ಎರಡು ಕಡೆ ಗಂಜಿ ಕೇಂದ್ರ ಆರಂಭ

7
ಕೊಳ್ಳೇಗಾಲ ತಾಲ್ಲೂಕಿನ ಜಲಾವೃತ ಗಾಮಗಳಿಗೆ ಭೇಟಿ ನೀಡಿದ ಸಚಿವ ಎನ್‌.ಮಹೇಶ್‌

ಎರಡು ಕಡೆ ಗಂಜಿ ಕೇಂದ್ರ ಆರಂಭ

Published:
Updated:
Deccan Herald

ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿ ಪಾತ್ರದ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಎರಡು ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆದಿದೆ.

ನೆರೆ ಹಾವಳಿಗೆ ತುತ್ತಾಗಿರುವ ದಾಸನಪುರ ಗ್ರಾಮಸ್ಥರನ್ನು ಕೊಳ್ಳೇಗಾಲದ ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ಇನ್ನೊಂದು ಗಂಜಿ ಕೇಂದ್ರವನ್ನು ಹಳೇ ಹಂಪಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದೆ. 

ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಜಲಾವೃತವಾದ ತಾಲ್ಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ ಮತ್ತು ಹರಳೆ ಗ್ರಾಮಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂತ್ರಸ್ತ ಜನರ ಸಮಸ್ಯೆಗಳನ್ನು ಆಲಿಸಿದ ಅವರು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು.

ನಂತರ ಮಾತನಾಡಿದ ಅವರು, ‘ದಾಸನಪುರಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಮನವೊಲಿಸಿ ಅವರನ್ನು ಕೊಳ್ಳೇಗಾಲದ ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ಅ‌ವರಿಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ನೀರು ಬಂದರೆ ಮನೆ ಹಾಗೂ ಸಾಮಗ್ರಿಗಳು ಹಾಳಾಗುತ್ತವೆ ಎಂಬ ಭೀತಿಯಿಂದ ಜನರು ಗ್ರಾಮವನ್ನು ತೊರೆಯುತ್ತಿಲ್ಲ. ಪ್ರವಾಹ ತಗ್ಗಿದ ಬಳಿಕ ಮನೆ ಕಳೆದು ಕೊಂಡವರಿಗೆ ಹೊಸ ಮನೆಗಳನ್ನು ನಿರ್ಮಿಸಲಾಗುವುದು. ನಷ್ಟವಾದ ಬೆಳೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಈ ಗ್ರಾಮಗಳ ಜನರ ಸುರಕ್ಷತೆಯನ್ನು ನೋಡಿಕೊಳ್ಳಲು ಜಿಲ್ಲಾಡಳಿತ ಎಚ್ಚರ ಸ್ಥಿತಿಯಲ್ಲಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್‌, ಪ್ರಭಾರ ತಹಶೀಲ್ದಾರ್ ಚಂದ್ರಮೌಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಡಿವೈಎಸ್‌ಪಿ ಪುಟ್ಟಮಾದಯ್ಯ, ಪಿಎಸ್‌ಐ ವೀಣಾನಾಯಕ್, ಆರೋಗ್ಯಾಧಿಕಾರಿ ಡಾ. ಗೋಪಾಲ್, ಗಂಗಾಧರ್ ಇದ್ದರು.

100ಕ್ಕೂ ಹೆಚ್ಚು ಮನೆಗಳಿಗೆ ನೀರು

ಈ ಗ್ರಾಮಗಳ 100ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರು ನುಗ್ಗಿದೆ. ದಾಸನಪುರದಲ್ಲಿ ಅತ್ಯಂತ ಹೆಚ್ಚು ಮನೆಗಳು ನೆರೆ ಹಾವಳಿಗೆ ತುತ್ತಾಗಿವೆ. 

ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದೆ. ಮುಳ್ಳೂರು ಹಾಗೂ ಹರಳೆ ಗ್ರಾಮಗಳಲ್ಲಿ ಮನೆಗಳ ಸಮೀಪಕ್ಕೆ ನೀರು ಬರಲು ಆರಂಭಿಸಿದ್ದು, ಜನರು ಆತಂಕಗೊಂಡಿದ್ದಾರೆ.  

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !