ಮೈಸೂರಿನಿಂದ ರಾಮನಗರಕ್ಕೆ ಚಿತ್ರನಗರಿ?

7
ಡಾ. ರಾಜ್‌ ಸಿನಿಮಾಗಳಿಂದ ಮಾನವೀಯತೆ ಕಲಿತೆ: ಸಿ.ಎಂ ಕುಮಾರಸ್ವಾಮಿ

ಮೈಸೂರಿನಿಂದ ರಾಮನಗರಕ್ಕೆ ಚಿತ್ರನಗರಿ?

Published:
Updated:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (ಎಡದಿಂದ ಮೂರನೆಯವರು) ಅವರೊಂದಿಗೆ ಬಿ.ಸರೋಜಾದೇವಿ, ಅಂಬರೀಶ್‌ ಹಾಗೂ ಸಚಿವೆ ಜಯಮಾಲಾ ಅವರ ಉಲ್ಲಾಸದ ಕ್ಷಣ –ಪ್ರಜಾವಾಣಿ ಚಿತ್ರ

ಬೆಂಗಳೂರು: ಹೈದರಾಬಾದ್‌ನ ರಾಮೋಜಿರಾವ್ ಸ್ಟುಡಿಯೊ ಮಾದರಿಯಲ್ಲಿ ರಾಮನಗರದ ಸಮೀಪ ಬೃಹತ್ ಚಿತ್ರನಗರಿ ನಿರ್ಮಿಸುವುದು ನನ್ನ ಕನಸು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಮೈಸೂರಿನ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಚಿತ್ರನಗರಿಗೆ ಬದಲು, ರಾಮನಗರದ ಬಳಿ ಚಿತ್ರನಗರಿ ರೂಪಿಸುವ ಕುರಿತು ಚಿತ್ರೋದ್ಯಮ ಯೋಜನೆ ರೂಪಿಸಿದರೆ ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಲು ಸಿದ್ಧ
ವಾಗಿದ್ದೇನೆ’ ಎಂದರು.

‘ಚಿತ್ರರಂಗದ ಕುಟುಂಬಕ್ಕೆ ಸೇರಿದ ತಾವು, ಚಿತ್ರೋದ್ಯಮವನ್ನು ಶಾಶ್ವತವಾಗಿ ಉಳಿಸಲು ಅಗತ್ಯವಾದ ಎಲ್ಲ ಕಾರ್ಯಕ್ರಮಗಳನ್ನು ಬೆಂಬಲಿಸುವೆ’ ಎಂದ ಅವರು, ಚಿತ್ರನಗರಿ ಯೋಜನೆಯ ನೇತೃತ್ವವನ್ನು ಕಲಾವಿದರ ಸಂಘದ ಅಧ್ಯಕ್ಷರಾದ ಅಂಬರೀಶ್‌ ವಹಿಸಬೇಕು ಎಂದು ಕೋರಿಕೊಂಡರು. ಉದ್ದೇಶಿತ ಚಿತ್ರನಗರಿಯಿಂದ ಸಿನಿಮಾಸಕ್ತರಿಗೆ ತಾಂತ್ರಿಕ ತರಬೇತಿಯನ್ನು ನೀಡುವುದರ ಜೊತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ ಎಂದರು.

ಮೈಸೂರಿನ ಸಮೀಪ ಚಿತ್ರನಗರಿಯ ಬದಲು, ಪ್ರವಾಸೋದ್ಯಮಕ್ಕೆ ಪೂರಕವಾದ ಡಿಸ್ನಿಲ್ಯಾಂಡ್ ಮಾದರಿಯ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ ಎಂದರು.

ಡಾ.ರಾಜ್‌ಕುಮಾರ್ ಸ್ಫೂರ್ತಿ: ಮಾನವೀಯ ವ್ಯಕ್ತಿತ್ವ ನನ್ನಲ್ಲಿ ರೂಪುಗೊಳ್ಳಲು ನನ್ನ ತಂದೆತಾಯಿಯ ನಂತರದ ಪಾತ್ರ ರಾಜ್‌ಕುಮಾರ್ ಸಿನಿಮಾಗಳದ್ದಾಗಿದೆ. ಬಡವರ ಕುರಿತ‌ ಮಾನವೀಯ ಸ್ಪಂದನವನ್ನು ಸಿನಿಮಾಗಳು ನನ್ನಲ್ಲಿ ಮೂಡಿಸಿವೆ ಎಂದು ಹೇಳಿದರು.

ಪ್ರದರ್ಶಕನಾಗಿ, ಹಂಚಿಕೆದಾರನಾಗಿ ಹಾಗೂ ನಿರ್ಮಾಪಕನಾಗಿ ಚಿತ್ರರಂಗದಲ್ಲಿನ ತಮ್ಮ ಬೆಳವಣಿಗೆಯನ್ನು ನೆನಪಿಸಿಕೊಂಡ ಅವರು, ‘ರಾಜ್ಯದಲ್ಲಿನ ಎಲ್ಲ ಚಿತ್ರಮಂದಿರಗಳು ಪ್ರಸ್ತುತ ಇಬ್ಬರು ಮೂವರು ಪ್ರದರ್ಶಕರ ಹಿಡಿತದಲ್ಲಿದ್ದು, ಸಣ್ಣ ಪುಟ್ಟ ನಿರ್ಮಾಪಕರಿಗೆ ತಮ್ಮ ಚಿತ್ರಗಳನ್ನು ತೆರೆಕಾಣಿಸುವುದು ಕಷ್ಟವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಜಿಎಸ್‌ಟಿ ವಿನಾಯಿತಿ: ಕನ್ನಡ ಚಿತ್ರೋದ್ಯಮವನ್ನು ಜಿಎಸ್‌ಟಿಯಿಂದ ಹೊರಗಿಡಲು ಸರ್ಕಾರ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಉದ್ಯಮದ ಎಲ್ಲ ಕಾರ್ಮಿಕರಿಗೆ ಮನೆ ಒದಗಿಸಲು ಕೂಡ ಸರ್ಕಾರ ಬದ್ಧವಾಗಿದೆ ಎಂದರು.

ಹಿರಿಯನಟಿ ಬಿ. ಸರೋಜಾದೇವಿ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಸಚಿವರುಗಳಾದ ಜಯಮಾಲಾ ಮತ್ತು ಆರ್. ಶಂಕರ್ ಅಭಿನಂದನಾ ಸಮಾರಂಭದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನಡೆದುಬಂದ ದಾರಿಯನ್ನು ಬಿಂಬಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ನಟ ದರ್ಶನ್‌ಗೆ ಅಂಬರೀಶ್ ತರಾಟೆ

‘ಹೇಳಿದ ಮಾತು ಕೇಳಬೇಕು’ – ನಟ ದರ್ಶನ್‌ ಅವರನ್ನು ಅಂಬರೀಶ್‌ ಅವರು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

ದರ್ಶನ್‌ ತಮ್ಮ ಪಾಡಿಗೆ ತಾವು ಸಭಿಕರ ನಡುವೆ ಕುಳಿತಿದ್ದರು. ಅದನ್ನು ಗಮನಿಸಿದ ಅಂಬರೀಶ್‌, ವೇದಿಕೆಗೆ ಬರುವಂತೆ ಒತ್ತಾಯಿಸಿದರು. ದರ್ಶನ್‌ ಹಿಂಜರಿದಾಗ, ‘ಬಾರಯ್ಯಾ ಇಲ್ಲಿ’ ಎಂದು ದನಿಯೇರಿಸಿ ಕರೆದರು. ವೇದಿಕೆ ಮೇಲೆ ಕೂರಲು ಹಿಂಜರಿದ ಯುವನಟನನ್ನು ತಮ್ಮ ಮಾತು ಕೇಳುವಂತೆ ಪ್ರೀತಿಯಿಂದ ಗದರಿ ಕೂರಿಸಿದರು.

ಮುಖ್ಯಮಂತ್ರಿಗಳ ಸನ್ಮಾನ ಸಂದರ್ಭದಲ್ಲಿ ವೇದಿಕೆಯ ಮೇಲೆ ಗೊಂದಲ ಉಂಟಾದಾಗ ಮೈಕ್‌ ತೆಗೆದುಕೊಂಡ ಅಂಬರೀಶ್‌, ಎಲ್ಲರನ್ನೂ ದೂರ ಕಳುಹಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !