ಸೋಮವಾರ, ಡಿಸೆಂಬರ್ 16, 2019
17 °C

ಪಾಕಿಸ್ತಾನದ ಪೊಲೀಸ್ ಅಧಿಕಾರಿಯಾಗಿ ಹಿಂದೂ ಮಹಿಳೆ ಆಯ್ಕೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಇಸ್ಲಾಮಬಾದ್: ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಹಿಂದೂ ಧರ್ಮದ ಯುವತಿ ಆಯ್ಕೆಯಾಗಿದ್ದಾರೆ. 

ಪಾಕಿಸ್ತಾನ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಂಧ್ ಪ್ರಾಂತ್ಯದ ಯುವತಿ ಪುಷ್ಪಾ ಕೊಲ್ಹಿ ಆಯ್ಕೆಯಾಗಿದ್ದಾರೆ. ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿರುವುದು ಇದೇ ಪ್ರಥಮ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಸಿಂಧ್ ಪಬ್ಲಿಕ್ ಸರ್ವೀಸ್ ಕಮಿಷನ್ ಇತ್ತೀಚೆಗೆ ನಡೆಸಿದ ಪ್ರಾಂತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪುಷ್ಪಾ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ಸಿಂಧ್ ಪ್ರಾಂತ್ಯದ ಮಾನವ ಹಕ್ಕುಗಳ ಹೋರಾಟಗಾರ ಕಪಿಲ್ ದೇವ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದಾಗಿ ಪಿಟಿಐ ವರದಿ ಮಾಡಿದೆ.

ಕಳೆದ ಜನವರಿಯಲ್ಲಿ ಪಾಕಿಸ್ತಾನದ ನ್ಯಾಯಾಧೀಶರಾಗಿ ಸಿಂಧ್ ಪ್ರಾಂತ್ಯದ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಸರ್ಕಾರ ನಡೆಸಿದ ನ್ಯಾಯಾಧೀಶರ ಪರೀಕ್ಷೆಯಲ್ಲಿ ಸುಮನ್ ಪವನ್ ಬೋದನಿ ಎಂಬುವರು 54ನೇ ಸ್ಥಾನ ಪಡೆದು ನ್ಯಾಯಾಧೀಶರ ಪಟ್ಟ ಅಲಂಕರಿಸಿದ್ದಾರೆ. ಈ ಸಂಬಂಧ ಅಂತರರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸುಮನ್, ಸಿಂಧ್ ಪ್ರಾಂತ್ಯ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಈ ಪ್ರದೇಶದಿಂದ ನಾನು ಆಯ್ಕೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನನ್ನ ಈ ಸಾಧನೆಗೆ ನನ್ನ ಕುಟುಂಬದವರ ಸಹಕಾರ ಕಾರಣ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರದಲ್ಲಿ ಹಿಂದೂಗಳೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಹಿತಿಯ ಪ್ರಕಾರ 90 ಲಕ್ಷಕ್ಕೂ ಅಧಿಕ ಹಿಂದೂಗಳು ವಾಸವಾಗಿದ್ದು,  ಇವರಲ್ಲಿ ಸಿಂಧ್ ಪ್ರಾಂತ್ಯ ಅತಿ ಹೆಚ್ಚು ಹಿಂದೂಗಳನ್ನು ಹೊಂದಿದೆ. ಇಲ್ಲಿ ಹಿಂದೂ ಧರ್ಮದ ಹಬ್ಬ, ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂತಸ ಸಂಭ್ರಮದಿಂದ ಆಚರಿಸುತ್ತಾರೆ ಎಂದು ವರದಿಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು