ಪ್ರಥಮ ಚಿಕಿತ್ಸೆ: ಅಪಾಯದಿಂದ ಪಾರು ಮಾಡುವ ಮೊದಲ ಹೆಜ್ಜೆ

7

ಪ್ರಥಮ ಚಿಕಿತ್ಸೆ: ಅಪಾಯದಿಂದ ಪಾರು ಮಾಡುವ ಮೊದಲ ಹೆಜ್ಜೆ

Published:
Updated:
Deccan Herald

ಕೆಲವು ವರ್ಷಗಳ ಹಿಂದೆ ಶಾಲೆಗಳಲ್ಲಿ, ವಾಹನಗಳಲ್ಲಿ, ಕಚೇರಿಗಳಲ್ಲಿ, ಕ್ರೀಡಾಂಗಣಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯೊಂದು ಇದ್ದೇ ಇರುತ್ತಿತ್ತು. ಆ ಕಾಲದಲ್ಲಿ ಈಗಿನಷ್ಟು ಆಸ್ಪತ್ರೆಗಳಿರಲಿಲ್ಲ. ಕೆಲಸದ ವೇಳೆಯಲ್ಲಿ ಯಾವುದೇ ವ್ಯಕ್ತಿಯು ಅಪಘಾತಕ್ಕೆ ಒಳಗಾದರೆ ಅಥವಾ ಪೆಟ್ಟು ಮಾಡಿಕೊಂಡರೆ ದೂರದ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಈ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯು ಉಪಯೋಗಕ್ಕೆ ಬಂದಿರುತ್ತಿತ್ತು.

ಪ್ರಥಮ ಚಿಕಿತ್ಸೆ ಎಂದರೇನು?

ವ್ಯಕ್ತಿಯ ಜೀವಕ್ಕೇ ಅಪಾಯವೆಂದೆನಿಸುವ ತುರ್ತು ಪರಿಸ್ಥಿತಿಯಲ್ಲಿ, ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸುವ ಹಾಗೂ ಆತನ ಜೀವವನ್ನು ಉಳಿಸಲು ಅನುಸರಿಸುವ ಸರಳ ಪ್ರಕ್ರಿಯೆಯೇ ಪ್ರಥಮ ಚಿಕಿತ್ಸೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜನಸಾಮಾನ್ಯರೇ ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ಉಪಕರಣಗಳ ಬಳಕೆಯಿರುವುದಿಲ್ಲ.

ಪ್ರಥಮ ಚಿಕಿತ್ಸೆಯಲ್ಲಿ ನಾವು ಮುಖ್ಯವಾಗಿ ಮೂರು ಅಂಶಗಳೆಡೆಗೆ ಗಮನವಿಡಬೇಕಾಗುತ್ತದೆ. ಅವೆಂದರೆ, ವ್ಯಕ್ತಿಯ ಶ್ವಾಸನಾಳ / ಉಸಿರಾಟ, ರಕ್ತಪರಿಚಲನೆ ಹಾಗೂ ಪೆಟ್ಟು ಬಿದ್ದ ದೇಹದ ಭಾಗವನ್ನು ಇರಿಸಬೇಕಾದ ರೀತಿ.
ಜೀವವನ್ನು ಉಳಿಸಲು ನೆರವಾಗುವ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕು. ತುರ್ತುಸ್ಥಿತಿಗಳಲ್ಲಿ, ಗಾಯಾಳುವನ್ನು ಕರೆದೊಯ್ಯಲು ತುರ್ತುವಾಹನವು ಬರುವವರೆಗೆ ನಾವು ಅನುಸರಿಸಬೇಕಾದ ಕೆಲವು ಕ್ರಮಗಳು ಈ ರೀತಿಯಲ್ಲಿವೆ.

ರಸ್ತೆ ಅಪಘಾತಗಳಲ್ಲಿ ಗಾಯಾಳುವಿನ ದೇಹದ ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ಗುರುತಿಸಿ ಆ ಭಾಗಕ್ಕೆ ಪ್ರಥಮ ಚಿಕಿತ್ಸಕರು ತಮ್ಮ ಕೈಗಳಿಂದ ಬೆಂಬಲ ಕೊಟ್ಟು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಒಂದು ವೇಳೆ ಕೈ ಅಥವಾ ಕಾಲಿನ ಭಾಗಕ್ಕೆ ಪೆಟ್ಟಾಗಿದ್ದರೆ, ಪೆಟ್ಟಾದ ಭಾಗಕ್ಕೆ ಎಲ್ಲ ಕಡೆಗಳಿಂದ ಬೆಂಬಲ ಕೊಟ್ಟು ಅದನ್ನು ಸುಸ್ಥಿಯಲ್ಲಿರಿಸಬೇಕು. ಆಸ್ಪತ್ರೆಗೆ ಕರೆದೊಯ್ಯುವಾಗ ಆ ಭಾಗವು ಹೆಚ್ಚು ಅಲುಗಾಡದಂತೆ ಎಚ್ಚರ ವಹಿಸಬೇಕು.
ಅಪಘಾತಕ್ಕೊಳಗಾದ ವ್ಯಕ್ತಿಯ ಉಸಿರಾಟದ ಮೇಲೆ ಗಮನವಿಡಬೇಕು. ಆತನನ್ನು ಸುತ್ತುವರೆದ ಜನಸಂದಣಿಯನ್ನು ದೂರ ಸರಿಸಿ, ಆತನ ಉಡುಪುಗಳನ್ನು ಸಡಿಲಗೊಳಿಸಿ ಆತನಿಗೆ ಉಸಿರಾಡಲು ಉತ್ತಮವಾದ ಗಾಳಿ ದೊರೆಯುವಂತೆ ನೋಡಿಕೊಳ್ಳಬೇಕು.

ತುರ್ತು ಸ್ಥಿತಿಗಳಲ್ಲಿ ಒಂದು ವೇಳೆ ವ್ಯಕ್ತಿಯು ಉಸಿರಾಡುತ್ತಿಲ್ಲ ಎಂದೆನಿಸಿದರೆ, ಮೊದಲು ಆತನನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು. ನಂತರ ಆತನ ಎದೆಗೂಡಿನ ಮಧ್ಯಭಾಗದ ಮೂಳೆಯ (ಸ್ಟೆರ್‍ನಮ್) ಕೆಳಭಾಗದ ಮೇಲೆ ಪ್ರಥಮ ಚಿಕಿತ್ಸಕನ ಒಂದು ಕೈಯ ಅಂಗೈಯ ಕೆಳಭಾಗವನ್ನು ಇರಿಸಿ, ಅದರ ಮೇಲೆ ಮತ್ತೊಂದು ಕೈಯ ಅಂಗೈಯನ್ನು ಇಟ್ಟು ತ್ವರಿತವಾಗಿ (ಒಂದು ನಿಮಿಷದಲ್ಲಿ ಸುಮಾರು ನೂರು ಬಾರಿ) ಒತ್ತುತ್ತಾ ಹೋಗಬೇಕು. ಈ ಪ್ರಕ್ರಿಯೆಯಲ್ಲಿ ಪ್ರಥಮ ಚಿಕಿತ್ಸಕನು ವ್ಯಕ್ತಿಯ ಪಕ್ಕದಲ್ಲಿ ತನ್ನ ಮಂಡಿಗಳ ಮೇಲೆ ಕುಳಿತು, ಭುಜ ಹಾಗೂ ಕೈಗಳನ್ನು ನೇರವಾಗಿಸಿರಬೇಕು. ಈ ಪ್ರಕ್ರಿಯೆಯು ವ್ಯಕ್ತಿಯ ಹೃದಯ ಹಾಗೂ ಶ್ವಾಸಕೋಶಗಳಿಗೆ ಪ್ರಚೋದನೆ ನೀಡುತ್ತದೆ. ಇದನ್ನು ಸಿ. ಪಿ. ಆರ್. ( ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ಎನ್ನುತ್ತಾರೆ.

ಅಪಘಾತಗಳಲ್ಲಿ ವ್ಯಕ್ತಿಯ ಬೆನ್ನುಹುರಿಗೆ ಪೆಟ್ಟಾದ ಸೂಚನೆಯೇನಾದರೂ ಇದ್ದಲ್ಲಿ, ಆತನ ತಲೆ ಹಾಗೂ ಕುತ್ತಿಗೆಯ ಭಾಗವನ್ನು ಎರಡೂ ಕೈಗಳಿಂದ ಬೆಂಬಲಿಸಿ ಸರಿಯಾದ ಸ್ಥಾನದಲ್ಲಿರಿಸಬೇಕು.

ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ ಅಥವಾ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೆ ಆಸ್ಪತ್ರೆಗೆ ಸಾಗಿಸುವವರೆಗೆ ಆತನ ದೇಹ ಸರಿಯಾದ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆತನನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು. ಪ್ರಥಮ ಚಿಕಿತ್ಸಕನು ತನ್ನ ಒಂದು ಕೈಯನ್ನು ವ್ಯಕ್ತಿಯ ಹಣೆಯ ಮೇಲಿರಿಸಿ, ತಲೆಯನ್ನು ಸ್ವಲ್ಪವೇ ಬದಿಗೆ ವಾಲಿಸಿ, ಇನ್ನೊಂದು ಕೈಯಿಂದ ಗದ್ದ/ಗಲ್ಲವನ್ನು ಸ್ವಲ್ಪ ಎತ್ತಿ ಹಿಡಿಯಬೇಕು. ಆತನ ಬಾಯಿಯಲ್ಲಿ ಇರಬಹುದಾದ ಮಣ್ಣು ಅಥವಾ ಇತರ ವಸ್ತುಗಳನ್ನು ಮತ್ತೊಬ್ಬರ ಸಹಾಯದಿಂದ ತೆಗೆಯಬೇಕು. ಆತನ ಶ್ವಾಸನಾಳವು ಸ್ಪಷ್ಟ ಹಾಗೂ ನಿಚ್ಚಳವಾಗಿದೆಯೇ ಎಂದು ಗಮನಿಸಬೇಕು. ಯಾವ ಕಾರಣಕ್ಕೂ ಆತನ ಬಾಯಿಗೆ ನೀರು ಅಥವಾ ಇನ್ಯಾವುದೇ ತಿನಿಸುಗಳನ್ನು ಹಾಕಬಾರದು.

ದೇಹದ ಹೊರ ಭಾಗದಿಂದ ರಕ್ತಸ್ರಾವವಾಗುತ್ತಿದ್ದರೆ, ಸ್ವಚ್ಛವಾದ ಬಟ್ಟೆ/ ಕರವಸ್ತ್ರದ ಸಹಾಯದಿಂದ ಆ ಸ್ಥಳವನ್ನು ಗಟ್ಟಿಯಾಗಿ ಒತ್ತಿ ಹಿಡಿಯಬೇಕು. ಸುಮಾರು ಐದು ನಿಮಿಷದವರೆಗೆ ಆ ರೀತಿ ಹಿಡಿದಾಗ ಅಲ್ಪ ಪ್ರಮಾಣದ ರಕ್ತಸ್ರಾವವು ನಿಲ್ಲುವುದು.

ಸುಟ್ಟಗಾಯಗಳ ಮೇಲೆ ಕೂಡಲೇ ಶುಚಿಯಾದ ತಣ್ಣನೆಯ ನೀರನ್ನು ಸುಮಾರು ಹತ್ತು ನಿಮಿಷಗಳವರೆಗೆ ಸುರಿಯಬೇಕು. ಆ ಭಾಗದಲ್ಲಿ ಉಂಗುರ, ಬೆಲ್ಟ್, ಕೈ ಗಡಿಯಾರಗಳೇನಾದರೂ ಇದ್ದರೆ ಅವನ್ನು ಮೊದಲು ತೆಗೆಯಬೇಕು. ಅಲ್ಲಿ ಮೂಡಬಹುದಾದ ನೀರುಗುಳ್ಳೆಗಳನ್ನು ಒಡೆಯಬಾರದು.

ಹಾವು ಅಥವಾ ಚೇಳು ಕಚ್ಚಿದ ಗಾಯವನ್ನು ಕೂಡಲೇ ಸೋಪು ಹಾಗೂ ನೀರನ್ನು ಬಳಸಿ ಸ್ವಚ್ಛಗೊಳಿಸಬೇಕು ಹಾಗೂ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು. ಆಸ್ಪತ್ರೆಗೆ ಕರೆದೊಯ್ಯುವಾಗ ಆ ಭಾಗವು ಹೆಚ್ಚು ಅಲುಗಾಡದಂತೆ ಎಚ್ಚರ ವಹಿಸಬೇಕು.

ನಾಯಿಯು ಕಚ್ಚಿ ಗಾಯವಾದಾಗ ಒಸರುವ ರಕ್ತವನ್ನು ಗಟ್ಟಿಯಾಗಿ ಅದುಮಿ ಹಿಡಿದು ನಿಲ್ಲಿಸಬೇಕು. ರಕ್ತಸ್ರಾವ ಕಡಿಮೆಯಾದ ಬಳಿಕ ಗಾಯವನ್ನು ಸೋಪು ಹಾಗೂ ನೀರನ್ನು ಬಳಸಿ ಶುಚಿಗೊಳಿಸಬೇಕು.

ಜೇನುನೊಣ ಅಥವಾ ಇನ್ನಾವುದೇ ಕೀಟ ಕಚ್ಚಿದಾಗ, ಆ ಭಾಗದ ಮೇಲೆ ತಣ್ಣನೆಯ ನೀರಿನಲ್ಲಿ ಅದ್ದಿದ ಶುಚಿಯಾದ ಕರವಸ್ತ್ರ ಅಥವಾ ಮಂಜುಗಡ್ಡೆಗಳ ತುಣುಕನ್ನು ಇರಿಸಬೇಕು. ಆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿ ಅಲ್ಲಿರಬಹುದಾದ ಹುಳುವಿನ ಕೊಂಡಿಯನ್ನು ತೆಗೆಯಬೇಕು. ಆ ಭಾಗವನ್ನು ತುಸು ಎತ್ತರಕ್ಕೆ ಹಿಡಿಯುವುದರಿಂದ ಮುಂದೆ ಆಗಬಹುದಾದ ಊತವನ್ನು ತಪ್ಪಿಸಬಹುದು.

ವಿಷಕಾರಿಕ ಸಸ್ಯಗಳ ಅಥವಾ ರಾಸಾಯನಿಕಗಳ ಸಂಪರ್ಕ ಬಂದ ಶರೀರದ ಭಾಗವನ್ನು ಚೆನ್ನಾಗಿ ಶುಚಿಯಾದ ನೀರಿನಿಂದ ತೊಳೆಯಬೇಕು.

ಅಕಸ್ಮತ್ತಾಗಿ ಕಣ್ಣುಗಳು ಯಾವುದೇ ಹಾನಿಕಾರಿಕ ರಾಸಾಯನಿಕ ವಸ್ತುವಿನ ಸಂಪರ್ಕಕ್ಕೆ ಬಂದರೆ, ಕೂಡಲೇ ಎರಡೂ ಕಣ್ಣುಗಳನ್ನು ಶುಚಿಯಾದ ತಣ್ಣನೆಯ ನೀರಿನಿಂದ ಚೆನ್ನಾಗಿ ತೊಳೆಯಬೇಕು.
ಅತಿಸಾರದಿಂದ ಬಳಲುವ ವ್ಯಕ್ತಿಗೆ ಹೆಚ್ಚು ಹೆಚ್ಚು ನೀರನ್ನು ಕುಡಿಸಬೇಕು. ಸ್ವಲ್ಪವೇ ಉಪ್ಪು ಹಾಗೂ ಸಕ್ಕರೆ ಬೆರೆಸಿದ ನೀರನ್ನು ಕುಡಿಸಿದರೆ ಇನ್ನೂ ಉತ್ತಮ.

ಕೈ ಕಾಲು, ಬೆನ್ನು ಉಳುಕಿದಾಗ ಆ ಭಾಗಕ್ಕೆ ತಣ್ಣನೆಯ ಬಟ್ಟೆ ಅಥವಾ ಸಣ್ಣ ಮಂಜುಗಡ್ಡೆಗಳ ತುಣುಕನ್ನು ಇರಿಸಬಹುದು. ಕೈ ಅಥವಾ ಕಾಲುಗಳನ್ನು ಎತ್ತಿ ಹಿಡಿದರೆ ಆ ಭಾಗವು ಊದಿಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ಈ ಮೇಲೆ ಹೇಳಿದ ಎಲ್ಲ ವಿಧಾನಗಳನ್ನು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಮಾಡಬೇಕಷ್ಟೆ. ಆದರೆ, ಆದಷ್ಟು ಬೇಗನೆ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆಯನ್ನು ಆರಂಭಿಸುವುದೂ ಬಹಳವೇ ಮುಖ್ಯ.
ನೆನಪಿಡಿ, ರಸ್ತೆ ಅಪಘಾತಗಳಲ್ಲಿ ವ್ಯಕ್ತಿಯ ದೇಹದ ಹೊರ ಭಾಗದಲ್ಲಿ ಯಾವುದೇ ಗಾಯಗಳ ಗುರುತಾಗಲೀ ಅಥವಾ ರಕ್ತಸ್ರಾವವಾಗಲೀ ಇಲ್ಲದಿದ್ದರೂ ಒಮ್ಮೆ ಆಸ್ಪತ್ರೆಗೆ ಕರೆದೊಯ್ಯವುದು ಸೂಕ್ತ. ಏಕೆಂದರೆ ಅಪಘಾತಗಳಲ್ಲಿ ಆಗಬಹುದಾದ ವಿವಿಧ ಬಗೆಯ ತೀವ್ರತರವಾದ ಪೆಟ್ಟುಗಳು ಒಮ್ಮೊಮ್ಮೆ ದೇಹದ ಒಳಭಾಗದ ಅಂಗಾಂಗಗಳಿಗೆ ಹಾನಿ ಮಾಡಿರುವ ಅಥವಾ ದೇಹದ ಒಳಭಾಗದಲ್ಲಿ ರಕ್ತಸ್ರಾವವನ್ನು ಉಂಟು ಮಾಡಿರುವ ಸಾಧ್ಯತೆಗಳಿರುತ್ತವೆ. ಅದನ್ನು ಆಸ್ಪತ್ರೆಯಲ್ಲಿ ತಜ್ಞವೈದ್ಯರು ಪರೀಕ್ಷಿಸಿ ಹಾಗೂ ವಿವಿಧ ತಪಾಸಣೆಗಳ ನೆರವಿನಿಂದ ಪತ್ತೆ ಹಚ್ಚುತ್ತಾರೆ.

ಸುವರ್ಣ ಸಮಯ ಗೊತ್ತೇ?

ರಸ್ತೆ ಅಪಘಾತಗಳಾದಾಗ ಗಾಯಗೊಂಡವರನ್ನು ನಾವು ಎಷ್ಟು ಬೇಗ ಆಸ್ಪತ್ರೆಗೆ ಸೇರಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಏಕೆಂದರೆ ಆ ಮೊದಲ ಒಂದು ತಾಸಿನಲ್ಲಿ ವ್ಯಕ್ತಿಯ ಉಸಿರಾಟ ಮತ್ತು ರಕ್ತಪರಿಚಲನೆಯನ್ನು ಸ್ಥಿರಗೊಳಿಸುವುದು ಬಹಳವೇ ಮುಖ್ಯ. ಆ ಒಂದು ತಾಸಿನಲ್ಲಿ ವ್ಯಕ್ತಿಗೆ ದೊರಕಬಹುದಾದ ಸೂಕ್ತ ಹಾಗೂ ಸಮರ್ಪಕ ಚಿಕಿತ್ಸೆಯಿಂದ ಆತನ ಜೀವವನ್ನೇ ಉಳಿಸಬಹುದು. ಹಾಗಾಗಿಯೇ ಅಪಘಾತವಾದ ಮೊದಲ ಅರವತ್ತು ನಿಮಿಷಗಳನ್ನು ‘ಸುವರ್ಣ ಸಮಯ’ ಎಂದು ಕರೆಯುತ್ತಾರೆ.

ಪೆಟ್ಟಿಗೆಯಲ್ಲಿ ಇರಬೇಕಾದುದ್ದೇನು?

ನಂಜುನಿವಾರಕ (ಆ್ಯಂಟಿಸೆಪ್ಟಿಕ್) ದ್ರಾವಣ, ಪ್ರತಿಜೀವಕ (ಆ್ಯಂಟಿಬಯೋಟಿಕ್) ಮುಲಾಮು, ಹತ್ತಿ ಉಂಡೆಗಳು, ವಿವಿಧ ಗಾತ್ರದ ಬ್ಯಾಂಡೇಜು ಬಟ್ಟೆ, ನೋವು ಹಾಗೂ ಜ್ವರಕ್ಕೆ ಔಷಧ, ಕೈಕವಚ ( ಗ್ಲೌಸ್) – ಮುಂತಾದುವು. ನಿಮ್ಮ ಮನೆಯಲ್ಲಿ, ವಾಹನಗಳಲ್ಲಿ, ಕಚೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇದ್ದರೆ ಒಳಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !