ಭಾನುವಾರ, ಆಗಸ್ಟ್ 25, 2019
28 °C
ಕೊಳ್ಳೇಗಾಲ:ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹಿರಿ ಜೀವಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ನೆರೆ ಸಂತ್ರಸ್ತರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Published:
Updated:
Prajavani

ಕೊಳ್ಳೇಗಾಲ: ನಗರದ ಸರ್ಕಾರಿ ಮೆಟ್ರಿಕ್‌ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನೆರೆಪೀಡಿತ ಹಳೆ ಅಣಗಳ್ಳಿ ಗ್ರಾಮದ 14 ಮಂದಿ ಸಂತ್ರಸ್ತರು ಗುರುವಾರ ಅಸ್ವಸ್ಥಗೊಂಡಿದ್ದಾರೆ.

ತಕ್ಷಣ ಅವರನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹಳೆ ಅಣಗಳ್ಳಿ ಗ್ರಾಮದ ಪುಟ್ಟಮಾದಮ್ಮ, ಚಂದ್ರಮ್ಮ, ನಿಂಗಮ್ಮ, ದೊಡ್ಡಮ್ಮ, ಮಹದೇವಮ್ಮ, ಸುಂದ್ರಮ್ಮ, ಸಿದ್ದರಾಜು, ವೆಂಕಟರಂಗಯ್ಯ, ಸಿದ್ದರಾಜು, ಮಾದೇವ, ವೆಂಕಟಯ್ಯ ಸೇರಿದಂತೆ 14 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಇವರೆಲ್ಲ ಮೈಕೈನೋವು, ಅಸ್ತಮಾ, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಆರೋಗ್ಯ ವಿಚಾರಣೆ: ಸ್ಥಳೀಯ ಶಾಸಕ ಎನ್‌.ಮಹೇಶ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಅವರು, ‘ನೆರೆ ಹಾವಳಿಗೆ ತುತ್ತಾಗಿ ಪರಿಹಾರ ಕೇಂದ್ರದಲ್ಲಿದ್ದ ಕೆಲವರಿಗೆ ನಿಶ್ಶಕ್ತಿ ಉಂಟಾಗಿದೆ.  ಆರೋಗ್ಯದಲ್ಲಿ ಸಣ್ಣ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪವಿಭಾಗ ಆಸ್ಪತ್ರೆಯಲ್ಲಿ ಪ್ರತೇಕ ವಾರ್ಡ್‌  ಕಾಯ್ದಿರಿಸಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಮೇಲೆ ವೈದ್ಯರ ತೀವ್ರ ನಿಗಾ ವಹಿಸಿದ್ದಾರೆ’ ಎಂದು ಹೇಳಿರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಗೋಪಾಲ್, ಆಸ್ಪತೆಯ ವೈದ್ಯಾಧಿಕಾರಿ ಡಾ.ವೇಣುಗೋಪಾಲ ಅರಸ್, ಡಾ.ತ್ರೀವೇಣಿ, ನಗರಸಭೆ ಸದಸ್ಯ ಪ್ರಕಾಶ್ ಶಂಕನಪುರ, ನಾಶೀರ್ ಷರೀಪ್, ಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಸೋಮಣ್ಣ ಉಪ್ಪಾರ್, ಮುಖಂಡ ಕೆಂಪನಪಾಳ್ಯ ಸಿದ್ದರಾಜು, ಶಂಕನಪುರ ಜಗದೀಶ್, ಕೇಶವಮೂರ್ತಿ, ಮಹದೇವಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು. 

ನೆರೆ ಪರಿಹಾರ: ₹10 ಕೋಟಿಗೆ ಪ್ರಸ್ತಾವ

‘ಪ್ರವಾಹದಿಂದ ಹಾನಿಯಾಗಿರುವ ಬೆಳೆ, ಮನೆ, ರಸ್ತೆ ಮತ್ತು ಸೇತುವೆಗಳ ದುರಸ್ತಿ ಹಾಗೂ ಪರಿಹಾರ ಕಾರ್ಯಕ್ಕಾಗಿ ನೈಸರ್ಗಿ ವಿಪ‍ತ್ತು ಪರಿಹಾರ ಯೋಜನೆ ಅಡಿಯಲ್ಲಿ ₹10 ಕೋಟಿ ಅನುದಾನ ಬಿಡುಗಡೆ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಎನ್‌.ಮಹೇಶ್‌ ಹೇಳಿದರು.

‘ನೆರೆಯಿಂದಾಗಿ ಹಾಳಾಗಿರುವ ಮನೆ, ರಸ್ತೆ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕಿದೆ. ಪೌರಕಾರ್ಮಿಕರ ಮೂಲಕ ಗ್ರಾಮಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ. ಆನಂತರ ವೈದ್ಯರು ಗ್ರಾಮಗಳನ್ನು ನೋಡಿ ಅರೋಗ್ಯಕರ ವಾತಾವರಣ ಇದೆ ಎಂದು ದೃಢಪಡಿಸಿದ ಬಳಿಕ ಸಂತ್ರಸ್ತರನ್ನು ಗ್ರಾಮಗಳಿಗೆ ಕಳುಹಿಸಲಾಗುವುದು. ಗ್ರಾಮಗಳಿಗೆ ಹಿಂತಿರುಗಿದ ಬಳಿಕ ಅವರಿಗೆ ಕೂಲಿ ಕೆಲಸ ಸಿಗುವವರೆಗೂ ಅವರಿಗೆ ಆಹಾರ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ  ಸೂಚಿಸಿದ್ದೇನೆ’ ಎಂದು ಅವರು ಹೇಳಿದರು.

Post Comments (+)