ಫ್ಲೋಟ್‌ಫಿಟ್‌: ದೇಹ ಸೂಪರ್ ಹಿಟ್

7

ಫ್ಲೋಟ್‌ಫಿಟ್‌: ದೇಹ ಸೂಪರ್ ಹಿಟ್

Published:
Updated:
Prajavani

ಫಿಟ್ ಆಗಿರುವ ದೇಹ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೇಳಿ ಮಾಡಿಸಿದಂತಹ ಅಂಗ ಸೌಷ್ಟವ, ಏರುಪೇರಾಗದ ಆರೋಗ್ಯ ಇವೆರಡಿದ್ದರೆ ಆತ್ಮವಿಶ್ವಾಸಕ್ಕೂ ಕೊರತೆಯಿಲ್ಲ. ವೃತ್ತಿಯಲ್ಲಿ, ಉದ್ಯಮದಲ್ಲಿ ಕೂಡ ಮುಂದುವರಿಯಲು ಈ ಫಿಟ್‌ನೆಸ್‌ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಮತೋಲಿತ ಆಹಾರದ ಜೊತೆಗೆ ನಿತ್ಯ ವ್ಯಾಯಾಮವೂ ಅಷ್ಟೇ ಮುಖ್ಯ. ಈಗಂತೂ ಸಾಂಪ್ರದಾಯಕ ವ್ಯಾಯಾಮಗಳ ಜೊತೆಗೆ ಹೊಸ ರೀತಿಯವು ಅಖಾಡಕ್ಕಿಳಿದಿವೆ. ಕೊಬ್ಬು ಕರಗಿಸಿ ಹೃದಯದ ಆರೋಗ್ಯ ಕಾಪಾಡುವ ಕಾರ‍್ಡಿಯೋ ವ್ಯಾಯಾಮಗಳು, ವೇಟ್‌ ಬೇರಿಂಗ್‌ ವ್ಯಾಯಾಮಗಳು ಸದ್ಯ ಮುಂಚೂಣಿಯಲ್ಲಿವೆ.

ವೇಗದ ನಡಿಗೆ, ನಿಧಾನ ಓಟದ ಜಾಗಿಂಗ್‌, ಬೆಟ್ಟ-ಗುಡ್ಡಗಳಲ್ಲಿ ಟ್ರೆಕಿಂಗ್‌, ಸೈಕಲ್‌ ಸವಾರಿ, ಈಜು.. ತರಹೇವಾರಿ ಹೊರಾಂಗಣ ವ್ಯಾಯಾಮಗಳ ಜೊತೆ ಜಿಮ್‌ನಲ್ಲಿ ಮಾಡುವ ಒಳಾಂಗಣ ವ್ಯಾಯಾಮಗಳಂತೂ ಇದ್ದೇ ಇವೆ. ಸದ್ಯದ ಯುವಜನರ ಕ್ರೆಜ್‌ ಫ್ಲೋಟ್‌ ಫಿಟ್‌. ಈಜುಗೊಳದಲ್ಲಿ ತೇಲುವ ಬೋರ್ಡ್‌ ಮೇಲೆ ನಡೆಸುವ ವಿವಿಧ ಕಸರತ್ತುಗಳು ಸರ್ವಾಂಗ ವ್ಯಾಯಾಮ ಒದಗಿಸುತ್ತವೆ.
ನೀವು ಯೋಗಾಸನದಲ್ಲಿ ಪರಿಣತಿ ಸಾಧಿಸಿದ್ದೀರಿ ಎಂದು ಇಟ್ಟುಕೊಳ್ಳೋಣ. ಆ ಆಸನಗಳನ್ನು ನೀರಿನ ಮೇಲೆ ತೇಲಾಡುವ ಬೋರ್ಡ್‌ ಮೇಲೆ ಸಮತೋಲನ ಸಾಧಿಸುತ್ತ ಮಾಡಬಹುದು. ಏರೋಬಿಕ್ಸ್‌ ಅನ್ನೂ ಇದೇ ರೀತಿ ಮಾಡಬಹುದು. ಜಿಗಿಯಬಹುದು, ಬಸ್ಕಿ ಹೊಡೆಯಬಹುದು, ಸಮತೋಲನ ಸಾಧಿಸುತ್ತಲೇ ಇಂತಹ ವ್ಯಾಯಾಮ ಮಾಡುವುದರಿಂದ ನಿಮಗೆ ಡಬಲ್‌ ಲಾಭ ಸಿಗುತ್ತದೆ.

‘ಇದೇ ವ್ಯಾಯಾಮಗಳನ್ನು ನೆಲದ ಮೇಲೆ ಮಾಡಿದರೆ ಮಂಡಿ, ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಆದರೆ ನೀರಿನ ಮೇಲೆ ತೇಲಾಡುತ್ತ ಮಾಡಿದರೆ ಈ ಒತ್ತಡ ಕಡಿಮೆಯಾಗುವುದಲ್ಲದೇ ಧಾರಣಾ ಶಕ್ತಿ ಹೆಚ್ಚುತ್ತದೆ. ನಡೆಯುವ, ಕುಳಿತುಕೊಳ್ಳುವ, ನಿಂತುಕೊಳ್ಳುವ ಶೈಲಿ ಗಮನಾರ್ಹವಾಗಿ ಸುಧಾರಿಸುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ. ದೇಹದ ಒಟ್ಟಾರೆ ಸಮತೋಲನ ಸುಧಾರಿಸುವುದಲ್ಲದೇ, ಅಂಗಾಂಗಗಳ ಮಧ್ಯೆ ಪರಸ್ಪರ ಹೊಂದಾಣಿಕೆ ಇರುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಸ್ಪೀಡೋ ಫಿಟ್‌ನೆಸ್‌ನ ಪೂಜಾ ಅರೋರ. 30 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿದರೆ ಅಂದಾಜು 400 ಕ್ಯಾಲರಿ ಕರಗಿಸಬಹುದು ಎನ್ನುತ್ತಾರೆ ತಜ್ಞರು.

ಮಾಡುವುದು ಹೇಗೆ?

ಚಪ್ಪಟೆ ಬೋರ್ಡ್‌ ಅನ್ನು ಹಗ್ಗದಿಂದ ಕಟ್ಟಿ ನೀರಿನಲ್ಲಿ ತೇಲಿ ಬಿಡಲಾಗುತ್ತದೆ. ಈಜುಡುಗೆ ಅಥವಾ ಜಿಮ್‌ನಲ್ಲಿ ಹಾಕುವಂತಹ ಉಡುಪು ಧರಿಸಿ ಅದರ ಮೇಲೆ ವ್ಯಾಯಾಮ ಮಾಡಬಹುದು. ಇದಕ್ಕೆ ತಜ್ಞರ ಸಲಹೆ ಬೇಕಾಗುತ್ತದೆ. ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಈಜಿ ದಡ ಸೇರುವ ಸಾಮರ್ಥ್ಯವಿರಬೇಕು. ಮೊದಲು ಸರಳ ವ್ಯಾಯಾಮ ಮಾಡಿ ನಂತರ ಕಠಿಣವಾದ ವ್ಯಾಯಾಮಗಳತ್ತ ಗಮನ ಕೊಡಿ.
ನೀರಿಗಿಳಿಯುವ 2 ಗಂಟೆ ಮೊದಲು ಆಹಾರ ಸೇವಿಸಿ ಸಾಕಷ್ಟು ನೀರು ಕುಡಿಯಿರಿ. ಗಂಭೀರ ಗಾಯಗಳಾಗಿದ್ದರೆ ಗುಣ ಆಗುವವರೆಗೆ ಕಾಯುವುದು ಒಳಿತು.

15–16 ವರ್ವಷಯಸ್ಸಿನವರಿಂದ ಹಿಡಿದು, ಯಾವುದೆ ಗಂಭೀರ ಕಾಯಿಲೆ ಇರದ 70 ವರ್ಷಗಳ ವೃದ್ಧರವರೆಗೂ ಈ ವ್ಯಾಯಾಮ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !