ದೇಹದಾರ್ಢ್ಯ ತರಬೇತಿಯ ‘ದ್ರೋಣ’ ವೆಂಕಟೇಶ

7

ದೇಹದಾರ್ಢ್ಯ ತರಬೇತಿಯ ‘ದ್ರೋಣ’ ವೆಂಕಟೇಶ

Published:
Updated:
Prajavani

ಬಸವನಬಾಗೇವಾಡಿ: ಪದವಿ ಪಡೆದ ಬಳಿಕ ಖಾಸಗಿ ಕಂಪನಿಯಲ್ಲಿ ಹಾಗೂ ಐಟಿಐ ಕಾಲೇಜಿನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿರುವ ತಾಲ್ಲೂಕಿನ ಮಸಬಿನಾಳ ಗ್ರಾಮದ ವೆಂಕಟೇಶ ನಾಯ್ಕ್‌ ತಾವು ಕರಗತ ಮಾಡಿಕೊಂಡಿದ್ದ, ದೇಹದಾರ್ಢ್ಯವನ್ನು ಇತರರಿಗೆ ಕಲಿಸುವ ಕಾಯಕದಲ್ಲಿ ಇದೀಗ ತೊಡಗಿಕೊಂಡಿದ್ದಾರೆ.

ವ್ಯಾಯಾಮದಿಂದ ಶಾರೀರಿಕ ಆರೋಗ್ಯ ಹೆಚ್ಚುತ್ತದೆ. ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ತಿಳಿದಿದ್ದ ಇವರು, ಬಾಲ್ಯದಲ್ಲಿಯೇ ವ್ಯಾಯಾಮ ರೂಢಿಸಿಕೊಂಡಿದ್ದಾರೆ. ಮುಂದೆ ಅದನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಸ್ನೇಹಿತರ ಸಲಹೆಯಂತೆ 17ನೇ ವಯಸ್ಸಿನಲ್ಲೇ ದೇಹದಾರ್ಢ್ಯ ಸ್ಪರ್ಧೆಗೆ ಅಗತ್ಯ ತರಬೇತಿಯನ್ನು ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧೆಡೆ ಪಡೆದಿದ್ದಾರೆ. ವಿವಿಧೆಡೆ ನಡೆದ ತಾಲ್ಲೂಕು, ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ವೆಂಕಟೇಶ, ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಟಾಪ್ 10ರೊಳಗಿನ ಪಟ್ಟಕ್ಕೇರಿದ್ದಾರೆ.

ಕೆಲ ವರ್ಷ ಖಾಸಗಿ ಕಂಪನಿಯಲ್ಲಿ ಹಾಗೂ ಐಟಿಐ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ವೆಂಕಟೇಶ ಅವರಿಗೆ ಸರ್ಕಾರಿ ಉದ್ಯೋಗ ಸೇರಿದಂತೆ ಸೈನ್ಯದಲ್ಲಿ ಸೇರಿಕೊಳ್ಳುವ ಅವಕಾಶ ಬಂದಿದ್ದರೂ; ಉದ್ಯೋಗಕ್ಕೆ ಸೇರಿಕೊಳ್ಳದೆ, ತಾವು ಪರಿಣಿತ ಹೊಂದಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲೇ ಇತರರಿಗೆ ತರಬೇತಿ ನೀಡಬೇಕು. ಅದರ ಮಹತ್ವ ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಬಸವನಬಾಗೇವಾಡಿಯಲ್ಲಿ ಐದು ವರ್ಷದ ಹಿಂದೆ ಓಂ ಫಿಟ್‌ನೆಸ್‌ ವ್ಯಾಯಾಮ ಶಾಲೆ (ದೇಹದಾರ್ಢ್ಯ ತರಬೇತಿ ಕೇಂದ್ರ) ಆರಂಭಿಸಿದ್ದಾರೆ.

ಈ ವ್ಯಾಯಾಮ ಶಾಲೆಯಲ್ಲಿ ಈಗಾಗಲೇ 2500 ಯುವಕರು ತರಬೇತಿ ಪಡೆದುಕೊಂಡಿದ್ದಾರೆ. ನಿತ್ಯ 80ರಿಂದ 100 ವಿದ್ಯಾರ್ಥಿಗಳು ಸೇರಿದಂತೆ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ.

ವ್ಯಾಯಾಮ ಶಾಲೆಯಲ್ಲಿ ದೇಹದಾರ್ಢ್ಯ ಸ್ಪರ್ಧೆಗೆ ಅಗತ್ಯವಿರುವ ತರಬೇತಿ ನೀಡುವುದರೊಂದಿಗೆ ವಿವಿಧ ರೋಗಕ್ಕೆ ಸಂಬಂಧಿಸಿದ ಸರಳ ವ್ಯಾಯಾಮಗಳನ್ನು ತಿಳಿಸಿಕೊಡುವ ಕಾರ್ಯ ಮಾಡುತ್ತಿದ್ದಾರೆ. ಒಂದೊಂದು ರೋಗಕ್ಕೆ ಸಂಬಂಧಿಸಿದಂತೆ ನಿತ್ಯ ಒಂದೊಂದು ವ್ಯಾಯಾಮ ತಿಳಿಸಿಕೊಡುವುದು ಇವರ ವಿಶೇಷ.

ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದವರಿಗಾಗಿ ಪ್ರತಿ ವರ್ಷ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅಲ್ಲದೇ ಅನುಭವಿ ತರಬೇತುದಾರರನ್ನು ಕರೆಸಿ ವಿಶೇಷ ತರಬೇತಿ ಕೊಡಿಸುತ್ತಿದ್ದಾರೆ.

‘ಹಿಂದೆ ಗ್ರಾಮಗಳಲ್ಲಿ ಗರಡಿ ಮನೆಗಳಿರುತ್ತಿದ್ದವು. ಶಾರೀರಿಕ, ಮಾನಸಿಕ ಆರೋಗ್ಯಕ್ಕಾಗಿ ತರಬೇತಿ ನೀಡಲಾಗುತ್ತಿತ್ತು. ಇಂದು ಅವುಗಳು ಮರೆಯಾಗಿವೆ. ನಗರ ಪ್ರದೇಶಗಳ ವ್ಯಾಯಾಮ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ತರಬೇತಿ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಜನರು ಆಸಕ್ತಿ ತೋರುತ್ತಿಲ್ಲ. ಗ್ರಾಮೀಣ ಜನರಲ್ಲಿ ದೇಹದಾರ್ಢ್ಯ ಮಹತ್ವ ತಿಳಿಸಿಕೊಡುವುದಕ್ಕಾಗಿ ವ್ಯಾಯಾಮ ಶಾಲೆ ಆರಂಭಿಸಿದ್ದೇನೆ’ ಎನ್ನುತ್ತಾರೆ ವೆಂಕಟೇಶ ನಾಯ್ಕ್‌.

ವ್ಯಾಯಾಮ ಶಾಲೆಯ ಪರಿಕರಗಳಿಗಾಗಿ ಐದು ವರ್ಷದಲ್ಲಿ ಅಂದಾಜು ₹ 5 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡುತ್ತಿದ್ದಾರೆ. ಇವರ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದವರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಹಲವರು ವಿವಿಧೆಡೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

‘ದೇಹದಾರ್ಢ್ಯ ತರಬೇತಿ ಪಡೆಯುವುದರಿಂದ ಸೈನ್ಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ’ ಎಂದು ವೆಂಕಟೇಶ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !