ದಸರಾ ಆಹಾರ ಮೇಳದಲ್ಲಿ ನಾಟಿಕೋಳಿ ಸಾಂಬಾರ್‌ ಜೊತೆ ಕೆ.ಜಿ ರಾಗಿ ಮುದ್ದೆ...

7
ಮುದ್ದೆ ಉಣ್ಣುವ ಸ್ಪರ್ಧೆ

ದಸರಾ ಆಹಾರ ಮೇಳದಲ್ಲಿ ನಾಟಿಕೋಳಿ ಸಾಂಬಾರ್‌ ಜೊತೆ ಕೆ.ಜಿ ರಾಗಿ ಮುದ್ದೆ...

Published:
Updated:
Deccan Herald

ಮೈಸೂರು: ಅವ್ನ ನೋಡೋ, ಈ ತಾತನ್ನ ನೋಡೊ ಎನ್ನುತ್ತಾ,  ಕಿಕ್ಕಿರಿದು ತುಂಬಿದ್ದ ಜನ ಹೋ ಎಂಬ ಹರ್ಷೋದ್ಘಾರದೊಂದಿಗೆ ಪ್ರೋತ್ಸಾಹ ನೀಡುತ್ತಿದ್ದರೆ, ಅವರು ಯಾವುದೇ ಬಿಗುಮಾನವಿಲ್ಲದೆ ಅಂಗೈ ತುಂಬಾ ಮುದ್ದೆ ಮುರಿದು ನುಂಗುತ್ತಾ ಹೋದರು.

ಇದು ದಸರಾ ಆಹಾರ ಮೇಳದ ಅಂಗವಾಗಿ ಇಲ್ಲಿನ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ಶುಕ್ರವಾರ ನಡೆದ ನಾಟಿಕೋಳಿ ಸಾಂಬಾರ್‌ ಜೊತೆ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಕಂಡುಬಂದದ್ದು.

ಬಾಬೂರಾಯನ ಕೊಪ್ಪಲಿನ ಯುವಕ ಎಸ್‌.ಕೌಶಿಕ್‌ ನಾಲ್ಕು ಮುದ್ದೆಗಳನ್ನು ಕೆಲವೇ ನಿಮಿಷಗಳಲ್ಲಿ ನುಂಗಿ ಮೊದಲ ಬಹುಮಾನ ಗಿಟ್ಟಿಸಿದರು. ಯಾವುದೇ ಆವೇಶಕ್ಕೀಡಾಗದೆ, ಚಕಚಕನೆ ಮುದ್ದೆ ಮುರಿದು ಗುಳುಕ್ಕನೆ ಹೊಟ್ಟೆಗಿಳಿಸುತ್ತಿದ್ದರು. ಎದುರಿಗಿದ್ದವರ ಮುಖ ನೋಡುತ್ತಾ ಮಂದಹಾಸ ಬೀರುತ್ತಾ, ತಟ್ಟೆಯಲ್ಲಿದ್ದ ನಾಲ್ಕು ಮುದ್ದೆಗಳನ್ನು ನುಂಗಿ, ಮೂಳೆಗಳನ್ನೂ ಚೀಪಿ ಚಪ್ಪರಿಸಿ ಇನ್ನೂ ಇದ್ದರೆ ಕೊಡಿ ಎನ್ನುವಂತೆ ನೋಟ ಬೀರಿದರು.

ಕೌಶಿಕ್‌ಗೆ ತೀವ್ರ ಪೈಪೋಟಿ ನೀಡಿದ ಮೈಸೂರಿನ ಶಿವಾನಂದ ದ್ವಿತೀಯ ಸ್ಥಾನ ಪಡೆದರು. ನೆರೆ ಬಂದ ತಲೆಗೂದಲು, ಬಿಳಿಯ ಗಡ್ಡ ಬಿಟ್ಟಿದ್ದ ಶಿವಾನಂದ ಅವರನ್ನು ನೋಡಿದ ಅನೇಕರು ಇವರಿಗೆಲ್ಲಿ ಅಷ್ಟೊಂದು ಮುದ್ದೆ ನುಂಗಲು ಸಾಧ್ಯ ಎಂದು ಮೂಗು ಮುರಿದಿದ್ದರೂ. ಆದರೆ, ಅವರು  ಮುದ್ದೆ ನುಂಗಿದ ರೀತಿ ನೋಡಿ ಎಲ್ಲರೂ ಬೆರಗಾದರು.

ತೀರ್ಪುಗಾರರಲ್ಲಿ ಗೊಂದಲ: ಕೌಶಿಕ್‌ ಹಾಗೂ ಶಿವಾನಂದ ಅವರು ಸರಿಸಮನಾಗಿ ಮುದ್ದೆ ನುಂಗಿದರು. ಈ ವೇಳೆ  ಅನೇಕರು ಕೌಶಿಕ್‌ ಮೊದಲು ಮುಗಿಸಿದರು ಎಂದರೆ, ಅನೇಕರು ಶಿವಾನಂದ ಅವರು ಮೊದಲು ಎಂದು ಹೇಳಿದರು. ಇದರಿಂದ ತೀರ್ಪುಗಾರರು ಗೊಂದಲಕ್ಕೊಳಗಾದರು. ಕೊನೆಗೆ ಕೌಶಿಕ್ ಅವರನ್ನೇ ಮೊದಲು ಎಂದು ಘೋಷಿಸಲಾಯಿತು.

ಕೌಶಿಕ್‌ ಕಳೆದ ಬಾರಿಯೂ ಆಹಾರ ಮೇಳದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪಕೋಡ ತಿನ್ನುವುದು ಹಾಗೂ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿದ್ದರು.

ಮೂರನೇ ಸ್ಥಾನವಂತೂ ತೀವ್ರ ಕುತೂಹಲ ಮೂಡಿಸಿತ್ತು. ಕೊನಗೆ ಲಕ್ಷಣ್‌, ದೇವರಾಜೇಗೌಡ ಹಾಗೂ ಜಂಗ್ಲಿ ಅವರನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು.

ಲಾಟರಿ ಮೂಲಕ ಸ್ಪರ್ಧಿಗಳ ಆಯ್ಕೆ: ನಾಟಿಕೋಳಿ ಸಾಂಬಾರ್‌ ಜೊತೆ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯುವಕರ ದಂಡೆ ಹರಿದು ಬಂದಿತ್ತು. 27 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಬಳಿಕ ಲಾಟರಿ ಎತ್ತುವ ಮೂಲಕ 10 ಜನರನ್ನು ಆಯ್ಕೆ ಮಾಡಲಾಯಿತು. ಎಲ್ಲರಿಗೂ 250 ಗ್ರಾಂನ ನಾಲ್ಕು ಮುದ್ದೆಗಳನ್ನು ನೀಡಲಾಗಿತ್ತು. ಯಾವುದೇ ಸಮಯವನ್ನು ನಿಗದಿಗೊಳಿಸದೆ, ಮೊದಲು ತಿಂದವರಿಗೆ ಬಹುಮಾನ ಎಂಬ ನಿಯಮವನ್ನು ಮಾಡಲಾಗಿತ್ತು.

ಉಚ್ಚೆಳ್ಳು ಚಟ್ನಿ, ರಾಗಿ ರೊಟ್ಟಿ ಸ್ವಾದ:

ಆಹಾರ ಮೇಳದಲ್ಲಿ ದಂಪತಿಗಳಿಗಾಗಿ ಆಯೋಜಿಸಿದ್ದ ಉಚ್ಚೆಳ್ಳು ಚಟ್ನಿ, ರಾಗಿ ರೊಟ್ಟಿ ತಯಾರಿಕೆ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸರಸ್ವತಿಪುರಂನ ಉಮಾ ಶಿವಕುಮಾರ್‌ ದಂಪತಿ ಮೊದಲ ಸ್ಥಾನ ಪಡೆದುಕೊಂಡರೆ, ಬೋಗಾದಿಯ ಶಕುಂತಲಾ ರೇಣುಕಾಪ್ರಸಾದ್‌ ದಂಪತಿ ದ್ವಿತೀಯ, ವಿದ್ಯಾರಣ್ಯಪುರಂನ ಶೃತಿ ಪುಟ್ಟರಾಜೇಅರಸ್‌ ಜೋಡಿ ತೃತೀಯ ಸ್ಥಾನ ಪಡೆದುಕೊಂಡರು.

ಒಟ್ಟು ಆರು ಜೋಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಪತಿ ಹದವಾಗಿ ಹಿಟ್ಟು ಕಲಸಿಕೊಟ್ಟರೆ ಪತ್ನಿ ನಯವಾಗಿ ತಟ್ಟಿ, ಗರಿಗರಿಯಾಗಿ ಬೇಯಿಸಿದರು. ಇನ್ನು ಕೆಲವರು ಪತ್ನಿ  ಹಿಟ್ಟು ಕಲಸಿ, ತೊಟ್ಟಿಕೊಟ್ಟ ರೊಟ್ಟಿಯನ್ನು ಗಂಡ ಹೆಂಚಿನಲ್ಲಿ ಬೇಯಿಸುತ್ತಿದ್ದರು.  ಕಾಯಿ ತುರಿಯುವುದು, ಕೊತ್ತಂಬರಿ ಸೊಪ್ಪು ಹೆಚ್ಚುವುದು... ಹೀಗೆ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಪಟಾಪಟ್ ಉಚ್ಚೆಳ್ಳು ಚಟ್ನಿ, ರಾಗಿ ರೊಟ್ಟಿ  ಸಿದ್ಧಪಡಿಸಿ ಸ್ವಾಧ ಸವಿಯಲು ತೀರ್ಪುಗಾರರ ಮುಂದಿಟ್ಟರು.

ಕ್ಯಾರೆಟ್, ಸಪ್ಪಸಿಗೆ, ಕೊತ್ತುಂಬರಿ ಸೊಪ್ಪು, ಜೀರಿಗೆ, ತೆಂಗಿನಕಾಯಿ, ಈರಳ್ಳಿ, ಬೆಳ್ಳುಳ್ಳಿ, ಕರಬೇವಿನ ಸೊಪ್ಪು, ಹುಣಸೇಹಣ್ಣು ಹೀಗೆ ತಮಗೆ ಬೇಕಾದ ಪದಾರ್ಥಗಳನ್ನು ಮನೆಯಿಂದಲೇ ತಂದಿದ್ದರು.

ರುಚಿ, ಶುಚಿ ಹಾಗೂ ಬಳಸಿದ ಪದಾರ್ಥಗಳನ್ನು ಪರಿಗಣಿಸಿ ವಿಜೇತರನ್ನು ಅಯ್ಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !