ಫ್ಲೆಕ್ಸ್ ತೆರವು: ಹೈಕೋರ್ಟ್‌ ತೃಪ್ತಿ

7

ಫ್ಲೆಕ್ಸ್ ತೆರವು: ಹೈಕೋರ್ಟ್‌ ತೃಪ್ತಿ

Published:
Updated:

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬಾಕಿ ಇರುವ ಫ್ಲೆಕ್ಸ್‌, ಬ್ಯಾನರ್ ಹಾಗೂ ಹೋರ್ಡಿಂಗ್ಸ್‌ಗಳನ್ನು ಇದೇ 26ರ ಒಳಗೆ ಪೂರ್ಣ ತೆರವುಗೊಳಿಸಿ’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ನಿರ್ದೇಶಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಿ ಮಾಯಿಗೆ ಗೌಡ ಮತ್ತು ಸಾಯಿದತ್ತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಎಸ್‌ಐ) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘1,846 ಜಾಹೀರಾತುದಾರರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಇವುಗಳಲ್ಲಿ 767 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಾರ್ವಜನಿಕ ಶೌಚಾಲಯ, ಸ್ಕೈವಾಕ್‌ ಮತ್ತು ಬಸ್‌ ತಂಗುದಾಣಗಳಲ್ಲಿನ ಜಾಹೀರಾತುಗಳಿಗೆ ದೀರ್ಘಾವಧಿಯ ಖಾಸಗಿ, ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿವಿಧೆಡೆಯಲ್ಲಿ ಒಟ್ಟು 634 ಜಾಹೀರಾತು ಸ್ಟ್ರಕ್ಚರ್ಸ್‌ಗಳನ್ನು ತೆರವುಗೊಳಿಸಬೇಕಿದೆ’ ಎಂದರು.

ಇದೇ ವೇಳೆ ಅಡ್ವೊಕೇಟ್‌ ಜನರಲ್ ಉದಯ ಹೊಳ್ಳ ಅವರು, ‘ಜಾಹೀರಾತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸಿದ್ಧಪಡಿಸಿರುವ ಬೈ–ಲಾಗೆ ಈ ತಿಂಗಳ 24ರೊಳಗೆ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಪ್ರಕಟಣೆ ನೀಡಲಾಗಿದೆ’ ಎಂದು ತಿಳಿಸಿದರು.

ಇದಕ್ಕೆ ತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಬಿಎಂಆರ್‌ಡಿ ವ್ಯಾಪ್ತಿಗೆ ಒಳಪಡುವ ಪಂಚಾಯ್ತಿಗಳಿಗೂ ನಿರ್ದಿಷ್ಟ ಬೈ–ಲಾ ರೂಪಿಸಿ’ ಎಂದು ಸೂಚಿಸಿದರು.

ಆಕ್ಷೇಪಣೆ: ‘ಫಲಕಗಳ ತೆರವು ಕಾರ್ಯಾಚರಣೆ ಆರಂಭವಾದ ಮೇಲೆ ಈಗ ನಗರದಲ್ಲಿ ಆಟೊ ರಿಕ್ಷಾ ಮತ್ತು ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಫಲಕಗಳನ್ನು ಹಾಕಲಾಗುತ್ತಿದೆ’ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಮಾಹೇಶ್ವರಿ, ‘ಈ ಕುರಿತಂತೆ ಸಾರಿಗೆ ಸಚಿವರು ಗಮನ ಹರಿಸಲು ತಿಳಿಸಿ’ ಎಂದು ಹೊಳ್ಳ ಅವರಿಗೆ ಸೂಚಿಸಿದರು.

ತೃಪ್ತಿ ವ್ಯಕ್ತ: ಅರ್ಜಿದಾರರ ಪರ ವಕೀಲರನ್ನು, ‘ಬೆಂಗಳೂರು ಈಗ ಹೇಗೆ ಕಾಣುತ್ತಿದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಜಿ.ಆರ್.ಮೋಹನ್ ಮತ್ತು ರಮೇಶ್ಚಂದ್ರ, ‘ತೆರವು ಕಾರ್ಯಾಚರಣೆ ಶೇ 90ರಷ್ಟು ಯಶಸ್ಸು ಸಾಧಿಸಿದೆ’ ಎಂದರು.

ಈ ಉತ್ತರಕ್ಕೆ, ‘ಇದರ ಪ್ರತಿಫಲ ಉದಯ ಹೊಳ್ಳ, ಶ್ರೀನಿಧಿ ಹಾಗೂ ಅಧಿಕಾರಿಗಳಿಗೆ ಸಲ್ಲಬೇಕು’ ಎಂದು ಮಾಹೇಶ್ವರಿ ಶ್ಲಾಘಿಸಿದರು.

ಮಧ್ಯಂತರ ಅರ್ಜಿ ಸಲ್ಲಿಕೆ: ಜಾಹೀರಾತು ಫಲಕಗಳಲ್ಲಿ ಪ್ಲಾಸ್ಟಿಕ್‌ ಉಪಯೋಗ ನಿಷೇಧ ಅಂಶಕ್ಕೆ ಸಂಬಂಧಿಸಿದಂತೆ, ಮುಂಬೈನ ‘ಟೈಮ್ಸ್‌ ಇನ್ನೋವೇಟಿವ್‌ ಮೀಡಿಯಾ’ ಹಾಗೂ ‘ಸೈನ್‌ ಪೋಸ್ಟ್‌’ ಕಂಪನಿ ಮಧ್ಯಂತರ ಸೇರ್ಪಡೆ ಅರ್ಜಿಗಳನ್ನು ಸಲ್ಲಿಸಿವೆ.

ಮುಂದಿನ ವಿಚಾರಣೆ ವೇಳೆಗೆ ಪ್ರಮಾಣ ಪತ್ರ ಸಲ್ಲಿಸಲು ಮಧ್ಯಂತರ ಅರ್ಜಿದಾರರಿಗೆ ನ್ಯಾಯಪೀಠ ಸೂಚಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !