆ ಒತ್ತು ಕೊಡಬೇಕು. ಹಲವಾರು ಸಮಾವೇಶಗಳಲ್ಲಿ ಹೆಣ್ಣುಮಕ್ಕಳು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಜನರೊಂದಿಗೆ ಬೆಳೆಯುವಂತಹ ಅವಕಾಶವನ್ನು ಸಮಾಜ ಕಲ್ಪಿಸಿಕೊಡಬೇಕು. ಮಹಿಳೆಯರು ಕೂಡ ಸಮಾಜವನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕಾಲೇಜು ರಾಜ್ಯಶಾಸ್ತ್ರ ಅಧ್ಯಾಪಕರ ಸಂಘಧ ಅಧ್ಯಕ್ಷ ಪ್ರೊ.ಜಿ.ಎಂ.ನಾಡಿಗೇರ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಪ್ರೊ.ಎಸ್.ಬಿ.ಮಾಡಗಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಇದ್ದರು.

ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕ ಸಿ.ಎಸ್.ಆನೂರು ಪರಿಚಯಿಸಿದರು. ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಗಂಗಾಧರ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಗೀತಾ ನಾಯಕ, ಮಧು ಹುಣಸಗಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚನ್ನಪ್ಪ ವಂದಿಸಿದರು.

ಪ್ರತಿಕ್ರಿಯಿಸಿ (+)