ಪ್ಲಾಸ್ಟಿಕ್ ಸಂಸ್ಕರಣ ಘಟಕಕ್ಕೆ ಬೆಂಕಿ

ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ ಸಮೀಪದ ಪ್ಲಾಸ್ಟಿಕ್ ಸಂಸ್ಕರಣ ಘಟಕವೊಂದಕ್ಕೆ ಭಾನುವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದರಿಂದ, ಇಡೀ ಘಟಕ ಸುಟ್ಟು ಕರಕಲಾಗಿದೆ.
ಗೋದಾಮಿನಲ್ಲಿ ಸಾಕಷ್ಟು ಪ್ರಮಾಣದ ಪ್ಲಾಸ್ಟಿಕ್ ಸಂಗ್ರಹಿಸಲಾಗಿತ್ತು. ರಾತ್ರಿ ಕಾಣಿಸಿಕೊಂಡಿದ್ದ ಬೆಂಕಿ ಕ್ರಮೇಣ ಹೆಚ್ಚಾಗಿ ಘಟಕವನ್ನೆಲ್ಲ ಆವರಿಸಿಕೊಂಡಿತ್ತು. ಬೆಂಕಿಯು ಜ್ವಾಲೆಯಂತೆ ಉರಿಯುತ್ತಿತ್ತು. ದಟ್ಟ ಹೊಗೆಯೂ ಇತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ, ಎಂಟು ವಾಹನಗಳ ಮೂಲಕ ಕಾರ್ಯಾಚರಣೆ ಆರಂಭಿಸಿದರು. ಮಧ್ಯರಾತ್ರಿಯೂ ಕಾರ್ಯಾಚರಣೆ ಮುಂದುವರಿದಿತ್ತು.
‘ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಗೋದಾಮು ಮಾಲೀಕರು ಯಾರು ಎಂಬುದು ಗೊತ್ತಾಗಿಲ್ಲ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸೋಮವಾರ ಗೊತ್ತಾಗಲಿದೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದರು.
ಕಾರ್ಮಿಕರ ಶೆಡ್ಗಳಿಗೆ ಬೆಂಕಿ: ಗೋದಾಮು ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ಕಾರ್ಮಿಕರು ವಾಸವಿದ್ದರು. ಗೋದಾಮಿಗೆ ಹೊತ್ತಿಕೊಂಡಿದ್ದ ಬೆಂಕಿಯು ಶೆಡ್ಗೂ ತಗುಲಿತ್ತು. ಶೆಡ್ನಲ್ಲಿದ್ದ ಕಾರ್ಮಿಕರು, ಸುರಕ್ಷಿತ ಸ್ಥಳಕ್ಕೆ ಹೋಗಿ ಅಪಾಯದಿಂದ ಪಾರಾದರು
‘ಉತ್ತರ ಕರ್ನಾಟಕದಿಂದ ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಕಾರ್ಮಿಕರು ಶೆಡ್ನಲ್ಲಿ ಇದ್ದರು. ಘಟನೆಯಲ್ಲಿ ಶೆಡ್ನಲ್ಲಿದ್ದ ಸಾಮಗ್ರಿಗಳು ಸುಟ್ಟಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದರು.
ಬರಹ ಇಷ್ಟವಾಯಿತೆ?
2
0
0
0
0
0 comments
View All