ಬೇಸಿಗೆಯಲ್ಲಿ ವ್ಯಾಯಾಮ ಮಾಡಿ ಆದರೆ...

ಸೋಮವಾರ, ಮಾರ್ಚ್ 25, 2019
31 °C

ಬೇಸಿಗೆಯಲ್ಲಿ ವ್ಯಾಯಾಮ ಮಾಡಿ ಆದರೆ...

Published:
Updated:
Prajavani

ನಿತ್ಯ ಜಿಮ್‌ನಲ್ಲಿ ಬೆವರು ಹರಿಸಿ, ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕೆಂಬುದು ಯುವ ಸಮುದಾಯದ ಆಕಾಂಕ್ಷೆ. ಆದರೆ ಬದಲಾಗುವ ಋತುಗಳಿಗೆ ತಕ್ಕಂತೆ ಜೀವನ ಶೈಲಿಯನ್ನೂ ಬದಲಾಯಿಸಕೊಳ್ಳುವುದು ಅನಿವಾರ್ಯವಾಗುವುದರಿಂದ ಫಿಟ್‌ನೆಸ್‌ ಕಾಳಜಿ ಕ್ಷೀಣಿಸುವುದು ಸಾಮಾನ್ಯ.

ಬೇಸಿಗೆ ಬಂತೆಂದರೆ ಓಡುವುದಕ್ಕೆ, ಜಿಗಿಯುವುದಕ್ಕೆ, ಭಾರ ಎತ್ತುವುದಕ್ಕೆ ಅಷ್ಟೇಕೇ ನಡೆಯುವುದಕ್ಕೂ ಬೇಸರ ಎನಿಸುತ್ತದೆ. ಕಾರಣ ಹೆಚ್ಚಾಗಿ ಬೆವರುವುದು. ಇಷ್ಟಕ್ಕೇ ಸುಮ್ಮನಾದರೆ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಹೇಗೆ? ಆದ್ದರಿಂದ ಈ ಋತುವಿನಲ್ಲಿ ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ.

ನಿತ್ಯ ವಾಯಾಮ ಮಾಡುವುದು ಅಭ್ಯಾಸವಾಗಿದ್ದರೆ, ಆರೋಗ್ಯದ ದೃಷ್ಟಿಯಿಂದ ಅಭ್ಯಾಸದ ಅವಧಿಯನ್ನು ಆರೋಗ್ಯದ ಮೇಲೆ ಪ್ರಭಾವ ಬೀರದಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯ. ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವೆನಿಸಿದರೆ, ಬಿಡುವು ಸಿಕ್ಕಾಗಲೆಲ್ಲಾ ಕನಿಷ್ಠ 10 ನಿಮಿಷ ವ್ಯಾಯಾಮ ಮಾಡಬೇಕು. ಈ ರೀತಿ ಎರಡು ಬಾರಿ ದೇಹವನ್ನು ದಂಡಿಸಿದರೂ ಸಾಕು.

ಮುಖ್ಯವಾಗಿ ತಾಪಮಾನ ಕಡಿಮೆ ಇರುವಂತಹ ಸಮಯದಲ್ಲಿ ಬೆವರು ಹರಿಸುವುದು ಸೂಕ್ತ. ಇಲ್ಲದಿದ್ದರೆ ನಿರ್ಜಲೀಕರಣ ಸಮಸ್ಯೆ ಕಾಡಬಹುದು.

ವ್ಯಾಯಾಮ ಹೇಗಿರಬೇಕು?

* ಬೇಸಿಗೆಯಲ್ಲಿ ಹೆಚ್ಚಾಗಿ ಬೆವರುವುದರಿಂದ ಸಾಧ್ಯವಾದಷ್ಟು ಸೂರ್ಯೋದಕ್ಕೆ ಮುನ್ನ ಅಥವಾ ಸೂರ್ಯಾಸ್ತದ ನಂತರ ವ್ಯಾಯಾಮ ಮಾಡುವುದು ಒಳ್ಳೆಯದು.

* ಹೊರಾಂಗಣ ಪ್ರದೇಶದಲ್ಲಿ ಕಸರತ್ತು ನಡೆಸುವುದಕ್ಕಿಂತ ಜಿಮ್‌ ಕೇಂದ್ರಗಳು, ಏರೊಬಿಕ್ಸ್‌ ಕೇಂದ್ರಗಳಂತಹ ಒಳಾಂಗಣ ಪ್ರದೇಶಗಳಲ್ಲಿ ವರ್ಕ್‌ ಔಟ್ ಮಾಡಬೇಕು. ಹವಾನಿಯಂತ್ರಿತ ಕೇಂದ್ರಗಳಿದ್ದರೆ ಇನ್ನೂ ಚೆನ್ನ.

* ಈ ಋತುವಿನಲ್ಲಿ ಅತ್ಯಂತ ಉತ್ತಮ ವ್ಯಾಯಾಮ ಎಂದರೆ ಈಜು. ಈಜುವುದರಿಂದ ದೇಹದ ಎಲ್ಲ ಅಂಗಾಂಗಳಿಗೂ ಕಸರತ್ತು ನೀಡಿದಂತಾಗುತ್ತದೆ. ಮುಖ್ಯವಾಗಿ ಉಸಿರಾಟದ ಸಮಸ್ಯೆಗಳೂ ಸುಧಾರಿಸುತ್ತವೆ.

* ಬೆವರು ಹರಿಸುವುದು ಕಷ್ಟವೆನಿಸಿದರೆ ಅಥವಾ ಕಿರಿಕಿರಿ ಎನಿಸಿದರೆ ಯೋಗ ಮಾಡುವುದು ಒಳ್ಳೆಯದು. ಸುಲಭ ಆಸನಗಳನ್ನು ಅಭ್ಯಸಿದರೂ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು.

* ಸಾಮಾನ್ಯವಾಗಿ ವ್ಯಾಯಾಮ ಮಾಡಿದ ನಂತರ ಸ್ನಾನ ಮಾಡುವುದು ಎಲ್ಲರಿಗೂ ಅಭ್ಯಾಸ. ಆದರೆ ಬೇಸಿಗೆಯಲ್ಲಿ ವ್ಯಾಯಾಮ ಮಾಡುವುದಕ್ಕೂ ಮುನ್ನ ತಂಪಾದ ನೀರನ್ನು ಮೈ ಮೇಲೆ ಸುರಿದುಕೊಳ್ಳುವುದು ಅಥವಾ ಶವರ್‌ ಬಾತ್ ಮಾಡುವುದು ಒಳ್ಳೆಯದು. ಇದು ಸಾಧ್ಯವಾಗದಿದ್ದರೆ, ಬಾಟಲಿಯಲ್ಲಿ ತಂಪಾದ ನೀರನ್ನು ತುಂಬಿಸಿ ಬಳಿ ಇಟ್ಟುಕೊಳ್ಳಬೇಕು. ವ್ಯಾಯಾಮ ಮಾಡುವಾಗ ಹೆಚ್ಚಾಗಿ ಬೆವರುತ್ತಿದ್ದರೆ, ತಲೆಯ ಮೇಲೆ ಆಗಾಗ್ಗೆ ನೀರು ಸುರಿದುಕೊಳ್ಳಬೇಕು, ಈ ರೀತಿ ಮಾಡುವುದರಿಂದ ದೇಹ ಉಲ್ಲಾಸವಾಗಿರುತ್ತದೆ.

* ನಡೆಯುವ ಅಭ್ಯಾಸವಿದ್ದರೆ ಮರಗಳ ನೆರಳು ಹೆಚ್ಚಾಗಿ ಬೀಳುವ ಉದ್ಯಾನಗಳಲ್ಲಿ ವಾಯು ವಿಹಾರ ಮಾಡುವುದು ಒಳ್ಳೆಯದು.

ಉಡುಪಿನ ಬಗ್ಗೆಯೂ ಇರಲಿ ಕಾಳಜಿ

ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಸಾಧ್ಯವಾದಷ್ಟು ಹಗುರವಾದ ಬಟ್ಟೆಗಳನ್ನು ತೊಡಬೇಕು. ದೇಹಕ್ಕೆ ಅಂಟಿಕೊಳ್ಳುವಂತಹ ಸ್ಕಿನ್‌ ಟೈಟ್ ಬಟ್ಟೆಗಳ ಬದಲಿಗೆ ಆರಾಮ ಎನಿಸುವಂತಹ ಬಟ್ಟೆಗಳು ಸೂಕ್ತ. ಸಾಧ್ಯವಾದಷ್ಟು ದೇಹವನ್ನು ತಂಪಾಗಿಡುವ ಬಟ್ಟೆಗಳನ್ನು ಧರಿಸಬೇಕು. ಹೊರಾಂಗಣ ಪ್ರದೇಶಗಳಲ್ಲಿ ಕಸರತ್ತು ನಡೆಸುತ್ತಿದ್ದರೆ ತಲೆಗೆ ತಪ್ಪದೇ ಹ್ಯಾಟ್ ಧರಿಸುವುದು ಒಳ್ಳೆಯದು. 

ಆಹಾರ

ಸಾಧ್ಯವಾದಷ್ಟು ಎಣ್ಣೆ ಮತ್ತು ಮಸಾಲೆ ತುಂಬಿದ ಪದಾರ್ಥಗಳಿಂದ ದೂರವಿರಬೇಕು. ಕರಿದ ತಿಂಡಿಗಳನ್ನು ಮುಟ್ಟದಿರುವುದೇ ಒಳ್ಳೆಯದು. ನಿಮ್ಮ ದೇಹಕ್ಕೆ ಹಿಡಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ. ಒಮ್ಮೆಗೆ ಹೆಚ್ಚಾಗಿ ಸೇವಿಸುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ಆಹಾರ ವಿಷಯದಲ್ಲಿ ತಜ್ಞರ ನೆರವು ಪಡೆಯುವುದು ಒಳ್ಳೆಯದು.

ನಿತ್ಯ ಐದರಿಂದ ಆರು ಲೀಟರ್ ನೀರು ಕುಡಿಯುವುದು ಉತ್ತಮ. ವ್ಯಾಯಾಮ ಮಾಡುವಾಗ ದಾಹ ಎನಿಸಿದರೆ ಒಂದೇ ಸಮನೆ ನೀರು ಕುಡಿಯುವ ಬದಲು, ಎರಡು ಮೂರು ತೊಟ್ಟಂತೆ ಕುಡಿಯುವುದು ಒಳ್ಳೆಯದು. 

**

ಉತ್ತರ ಭಾರತದಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿರುತ್ತದೆ. ಹೀಗಾಗಿ ಅಲ್ಲಿಯ ಬಹುತೇಕರು ಮುಂಜಾನೆ 7ಕ್ಕೇ ಕೆಲಸ ಆರಂಭಿಸಿ 2ಗಂಟೆಗೆಲ್ಲಾ ಮುಗಿಸುತ್ತಾರೆ. ಮುಖ್ಯವಾಗಿ ಫೀಲ್ಡ್‌ವರ್ಕ್‌ ಮಾಡುವವರು ಈ ರೀತಿ ಬೇಗ ಕೆಲಸ ಆರಂಭಿಸುವುದು ಒಳ್ಳೆಯದು. ಹೊರಗಡೆ ಸುತ್ತುವಾಗ ದೇಹವನ್ನು ಬಿಸಿಲಿಗೆ ಒಡ್ಡದಂತೆ ಎಚ್ಚರ ವಹಿಸಬೇಕು. 

ಬೇಸಿಗೆಯಲ್ಲಿ ಕಾಡುವ ಮುಖ್ಯ ಸಮಸ್ಯೆ ಎಂದರೆ ನಿರ್ಜಲೀಕರಣ. ಹೀಗಾಗಿ ಹೆಚ್ಚು ಹೆಚ್ಚು ನೀರು ಕುಡಿಯತ್ತಿರಬೇಕು. ಸಾಧ್ಯವಾದಷ್ಟು ಸಿಟ್ರಸ್‌ ಅಂಶ ಹೊಂದಿರುವಂತಹ ನಿಂಬೆಹಣ್ಣು, ಮೂಸಂಬಿ, ಕಿತ್ತಳೆ ಹಣ್ಣುಗಳನ್ನು ರಸ ಸೇವಿಸಬೇಕು. ಮಸಾಲೆ ಪದಾರ್ಥಗಳು ಮತ್ತು ಟೀ, ಕಾಫಿಯಿಂದ ದೂರವಿದ್ದಷ್ಟೂ ಒಳ್ಳೆಯದು.

ಡಾ. ಶಿವಾನಂದ ಬಿ ಹಿರೇಮಠ ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !