ಪೇಂಟ್ಸ್‌ ಗೋದಾಮಿಗೆ ಬೆಂಕಿ; ಡಬ್ಬಗಳು ಸ್ಫೋಟ

7

ಪೇಂಟ್ಸ್‌ ಗೋದಾಮಿಗೆ ಬೆಂಕಿ; ಡಬ್ಬಗಳು ಸ್ಫೋಟ

Published:
Updated:
Prajavani

ಹೆಸರಘಟ್ಟ: ದಾಸನಪುರ ಹೋಬಳಿಯ ಕುದುರೆಗೆರೆ ರಸ್ತೆಯಲ್ಲಿರುವ ಇರುವ ‘ಯುನಿಟೈಡ್ ಪೇಂಟ್ಸ್‌’ ಕಂಪನಿಯ ಗೋದಾಮಿಗೆ ತಗುಲಿದ್ದ ಬೆಂಕಿ ಹೊತ್ತಿ ಉರಿದಿದ್ದರಿಂದ, ಅಕ್ಕ–ಪಕ್ಕದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.

ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಹಿಂಭಾಗದಲ್ಲಿರುವ ಈ ಕಂಪನಿಯನ್ನು ಎರಡು ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು. ಆದರೆ, ಗೋದಾಮಿನಲ್ಲಿ ಪೇಂಟ್‌ ಡಬ್ಬಿಗಳನ್ನು ಸಂಗ್ರಹಿಸಲಾಗಿತ್ತು. ಅದರ ಜೊತೆಗೆ ಆಯಿಲ್‌ ಡಬ್ಬಿಗಳು ಸಹ ಇದ್ದವು. ಅವುಗಳಿಗೆ ಬೆಂಕಿ ತಗುಲಿದ್ದರಿಂದಾಗಿ, ಇಡೀ ಗೋದಾಮು ಧಗ ಧಗನೇ ಉರಿಯಿತು.

‘ಬೆಳಿಗ್ಗೆ 11.40ರ ಸುಮಾರಿಗೆ ಗೋದಾಮಿನಿಂದ ದಟ್ಟ ಹೊಗೆ ಬರಲಾರಂಭಿಸಿತ್ತು. ನೋಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು, ಅದರ ಕೆನ್ನಾಲಗೆ ಹೆಚ್ಚಾಗಿ ಜ್ವಾಲೆಯಂತೆ ಹೊರಹೊಮ್ಮಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ಗೋದಾಮು ಪಕ್ಕದ ಜಾಗದಲ್ಲಿ ಮನೆಗಳಿವೆ. ಬೆಂಕಿಯನ್ನು ಕಂಡು ಭಯಗೊಂಡ ನಿವಾಸಿಗಳು, ಅಡುಗೆ ಅನಿಲ್ ಗ್ಯಾಸ್‌ ಹಾಗೂ ವಿದ್ಯುತ್‌ ಸ್ವಿಚ್‌ಗಳನ್ನು ಬಂದ್‌ ಮಾಡಿ ಮನೆಗಳಿಂದ ಹೊರಗೆ ಓಡಿ ಬಂದು ಸುರಕ್ಷಿತ ಸ್ಥಳದಲ್ಲಿ ನಿಂತುಕೊಂಡಿದ್ದರು. ಸ್ಥಳಕ್ಕೆ ಬಂದ ನೆಲಮಂಗಲ, ಪೀಣ್ಯ ಹಾಗೂ ಸುತ್ತಮುತ್ತಲ ಅಗ್ನಿಶಾಮಕ ದಳದ ಸಿಬ್ಬಂದಿ, 20 ವಾಹನಗಳ ಮೂಲಕ ನಾಲ್ಕು ಗಂಟೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು’ ಎಂದು ಹೇಳಿದರು.

ಅಗ್ನಿಶಾಮಕ ದಳದ ಸಿಬ್ಬಂದಿ, ‘ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ. ಆಯಿಲ್‌ ಡಬ್ಬಗಳು ಹೆಚ್ಚಿದ್ದರಿಂಗಾಗಿ ಬೆಂಕಿಯ ಪ್ರಮಾಣ ಜಾಸ್ತಿ ಇತ್ತು’ ಎಂದು ತಿಳಿಸಿದರು.

‘ಪೇಂಟ್‌ ಹಾಗೂ ಆಯಿಲ್‌ ಡಬ್ಬಗಳು ಗೋದಾಮಿನಲ್ಲಿ ಸ್ಫೋಟಗೊಳ್ಳಲಾರಂಭಿಸಿದ್ದರು. ಆರಂಭದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ಅದರ ಮಧ್ಯೆಯೇ ಸಿಬ್ಬಂದಿ, ಕ್ರಮೇಣ ಬೆಂಕಿ ನಂದಿಸಿದರು’ ಎಂದರು.

ಮಾದನಾಯಕನಹಳ್ಳಿ ಪೊಲೀಸರು, ‘ಬೆಂಕಿ ಅವಘಡದಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅವಘಡದ ವೇಳೆ ಗೋದಾಮಿನಲ್ಲಿ ಯಾರೂ ಇರಲಿಲ್ಲ. ಅದರ ಮಾಲೀಕರು ಯಾರು ಎಂಬುದು ಸಹ ಗೊತ್ತಾಗಿಲ್ಲ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !