ಬಾರದ ಮಳೆ: ಒಣ ಹುಲ್ಲಿನ ಬೆಲೆ ಗಗನಮುಖಿ

ಮಂಗಳವಾರ, ಏಪ್ರಿಲ್ 23, 2019
32 °C
ಹಸಿರು ಮೇವು ಲಭ್ಯವಿಲ್ಲ, ಟ್ರಾಕ್ಟರ್‌ ಒಣಹುಲ್ಲಿಗೆ ₹ 6ರಿಂದ 8 ಸಾವಿರ ಬೆಲೆ

ಬಾರದ ಮಳೆ: ಒಣ ಹುಲ್ಲಿನ ಬೆಲೆ ಗಗನಮುಖಿ

Published:
Updated:
Prajavani

ಯಳಂದೂರು: ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಳೆ ಬರುವ ಲಕ್ಷಣ ಕಾಣುತ್ತಿಲ್ಲ. ತೇವಾಂಶ ಕಡಿಮೆಯಾಗಿದ್ದು, ಹುಲ್ಲು, ಗರಿಕೆ ಚಿಗುರುತ್ತಿಲ್ಲ. ರೈತರು ಸಂಗ್ರಹಿಸಿದ್ದ ಮೇವು ಕರಗುತ್ತಿದೆ. ಇದರ ನಡುವೆಯೇ ಒಣಹುಲ್ಲಿನ ಬೆಲೆ ಗಗನಕ್ಕೇರಿದೆ.

ಜಿಲ್ಲೆಯ ಬಹುಪಾಲು ಕೃಷಿಕರು ಭತ್ತ ಬೆಳೆದು ಕಟಾವಿನ ನಂತರ ಹುಲ್ಲು ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಧಾರಣೆ ಏರಬಹುದೆಂದು ಕೆಲವರು ಸಂಗ್ರಹಿಸಿಡುತ್ತಾರೆ. ಈ ಬಾರಿ ಏಪ್ರಿಲ್‌ನಲ್ಲೇ ಒಣಮೇವಿಗೆ ಬೇಡಿಕೆ ಹೆಚ್ಚಿದೆ. ಗ್ರಾಮೀಣ ಭಾಗಗಳಲ್ಲಿ ಕಂತೆಗಳ ಲೆಕ್ಕದಲ್ಲಿ ಮೇವು ಖರೀದಿಸುವ ಪರಿಸ್ಥಿತಿ ಉಂಟಾಗಿದೆ.

‘2 ತಿಂಗಳ ಹಿಂದೆ ಟ್ರಾಕ್ಟರ್ ಹುಲ್ಲಿನ ಬೆಲೆ ₹ 5 ಸಾವಿರ ಸಮೀಪದಲ್ಲಿತ್ತು. ಈಗ ₹ 6ರಿಂದ 8 ಸಾವಿರದವರೆಗೆ ಏರಿಕೆ ಕಂಡಿದೆ. ಹಣ ನೀಡಿದರೂ ಹುಲ್ಲು ಸಿಗುತ್ತಿಲ್ಲ. ರಾಗಿ, ಮುಸುಕಿನ ಜೋಳದ ಬೆಲೆಯೂ ಇಷ್ಟೇ ಪ್ರಮಾಣದಲ್ಲಿ ಜಾಸ್ತಿ ಆಗಿದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು.

‘ಒಂದು ಟ್ರಾಕ್ಟರ್‌ನಲ್ಲಿ ಅರ್ಧ ಟನ್‌ನಿಂದ ಒಂದು ಟನ್‌ವರೆಗೂ ಮೇವು ಹಿಡಿಯುತ್ತದೆ. ಕಟಾವು ಮುಗಿದ ಸಂದರ್ಭದಲ್ಲಿ ಒಂದು ಟ್ರಾಕ್ಟರ್‌ ಮೇವಿಗೆ ₹ 2,500–3,000ರ ವರೆಗೆ ಬೆಲೆ ಇತ್ತು. ಆಗ ಮೇವು ಖರೀದಿಸುವವರು ಗದ್ದೆಯಿಂದಲೇ ನೇರವಾಗಿ ತೆಗೆದುಕೊಂಡು ಹೋಗುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು.

ಒಣಗಿದ ಭೂಮಿ: ‘ಭೂಮಿ ಒಣಗಿ ನಿಂತಿದೆ. ಮೇವು ಬೆಳೆಯಲು ನೀರಿನ ಅಭಾವವಿದೆ. ಮಳೆ ಬರುವವರೆಗೆ ರಾಸು ಸಾಕುವುದಕ್ಕಾಗಿ ಬೆಲೆ ಹೆಚ್ಚಳವಾದರೂ ಮೇವು ಖರೀದಿಸಲೇಬೇಕಾಗಿದೆ’ ಎನ್ನುತ್ತಾರೆ ಪಟ್ಟಣದ ರೈತ ಸುರೇಶ್.

‘ಈಗ ನೀರಾವರಿ ಭೂಮಿಯಲ್ಲಿ ರಾಗಿ, ಮುಸುಕಿನಜೋಳ ಬೆಳೆದಿದ್ದಾರೆ. ರಾಗಿ ಕೊಯ್ಲಿನ ನಂತರ ಹುಲ್ಲು ಮಾರಾಟ ಮಾಡಲಾಗುತ್ತದೆ. ಮುಸುಕಿನಜೋಳ ಹೂ ಬಿಡುವ ಹಂತದಲ್ಲೇ ಹೆಚ್ಚು ಬೆಲೆ ನೀಡಿ ಕೊಳ್ಳುತ್ತಾರೆ. ಇದು ರೈತರಿಗೆ ಅಲ್ಪಕಾಲದ ಆದಾಯ ತಂದುಕೊಡುತ್ತದೆ. ಕಾಲುವೆಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಯದ ಕಾರಣ ಭತ್ತ ಬಿತ್ತನೆ ಆಗಿಲ್ಲ. ಹಾಗಾಗಿ, ಒಣಹುಲ್ಲಿಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಕೆಸ್ತೂರು ನಾಗರಾಜು.

‘ಮಳೆ ಇನ್ನೂ ಬಾರದಿರುವುದರಿಂದ ಒಣಮೇವಿಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ಒಂದು ಟನ್‌ ಮೇವಿಗೆ ₹ 6,000 ನಿಗದಿಪಡಿಸಿದೆ’ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಆನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ದಿನಗಳಲ್ಲಿ ಸಂಭವನೀಯ ಮೇವು ಕೊರತೆ ನೀಗಿಸಲು ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ತಲಾ 100 ಟನ್‌ಗಳ ಸಾಮರ್ಥ್ಯದ ಮೇವು ಬ್ಯಾಂಕ್‌ ಸ್ಥಾಪಿಸಲು ನಿರ್ಧರಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !