ಹೆಚ್ಚು ಇಳುವರಿ ನಿರೀಕ್ಷೆಯಲ್ಲಿ ಮತ್ಸ್ಯ ಕೃಷಿಕ

7
ಜಲಕೃಷಿಗೆ ತೆರೆದುಕೊಂಡ ತಾಲ್ಲೂಕಿನ ಕೆರೆಕಟ್ಟೆಗಳು 

ಹೆಚ್ಚು ಇಳುವರಿ ನಿರೀಕ್ಷೆಯಲ್ಲಿ ಮತ್ಸ್ಯ ಕೃಷಿಕ

Published:
Updated:
Prajavani

ಯಳಂದೂರು: ತಾಲ್ಲೂಕಿನಲ್ಲಿ 2017–18ನೇ ಸಾಲಿನಲ್ಲಿ ಕೆರೆಕಟ್ಟೆಗಳಲ್ಲಿ ನೀರಿನ ಕೊರತೆ ಮತ್ತು ಹೂಳಿನ ಹೆಚ್ಚಳದಿಂದ ಮೀನು ಇಳುವರಿ ಕುಸಿದಿತ್ತು. ಇದರಿಂದ ಮೀನುಗಾರಿಕೆಯಲ್ಲಿ ತೊಡಗಿದ್ದ ಬಹುತೇಕ ಜಲಕೃಷಿಕರು ನಷ್ಟ ಅನುಭವಿಸಿದ್ದರು.

ಆದರೆ, ಈ ಬಾರಿ ಮಳೆ ಮತ್ತು ಕಬಿನಿ ನೀರಿನಿಂದ ಹಲವು  ಜಲಮೂಲಗಳು ತುಂಬಿದ್ದು, ನಿರೀಕ್ಷೆಗಿಂತ ಹೆಚ್ಚು ಮೀನು ಮರಿಗಳನ್ನು ಬಿಡಲಾಗಿದೆ. ಇದು ಮತ್ಸ್ಯೋದ್ಯಮ ನಂಬಿದವರ ಖುಷಿಗೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ದೊಡ್ಡ ಕೆರೆಗಳಿವೆ. ಯರಿಯೂರು, ಕೆಸ್ತೂರು ಮತ್ತು ಕೃಷ್ಣಯ್ಯನಕಟ್ಟೆ ಅಣೆಕಟ್ಟೆಗಳು ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ವರ್ಷಪೂರ್ತಿ ಜಲ ಸಂಗ್ರಹಕ್ಕೆ ಅನುಕೂಲವಾಗಿದೆ. ಹಾಗಾಗಿ, ಮೀನುಗಾರಿಕಾ ಸಂಘಗಳಿಗೆ ಮತ್ತು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಗೆ ಮೀನುಗಾರಿಕಾ ಇಲಾಖೆ ನೆರವಾಗಿದೆ.

ಇಲಾಖೆಯ ವ್ಯಾಪ್ತಿಯಲ್ಲಿ 18 ಕೆರೆಗಳಿವೆ. ಒಟ್ಟಾರೆ, 1,481 ಹೆಕ್ಟೇರ್ ಪ್ರದೇಶದಲ್ಲಿ ಜಲಮೂಲ ವ್ಯಾಪಿಸಿದೆ. ವಿವಿಧ ಜಾತಿಯ 14.27 ಲಕ್ಷ ಮೀನು ಮರಿಗಳನ್ನು ಈಗಾಗಲೇ ಜಲಮೂಲಗಳಿಗೆ ಬಿಡಲಾಗಿದೆ. ಈ ಪೈಕಿ, ಅತಿ ಹೆಚ್ಚು ಬೇಡಿಕೆ ಇರುವ ಕಾಮನ್ ಕ್ಯಾಂಫರ್‌ ಮೀನು (ಸಾಮಾನ್ಯ ಗೆಂಡೆ) ತಳಿಯ 6.55 ಲಕ್ಷ ಮೀನು ಮರಿಗಳನ್ನು ಪೋಷಿಸಲಾಗಿತ್ತಿದೆ. ಕಾಟ್ಲಾ, ರೋಹು, ಮೃಗಾಲು, ಹುಲ್ಲು ಗಂಡೆ ಮರಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಅಗರ, ಗೌಡಹಳ್ಳಿ, ಯಳಂದೂರು ಕೆರೆಗಳಲ್ಲಿ ಈ ಬಾರಿ ಜಲ ಕೃಷಿಗೆ ಅವಕಾಶ ಕಲ್ಪಿಸಲಾಗಿದೆ.

‘ಈ ಬಾರಿ ಟೆಂಡರ್ ಮೂಲಕ ಇಲಾಖೆಗೆ ₹ 2.96 ಲಕ್ಷ ಹಣ ಸಂದಾಯವಾಗಿದೆ. ಇದರೊಂದಿಗೆ ₹ 6 ಸಾವಿರ ಠೇವಣಿ ಇರಿಸಿಕೊಳ್ಳಲಾಗಿದೆ. ಹುಲ್ಲು ಗೆಂಡೆ ಮೀನು 2.5 ಕೆಜಿ ತೂಗುತ್ತದೆ. ಆದರೆ, ಕಾಮನ್ ಕ್ಯಾಂಫರ್‌ ಮೀನು ಮರಿಗೆ ಹೆಚ್ಚು ಬೇಡಿಕೆ ಇರುವುದರಿಂದ ಈ ಮೀನು ಮರಿಗಳನ್ನೇ ಹೆಚ್ಚಾಗಿ ಸರಬರಾಜು ಮಾಡಲಾಗಿದೆ. ಜೂನ್ ತಿಂಗಳಲ್ಲಿ ಮರಿಗಳನ್ನು ಬಿಡಲಾಗಿದ್ದು, ಇನ್ನು ಮೂರು ತಿಂಗಳಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ’ ಎಂದು ಮೀನುಗಾರಿಕೆ ಇಲಾಖೆಯ ಕ್ಷೇತ್ರ ಪಾಲಕ ಡಿ.ಬಿ. ನಟರಾಜು ಅವರು ಹೇಳಿದರು.

‘ಇಲಾಖೆಯ ವತಿಯಿಂದ ಪ್ರತ್ಯೇಕವಾಗಿ ಮೀನು ಸಾಕಾಣಿಕೆ ಮಾಡಲು ಪರಿಶಿಷ್ಟ ಜಾತಿಯವರಿಗೆ ₹ 80 ಸಾವಿರ ಸಹಾಯಧನ ಸಿಗುತ್ತದೆ. ಬಲೆ, ಫೈಬರ್ ಬೋಟ್, ಸೇರಿದಂತೆ ಇತರೆ ಸಾಮಾಗ್ರಿಗಳು ಇಲಾಖೆಗೆ ಬಂದಿದ್ದು, ಆದಷ್ಟು ಬೇಗ ಫಲಾನುಭವಿಗಳಿಗೆ ವಿತರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಮೀನು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 5.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಕೃಷಿ ನಡೆಸಲಾಗುತ್ತದೆ. ತಾಲ್ಲೂಕಿನಲ್ಲಿ 14 ಲಕ್ಷ ಮೀನು ಮರಿಗಳಿಂದ 100 ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

‘ಯರಿಯೂರು ಕೆರೆ ಪ್ರತಿ ವರ್ಷ ಹೂಳು ಮತ್ತು ಕಳೆ ಸಸ್ಯಗಳಿಂದ ಆವೃತವಾಗುತ್ತದೆ. ಇದರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಮೀನು ಉತ್ಪಾದನೆ ಕುಂಠಿತವಾಗುತ್ತದೆ. ಹೀಗಾಗಿ ಮೀನು ಸಾಕಣೆ ವೆಚ್ಚದಲ್ಲಿ ಏರಿಕೆಯಾಗುತ್ತದೆ’ ಎಂದು ಕಂದಹಳ್ಳಿ ಮೀನು ಸಹಕಾರ ಸಂಘದ ಬಸವಣ್ಣ ಶೆಟ್ಟಿ ದೂರಿದರು.

ಆನೆಮೀನು ಸೇವಿಸದಿರಿ!

ಎಷ್ಟೆಲ್ಲ ಎಚ್ಚರಿಕೆ ತೆಗೆದುಕೊಂಡರು ಜಲಮೂಲಗಳಿಗೆ ಆನೆ ಮೀನು (ಕ್ಯಾಟ್‌ಫಿಶ್) ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಕಾಲುವೆ ಮತ್ತು ಕೆರೆಕಟ್ಟೆಗಳಲ್ಲಿ ಈಗಾಗಲೇ ಇವುಗಳ ಸಂತತಿ ಕಂಡುಬಂದಿವೆ. ಇವುಗಳ ಸೇವನೆಯಿಂದ ರೋಗ–ರುಜಿನಗಳು ಬರಬಹುದು. ಮೀನು, ಶವ, ಕೊಳೆತ ಪ್ರಾಣಿ ಪಕ್ಷಿಗಳನ್ನು ತಿಂದೇ ಬದುಕುವ ಇವುಗಳನ್ನು, ಮಾರಾಟಗಾರರು ಅರಿವಿಲ್ಲದೆ ಮಾರಾಟ ಮಾಡುತ್ತಾರೆ.

ಮತ್ಸ್ಯಪ್ರಿಯರು ದಪ್ಪ ಮೀಸೆಯ, ದಷ್ಟಪುಷ್ಟ ಆನೆ ಮೀನುಗಳನ್ನು ಕೊಳ್ಳಬಾರದು’ ಎಂದು ಮೀನುಗಾರಿಕಾ ಇಲಾಖೆಯ ವರದಿಯಲ್ಲಿ ಎಚ್ಚರಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !