ಬುಧವಾರ, ಡಿಸೆಂಬರ್ 11, 2019
26 °C

ಆಹಾರವೂ ಆರೋಗ್ಯವೂ ಜೋಡಿ ನಡಿಗೆ

Published:
Updated:
Deccan Herald

‘ದಿನವೂ ಸಂಜೆಯ ಹೊತ್ತಿಗೆ ತುಂಬಾನೇ ಆಯಾಸ ಅನ್ನಿಸುತ್ತೆ. ಯಾವ ಕೆಲಸವೂ ಬೇಡವಾಗುತ್ತೆ.’ ಅಂದು ಮಾತನಾಡುತ್ತಾ ಗೆಳತಿ ಹೇಳಿದ್ದಳು. ನಾನು ಕುತೂಹಲಕ್ಕೆ ಆಕೆಯ ದಿನಚರಿಯ ಬಗ್ಗೆ ಕೇಳಿದ್ದೆ. ಬೆಳಿಗ್ಗೆ ಏಳಕ್ಕೆ ಎದ್ದು ದಡಬಡ ಅಂತ ಅಡುಗೆ, ಮನೆಕೆಲಸಗಳನ್ನು ಮುಗಿಸಿ, ಮಕ್ಕಳಿಗೆ ಹಾಗೂ ಗಂಡನಿಗೆ ತಿಂಡಿ ಕೊಟ್ಟು, ಹನ್ನೊಂದು ಗಂಟೆಗೆ ಅವಸರದಲ್ಲಿ ಕಚೇರಿಗೆ ಹೊರಡುವುದು. ಸಮಯವಿದ್ದರೆ ಬೆಳಗಿನ ಉಪಹಾರ ಸೇವಿಸುವುದು, ಇಲ್ಲದಿದ್ದರೆ ಇನ್ನೊಂದು ಲೋಟ ಕಾಫಿ ಕುಡಿದು ಮನೆ ಬಿಡುವುದು. ಕಚೇರಿಯಲ್ಲಿ ಆಗಾಗ್ಗೆ ಬರುವ ಕ್ಯಾಂಟೀನ್ ಹುಡುಗನಿಂದ ಒಂದೆರಡು ಬಾರಿ ಕಾಫಿ ಮತ್ತು ಬೋಂಡಾ ಅಥವಾ ಪಕೋಡ ತರಿಸಿಕೊಂಡು ತಿನ್ನುವುದು. ಕೆಲಸದ ಒತ್ತಡದಲ್ಲಿ ಮಧ್ಯಾಹ್ನದ ಊಟವನ್ನೂ ಸರಿಯಾದ ಸಮಯಕ್ಕೆ ಮಾಡದಿರುವುದು. ಇನ್ನು ಐದು ಗಂಟೆಗೆ ಮನೆಗೆ ಬರುವಷ್ಟರಲ್ಲಿ ಹೊಟ್ಟೆ ತಾಳಹಾಕಲು ಶುರುವಿಟ್ಟಿರುತ್ತದೆ. ಹಸಿವು ತಾಳಲಾರದೆ ಅಡುಗೆಮನೆಯಲ್ಲಿ ಸಿಕ್ಕದ್ದನ್ನೆಲ್ಲಾ ಗಬಗಬನೆ ತಿನ್ನುವುದು. ಅದಾದ ಮೇಲೆ ಯಾವ ಕೆಲಸವೂ ಬೇಡವೆನ್ನಿಸಿ ಆಯಾಸದಿಂದ ಹಾಸಿಗೆ ಮೇಲೆ ಬೆನ್ನಾಯಿಸುವುದು. ಒಂದಿಷ್ಟೊತ್ತು ಮೊಬೈಲ್ ಹಾಗೂ ಟಿ.ವಿ. ಮೇಲೆ ಕಣ್ಣಾಡಿಸಿ ನಂತರ ಒಂದಿಷ್ಟು ಸಂಜೆಯ ಮನೆ ಕೆಲಸ ಮಾಡಿ, ಊಟ ಮಾಡಿ ಮಲಗುವುದು. ಇದು ಆಕೆಯ ದಿನಚರಿ! ಅವಳ ದಿನಚರಿಯಲ್ಲಿ ನನಗೆ ಸಾಕಷ್ಟು ಸರಿ ಪಡಿಸಬೇಕಾದ ಅಂಶಗಳು ಗಮನಕ್ಕೆ ಬಂದವು. ನಮ್ಮಲ್ಲಿಯೂ ಅನೇಕರದ್ದು ಇಂತಹದ್ದೇ ಅಥವಾ ಇದಕ್ಕೆ ಸಾಮ್ಯವಾದ ದಿನಚರಿಯಿರಬಹುದು. ಇಂತಹ ಜೀವನಶೈಲಿ ನಿಜಕ್ಕೂ ಅನಾರೋಗ್ಯಕ್ಕೆ ಆಹ್ವಾನ ಮಾಡಿಕೊಡುತ್ತದೆ.

ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನಶೈಲಿ ಆರೋಗ್ಯ ಹಾಗೂ ದೈನಂದಿನ ಉತ್ಸಾಹದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ದೈನಂದಿನ ಆಹಾರದಲ್ಲಿ ಶರೀರಕ್ಕೆ ಶಕ್ತಿಯನ್ನು ಒದಗಿಸುವ ಧಾನ್ಯಗಳು, ಬೇಳೆಕಾಳುಗಳು ಸಾಕಷ್ಟು ಪ್ರಮಾಣದಲ್ಲಿರಬೇಕು. ಅಂತೆಯೇ ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿರುವ ಹಣ್ಣು, ಸೊಪ್ಪು, ತರಕಾರಿ, ಹಾಲು, ಒಣಹಣ್ಣುಗಳೂ ನಮ್ಮ ಆಹಾರದಲ್ಲಿ ಅಗತ್ಯವಾಗಿ ಇರಬೇಕು. ಶರೀರದ ರೋಗನಿರೋಧಕ ಶಕ್ತಿಗೆ ಅವಶ್ಯವಾದ ಹಾಗೂ ಅಂಗಾಂಶಗಳ ದುರಸ್ಥಿಗೆ ಅವಶ್ಯವಾದ ಪ್ರೊಟೀನ್ ಅಂಶವಿರುವ ಸೋಯಾಕಾಳು, ಹಾಲು, ಮೊಳಕೆಬರಿಸಿದ ಕಾಳು, ಮೊಟ್ಟೆ, ಮಾಂಸ ಹಾಗೂ ಮೀನು ಕೂಡ ನಮ್ಮ ಆಹಾರದಲ್ಲಿ ಇರಬೇಕು. ಇದರಿಂದ ನಮ್ಮ ರೋಗನಿರೋಧಕ ವ್ಯವಸ್ಥೆಯು ಸಧೃಡವಾಗಿ ನಮ್ಮನ್ನು ಕಾಯಿಲೆಗಳಿಂದ ದೂರವಿರಲು ಸಹಕರಿಸುತ್ತವೆ. ಅಲ್ಲದೆ, ಸದಾ ಲವಲವಿಕೆಯಿಂದ ಇರಲೂ ನೆರವಾಗುತ್ತವೆ.

 ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನವಾಗಿ ಹೀಗೆ ಮಾಡೋಣ:

– ಬೆಳಿಗ್ಗೆ ಬೇಗನೇ ಎದ್ದು ನಿಮಗಾಗಿ ಒಂದರಿಂದ ಒಂದೂವರೆ ತಾಸು ಲಭ್ಯವಿರುವಂತೆ ಗಮನ ವಹಿಸಿ.

– ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಲೀಟರ್‌ನಿಂದ ಒಂದು ಲೀಟರ್‌ವರೆಗೆ ಶುಚಿಯಾದ ನೀರನ್ನು ಕುಡಿಯಿರಿ.

– ಬೆಳಿಗ್ಗೆ ಕನಿಷ್ಠ ಅರ್ಧ ತಾಸಾದರೂ ನಡಿಗೆ, ಯೋಗ ಅಥವಾ ಯಾವುದಾದರೊಂದು ಬಗೆಯ ದೈಹಿಕ ವ್ಯಾಯಾಮ ನಿಮ್ಮ ದಿನಚರಿಯಲ್ಲಿರಲಿ. ಒಂದು ವೇಳೆ ಬೆಳಿಗ್ಗೆ ಸಮಯ ಹೊಂದಿಸಲು ಕಷ್ಟವೆನಿಸಿದರೆ ಸಂಜೆಯಾದರೂ ಆದೀತು.

 – ಬೆಳಿಗ್ಗೆ ಎಂಟರಿಂದ ಒಂಭತ್ತು ಗಂಟೆಯೊಳಗೆ ಬೆಳಗಿನ ಉಪಹಾರ ಮುಗಿಸಿ. ಪೌಷ್ಟಿಕಾಂಶಗಳಿರುವ ತರಕಾರಿ, ಹಣ್ಣು, ಧಾನ್ಯ ಹಾಗೂ ಕಾಳುಗಳು ಗರಿಷ್ಠ ಪ್ರಮಾಣದಲ್ಲಿರುವ ಉಪಹಾರ ಅದಾಗಿರಲಿ.

– ಉಪಹಾರದ ನಂತರ ಟೀ ಅಥವಾ ಕಾಫಿ ಬೇಡ. ಇದರಿಂದ ನಿಮ್ಮ ಉಪಹಾರದಲ್ಲಿನ ಕಬ್ಬಿಣಾಂಶವು ಕರುಳುಗಳಲ್ಲಿ ಹೀರಲ್ಪಡುವ ಪ್ರಕ್ರಿಯೆಯಲ್ಲಿ ತೊಡಕಾಗುತ್ತದೆ.

– ಉಪಹಾರಕ್ಕೆ ಮೊದಲು ಹಾಗೂ ನಂತರ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಇದು ಜೀರ್ಣಕ್ರಿಯೆಗೆ ಅತ್ಯಗತ್ಯ.

– ಹನ್ನೆರಡರಿಂದ  ಒಂದು ಗಂಟೆಯ ಒಳಗಾಗಿ ನಿಮ್ಮ ಮಧ್ಯಾಹ್ನದ ಊಟವನ್ನು ಮಾಡಿ. ಊಟದ ಜೊತೆಯಲ್ಲಿ ಒಂದೆರಡು ಬಗೆಯ ಹಸಿ ತರಕಾರಿಗಳ ಸೇವನೆಯಿರಲಿ. ಊಟಕ್ಕೆ ಮೊದಲು ಹಾಗೂ ನಂತರ ಸಾಕಷ್ಟು ನೀರನ್ನು ಕುಡಿಯಿರಿ.

– ಕಾಫಿ ಅಥವಾ ಟೀ ಅಭ್ಯಾಸವಿದ್ದರೆ ಸಂಜೆಯ ವೇಳೆ ನಾಲ್ಕುವರೆ ಗಂಟೆಯ ಒಳಗಾಗಿ ಒಂದು ಸಣ್ಣ ಲೋಟದ ಕಾಫಿ/ಟೀ ಸೇವನೆ ಇರಲಿ.

– ರಾತ್ರಿಯ ಊಟ ಎಂಟು ಗಂಟೆಯೊಳಗಾಗಿ ಮುಗಿಸಿದರೆ ಒಳಿತು. ಊಟದ ನಂತರದ ನಿಮ್ಮ ಅಲ್ಪ ಸ್ವಲ್ಪ ಓಡಾಟ ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ.

– ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ನಡುವೆ ಹಸಿವೆ ಎನಿಸಿದರೆ ಹಣ್ಣುಗಳನ್ನು ಸೇವಿಸಿ. ದಿನವೂ ಕನಿಷ್ಠ ಎರಡು ಬಗೆಯ ಹಣ್ಣುಗಳನ್ನು ಸೇವಿಸಿ. ಜೀವಸತ್ವಗಳು, ಖನಿಜಾಂಶಗಳು ಹಾಗೂ ನಾರಿನಾಂಶ ಹೊಂದಿರುವ ಹಣ್ಣುಗಳು ಆರೋಗ್ಯಕ್ಕೆ ಬಹಳ ಮುಖ್ಯ.

– ಪದೇ ಪದೇ ಕಾಫಿ ಅಥವಾ ಟೀ ಸೇವನೆ ಒಳ್ಳೆಯದಲ್ಲ. ಬದಲಿಗೆ ಹಣ್ಣು ಅಥವಾ ಹಣ್ಣುಗಳ ರಸವನ್ನು ಸೇವಿಸಿ.

– ಆಹಾರದಲ್ಲಿ ಉಪ್ಪು ಹಾಗೂ ಸಕ್ಕರೆಯ ಬಳಕೆ ಯಾವಾಗಲೂ ಮಿತವಾಗಿರಬೇಕು.

– ಒಂದು ದೊಡ್ಡ ಲೋಟದ ಹಾಲು ದಿನವೂ ನಿಮ್ಮ ಆಹಾರದ ಭಾಗವಾಗಿರಲಿ.

– ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿ ತಿನಿಸುಗಳ ಸೇವನೆ ಮಿತಿಯಲ್ಲಿರಲಿ. ಅಂತೆಯೇ ಬೇಕರಿ ತಿನಿಸುಗಳು, ಜಂಕ್ ಫುಡ್ ಸೇವನೆ ಕೂಡ ಮಿತಿಯಲ್ಲಿರಲಿ.

– ಸಿಹಿ ತಿಂಡಿಗಳ ಸೇವನೆ ಅಪರೂಪಕ್ಕೊಮ್ಮೆ ಇರಲಿ. ಅದೂ ಮಿತಿಯಲ್ಲಿದ್ದರೆ ಒಳಿತು.

– ದಿನವೂ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದನ್ನು ತಪ್ಪಿಸದಿರಿ. ಶರೀರದಲ್ಲಿ ಉತ್ಪತ್ತಿಯಾಗುವ ವಿಷಕಾರಕ ಅಂಶಗಳನ್ನು ದೇಹದಿಂದ ಹೊರಹಾಕಲು ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಅತ್ಯಗತ್ಯ.

– ಪೋಷಕಾಂಶಗಳಿರುವ ಮೊಟ್ಟೆಯ (ಪರಿಪೂರ್ಣ ಆಹಾರ) ಸೇವನೆ ವಾರದಲ್ಲಿ ಮೂರು ಬಾರಿಯಾದರೂ ಇರಲಿ.

– ಸಂಜೆಯ ವೇಳೆ ತುಸು ಒಣಹಣ್ಣುಗಳ ಸೇವನೆ ಒಳಿತು.

– ನೀವು ಸೇವಿಸುವ ಆಹಾರ ಸಮತೋಲನ ಆಹಾರವಾಗಿರಲಿ. ಎಲ್ಲ ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರುವ ಆಹಾರವು ಸಮತೋಲನ ಆಹಾರ ಎನ್ನಿಸಿಕೊಳ್ಳುತ್ತದೆ.

– ಆದಷ್ಟು ಎಲ್ಲ ಬಗೆಯ ಸೊಪ್ಪು-ತರಕಾರಿಗಳು ನಿಮ್ಮ ಅಡುಗೆಪದಾರ್ಥಗಳಲ್ಲಿ ಇರುವಂತೆ ಗಮನಿಸಿ.

– ತರಕಾರಿಗಳನ್ನು ಅತಿಯಾಗಿ ಬೇಯಿಸದಿರಿ. ಹಾಗೆ ಬೇಯಿಸಿದಾಗ ಅದರಲ್ಲಿರುವ ಜೀವಸತ್ವಗಳು ಹಾಗೂ ಇತರ ಪೋಷಕಾಂಶಗಳು ನಶಿಸಿಹೋಗುತ್ತವೆ.

– ಅಂತೆಯೇ ಆಹಾರದಲ್ಲಿ ಅಕ್ಕಿ, ರಾಗಿ, ಜೋಳ, ಸಜ್ಜೆ, ಗೋಧಿ, ನವಣೆ – ಹೀಗೆ ಎಲ್ಲ ಬಗೆಯ ಧಾನ್ಯಗಳ ಬಳಕೆಯಿರಲಿ.

– ಮೊಳಕೆ ಬರಿಸಿದ ಕಡ್ಲೆಕಾಳು, ಹೆಸರುಕಾಳು, ಮೆಂತ್ಯಕಾಳು, ಹುರುಳಿಕಾಳು, ಅಲಸಂದೆಯ ಕಾಳುಗಳು ಹೇರಳವಾಗಿ ಪ್ರೊಟೀನ್ ಅಂಶವನ್ನು ಹೊಂದಿರುತ್ತವೆ; ವಾರದಲ್ಲಿ ಒಂದೆರಡು ಬಾರಿಯಾದರೂ ಇವುಗಳ ಬಳಕೆ ಅಗತ್ಯ.

– ಆಯಾ ಕಾಲದಲ್ಲಿ ಸಿಗುವ ತಾಜಾ ಹಣ್ಣುಗಳನ್ನು ತಪ್ಪದೆ ತಿನ್ನಿ.

***

ನೀರು ಕುಡಿಯಿರಿ

‘ಹೊಟ್ಟೆ ತುಂಬುವಂತೆ ತಿನ್ನಿ, ಹೊಟ್ಟೆ ಬಿರಿಯುವಂತೆ ತಿನ್ನಬೇಡಿ’ ಎಂಬ ಹಿರಿಯರ ಮಾತನ್ನು ಸದಾ ನೆನಪಿನಲ್ಲಿಡಬೇಕು. ಇನ್ನೂ ಊಟ ಸೇರುವಂತಿದೆ ಎನ್ನುವಾಗಲೇ ತಿನ್ನುವುದನ್ನು ನಿಲ್ಲಿಸಬೇಕು. ನಂತರ ಸಾಕಷ್ಟು ನೀರು ಕುಡಿಯಬೇಕು. ಹೀಗೆ ಸರಿಯಾದ ಆಹಾರಕ್ರಮದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಸದಾ ಲವಲವಿಕೆಯಿಂದ ಇರಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು