ನೀಲಿ ಸರೋವರದ ಮೇಲೆ ತೇಲುತ್ತಾ...

7

ನೀಲಿ ಸರೋವರದ ಮೇಲೆ ತೇಲುತ್ತಾ...

Published:
Updated:

ನೀಲ ನೀರ ತುಣುಕಿನ ಮೇಲೆಯೇ ತೇಲುವ ಒಂದು ಅಪರೂಪದ ಪಯಣದ ಅನುಭವ. ಅಮ್ಮ ಹಾಕಿದ ಉಜಾಲದಂತೆ ಕೊಳವೆಲ್ಲಾ ನೀಲಿ ನೀಲಿ. ನೀರ ಮೇಲೆ ತೇಲುತ್ತಾ ಬೆಳೆವ ಹುಲ್ಲು ಪುಮ್‍ಡಿನ್. ಪನ್ನೀರಷ್ಟು ಶುಭ್ರ ನೀರ ಸರೋವರ. ಅಲ್ಲಲ್ಲಿ ಹುಲ್ಲ ಮೇಲೆಯೇ ತೇಲುವ ಮನೆಗಳು.ಅವುಗಳು ಮುಂದೆ ಹೋಗದಂತೆ ನಿಲ್ಲಿಸಲು ಹುಗಿದ ಬಿದಿರ ಕೋಲುಗಳು. ಕೊಳದ ನಡುವೆಯೊಂದು ಸಣ್ಣ ದ್ವೀಪ ಸೆಂಡ್ರಾ. ಕೊಳದ ಇಕ್ಕಲೆಗಳಲ್ಲಿ ಮೀನುಗಾರರ ಬಡಾವಣೆ. ಕಣ್ಣ ತುದಿಯವರೆಗೂ ನೀಲಿಯ ನೀರೇ ನೀರು. ಸ್ವರ್ಗ ಸದೃಶ ನೋಟ. 287 ಚ.ಕಿಮೀ ವಿಸ್ತೀರ್ಣದ ಸರೋವರ ಇದು.

ಮಣಿಪುರದ ರಾಜದಾನಿ ಇಂಫಾಲದಿಂದ ಎರಡು ಗಂಟೆಯ ಪ್ರಯಾಣದ ದೂರದಲ್ಲಿರುವ ಈ ಸರೋವರವೇ ಲೊಕ್ತಾಕ್. ಇದನ್ನು ತೇಲುವ ದ್ವೀಪಗಳೂ (Floating Island) ಇವೆ. ಇಲ್ಲಿ ಜಿಲೇಬಿ ಹೊಯ್ದಂತೆ ವೃತ್ತಾಕಾರದಲ್ಲೇ ಬೆಳೆವ ಹುಲ್ಲು. ಅದರ ಮೇಲೆ ನಿಂತು ನಿರಾತಂಕವಾಗಿ ನಡೆಯಲೂಬಹುದು. ನೀರ ಮೇಲೆ ಹುಲ್ಲು, ಹುಲ್ಲ ಮೇಲೆ ನಾವು. ಈ ದ್ವೀಪದಲ್ಲಿ ಜನಸಂಖ್ಯೆಗೇನೂ ಕಡಿಮೆ ಇಲ್ಲ.

ಜಿಲೇಬಿಯಾಕಾರದ ಹುಲ್ಲು
ಲೋಕ್ತಾಕ್‌ಗೆ ಭೇಟಿ ನೀಡಿದ ನಾವು, ಗೋಲಾಕಾರದ ಹುಲಿನ ನಡುವೆ ದೋಣಿಯಲ್ಲಿ ಕುಳಿತು ತೇಲುತ್ತಾ ಹೊರಟೆವು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಸರೋವರದ ನಡುವೆ ಒಂದು ರೆಸ್ಟೋರೆಂಟ್ ತೇಲುತ್ತಿತ್ತು. ನಮಗೆ ಅಚ್ಚರಿಯೋ ಅಚ್ಚರಿ. ಹೀಗೆ ಅಚ್ಚರಿಪಟ್ಟುಕೊಳ್ಳುತ್ತಿದ್ದಾಗ, ನಮ್ಮ ದೋಣಿಯ ಅಂಬಿಗ ‘ಬನ್ನಿ, ರೆಸ್ಟೋರೆಂಟ್‌ನಲ್ಲಿ ಕಾಫಿ ಹೀರೋಣ’ ಎಂದ. ನಮಗೆ ಧೈರ್ಯ ಸಾಲದೇ ಬೇಡ ಎಂದು ಹೇಳಿ ನುಣುಚಿಕೊಂಡೆವು. ನಂತರ ಸರೋವರವನ್ನು ಒಂದು ಸುತ್ತು ಹಾಕಲು ಸಾಕಷ್ಟು ಸಮಯ ಹಿಡಿಯಿತು.

ಲೋಕ್ತಾಕ್ ಸರೋವರವಷ್ಟೇ ಅಲ್ಲ, ಅದು ನೂರಾರು ಜೀವಸಂಕುಲದ ಆಶ್ರಯತಾಣ. ಅಧ್ಯಯನದ ಪ್ರಕಾರ ಇಲ್ಲಿ 233 ರೀತಿಯ ಜಲಚರ ಸಸ್ಯಗಳಿವೆ. 100ಕ್ಕೂ ಹೆಚ್ಚು ಪ್ರಜಾತಿಯ ಪಕ್ಷಿಗಳು ವಾಸವಾಗಿವೆ. ಬಹಳ ವಿರಳವಾದ ಭಾರತೀಯ ಹೆಬ್ಬಾವು, ಜಿಂಕೆಯಂತಹ 475 ಪ್ರಜಾತಿಯ ಪ್ರಾಣಿಗಳು ಇಲ್ಲಿನ ಪುಂಡಿಯ ಹುಲ್ಲನ್ನು ತಮ್ಮ ಆವಾಸಸ್ಥಾನವಾಗಿಸಿಕೊಂಡಿವೆ. ‘ಇಲ್ಲಿ 13 ಜಾತಿಯ ಹುಲ್ಲುಗಳಿವೆ‘ ಎಂದು ನಮ್ಮ ಅಂಬಿಗ ಹೇಳಿದ. ವೃತ್ತಾಕಾರವಾಗಿ ಬೆಳೆಯುವ ಇದು ಮೇಲ್ನೋಟಕ್ಕೆ ಹಸಿರು ಜಿಲೇಬಿ ತೇಲಿಬಿಟ್ಟಂತೆ ತೋರುತ್ತದೆ.

ಚಂದ್ರನ ತುಣುಕಿನಂತಿರುವ ಈ ತಣ್ಣನೆಯ ಸರೋವದ ದಂಡೆಯಲ್ಲಿ ಸೈನಿಕರ ದಂಡು ಕವಾಯತು ನಡೆಸುತ್ತಿದ್ದದು ಕಂಡಿತು. ಅದು ಸರೋವರಕ್ಕೆ ರಕ್ಷಣೆ ನೀಡಿದಂತೆ ಭಾಸವಾಗು ತ್ತಿತ್ತು. ದಂಡೆ ಬದಿಯಲ್ಲಿ ಬಗೆ ಬಗೆ ಅಂಗಡಿಗಳ ಹಿಂಡೇ ಇತ್ತು. ಮಹಿಳೆಯೊಬ್ಬರು ಕರಿ ಮಸಿಯುಂಡೆಯಂತಿದ್ದ ವಿಚಿತ್ರ ವಸ್ತುವೊಂದನ್ನು ರಾಶಿ ಹಾಕಿಕೊಂಡು ಮಾರಾಟಕ್ಕೆ ಕುಳಿತಿದ್ದರು. ‘ಅದು ಏನೆಂದು’ ಕೇಳಿದೆ. ಆಕೆ ತಿನ್ನುವ ವಸ್ತು‌ ಎಂದು ಸುಮ್ಮನಾದರು. ಅದು ಬೇಯಿಸಿದ ಕಮಲದಗೆಡ್ಡೆ.‌ ಆ ಗೆಡ್ಡೆಯನ್ನು ಹಾಗೇ ಬಾಯಿಗೆ ಹಾಕಿಕೊಂಡೆವು. ಸಪ್ಪೆ ಸಪ್ಪೆ ಗೆಣಸಿನಂತಹ ರುಚಿ.

ತೇಲುವ ಉದ್ಯಾನವನ!
ದೋಣಿಯಲ್ಲಿ ಸರೋವರದದ ಮೇಲೆ ತೇಲುತ್ತಾ, ಉತ್ತರ ದಿಕ್ಕಿನತ್ತ ಹೊರಟೆವು. ನಾವು ತಲುಪಿದ್ದು, ಅಗಾಧವಾಗಿ ಆಳೆತ್ತರ ಬೆಳೆದ ಆನೆ ಹುಲ್ಲಿನಿಂದ ತುಂಬಿದ ತೇಲುವ ‘ಕೈಬುಲ್ ಲೆಮ್‍ಜಾವೊ’ ಎಂಬ ರಾಷ್ಟ್ರೀಯ ಉದ್ಯಾನಕ್ಕೆ. ಉದ್ಯಾನವನದ ನಡುಗುಡ್ಡೆಯನ್ನೇರಿ ಹುಲ್ಲರಾಶಿಗಳ ನಡುವೆ ಮೇಯುವ ಜಿಂಕೆಯನ್ನು ಕಂಡೆವು. ಇಲ್ಲಿನವರು ಪ್ರೀತಿಯಿಂದ ಅದನ್ನು ‘ಶಂಘೈ’ ಎನ್ನುತ್ತಾರೆ. ಇದು ಅಳವಿನಂಚಿನಲ್ಲಿರುವ ಜಿಂಕೆ ತಳಿ. ಸರ್ಕಾರ ಕೈಗೊಂಡ ಕ್ರಮದಿಂದಾಗಿ ಅವುಗಳು ರಕ್ಷಣೆಯಾಗಿವೆ. ಹುಲ್ಲಿನ ಜೊಂಡಿನ ಮೇಲೆ ಜಿಗಿಯುತ್ತಿದ್ದ ಅಪರೂಪದ ಶಂಘೈ ನೋಡಿ ಕಣ್ತುಂಬಿಕೊಂಡೆವು.

ತೇಲುವ ಉದ್ಯಾನದಲ್ಲಿ ಮೈಸೂರ್ ಪಾಕ್‌ನಂತೆ ಕತ್ತರಿಸಿದ ಹುಲ್ಲಿನ ನಡುವಿರುವ ದಾರಿಯಲ್ಲಿ ದೋಣಿಗಳ ಮೇಲೆ ಸಾಗಿದೆವು. ನಮ್ಮ ಗಲಾಟೆಗೆ ಜಿಂಕೆಗಳು ಅಡಗಿಕೊಂಡವು ಎನ್ನಿಸಿತು. ದೋಣಿ ಬಿಟ್ಟು, ತೇಲುವ ಹುಲ್ಲಿನ ಮೇಲೆ ಅಂಬಿಗನ ನೆರವಿನಿಂದ ಹೆಜ್ಜೆ ಹಾಕಿ ಪುಳಕಗೊಂಡೆವು.

‌ಪರಿಸರ ಮಾಲಿನ್ಯದಿಂದ ಮೊದಲಿನ ಶುದ್ಧತೆ, ಸ್ಪಟಿಕ ಶುಭ್ರತೆ ಈಗಿಲ್ಲ ಎನ್ನುತ್ತಾರೆ ಸ್ಥಳೀಯರು. ಲೋಕ್ತಾಕ್ ಹೈಡ್ರೋ ಪವರ್ ಪ್ರಾಜೆಕ್ಟ್ ಕೂಡ ಸರೋವರಕ್ಕೆ ಸಾಕಷ್ಟು ದಕ್ಕೆ ಉಂಟು ಮಾಡಿದೆ. ಇಂಥ ಅಪರೂಪದ ಸರೋವರ ಉಳಿಸುವುದು ಅಲ್ಲಿಗೆ ಹೋಗುವ ಪ್ರವಾಸಿಗರ ಕರ್ತವ್ಯೂ ಆಗಬೇಕು ಎನ್ನಿಸಿತು.

ತಲುಪುವುದು ಹೇಗೆ?
ದೇಶದ ಎಲ್ಲ ಪ್ರಮುಖ ನಗರಗಳಿಂದ ಮಣಿಪುರಕ್ಕೆ ವಿಮಾನ ಯಾನದ ಸೌಲಭ್ಯವಿದೆ. ಮಣಿಪುರದಿಂದ 48 ಕಿ.ಮೀ ದೂರದಲ್ಲಿ ಲೋಕ್ತಾಕ್‌ ಸರೋವರವಿದೆ. ಮಣಿಪುರ – ಲೋಕ್ತಾಕ್ ಸರೋವರದ ನಡುವೆ ಬಸ್‌ಗಳಿವೆ. ಟೂರಿಸ್ಟ್‌ ಕಾರುಗಳು ಲಭ್ಯವಿವೆ.

ವಿಶೇಷಗಳು
ಸರೋವರದ ದಂಡೆಯಲ್ಲಿ ಸಾಕಷ್ಟು ಹೋಟೆಲ್‌ಗಳಿವೆ. ಊಟ–ವಸತಿ ವ್ಯವಸ್ಥೆಯೂ ಇದೆ.

ಬೆಳಿಗ್ಗೆ 6 ರಿಂದ 10ರವರೆಗೆ ಜಿಂಕೆಗಳು ಹಿಂಡಾಗಿ ಮೇಯಲು ಉದ್ಯಾನಕ್ಕೆ ಬರುತ್ತವೆ. ಅದು ಜಿಂಕೆಗಳನ್ನು ನೋಡಲು ಸೂಕ್ತ ಸಮಯ.

ಏನೇನು ನೋಡಬಹುದು
ತೇಲುವ ಸರೋವರದಲ್ಲಿ ಹಲವು ದ್ವೀಪಗಳಿವೆ. ಹೆಚ್ಚು ಆಕರ್ಷಕವಾಗಿರುವುದು ಸೆಂಡ್ರಾ ದ್ವೀಪ. ಇದೊಂದು ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ಬೋಟಿಂಗ್ ಸೇರಿದಂತೆ ಹಲವಾರು ಜಲಕ್ರೀಡೆಗಳು ಇಲ್ಲಿ ಪ್ರವಾಸಿಗರಿಗೆ ಉತ್ತಮ ಮನರಂಜನೆ ಒದಗಿಸುತ್ತವೆ. ಸೆಂಡ್ರಾ ತಾಣದಲ್ಲಿರುವ ಕೆಫಿಟೇರಿಯಾ ಇಲ್ಲಿನ ಮುಖ್ಯ ಆಕರ್ಷಣೆ. ನೂರಾರು ಪಕ್ಷಿ ಪ್ರಭೇದಗಳೂ ಇಲ್ಲಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !